ಸುಗಂಧಿ ಬೇರು-17: ಸಾವಿತ್ರಿಬಾಯಿ ಫುಲೆ: ‘ದೇಶದ ಮೊದಲ ಶಿಕ್ಷಕಿ; ದಣಿವರಿಯದ ಸತ್ಯಶೋಧಕಿ’

ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಾಲಾ ಕಾಲೇಜುಗಳಲ್ಲಿ ನಡೆಯುವ ‘ಶಿಕ್ಷಕರ ದಿನಾಚರಣೆ’ಯ ದಿನದಂದು ಎಸ್. ರಾಧಾಕೃಷ್ಣನ್‌ರವರ ಭಾವಚಿತ್ರವನ್ನು ಪೂಜಿಸಿ ಭಾಷಣವನ್ನು ಕೊರೆಯುವುದು ಒಂದು ಯಾಂತ್ರಿಕವಾದ ಸಂಪ್ರದಾಯವಾಗಿದೆ. ಆ ಜಾಗದಲ್ಲಿ ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಭಾವಚಿತ್ರ ಇರಬೇಕಿತ್ತು. ಆಧುನಿಕ ಭಾರತದಲ್ಲಿ ದಮನಿತ ಸಮುದಾಯಗಳ ಮಹಿಳೆಯರು ಶಿಕ್ಷಣಕ್ಕಾಗಿ ನಡೆಸಿದ ನಿರಂತರ ಹೋರಾಟಗಳನ್ನು ನೆನಪಿಸಿಕೊಳ್ಳುವಾಗ ಮರೆಯಲಾಗದ ಒಂದು ಧೀಮಂತ ಚೈತನ್ಯವೆಂದರೆ ಸಾವಿತ್ರಿಬಾಯಿ ಫುಲೆ. ಭಾರತದ ಶೋಷಿತ ಮಹಿಳೆಯರ ವಿಮೋಚನಾ ಚಳುವಳಿಯ ಆದ್ಯ ಪ್ರವರ್ತಕಿಯಾದ ಸಾವಿತ್ರಿಬಾಯಿವರ ಸಂಘರ್ಷಮಯ ಜೀವನವು ಇಂದಿನ ಆಧುನಿಕ ಮಹಿಳೆಯರಿಗೂ ಮಾದರಿಯಾಗಿದೆ. ನಮ್ಮ ಕಾಲದ ಪ್ರಖರ ಅಂಬೇಡ್ಕರ್‌ವಾದಿ ವಿದ್ವಾಂಸರಾದ ಬ್ರಜ್ ರಂಜನ್ ಮಣಿ ಹಾಗೂ ಶಿಕ್ಷಣ ತಜ್ಞೆಯಾಗಿರುವ ಪಮೇಲಾ ಸರ್ದಾರ್ ಅವರು ಸಾವಿತ್ರಿಬಾಯಿ ಫುಲೆಯವರನ್ನು ಕುರಿತು ಸಂಪಾದಿಸಿರುವ ‘A Forgotten Liberator’ ಎಂಬ ಕೃತಿಯನ್ನು ಲೇಖಕರಾದ ಬಿ. ಶ್ರೀಪಾದ್ ಭಟ್‌ರವರು ‘ವಿಮೋಚಕಿಯ ಕನಸುಗಳು: ಸಾವಿತ್ರಿಬಾಯಿ ಫುಲೆ ಬದುಕು-ಹೋರಾಟ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರಾದ ಶ್ರೀಪಾದ್‌ರವರು ತಮ್ಮನ್ನು ಪ್ರಗತಿಪರ ಚಳುವಳಿ ಹಾಗೂ ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಅನುವಾದಿತ ಪುಸ್ತಕವನ್ನು ಶಿವಮೊಗ್ಗದ ಅಕ್ಷತಾ ಹುಂಚದಕಟ್ಟೆಯವರು ತಮ್ಮ ಅಹರ್ನಿಶಿ ಪ್ರಕಾಶನದಿಂದ 2014ರಲ್ಲಿ ಪ್ರಕಟಿಸಿದ್ದಾರೆ.

‘A Forgotten Liberator’ ಕೃತಿಯಲ್ಲಿ ಬ್ರಜ್ ರಂಜನ್ ಮಣಿ, ಸಿಂಥಿಯಾ ಸ್ಟೀಫನ್, ವಿಕ್ಟರ್ ಪೌಲ್, ಪಮೇಲಾ ಸರ್ದಾರ್ ಹಾಗೂ ಗೇಲ್ ಓಮ್‌ವೆಡ್ತ್ – ಅವರುಗಳು ಬರೆದ ಚಿಂತನಶೀಲ ಲೇಖನಗಳಿವೆ. ಇದರಲ್ಲಿ ಸಾವಿತ್ರಿಬಾಯಿವರ ಕೆಲವು ಕವಿತೆ ಮತ್ತು ಪತ್ರಗಳ ಅನುವಾದಗಳಿವೆ. ಈ ಕೃತಿಯ ಲೇಖನಗಳು ಆಧುನಿಕ  ಭಾರತೀಯ ಶಿಕ್ಷಣ ಹಾಗೂ ಮಹಿಳಾ ಹೋರಾಟದಲ್ಲಿ ಸಾವಿತ್ರಿಬಾಯಿಯವರ ಅಸ್ಮಿತೆಯನ್ನು ಖಚಿತವಾಗಿ ಗುರುತಿಸುತ್ತವೆ. ಇಲ್ಲಿಯ ಲೇಖನಗಳು ಸಾಂಪ್ರದಾಯಿಕ ಪರಿಚಯದ ಮಾದರಿಯನ್ನು ಬದಿಗಿಟ್ಟು ವಾಗ್ವಾದದ ಸ್ವರೂಪದಲ್ಲಿವೆ. ಲೇಖಕರ ಮಾತು, ಮುನ್ನುಡಿಯನ್ನು ಹೊರತುಪಡಿಸಿದರೆ ಐವತ್ತು ಪುಟಗಳನ್ನು ದಾಟದ ಈ ಕಿರು ಹೊತ್ತಿಗೆಯು  ಕನ್ನಡಕ್ಕೆ ಭಾಷಾಂತರಗೊಂಡಿರುವುದು ಒಂದು ಮೌಲಿಕ ಕೊಡುಗೆಯಾಗಿದೆ.

ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ನೈಗಾಂವ್‌ನಲ್ಲಿ ಜನವರಿ, 3ರಂದು ಜನಿಸಿದ ಸಾವಿತ್ರಿಬಾಯಿಯವರು (1831-1897) ಆಧುನಿಕ ಭಾರತದಲ್ಲಿ ಮೊದಲ ಬಾರಿಗೆ ಬ್ರಾಹ್ಮಣ ಯಜಮಾನಿಕೆಯನ್ನು ಪ್ರತಿಭಟಿಸಿದವರು. ಜ್ಯೋತಿಬಾ ಫುಲೆಯವರನ್ನು ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಮದುವೆಯಾದರು. ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಜ್ಞಾನದ ಬಾಗಿಲುಗಳನ್ನು ಮುಚ್ಚಲಾಗಿತ್ತು; ಅಂತಹ ಸನ್ನಿವೇಶದಲ್ಲಿ ಸಾವಿತ್ರಿಬಾಯಿಯವರು ತಮ್ಮ ಮನೆಯಲ್ಲಿಯೇ ಶಿಕ್ಷಣವನ್ನು ಪಡೆದುಕೊಂಡು. ನಂತರದಲ್ಲಿ ಅಹ್ಮದನಗರದಲ್ಲಿ ಶಿಕ್ಷಕಿಯಾಗುವ ತರಬೇತಿಯನ್ನು ಪಡೆಯುತ್ತಾರೆ. ಜ್ಯೋತಿಬಾರೊಂದಿಗೆ ಹೆಗಲೆಣೆಯಾಗಿ ನಿಂತ ಸಾವಿತ್ರಿಬಾಯಿ 1848ರಲ್ಲಿ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪುಣೆಯ ನಾರಾಯಣಪೇಟೆಯ ಬಿಂದೇವಾಡದಲ್ಲಿ ಅಸ್ಪೃಶ್ಯ ಹೆಣ್ಣು ಮಕ್ಕಳಿಗಾಗಿಯೇ  ಶಾಲೆಯೊಂದನ್ನು ಆರಂಭಿಸಿದರು. ಆರಂಭದಲ್ಲಿ ಎಂಟು ವಿದ್ಯಾರ್ಥಿನಿಯರಿದ್ದ ಈ ಶಾಲೆಯಲ್ಲಿ ಸಾವಿತ್ರಿಬಾಯಿಯವರೇ ಮುಖ್ಯೋಧ್ಯಾಪಕಿಯಾಗಿದ್ದರು. ಈ ಶಾಲೆ ಕೇವಲ ಆರು ತಿಂಗಳಷ್ಟೇ ನಡೆಯಿತು. ನಂತರ ಮತ್ತೊಂದು ಬಾಡಿಗೆ ಕಟ್ಟಡದಲ್ಲಿ ಪುನಃ ಶುರು ಮಾಡಿದರು. ಮತ್ತೆ 1851ರಲ್ಲಿ ಮುಸ್ಲಿಂರೊಬ್ಬರ ಕಟ್ಟಡಕ್ಕೆ ಶಾಲೆಯನ್ನು ಬದಲಾಯಿಸಿದರು. ಸಾವಿತ್ರಿಬಾಯಿಯವರು ಶಿಕ್ಷಕಿಯಾಗಿ ಹೆಣ್ಣು ಮಕ್ಕಳಲ್ಲಿ ಅಕ್ಷರದ ಬೀಜವನ್ನು ಬಿತ್ತಿದರು; ಶೋಷಿತ ಸಮುದಾಯದ ಬಾಲಕಿಯರಲ್ಲಿ ಅರಿವಿನ ದೀಪವನ್ನು ಹಚ್ಚಿದರು. ಭಾರತದಲ್ಲಿ ಲಿಂಗ ಸಮಾನತೆಯ ಮೊದಲ ದನಿಯಾದರು.

ಸಾವಿತ್ರಿಬಾಯಿಯವರು ಪ್ರತಿನಿತ್ಯ ಶಾಲೆಗೆ ಹೋಗುವಾಗ ಬ್ರಾಹ್ಮಣರಿಂದ ತೀವ್ರವಾದ ವಿರೋಧವನ್ನು ಎದುರಿಸಬೇಕಾಯಿತು. ಅವರ ಮೇಲೆ ಸೆಗಣಿಯನ್ನು ಎರಚಲಾಯಿತು; ಕಲ್ಲುಗಳಿಂದ ಹೊಡೆಯಲಾಯಿತು; ಅವರು ಬ್ರಾಹ್ಮಣ ಮಹಿಳೆಯರ ಕುಹಕ ನಿಂದನೆಗಳನ್ನು ಆಲಿಸಬೇಕಾಯಿತು. ತಾಳ್ಮೆಯನ್ನು ಕಳೆದುಕೊಳ್ಳದ ಸಾವಿತ್ರಿಬಾಯಿಯವರು ಮನೆಯಿಂದ ಹಳೆಯ ಸೀರೆಯನ್ನು ಉಟ್ಟುಕೊಂಡು ಹೋಗಿ, ಶಾಲೆಯಲ್ಲಿ ಸೀರೆಯನ್ನು ಬದಲಿಸಿಕೊಳ್ಳುತ್ತಿದ್ದರು. ದಲಿತರಿಗೆ ಶಿಕ್ಷಣ ನೀಡುವುದು ಸನಾತನ ಹಿಂದೂ ಧರ್ಮಕ್ಕೆ ವಿರುದ್ಧವಾದದ್ದು ಎಂದು ಬ್ರಾಹ್ಮಣ ಸಮುದಾಯದಿಂದ ಫುಲೆಯವರ ತಂದೆ ಗೋವಿಂದರಾವ್ ಮೇಲೆ ಬಹಿಷ್ಕಾರದ ಬೆದರಿಕೆಯನ್ನು ಹಾಕಲಾಯಿತು. ಇದಕ್ಕೆ ಫುಲೆ ದಂಪತಿಗಳು ಮಣಿಯದಿದ್ದಾಗ ಗೋವಿಂದರಾವ್ ಬ್ರಾಹ್ಮಣಶಾಹಿಯ ಒತ್ತಾಯಕ್ಕೆ ಹೆದರಿಕೊಂಡು ಇವರನ್ನು ಮನೆಯಿಂದ ಹೊರಹಾಕಿದರು. ಆಗ ಧೃತಿಗೆಡದ ಸಾವಿತ್ರಿಬಾಯಿಯವರು ತಮ್ಮ ಪತಿ ಜ್ಯೋತಿಬಾರ ಬೆಂಬಲಕ್ಕೆ ನಿಂತುಕೊಳ್ಳುತ್ತಾರೆ. ಮನೆಯಿಂದ ಹೊರ ಹಾಕಿದಾಗಲೂ ಫುಲೆ ದಂಪತಿಗಳು ತಮ್ಮ ಶಿಕ್ಷಣ ಆಂದೋಲನವನ್ನು ನಿಲ್ಲಿಸಲಿಲ್ಲ. ಬ್ರಾಹ್ಮಣಶಾಹಿ ಯಜಮಾನಿಕೆಗೆ ಹೆದರದೇ ಬೆದರದೇ ಅದನ್ನು ಪ್ರತಿರೋಧಿಸಿ ಗಟ್ಟಿಯಾಗಿ ನಿಲ್ಲುವುದರಲ್ಲಿಯೇ ಸಾವಿತ್ರಿಬಾಯಿಯವರ ಮನೋಬಲ ಎಷ್ಟು ದೊಡ್ಡದು ಎಂಬುದರ ಅರಿವಾಗುತ್ತದೆ. ಅವರ ಧೈರ್ಯ, ಸಾಹಸ ಹಾಗೂ ದೂರದೃಷ್ಟಿಯ ಮನೋಧರ್ಮವು ಸಾಮಾನ್ಯವಾದದ್ದಲ್ಲ.

ತಮ್ಮ ಕಾಲದಲ್ಲಿ ಎದುರಾದ ಪ್ರತಿರೋಧಗಳ ನಡುವೆಯು ಫುಲೆ ದಂಪತಿಗಳು ಮತ್ತಷ್ಟು ಶಾಲೆಗಳನ್ನು ಸ್ಥಾಪಿಸಿದರು. ಇವರು ಸ್ಥಾಪಿಸಿದ ಶಾಲೆಗಳ ಸಂಖ್ಯೆಯು ಮೂರು ವರ್ಷಗಳಲ್ಲಿ ಮೂರಕ್ಕೆರುತ್ತದೆ. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆಯು ಐನೂರು ದಾಟುತ್ತದೆ. ಈ ಶಾಲೆಗಳು ಬರಿ ಅಸ್ಪೃಶ್ಯರಿಗಷ್ಟೇ ಅಲ್ಲದೇ ಸಮಾಜದ ಎಲ್ಲಾ ಜಾತಿಯವರಿಗೂ ಮುಕ್ತವಾಗಿ ತೆರೆದುಕೊಂಡಿದ್ದವು. ಹೀಗಾಗಿ ಸಾವಿತ್ರಿಬಾಯಿ ಕೇವಲ ದಲಿತರಿಗಷ್ಟೇ ಅಕ್ಷರ ಕಲಿಸಿದ ಶಿಕ್ಷಕಿಯಲ್ಲ; ಜಾತಿ, ಮತ, ಧರ್ಮಗಳ ಸಂಕುಚಿತತೆಯ ಎಲ್ಲೆಗಳನ್ನು ದಾಟಿ ಎಲ್ಲರಿಗೂ ಶಾಲೆಯ ಬಾಗಿಲುಗಳನ್ನು ತೆರೆದಿದ್ದರು. ಆದ್ದರಿಂದಲೇ ದೇಶದ ಮೊಟ್ಟ ಮೊದಲ ಶಿಕ್ಷಕಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಫುಲೆ ದಂಪತಿಗಳು 1851 ರಲ್ಲಿ ಆರಂಭಿಸಿದ ಶಾಲೆಯ ವಾರ್ಷಿಕ ವರದಿಯಲ್ಲಿ “ನಮ್ಮ ಶಾಲೆಯ ಹಣಕಾಸಿನ ಈಗಿನ ಸುಧಾರಿತ ಪರಿಸ್ಥಿತಿಯಲ್ಲಿ ಶಿಕ್ಷಕಿಯರಿಗೆ ಸಣ್ಣ ಪ್ರಮಾಣದಲ್ಲಿ ಸಂಬಳವನ್ನು ಕೊಡಲು ನಿರ್ಧರಿಸಲಾಗಿದೆ. ಸಾವಿತ್ರಿಬಾಯಿ ಫುಲೆಯವರು ಸಂಬಳವನ್ನು ಸ್ವೀಕರಿಸದಯೇ ಈ ಬಾಲಕಿಯರ ಶಿಕ್ಷಣಕ್ಕಾಗಿ ದುಡಿಯುತ್ತಿದ್ದಾರೆ. ಅವರು ಇದರ ಆಧಾರ ಸ್ತಂಭ. ಮುಂದೊಂದು ದಿನ ಈ ದೇಶದ ಜನತೆ ಬಾಲಕಿಯರ ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳುತ್ತಾರೆ ಎನ್ನುವ ವಿಶ್ವಾಸ ನಮಗಿದೆ” ಎಂದು ನಮೂದಿಸಲಾಗಿದೆ. ಈ ಮಾತುಗಳು ಸಾವಿತ್ರಿಬಾಯಿಯವರ ನಿಸ್ವಾರ್ಥ ಸೇವಾ ಮನೋಧರ್ಮವನ್ನು ಹಾಗೂ ಸಾಮಾಜಿಕ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.

ಅಂದಿನ ಬ್ರಿಟಿಷ್ ಸಾರ್ವಜನಿಕ ಶಿಕ್ಷಣ ಇಲಾಖೆಯು ಫುಲೆ ದಂಪತಿಗಳ ಬಾಲಕಿಯರ ಶಾಲೆಗೆ ಭೇಟಿ ನೀಡಿ, ಲೆಕ್ಕ ಪರಿಶೋಧ ಮಾಡಿದ ನಂತರದಲ್ಲಿ ಅದು ನೀಡಿದ ವರದಿಯೊಂದು ಹೀಗಿದೆ: “ಬಾಲಕಿಯರ ಶಿಕ್ಷಣದ ಕುರಿತಾದ ಪೂರ್ವಗ್ರಹಪೀಡಿತ ಅಭಿಪ್ರಾಯ ಇಂದು ನಿಧಾನವಾಗಿ ಕಣ್ಮರೆಯಾಗುತ್ತಿದೆ. ಶಿಕ್ಷಕಿಯರ ಸಮರ್ಪಣಾ ಮನೋಭಾವ, ಕೆಲಸಗಾರರ ವೃತ್ತಿಪರತೆ ಮತ್ತು ಪೋಷಕರ ಸಹಕಾರದಿಂದ ಈ ಬಾಲಕಿಯರ ಶಾಲೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ನಡುವಿನ ಸೌಹಾರ್ದಯುತ ಸಂಬಂಧ ಇತರರಿಗೂ ಮಾದರಿಯಾಗಿದೆ.” ಕೇವಲ ಕಲ್ಲು, ಮಣ್ಣು, ಇಟ್ಟಿಗೆ, ಸಿಮೆಂಟಿನಿಂದ ನಿರ್ಮಿಸಿದ ಸುಸಜ್ಜಿತ ಕಟ್ಟಡವಷ್ಟೇ ಮಾದರಿ ಶಾಲೆ ಎಂದೆನ್ನಿಸಿಕೊಳ್ಳುವುದಿಲ್ಲ. ಅಲ್ಲಿಯ ಶಿಕ್ಷಕಿಯರು ತಮ್ಮ ವಿದ್ಯಾರ್ಥಿಗಳ ಮೇಲೆ ಎಷ್ಟು ಗಾಢವಾಗಿ ಪ್ರಭಾವ ಬೀರುತ್ತಾರೆ ಎಂಬುದೇ ಮುಖ್ಯವಾಗಿರುತ್ತದೆ. ಫುಲೆ ದಂಪತಿಗಳ ಶಾಲೆಯಲ್ಲಿ ಕಲಿತ ಮುಕ್ತಾಬಾಯಿ ಎಂಬ ಹನ್ನೊಂದು ವರ್ಷದ ದಲಿತ ಸಮುದಾಯದ ವಿದ್ಯಾರ್ಥಿಯು 1855ರಲ್ಲಿ ಬರೆದ ಪ್ರಬಂಧವು ಅಂದಿನ ‘ಧನ್ಯೋದಯ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಪ್ರಬಂಧದಲ್ಲಿ ಆಕೆ ತಮ್ಮ ಸಮುದಾಯವನ್ನು ಶೋಷಿಸುವ  ಬ್ರಾಹ್ಮಣ್ಯದ ಪಾರುತ್ಯವನ್ನು ಕಟುವಾಗಿ ಟೀಕಿಸುತ್ತಾಳೆ. ಇಂತಹ ಅಮಾನುಷ ಸಂಸ್ಕೃತಿ ಅಳಿಯಬೇಕೆಂದು ಬರೆದಿದ್ದಾಳೆ. ಇದು ಸಾವಿತ್ರಿಬಾಯಿ ತಮ್ಮ ವಿದ್ಯಾರ್ಥಿನಿಯರ ಮೇಲೆ ಮೂಡಿಸಿದ ಅಚ್ಚಳಿಯದ ಪ್ರಭಾವಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಸಾವಿತ್ರಿಬಾಯಿವರು 1854ರಲ್ಲಿ ಅಭಂಗ್ ಶೈಲಿಯಲ್ಲಿ ಬರೆದ ಕವಿತೆಗಳ ‘ಕಾವ್ಯಾ ಫೂಲೆ’ (ಕಾವ್ಯ ಅರಳಿದೆ) ಸಂಕಲನವನ್ನು ಪ್ರಕಟಿಸುತ್ತಾರೆ. ಅವರನ್ನು ಆಧುನಿಕ ಮರಾಠಿ ಕಾವ್ಯದ ಪ್ರವರ್ತಕಿ ಎಂದು ವಿಮರ್ಶಕರು ಗುರುತಿಸಿದ್ದಾರೆ. ತಮ್ಮ ಕವಿತೆಗಳಲ್ಲಿ ಸಾಮಾಜಿಕ ಅಸಮಾನತೆಯನ್ನು ಪೋಷಿಸುವ ಜಾತಿ ಪದ್ಧತಿ, ಅಸ್ಪೃಶ್ಯತೆ, ಜೀತ ಪದ್ಧತಿ ಹಾಗೂ ಊಳಿಗಮಾನ್ಯ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ‘ಕಿವುಗಟ್ಟಿದಂತಹ ಗಾಯದ ಕಲೆಯಾಗಿದ್ದ ಜಾತಿಯನ್ನು| ಕಡೆಗೂ ನನ್ನ ಬದುಕಿನಿಂದ ಅಳಿಸಿಹಾಕಿದ್ದೇನೆ|’ ಎಂದಿದ್ದಾರೆ. ಜ್ಞಾನದಾಹಿಯಾಗಿದ್ದ ಸಾವಿತ್ರಿಬಾಯಿಯವರು ತಮ್ಮ ಕವಿತೆಯೊಂದರಲ್ಲಿ ‘ಜ್ಞಾನವೆನ್ನುವುದು ಬಡವರ ನೆರಳು, ಆಶ್ರಯತಾಣ| ಇದು ತಾಯ್ತನ ಸ್ವರೂಪಿ| ಇಂಗ್ಲಿಷ್ ರಾಜ್ಯದಲ್ಲಿ ಸಿಕ್ಕಿದೆ ನಮ್ಮ ಸಂತೋಷ| ಅಳಿದಿವೆ ಕೆಟ್ಟ ದಿನಗಳ ಸಹವಾಸ|’ ಎಂದು ಇಂಗ್ಲಿಷ್‌ನ್ನು ಬಿಡುಗಡೆಯ ದಾರಿಯೆಂದು ಹರ್ಷಿಸಿದ್ದಾರೆ. ತಮ್ಮ ಕವಿತೆಗಳಲ್ಲಿ ಮಹಿಳೆಯನ್ನು ಬಂಧಿಸಿಟ್ಟಿರುವ ಎಲ್ಲ ಸಂಕೋಲೆಗಳಿಂದ ಮುಕ್ತರನ್ನಾಗಿಸುವ ಆಶಯಗಳಿವೆ. ಅವರು ಜ್ಯೋತಿಬಾ ಫುಲೆಯವರ ಲೇಖನ ಹಾಗೂ ಭಾಷಣಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಜ್ಯೋತಿಬಾ ಫುಲೆಯವರು ‘ಬ್ರಾಹ್ಮಣ ಪುರೋಹಿತಶಾಹಿಯ ಹಿಡಿತದಿಂದ ಶೂದ್ರರು, ಅತಿ ಶೂದ್ರರನ್ನು ಬಿಡುಗಡೆಗೊಳಿಸಿ, ಅವರಿಗೆ ಮಾನವ ಹಕ್ಕುಗಳನ್ನು ಬೋಧಿಸಿ, ಆ ಮೂಲಕ ಅವರನ್ನು ಮಾನಸಿಕ ಹಾಗೂ ಧಾರ್ಮಿಕ ದಾಸ್ಯದಿಂದ ಬಿಡುಗಡೆಗೊಳಿಸುವ’ ಧ್ಯೇಯೋದ್ದೇಶದೊಂದಿಗೆ 1873ರಲ್ಲಿ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು. ಸಾವಿತ್ರಿಬಾಯಿಯವರು ‘ಸತ್ಯಶೋಧಕ ಸಮಾಜ’ದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. ಪುರೋಹಿತರ ನೆರವಿಲ್ಲದೆ ಮದುವೆಗಳನ್ನು, ಅಂತರ್ಜಾತಿ ಮದುವೆಗಳನ್ನು ಹಾಗೂ ವಿಧವಾ ಪುನರ್ ವಿವಾಹಗಳನ್ನು ಮಾಡಿಸಿದ್ದರು. ವಿಧವೆಯರ ತಲೆ ಬೋಳಿಸುವ ಹೀನ ಪದ್ಧತಿಯ ವಿರುದ್ಧವಾಗಿ 1860ರಲ್ಲಿ ಕ್ಷೌರಿಕರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ವಿವಾಹಬಾಹಿರವಾಗಿ ಗರ್ಭಿಣಿಯಾಗುವ ಮಹಿಳೆಯರಿಗಾಗಿಯೇ ‘ಪುನರ್ವಸತಿ ಕೇಂದ್ರ’ಗಳನ್ನು ಸ್ಥಾಪಿಸಿದ್ದರು. ಹೀಗೆ ಹುಟ್ಟುವ ಮಕ್ಕಳಿಗಾಗಿ ಪ್ರತ್ಯೇಕವಾದ ‘ಶಿಶು ಕೇಂದ್ರ’ಗಳನ್ನು ಶುರು ಮಾಡಿದ್ದರು. 1870ರ ದಶಕದಲ್ಲಿ ಬರಗಾಲ ಪೀಡಿತ ಪ್ರದೇಶದಲ್ಲಿ ಫುಲೆ ದಂಪತಿಗಳು ಅನಾಥ ಮಕ್ಕಳಿಗಾಗಿ 52 ಬೋರ್ಡಿಂಗ್ ಶಾಲೆಗಳನ್ನು ಆರಂಭಿಸಿದ್ದರು. ಪುಣೆಯಲ್ಲಿ ಪ್ಲೇಗ್ ಹರಡಿದಾಗ ಸಾವಿತ್ರಿಬಾಯಿಯವರು ತಮ್ಮನ್ನು ಪ್ಲೇಗ್ ಪೀಡಿತರ ಸೇವೆಯಲ್ಲಿ ತೊಡಗಿಸಿಕೊಂಡರು; ಅದೇ ಸಂದರ್ಭದಲ್ಲಿ ಪ್ಲೇಗ್ ಮಾರಿಯು  ಸಾವಿತ್ರಿಬಾಯಿಯವರನ್ನು ಮಾರ್ಚ್ 10, 1897ರಂದು ಬಲಿ ತೆಗೆದುಕೊಂಡಿತು. ದಣಿವರಿಯದ ಈ ಹೋರಾಟಗಾರ್ತಿಯನ್ನು ಸಾಮಾಜಿಕ ಸುಧಾರಕಿ ಎನ್ನುವ ಚೌಕಟ್ಟಿನಲ್ಲಿ ಇಟ್ಟುಕೊಂಡು ನೋಡಲಾಗದು; ಜಾತಿ ಪದ್ಧತಿಯ ಭೀಕರ ಪರಿಣಾಮದಿಂದ ಅಂಚಿಗೆ ತಳ್ಳಲ್ಪಟ್ಟ ಅಲಕ್ಷಿತ ಸಮುದಾಯಗಳ ಮಹಿಳೆಯರ ವಿಮೋಚಕಿಯಾಗಿದ್ದಾರೆ.

ಇಂದಿನ ಕಾಲದಲ್ಲಿ ಸಾವಿತ್ರಿಬಾಯಿಯವರು ದೇಶದ ಮೊದಲ ಶಿಕ್ಷಕಿಯಾಗಿದ್ದಳು, ಅಕ್ಷರ ಮಾತೆಯಾಗಿದ್ದಳು, ಕ್ರಾಂತಿ ಜ್ಯೋತಿಯಾಗಿದ್ದಳು ಎನ್ನುವುದಕ್ಕೆ ಏನು ದಾಖಲೆಯಿದೆ ಎಂದು ಕೇಳುವ ಹುಂಬರಿದ್ದಾರೆ. ಇದನ್ನು ಒಪ್ಪಿಕೊಳ್ಳದ ಪೂರ್ವಗ್ರಪೀಡಿತ ಮನಸ್ಥಿತಿಯ ಜನರು ‘ವಿಮೋಚಕಿಯ ಕನಸುಗಳು…’ ಪುಸ್ತಕವನ್ನು ಒಮ್ಮೆ ಕಣ್ಣು ತೆರೆದು ಮುಕ್ತ ಮನಸ್ಸಿನಿಂದ ಓದಲಿ. ಕನ್ನಡದಲ್ಲಿ ಈ ಮೊದಲು ಬೆಳಗಾವಿ ಜಿಲ್ಲೆಯ ಅಥಣಿಯವರಾದ ಡಾ. ಜೆ.ಪಿ. ದೊಡಮನಿಯವರು ಮರಾಠಿಯಿಂದ ‘ಸಾವಿತ್ರಿಬಾಯಿ ಫುಲೆಯವರ ಜೀವನ ಚರಿತ್ರೆ’ಯನ್ನು 2007ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಚ್.ಎಸ್. ಅನುಪಮಾ ಅವರು ಸಾವಿತ್ರಿಬಾಯಿ ಬಗ್ಗೆ ಪುಸ್ತಕ ಬರೆದಿದ್ದಾರೆ. ಸರಜೂ ಕಾಟ್ಕರ್‌ರವರು ಸಾವಿತ್ರಿಬಾಯಿಯವರ ಜೀವನವನ್ನು ಆಧರಿಸಿ ಕಾದಂಬರಿಯನ್ನು ಬರೆದಿದ್ದಾರೆ. ಕನ್ನಡದಲ್ಲಿ ಒಂದು ಸಿನಿಮಾ ಕೂಡ ನಿರ್ಮಾಣವಾಗಿದೆ. ಇಷ್ಟಾಗಿಯೂ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿಯವರ ಬಗ್ಗೆ ಪೂರ್ಣ ಪ್ರಮಾಣದ ಜೀವನ ಚರಿತ್ರೆ ಇನ್ನೂ ಬರಬೇಕಾಗಿದೆ. ಸ್ತ್ರೀವಾದಿ ನೆಲೆಯಿಂದ ಗಂಭೀರ ಅಧ್ಯಯನಗಳು ನಡೆಯಬೇಕಿದೆ.

ಮಹಿಳೆಯರ ಸ್ವಾಭಿಮಾನದ ಜೀವನಕ್ಕಾಗಿ ತಮ್ಮ ಇಡೀ ಬದುಕನ್ನು ಸವೆಸಿದ ಸಾವಿತ್ರಿಬಾಯಿಯವರ ಹೆಜ್ಜೆ ಗುರುತುಗಳು ಭಾರತೀಯ ಚರಿತ್ರೆಯಲ್ಲಿ ದಾಖಲಾಗದೇ ಹೋಗಿದ್ದು ಆಕಸ್ಮಿಕವೇನಲ್ಲ. ಅಲಕ್ಷಿತ ಸಮುದಾಯಗಳ ಕಣ್ಣೋಟದಿಂದ ಈ ಚರಿತ್ರೆಯನ್ನು ಬರೆಯಲಾಗಿಲ್ಲ. ಚರಿತ್ರೆಯ ರಚನೆಯಲ್ಲಿ ರಾಷ್ಟ್ರೀಯತೆ ಹಾಗೂ ಬ್ರಾಹ್ಮಣಿಕೆಯ ದೃಷ್ಟಿಕೋನವು ಪ್ರಾಧಾನ್ಯತೆಯನ್ನು ಪಡೆದುಕೊಂಡಿದ್ದರಿಂದ ದಮನಿತ ಸಮುದಾಯಗಳ ವಿಮೋಚನೆಗಾಗಿ ತಮ್ಮ ಬದುಕೆಲ್ಲ ಸೆಣಸಾಡಿಸಿದ ಸಾವಿತ್ರಿಬಾಯಿಯವರ ಸ್ಥಾನಮಾನವು ಅಲಕ್ಷಿತವಾಗಿಯೇ ಉಳಿಯುವಂತಾಯಿತು. ಆದರೆ ಸಾವಿತ್ರಿಬಾಯಿಯವರ ಹೋರಾಟದ ಕೆಚ್ಚನ್ನು ಇಂದಿನ ಯುವ ಪೀಳಿಗೆಗೆ ದಾಟಿಸುವ ಅಗತ್ಯವಿದೆ. ಅವರ ಸಂಘರ್ಷದ ಜೀವನವನ್ನು ಮುಖ್ಯವಾಹಿನಿಗೆ ತರಬೇಕಿದೆ.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected], [email protected]ಇಲ್ಲಿಗೆ ಬರೆಯಿರಿ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights