ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ: ರಾಜಭವನ ಚಲೋ ನಡೆಸಿದ ಹೋರಾಟಗಾರರ ಬಂಧನ!

ಒಕ್ಕೂಟ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಗಳ ವಿರುದ್ದ ರೈತರ ಹೋರಾಟ ಏಳು ತಿಂಗಳುಗಳನ್ನು ಪೂರೈಸಿದೆ. ದೆಹಲಿ ಗಡಿಯಲ್ಲಿ ಬೀಡು ಬಿಟ್ಟಿರುವ ರೈತರು ತಮ್ಮ ಪ್ರತಿಭಟನೆಯನ್ನು ಧೀರ್ಘಾವಧಿಯವರೆಗೆ ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಸರ್ಕಾರದ ಜೊತೆ ರೈತರು ಹಲವು ಸುತ್ತುಗಳ ಸಭೆ ನಡೆಸಿದ್ದಾರೆ. ಆದರೆ, ಸರ್ಕಾರ ಮಾತ್ರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ತನ್ನ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿಲ್ಲ. ಹೀಗಾಗಿ, ಸಂಯುಕ್ತ ಕಿಸಾನ್ ಮೋರ್ಚಾ ಇಂದು ದೇಶದಾದ್ಯಂತ “ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ” ಆಂದೋಲನಕ್ಕೆ ಕರೆ ನೀಡಿತ್ತು.

ಸಂಯುಕ್ತ ಕಿಸಾನ್‌ ಮೋರ್ಚಾದ ಕರೆಯನ್ನು ಬೆಂಬಲಿಸಿ ರಾಜ್ಯದ ರೈತ ಸಂಘಟನೆಗಳು ಬೆಂಗಳೂರಿನಲ್ಲಿ ‘ರಾಜಭವನ ಚಲೋ’ ಹೋರಾಟ ನಡೆಸಿವೆ. ನಗರದ ಮೌರ್ಯ ಸರ್ಕಲ್‌ನಲ್ಲಿ ನಡೆಯುತ್ತಿದ್ದ ಈ ಪ್ರತಿಭಟನೆಯನ್ನು ತಡೆದ ಪೊಲೀಸರು ಪ್ರತಿಭಟನಾ ನಿರತ ರೈತ ಹೋರಾಟಗಾರರನ್ನು ವಶಕ್ಕೆ ಪಡೆದು ಹೈಗ್ರೌಂಡ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿ ಪ್ರತಿಭಟನಾ ಸಭೆಯನ್ನು ಅಲ್ಲಿಯೆ ನಡೆಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ದೀರ್ಘ ಕಾಲದವರೆಗೆ ಮುಂದುವರೆಯುತ್ತದೆ: ರೈತ ಮುಂಖಡ ರಾಕೇಶ್‌ ಟಿಕಾಯತ್‌

ದೇಶದ ಇತರ ಕಡೆಗಳಲ್ಲಿ ಕೂಡಾ ಸಂಯುಕ್ತ ಕಿಸಾನ್ ಮೋರ್ಚಾದ ಕರೆಗೆ ಬೆಂಬಲ ವ್ಯಕ್ತವಾಗಿದೆ. ರೈತ ನಾಯಕ ರಾಕೇಶ್‌ ಟಿಕಾಯತ್‌ ಗಾಝಿಪುರ್‌ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸ್ವತಃ ಅವರೆ ತನ್ನ ಬಂಧನ ನಡೆದಿಲ್ಲ ಎಂದು ವಿಡಿಯೊ ಸಂದೇಶ ನೀಡಿದ್ದಾರೆ.

“7 ತಿಂಗಳ ಮಹತ್ವದ ಹೋರಾಟ ಪೂರ್ಣಗೊಳ್ಳುತ್ತಿದ್ದಂತೆ, ದೃಢತೆಯ ಮನೋಭಾವದೊಂದಿಗೆ, ಕರಾಳ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವವರೆಗೆ ರೈತರೆಲ್ಲರೂ ದೀರ್ಘಕಾಲದ ಮತ್ತು ತೀವ್ರವಾದ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ” ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಈ ನಡುವೆ ಚಂಡೀಗಡ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ರೈತ ಮುಖಂಡರಾದ ಬಲ್‌ಬೀರ್‌ ಸಿಂಗ್‌ ರಾಜೇವಾಲ, ಬಲ್‌ಜಿತ್‌ ಸಿಂಗ್‌, ರಾಜೀಂದರ್‌ ಸಿಂಗ್‌ ಮತ್ತು ಕುಲ್‌ದೀಪ್‌ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರೊಂದಿಗೆ ಇದ್ದ ಸಾವಿರಾರು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಟಿಚಾರ್ಜ್ ಮತ್ತು ನೀರಿನ ಫಿರಂಗಿಯಿಂದ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ರೈತರು v/s ಹರ್ಯಾಣ ಸರ್ಕಾರ; ರೈತರನ್ನು ಒಕ್ಕಲೆಬ್ಬಿಸಲು ಪ್ರಭುತ್ವದ ಹುನ್ನಾರ!

‘ಯುದ್ಧವಿಲ್ಲದೆ ವಿಜಯವಿಲ್ಲ’ ಪೂರ್ಣ ಉತ್ಸಾಹ, ದೃಡ ನಿಶ್ಚಯ ಮತ್ತು ಶಕ್ತಿಯನ್ನು ಹೊಂದಿರುವ ರೈತರು ತಮ್ಮ ಹಕ್ಕುಗಳನ್ನು ಗೆಲ್ಲಲು, ತಮ್ಮ ಗೆಲುವಿನತ್ತ ಸಾಗಲು ಸಿದ್ಧರಾಗಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿದೆ.

ಉತ್ತರ ಪ್ರದೇಶದಲ್ಲಿ ರಾಜ್ಯಪಾಲರನ್ನು ಭೇಟಿಯಾದ ರೈತರ ನಿಯೋಗ ರಾಷ್ಟ್ರಪತಿಗೆ ಪತ್ರವನ್ನು ಕಳುಹಿಸಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿಯಾದ ಕೊಲ್ಕತ್ತಾದಲ್ಲೂ ರೈತರು ಸಂಯುಕ್ತ ಕಿಸಾನ್‌ ಮೋರ್ಚಾದ ಕರೆಗೆ ಓಗೊಟ್ಟು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆ ವಿರುದ್ದದ ಪ್ರತಿಭಟನೆಯಲ್ಲಿ 500 ರೈತರ ಸಾವು; ಕುಗ್ಗದ ರೈತರು: ರಾಹುಲ್‌ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights