ರಾಜಕೀಯ ಅಥವಾ ವಿರೋಧಿಗಳ ಮೇಲೆ ಅಧಿಕಾರದ ಬಲ ಸ್ಥಾಪಿಸಲು ಅತ್ಯಾಚಾರದ ಸಿದ್ಧಾಂತ ಪ್ರತಿಪಾಸಿದ್ದ ಸಾವರ್ಕರ್

ಕಳೆದ ವರ್ಷ ಜಮ್ಮುವಿನ ಕಥುವಾದಲ್ಲಿ ಎಂಟು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ, ಮೂರು ದಿನಗಳ ಕಾಲ ದೇವಾಲಯವೊಂದರಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿ ಕೊಂದ ಎಂಟು ಮಂದಿ ದುಷ್ಟರ ಕ್ರೂರತೆ ದೇಶವನ್ನು ದಂಗುಬಡಿಸಿತ್ತು. ಕಳೆದ ತಿಂಗಳು ಹತ್ರಾಸ್‌ನಲ್ಲಿನ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಕ್ರೌರ್ಯ, ಅರೋಪಿಗಳನ್ನು ಪರವಾಗಿರುವ ಬಿಜೆಪಿ ಸರ್ಕಾರ ಮತ್ತೆ ಅಂದದ್ದೆ ದಿಗ್ಭ್ರಮೆಯನ್ನು ಉಂಟುಮಾಡಿದೆ. ದೇಶದಾದ್ಯಂತ ಪ್ರತಿಭಟನೆಗಳೂ ನಡೆಯುತ್ತಿವೆ.

ಜಮ್ಮುವಿನ ಕಥುವಾದಲ್ಲಿನ ಘಟನೆಯ ಚಿತ್ರದಿಂದ ನಿಧಾನವಾಗಿ ಅಳಿಸಲು ಪ್ರಯತ್ನಿಸಲಾಗುತ್ತಿದ್ದ ಒಂದು ಸತ್ಯವೆಂದರೆ, ಮುಸ್ಲಿಂ ಅಲೆಮಾರಿ ಬಾಕರ್ವಾಲ್ ಸಮುದಾಯದ ಹುಡುಗಿಯನ್ನು ಅಪಹರಿಸುವ ಸಂಚನ್ನು ಈ ವ್ಯಕ್ತಿಗಳು ಅವರನ್ನು ಆ ಪರಿಸರದಿಂದ ಓಡಿಸುವ ಉದ್ದೇಶದಿಂದ ರೂಪಿಸಿದ್ದರು ಎಂಬುದು. ಇದನ್ನು ಅಡ್ಡಕ್ಕೆ, ಉದ್ದಕ್ಕೆ ಹೇಗೆ ಬೇಕಾದರೂ ಕೊಯ್ದು ನೋಡಿದರೂ, ಮುಸ್ಲಿಂ ಸಮುದಾಯದ ವಿರುದ್ಧ ಹಿಂದೂ ಮತಾಂಧರ ಸಂಚು ಇದಾಗಿತ್ತೆಂಬ ಸತ್ಯವು ಉಳಿದುಕೊಳ್ಳುತ್ತದೆ. ಇದು ವರ್ಷಗಳಿಂದ ಜಮ್ಮು ಪ್ರದೇಶದಲ್ಲಿ ಸಂಘಪರಿವಾರವು ಹಿಂದೂ ಸಮುದಾಯದಲ್ಲಿ ಬಿತ್ತಿ ಬೆಳೆಸಿಕೊಂಡು ಬರುತ್ತಿರುವ ವಿಷಕಾರಿ ದ್ವೇಷದ ಅಂತಿಮ ಪರಿಣಾಮವಾಗಿತ್ತು.

ಈ ಸಂಪರ್ಕದ ಪರಿಣಾಮವಾಗಿಯೇ ಆರ್‌ಎಸ್‌ಎಸ್/ ಬಿಜೆಪಿ ಬೆಂಬಲಿಗರು ಹಿಂದೂ ಸೇನಾ ಎಂಬ ಮುಸುಕಿನಲ್ಲಿ, ಆರೋಪಿಗಳ ಬಂಧನದ ವೇಳೆ ಪ್ರತಿಭಟನೆಗಳನ್ನು ನಡೆಸಿದರು; ಕಥುವಾ ಸೆಷನ್ಸ್ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸುವುದಕ್ಕೆ ವಕೀಲರು ಅಡ್ಡಿ ಮಾಡಿದರು; ಜಮ್ಮು ಬಂದ್‌ಗೆ ಕರೆ ನೀಡಲಾಯಿತು (ಆದರೆ, ಅದು ತೋಪಾಯಿತು) ಮತ್ತು ಬಿಜೆಪಿಯ ಇಬ್ಬರು ಶಾಸಕರು ಆರೋಪಿಗಳ ಬೆಂಬಲದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು.

ವೀರ ಸಾವರ್ಕರ್ | Readoo Kannada | ರೀಡೂ ಕನ್ನಡ

ಕಥುವಾ ಮತ್ತು ಉನಾವ್‌ನಲ್ಲಿ ನಡೆದ ಇನ್ನೊಂದು ಅತ್ಯಾಚಾರ ಪ್ರಕರಣಕ್ಕೂ ಸಾಮ್ಯವಿದೆ. ಇಲ್ಲಿ ಸಂತ್ರಸ್ತೆ ಮುಸ್ಲಿಂ ಆಗಿರಲಿಲ್ಲ. ಆದರೆ, ಇದನ್ನು ಮಾಡಿದಾತ ಒಬ್ಬ ಚುನಾಯಿತ ಬಿಜೆಪಿ ಶಾಸಕನಾಗಿದ್ದ. ಸಾಮ್ಯ ಇರುವುದು ಎಲ್ಲಿ ಎಂದರೆ, ಅತ್ಯಾಚಾರಿಗಳು ಮತ್ತು ಕೊಲೆಗಡುಕರಿಗೆ ತಕ್ಷಣವೇ ಬೆಂಬಲವನ್ನು ಆಯೋಜಿಸುವುದರಲ್ಲಿ; ಕಾನೂನಿನ ಸಹಜ ಪ್ರಕ್ರಿಯೆಯನ್ನು ಬುಡಮೇಲು ಮಾಡುವುದರಲ್ಲಿ; ಗಮನವನ್ನು ಬೇರೆಡೆ ಸೆಳೆಯುವ ಕುಟಿಲ ತಂತ್ರ ಅನುಸರಿಸುವುದರಲ್ಲಿ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ರಾಜಕೀಯ ಬಲದ ದುರುಪಯೋಗ ಮಾಡುವುದರಲ್ಲಿ. ಇದು ಕೆಲವು ಅಧಿಕಾರದ ಮದವೇರಿದ ವ್ಯಕ್ತಿಗಳು ಕಾನೂನಿನ ಭಯವಿಲ್ಲದೆ ನಡೆಸಿದ ಕೃತ್ಯ ಎಂದಾಗಲೀ, ಒಂದು ರೀತಿಯ ಹುಚ್ಚು ಉನ್ಮಾದದ ಪರಿಣಾಮ ಎಂದಾಗಲೀ ಭಾವಿಸಿದರೆ ಅದು ಉನಾವ್ ಅತ್ಯಾಚಾರ ಸಂತ್ರಸ್ತೆಗೆ ಮಾಡಿದ ಅನ್ಯಾಯವಾದೀತು.

ಇದನ್ನೂ ಓದಿ: ಕನ್ನಡಿಗರನ್ನು ಬಂಧಿಸಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟ ಸರ್ಕಾರ

 ರಾಜಕೀಯ ಅಥವಾ ಇತರ ವಿರೋಧಿಗಳ ಮೇಲೆ ಅಧಿಕಾರದ ಬಲವನ್ನು ಹೇರುವ ವಿಧಾನವಾಗಿ ಅತ್ಯಾಚಾರದ ಸಿದ್ಧಾಂತ, ಅಥವಾ ಬಲಪ್ರಯೋಗದ ಮೂಲಕ ತಮ್ಮ ಸಿದ್ಧಾಂತವನ್ನು ಬೆಳೆಸುವ ಅಸ್ತ್ರವಾಗಿ ಅತ್ಯಾಚಾರವನ್ನು ಬಳಸುವ ಪರಿಕಲ್ಪನೆಯನ್ನು ಸಂಘಪರಿವಾರದ ಒಳಗೆ ತುಂಬಿಸಿದವರು, ಅವರ ಆರಾಧ್ಯ ದೈವ ಎನಿಸಿದ “ವೀರ” ಸಾವರ್ಕರ್ ಅವರಲ್ಲದೇ ಬೇರಾರೂ ಅಲ್ಲ. ಆರೆಸ್ಸೆಸ್ ಮತ್ತೆಮತ್ತೆ ಅವರ ಹೆಸರನ್ನು ಉಲ್ಲೇಖಿಸುತ್ತದೆ ಮತ್ತು ಪ್ರಧಾನಿಯಾಗಿದ್ದಾಗ 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನೇತುಹಾಕಿದ ಸಾವರ್ಕರ್ ಭಾವಚಿತ್ರಕ್ಕೆ ಸ್ವತಃ ಪ್ರಧಾನಿ ಮೋದಿ ಹಾರ ಹಾಕಲು ಹೋಗುತ್ತಾರೆ.

ವಿನಾಯಕ ದಾಮೋದರ ಸಾವರ್ಕರ್, ತನ್ನ ಪುಸ್ತಕಗಳಲ್ಲಿ ಒಂದಾದ “ಸಿಕ್ಸ್ ಗ್ಲೋರಿಯಸ್ ಎಪೋಕ್ಸ್ ಆಫ್ ಇಂಡಿಯನ್ ಹಿಸ್ಟರಿ” (ಭಾರತದ ಇತಿಹಾಸದ ಆರು ಮಹತ್ವದ ಪರ್ವಗಳು) ಎಂಬ ಪುಸ್ತಕದಲ್ಲಿ ಮುಸ್ಲಿಂ ಮಹಿಳೆಯನ್ನು ಅತ್ಯಾಚಾರ ಮಾಡುವುದು ಏಕೆ ಸಮರ್ಥನೀಯ ಎಂದು ಸ್ಪಷ್ಟವಾಗಿ ವಿವರಿಸುತ್ತಾರೆ ಮತ್ತು ಅವಕಾಶ ಸಿಕ್ಕಾಗ ಅದನ್ನು ಮಾಡದೇ ಇರುವುದು ಸದ್ಗುಣವಾಗಲೀ, ಶೌರ್ಯವಾಗಲೀ ಅಲ್ಲ; ಬದಲಾಗಿ ಹೇಡಿತನ ಎಂದು ಪ್ರತಿಪಾದಿಸುತ್ತಾರೆ. (ಮುಂಬಯಿ ಮೂಲದ ‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ್’ ಬಿಡುಗಡೆ ಮಾಡಿರುವ ಆನ್ಲೈನ್ ಆವೃತ್ತಿಯ ಅಧ್ಯಾಯ VIII ನೋಡಿ.)

13 ವರ್ಷದ ಬಾಲಕಿಯ ರೇಪ್ ಮಾಡಿ, ಕಣ್ಣು ಕಿತ್ತು, ನಾಲಿಗೆ ಕತ್ತರಿಸಿದ ಕಾಮುಕರ ವಿಕೃತಿ!- Kannada Prabha

ಹಿಂದೆ ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಸುಲಭದಲ್ಲಿ ಬಿಟ್ಟುಬಿಟ್ಟು ಅವರ ಮೇಲೆ ಕರುಣೆ ತೋರುವುದರ ಮೂಲಕ ಸದ್ಗುಣಶೀಲತೆ ಮತ್ತು ಶೌರ್ಯದ “ಆತ್ಮಹತ್ಯಾತ್ಮಕ” (ಪ್ಯಾರಾ 452) ಮನೋಭಾವದಿಂದ ಬಾಧಿತರಾಗಿದ್ದರು ಎಂದು ಸಾವರ್ಕರ್ ವಿವರಿಸುತ್ತಾರೆ. ಅವರು ಛತ್ರಪತಿ ಶಿವಾಜಿಯಂತಹ ಪ್ರಖ್ಯಾತ ವ್ಯಕ್ತಿ ಕಲ್ಯಾಣ್‌ನ ಮುಸ್ಲಿಂ ರಾಜ್ಯಪಾಲನ ಸೊಸೆಯನ್ನು ಬಿಟ್ಟುಬಿಟ್ಟ ಮತ್ತು ಅದೇ ರೀತಿಯಲ್ಲಿ ಪೇಶ್ವೆ ಚಿಮಾಜಿ ಅಪ್ಟೆ ಬೇಸ್ಸಿನ್‌ನ ಪೋರ್ಚುಗೀಸ್ ಗವರ್ನರ್‌ನ ಹೆಂಡತಿಯನ್ನು ಯಾವುದೇ ಹಾನಿ ಮಾಡದೆ ಬಿಟ್ಟುಬಿಟ್ಟ ಉದಾಹರಣೆಗಳನ್ನು ನೀಡುತ್ತಾರೆ. (ಪ್ಯಾರ 450)

ಮುಸ್ಲಿಂ ದಮನಕೋರರು ಹಿಂದೂ ಮಹಿಳೆಯರನ್ನು ಅದೇ ರೀತಿ ಶಿಕ್ಷಿಸುತ್ತಿದ್ದರಿಂದ, ಅದೇ ನಡವಳಿಕೆಯನ್ನು ವಿಜಯಿ ಹಿಂದೂಗಳು ಪರಾಜಿತ ಮುಸ್ಲಿಂ ಮಹಿಳೆಯರಿಗೆ ತೋರಬೇಕು ಎಂದು ಸಾವರ್ಕರ್ ಭಾವೋದ್ರಿಕ್ತ ಧ್ವನಿಯಲ್ಲಿ ವಾದಿಸಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮಳ ಹೆಸರಿಡಲು ನಿರಾಕರಿಸಿದ ಬಿಜೆಪಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡಲು ಮುಂದಾಗಿದೆ!

“ಹಿಂದೂಗಳು ಗೆದ್ದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಕೂಡಾ ಅದೇ ವಿಪತ್ತಿನಲ್ಲಿ ಇರುತ್ತಾರೆ ಎಂಬ ಈ ಘೋರ ಆತಂಕದಿಂದ ಒಮ್ಮೆ ಅವರು ಪೀಡಿತರಾದರೆ, ಭವಿಷ್ಯದ ಮುಸ್ಲಿಂ ವಿಜಯಿಗಳು ಹಿಂದೂ ಮಹಿಳೆಯರ ಮೇಲೆ ಅಂತಹ ಅತ್ಯಾಚಾರದ ಯೋಚನೆ ಮಾಡುವ ಧೈರ್ಯವನ್ನು ಎಂದಿಗೂ ತೋರುವುದಿಲ್ಲ” ಎಂದು ಅವರು ಬರೆದಿದ್ದಾರೆ. (ಪ್ಯಾರಾ 452) ಹಿಂದೂಗಳು ಹಿಂದಿನ ಕಾಲದಿಂದಲೂ ಮುಸ್ಲಿಂ ಮಹಿಳೆಯರನ್ನು ಅನುಭೋಗಿಸುವ ಧೋರಣೆಯನ್ನು ಅನುಸರಿಸುತ್ತಿದ್ದರೆ, ಪರಿಸ್ಥಿತಿ ಈಗಿರುವುದಕ್ಕಿಂತ ಚೆನ್ನಾಗಿರುತ್ತಿತ್ತು ಎಂದು ಅವರು ವಾದಿಸುತ್ತಾರೆ:

“ಒಂದು ವೇಳೆ ಭಾರತದ ಮೇಲೆ ಹಿಂದಿನ ಮುಸ್ಲಿಂ ಆಕ್ರಮಣಗಳ ಕಾಲದಲ್ಲಿ ಹಿಂದೂಗಳು ಕೂಡಾ, ಯುದ್ಧಭೂಮಿಯಲ್ಲಿ ಜಯಶೀಲರಾದಾಗಲೆಲ್ಲಾ, ಮುಸ್ಲಿಂ ಮಹಿಳೆಯರಿಗೆ ಅದೇ ರೀತಿಯಲ್ಲಿ ಉತ್ತರ ನೀಡುತ್ತಿದ್ದರೆ, ಅಥವಾ ಅವರನ್ನು ಯಾವುದಾದರೂ ಬೇರೆ ರೀತಿಯಲ್ಲಿ ಶಿಕ್ಷಿಸುತ್ತಿದ್ದರೆ; ಅಂದರೆ, ಬಲವಂತವಾಗಿಯಾದರೂ ಮತಾಂತರ ಮಾಡುವುದು, ಮತ್ತು ಅವರನ್ನು ನಂತರ ತಮ್ಮ ತೆಕ್ಕೆಯೊಳಗೆ ಸೇರಿಸಿಕೊಳ್ಳುವುದು ಮಾಡುತ್ತಿದ್ದರೆ, ಆಗ? ಆಗ, ಅವರ ಹೃದಯದಲ್ಲಿ ಈ ಭಯಾನಕ ಭೀತಿ ಇರುವಾಗ, ಯಾವುದೇ ಹಿಂದೂ ಮಹಿಳೆಯ ವಿರುದ್ಧ ಅವರ ದುಷ್ಟ ಯೋಚನೆಯಿಂದ ದೂರ ಉಳಿಯುತ್ತಿದ್ದರು.” (ಪ್ಯಾರಾ 455) ಎಂದು ಸಾವರ್ಕರ್ ಬರೆದಿದ್ದಾರೆ.

“ಪ್ರತಿ ಹಿಂದೂವೂ ತನ್ನ ತಾಯಿಯ ಹಾಲು ಹೀರುವುದರ ಜೊತೆಗೆಯೇ, ಧಾರ್ಮಿಕ ಸಹಿಷ್ಣುತೆಯು ಒಂದು ಸದ್ಗುಣ ಎಂಬುದನ್ನು ಹೀರುವಂತೆ ಮಾಡಿರುವಂತೆ ಕಾಣುತ್ತದೆ” (ಪ್ಯಾರಾ 429-430) ಎಂಬ ತಪ್ಪು ಕಲ್ಪನೆಯ ಹೊರತಾಗಿ ಸಾವರ್ಕರ್, “ಮುಸ್ಲಿಂ ಮಹಿಳೆಯೊಂದಿಗೆ ಯಾವುದೇ ರೀತಿಯ ಸಂಬಂಧವು ತಾವೇ ಇಸ್ಲಾಮಿಗೆ ಮತಾಂತರವಾದಂತೆ ಆಗುವುದು” ಎಂಬ “ಮೂರ್ಖ ಕಲ್ಪನೆ”ಯು ಹಿಂದೂಗಳಲ್ಲಿ ಇರುವುದನ್ನು ಮತ್ತು ಇದುವೇ ಅವರು ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡದಿರುವುದಕ್ಕೆ ಕಾರಣ ಎಂದು ಗುರುತಿಸುತ್ತಾರೆ.
(ಪ್ಯಾರಾ 453). ಈ ಕಲ್ಪನೆಯು, “ಮುಸ್ಲಿಂ ಸ್ತ್ರೀ ವರ್ಗ”ವನ್ನು ಶಿಕ್ಷಿಸದಂತೆ ಹಿಂದೂ ಪುರುಷರನ್ನು ತಡೆದಿದೆ ಎಂದು ಅವರು ಬರೆಯುತ್ತಾರೆ. (ಪ್ಯಾರಾ 454)

ಇದನ್ನೂ ಓದಿ: ಇಲ್ಲಿ ರಸ್ತೆಗೆ ಸಾವರ್ಕರ್ ಹೆಸರಿಡಲು ವಿರೋಧ; ನೆರೆ ರಾಜ್ಯದಲ್ಲಿ ಕಾಂಗ್ರೆಸ್ ಮಿತ್ರಪಕ್ಷದ ಸದಸ್ಯರಿಂದ ಸಾವರ್ಕರ್ ಪೂಜೆ

 ಒಂದು ವೇಳೆ ಯಾರಾದರೂ ಮುಸ್ಲಿಂ ಮಹಿಳೆಯರ ಬಗ್ಗೆ ಸಹಾನುಭೂತಿ ತೋರುವುದಾದಲ್ಲಿ, ಸಾವರ್ಕರ್ ನಮ್ಮನ್ನು ಮುಸ್ಲಿಂ ಮಹಿಳೆಯರು ಮಾಡಿದ ಯಾವುದೇ ಆಧಾರವಿಲ್ಲದ “ತಪ್ಪು”ಗಳ ಯಾತ್ರೆಗೆ ಕೊಂಡೊಯ್ಯುತ್ತಾರೆ. ಅವುಗಳಲ್ಲಿ ಹಿಂದೂ ಹುಡುಗಿಯರನ್ನು ಪುಸಲಾಯಿಸುವುದು ಮತ್ತು ಅವರನ್ನು “ಮಸೀದಿಗಳಲ್ಲಿ ಇರುವ ಮುಸ್ಲಿಂ ಕೇಂದ್ರಗಳಿಗೆ” ಕಳುಹಿಸುವುದು ಮತ್ತು ಹಿಂದೂಗಳ ವಿರುದ್ಧ ಹಿಂಸಾಚಾರದಲ್ಲಿ ಮುಸ್ಲಿಂ ಪುರುಷರನ್ನು ಬೆಂಬಲಿಸುವುದು ಸೇರಿದೆ.

ವರ್ಷಗಳಿಂದ ಆರ್‌ಎಸ್‌ಎಸ್ ಮತ್ತು ಅದರ ಮುಂಚೂಣಿ ಸಂಘಟನೆಗಳು ಪ್ರಚಾರ ಮಾಡುತ್ತಿರುವುದು ಇಂತಹಾ ವಿಚಾರಗಳನ್ನೇ ಮತ್ತು ಸಾವರ್ಕರ್ ಸಂಘ ಪರಿವಾರದ ಹಿಂಬಾಲಕರ ನಡುವೆ ಬಹಳ ಗೌರವ ಹೊಂದಿರುವ ನಾಯಕನಾಗಿ ಉಳಿದುಕೊಂಡಿದ್ದಾರೆ. ಇದು 2002ರಲ್ಲಿ ಗುಜರಾತಿನಲ್ಲಿ ಮತ್ತು 2013ರಲ್ಲಿ ಮುಜಾಫರ್‌ನಗರದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಭಯಾನಕವಾದ ದೌರ್ಜನ್ಯಗಳನ್ನು ನಡೆಸುವಂತೆ ಹಿಂದೂ ಗಲಭೆಕೋರರನ್ನು ಮತ್ತು ಇನ್ನೂ ಅನೇಕರನ್ನು ಪ್ರೇರೇಪಿಸಿದೆ.

ಆದುದರಿಂದ, ಕಥುವಾ ಅಥವಾ ಉನಾವ್‌ನ ಅತ್ಯಾಚಾರಿಗಳು ಮತ್ತು ಕೊಲೆಗಡುಕರು- ಅವರ ಮಾನಸಿಕವಾಗಿ ಪ್ರಚೋದನೆಗಳು ಏನೇ ಇರಲಿ, ಅವರ ನೈತಿಕ ಮತ್ತು ಸೈದ್ಧಾಂತಿಕ ಸಮರ್ಥನೆಗಳು ಬರುತ್ತಿರುವುದು ಸಾವರ್ಕರ್ ಅವರಿಂದಲೇ ಹೊರತು ಬೇರಾರಿಂದಲೂ ಅಲ್ಲ. ಇಂತಹ ಕೃತ್ಯಗಳನ್ನು ಖಂಡಿಸುವುದು ಮತ್ತು ಆ ಕುರಿತು ಕ್ರಮ ಕೈಗೊಳ್ಳುವುದು ಸಂಘಪರಿವಾರಕ್ಕೆ ಕಷ್ಟವಾಗುತ್ತಿರುವುದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ. ಮಹಿಳೆಯರ ವಿರುದ್ಧದ ಅಪರಾಧದಲ್ಲಿ ತೊಡಗಿದ ಬಿಜೆಪಿ/ ಸಂಘಪರಿವಾರದ ಸದಸ್ಯರ ಪಟ್ಟಿ ಬೆಳೆಯುತ್ತಾ ಹೋಗುತ್ತಿರುವುದರಲ್ಲಿ ಕೂಡಾ ದೊಡ್ಡ ಆಶ್ಚರ್ಯವೇನಿಲ್ಲ.

ಸುಬೋಧ್ ವರ್ಮಾ
ಅನುವಾದ: ನಿಖಿಲ್ ಕೋಲ್ಪೆ
ಕೃಪೆ: ‘ನ್ಯೂಸ್ ಕ್ಲಿಕ್’


ಇದನ್ನೂ ಓದಿ: ಕ್ಷಮೆ ಯಾಚಿಸಲು ನಾನು ಸಾವರ್ಕರ್ ಅಲ್ಲ – ಬಿಜೆಪಿ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights