Fact check: ‘ಭಾರತೀಯರ ಸ್ಥಳಾಂತರಕ್ಕಾಗಿ 6 ಗಂಟೆಗಳ ಕಾಲ ಯುದ್ದ ನಿಲ್ಲಿಸಿದ ರಷ್ಯಾ’ ಎಂದು ಸುಳ್ಳು ಹೇಳಿದ ಸುವರ್ಣ ನ್ಯೂಸ್

ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲವಾಗಿದೆ, ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ದ ಪ್ರಾರಂಭವಾಗಿ 9ದಿನ ಕಳೆದರೂ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಭಾರತದ ಪ್ರಜೆಗಳು ಮತ್ತು ವಿದ್ಯಾರ್ಥಿಗಳನ್ನು ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡು ಸಂಕಷ್ಟದಲ್ಲಿದ್ದಾರೆ. ಅವರನ್ನು ಭಾರತಕ್ಕೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ.

ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಭಾರತೀಯರನ್ನು ಹೊರಹೋಗಲು ಬಿಡುತ್ತಿಲ್ಲ ಎಂದು ಹೇಳಲಾಗಿದೆ. ಈ ನಡುವೆ ಹಲವಾರು ಸುಳ್ಳು ಸುದ್ದಿಗಳ ವೈರಲ್ ಆಗುತ್ತಿವೆ.

“ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿ , ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಷಯವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಸಾಧ್ಯವಿರುವ ಎಲ್ಲಾ ನೆರವು ನೀಡಲು ರಷ್ಯಾ ಸಿದ್ಧವಿದೆ ಎಂದು ರಷ್ಯಾ ಅಧ್ಯಕ್ಷರು ಪ್ರಧಾನಿಗೆ ತಿಳಿಸಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಕನ್ನಡ ವರದಿ ಮಾಡಿದೆ.

ಸುದ್ದಿಯ ಆರ್ಕೈವ್ ಲಿಂಕ್‌ ಅನ್ನು ಇಲ್ಲಿ ನೋಡಬಹುದು.

ಪ್ರಧಾನಿ ಮೋದಿಯವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ವ್ಲಾಡಿಮಿರ್ ಪುಟಿನ್ ಭಾರತೀಯ ವಿದ್ಯಾರ್ಥಿಗಳನ್ನು ಯುದ್ಧ ವಲಯದಿಂದ ಸುರಕ್ಷಿತವಾಗಿ ಕಳುಹಿಸಲು ಮತ್ತು ಅವರನ್ನು ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ಸೂಚನೆಗಳನ್ನು ನೀಡಲಾಗಿದೆ ಎಂದು ಭರವಸೆ ನೀಡಿದ್ದರು. ರಷ್ಯಾದ ಸೈನ್ಯವು ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ. ಭಾರತೀಯ ವಿದ್ಯಾರ್ಥಿಗಳ ತಕ್ಷಣದ ರಕ್ಷಣೆಗಾಗಿ ರಷ್ಯಾದ ಸೇನೆಯು ಖಾರ್ಕಿವ್‌ನಿಂದ ರಷ್ಯಾಕ್ಕೆ ಸುರಕ್ಷಿತ ಕಾರಿಡಾರ್ ನಿರ್ಮಿಸುವ ಕುರಿತು ಅವರು ಮಾತನಾಡಿದ್ದಾರೆ. ಮರುದಿನವೇ, ರಷ್ಯಾ ಯುದ್ಧವನ್ನು 6 ಗಂಟೆಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿತು.  ಎನ್ನುವ ರೀತಿಯಲ್ಲಿ ಸುವರ್ಣ ನ್ಯೂಸ್ 24/7 ವರದಿಯಲ್ಲಿ ಹೇಳಿದೆ. ಹಾಗೆಯೇ  ನ್ಯೂಸ್‌ಫಸ್ಟ್‌ ಕನ್ನಡ ಕೂಡ ಇದೇ ರೀತಿ ವರದಿಯನ್ನು ಮಾಡಿದ್ದು ಭಾರತದ ಮನವಿಗೆ ರಷ್ಯಾ ಖಾರ್ಕಿವ್‌ನಲ್ಲಿ 6 ಗಂಟೆಗಳಕಾಲ ಯುದ್ದವನ್ನು ನಿಲ್ಲಿಸಿತು ಎಂದು ವರದಿ ಮಾಡಿದೆ.

ಪೋಸ್ಟ್‌ಕಾರ್ಡ್ ಕನ್ನಡ ಸೋಶಿಯಲ್‌ ಮೀಡಿಯಾ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದು  “ಚೀನಾ, ಯುಎಸ್ಎ, ಯುಕೆ ಮುಂತಾದ ರಾಷ್ಟ್ರಗಳು ಉಕ್ರೇನ್‌ಗೆ ಪ್ರವೇಶಿಸಲು ಹೆದರಿದಾಗ, ಭಾರತವು ತನ್ನ 60% ಕ್ಕಿಂತ ಹೆಚ್ಚು ನಾಗರಿಕರನ್ನು ಉಕ್ರೇನ್‌ನಿಂದ ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು. ಈಗ ಭಾರತದ ಪ್ರಧಾನಿ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಎಲ್ಲಾ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳವನ್ನು ತಲುಪಿಸುವ ಕಾರಣ 6 ಗಂಟೆಗಳ ಕಾಲ ಯುದ್ಧವನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು” ಎಂದು ಬರೆದುಕೊಂಡಿದ್ದಾರೆ.

ಹಾಗಿದ್ದರೆ ಪ್ರಧಾನಿ ಮೋದಿಯವರ ಮನವಿಗೆ ರಷ್ಯಾ ಅಧ್ಯಕ್ಷರು ಸ್ಪಂದಿಸಿ 6 ಗಂಟೆಗಳಕಾಲ ಯುದ್ದವನ್ನು ನಿಲ್ಲಿಸಿದ್ದು ನಿಜವೆ? ಈ ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್

ಫೆಬ್ರವರಿ 24 ರಂದು ಉಕ್ರೇನಿಯನ್ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಮೇಲೆ ದಾಳಿ ನಡೆಸಿದ ನಂತರ ಮತ್ತು ಪುಟಿನ್ ವಿಶೇಷ ಮಿಲಿಟರಿ ಕಾರ್ಯಾಚರಣೆಗೆ ಆದೇಶಿಸಿದರು. ನಂತರ ಭಾರತ ಮತ್ತು ರಷ್ಯಾದ ದೇಶದ ಉಭಯ ನಾಯಕರು ಎರಡನೆ ಬಾರಿ ಫೋನ್ ಸಂಭಾಷಣೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.  ಪೂರ್ವ ಉಕ್ರೇನ್‌ನ ಖಾರ್ಕಿವ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳನ್ನು ಸ್ಥಳಾಂತರಿಸಲು ಭಾರತದ ತುರ್ತು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ರಷ್ಯಾದ ಸಶಸ್ತ್ರ ಪಡೆಗಳು ಸಿದ್ಧವಾಗಿವೆ. ಮತ್ತು ಭಾರತದ ಮನವಿಯಂತೆ ರಷ್ಯಾದ ಪ್ರದೇಶದಿಂದ ತನ್ನದೇ ಆದ ಮಿಲಿಟರಿ ಸಾರಿಗೆ ವಿಮಾನಗಳು ಅಥವಾ ಭಾರತೀಯ ವಿಮಾನಗಳೊಂದಿಗೆ ಭಾರತೀಯರನ್ನು ಸ್ಥಳಾಂತರಿಸಲು ಅನುವು ಮಾಡಿಕೊಡಲಾಗುವುದು ಎಂದು ಟ್ವಿಟ್‌ನಲ್ಲಿ ತಿಳಿಸಲಾಗಿದೆ.

ಆದರೆ ಏಷಿಯಾನೆಟ್ ಸುವರ್ಣ ನ್ಯೂಸ್ ಮತ್ತು ಪೋಸ್ಟ್‌ಕಾರ್ಡ್ ಕನ್ನಡ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗಡೆ ಹೇಳಿದಂತೆ ಭಾರತದ ಮನವಿಗೆ 6ಗಂಟೆಗಳ ಕಾಲ ರಷ್ಯಾ ಯುದ್ದವನ್ನು ಸ್ಥಗಿತಗೊಳಿಸಿತ್ತು ಎಂದು ಎಲ್ಲಯೂ ಅಧಿಕೃತ ವರದಿಯಾಗಿಲ್ಲ. ಒಂದು ವೇಳೆ ಯುದ್ದ ನಿಲ್ಲಿಸಿದ್ದೆ ಆಗಿದ್ದರೆ ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಬೇಕಿತ್ತು ಆದರೆ ಎಲ್ಲಿಯೂ ಅದರ ವರದಿಯೂ ಲಭ್ಯವಾಗಿಲ್ಲ. ಮತ್ತು ಸರ್ಕಾರದ ಅಧಿಕೃತ ಮೂಲಗಳು ಈ ಹೇಳಿಕೆಯನ್ನು ದೃಡಪಡಿಸಿಲ್ಲ.

ಇನ್ನು ಮಹೇಶ್ ವಿಕ್ರಂ ಹೆಗಡೆ ಹೇಳಿರುವಂತೆ ಚೈನಾ, ಅಮೇರಿಕಾ ಮತ್ತು ಬ್ರಿಟನ್‌ನಂತಹ ರಾಷ್ಟಗಳು ತನ್ನ ಜನರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲು ಅಲ್ಲಿಗೆ ಕಾಲಿಡಲು ಹೆದರುತ್ತಿದೆ ಎಂದು ಸುಳ್ಳು ಹೇಳಿದ್ದಾರೆ. ಅಮೇರಿಕಾ ಚೀನಾ ಮತ್ತು ಇನ್ನಿತರೆ ರಾಷ್ಟ್ರಗಳು ಈಗಾಗಲೇ ತನ್ನ ಪ್ರಜೆಗಳಿಗೆ ಉಕ್ರೇನ್ ತೊರೆಯುವಂತೆ ನಿರ್ದೇಶನ ನೀಡಿ ತನ್ನ ದೇಶಕ್ಕೆ ವಾಪಸ್ ಕರೆಸಿಕೊಂಡಿವೆ. ಆದರೆ ಭಾರತ ಮಾತ್ರ ಕೊನೆ ಕ್ಷಣದವರೆಗೂ ಭಾರತೀ ಪ್ರಜೆಗಳನ್ನು ಕರೆಸಿಕೊಳ್ಳಲು ಯಾವುದೇ ಕ್ರಮ ಕೈಗೊಳ್ಳದೆ, ಮಾನ್ಯ ಪ್ರಧಾನಮಂತ್ರಿಗಳು ಐದು ರಾಜ್ಯ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದರು ಎಂಬ ದೂರುಗಳು ಕೇಳಿಬರುತ್ತಿವೆ.

ಈಗ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಆಪರೇಷನ್ ಗಂಗಾ ಹೆಸರಿನಲ್ಲಿ ಪ್ರಹಸನ ಮಾಡಲು ಹೊರಟಿದೆ. ಆದರೆ ಉಕ್ರೇನ್‌ನ ಖಾರ್ಕೈವ್‌ನಲ್ಲಿ  ಸಿಲುಕಿರುವ ಭಾರತದ ಪ್ರಜೆಗಳನ್ನು ನಮ್ಮ ದೇಶಕ್ಕೆ ಸ್ಥಳಾಂತರಿಸಲು ಭಾರತ ವಿಫಲವಾಗಿದೆ ಎನ್ನು ಕೂಗು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಂದ ಕೇಳಿಬರುತ್ತಿದೆ.

 

 

ನಮ್ಮ ದೇಶದ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಪ್ರಜೆಗಳನ್ನು ಸ್ಥಳಾಂತರಿಸಲು ಯಾವ ಗಂಭೀರ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಅಲ್ಲಿ ವಿದ್ಯಾರ್ಥಿ ಸಂಗಮೇಶ್ ಮಾತನಾಡಿರುವುದನ್ನು ಇಲ್ಲಿ ನೋಡಬಹುದು. ಪೂರ್ವ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಅನ್ನ, ನೀರು ಆಹಾರ ಪದಾರ್ಥಗಳು ಸಿಗದೆ ಪರದಾಡುತ್ತಿದ್ದಾರೆ ಮತ್ತು ನಿರಂತರವಾಗಿ ಬಾಂಬ್ ದಾಳಿ ನಡೆಯುತ್ತಿದೆ ಆದರೆ ಭಾರತ ಸರ್ಕಾರ ಮಾತ್ರ ಇದರ ಬಗ್ಗೆ ಸರಿಯಾದ ಕ್ರಮಕೈಗೊಳ್ಳದೆ ಕಾಲಹರಣ ಮಾಡುತ್ತಿದೆ, ದಯವಿಟ್ಟು ಅಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಿ ಎಂದು ಮನವಿ ಮಾಡುತ್ತಾರೆ.

ಉಕ್ರೇನಿಂದ ಬಂದಂತಹ ಮತ್ತೋರ್ವ ವಿದ್ಯಾರ್ಥಿ ಅನೀಶ್‌ಅವರು ಹೇಳುವಂತೆ ಭಾರತ ಸರ್ಕಾರದ ಸಚಿವರು ನಾವು  ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ ಆದರೆ ಅವರು ಹೇಳುವಂತೆ ಏನು ಮಾಡಿಲ್ಲ ಎಂದು ಆಪಾದಿಸುತ್ತಾರೆ.

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೆ ಒಳಗಾಗಿದ್ದು ತಮ್ಮ ಮಕ್ಕಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.  ಸುವರ್ಣ ನ್ಯೂಸ್ ಮತ್ತು ಮಹೇಶ ವಿಕ್ರಂ ಹೆಗಡೆ ಹೇಳುವಂತೆ ಭಾರತದ ಒತ್ತಾಯಕ್ಕೆ ಮಣಿದು ರಷ್ಯಾ 6 ಗಂಟೆಗಳ ಕಾಲ ಯುದ್ದವನ್ನು ಸ್ಥಗಿತ ಮಾಡಿತ್ತು ಎಂಬುದೆಲ್ಲ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.


ಇದನ್ನು ಓದಿರಿ:Fact check: ಭಾರತೀಯ ಪ್ರಜೆಗಳೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂವಾದ ನಡೆಸಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights