ಬಿಎಸ್‌ವೈ ವಿರುದ್ಧ ಟೀಕೆ: 15 ದಿನಗಳಲ್ಲಿ ಉತ್ತರಿಸುವಂತೆ ಯತ್ನಾಳ್‌ಗೆ BJP ಹೈಕಮಾಂಡ್‌ ನೋಟಿಸ್‌!

ಸಿಎಂ ಬಿಎಸ್‌ ಯಡಿಯೂರಪ್ಪ ಮತ್ತು ಸರ್ಕಾರ ವಿರುದ್ದ ವಾಗ್ದಾಳಿ ನಡೆಸುತ್ತಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರಿಸುವಂತೆ ಆದೇಶಿಸಿದೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಯತ್ನಾಳ್‌, ತಮ್ಮ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಮುಂದಿನ ಸಿಎಂ ಆಗಲಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದು ಬಿಜೆಪಿ ಸರ್ಕಾರಕ್ಕೆ ಮತ್ತು ಹೈಕಮಾಂಡ್‌ಗೆ ತೀವ್ರ ಮುಜುಗರ ಉಂಟಾಗಿತ್ತು.

ಅಲ್ಲದೆ, ಸಂಪುಟ ವಿಸ್ತರಣೆಯಾದ ನಂತರ ತೀವ್ರ ಅಸಮಾಧಾನಗೊಂಡಿದ್ದ ಯತ್ನಾಳ್ “ಸಿ ಡಿ” ಬಾಂಬ್ ಸಿಡಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೂ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಿಸ್ತು ಸಮಿತಿಗೆ ಪತ್ರ ಬರೆದಿದ್ದರು. ಹಾಗಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆದರೆ ಹೈಕಮಾಂಡ್‌ನ ಈ ಕ್ರಮವು ಕೇವಲ ತೋರಿಕೆಗೆ ಮಾತ್ರ ಎನಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂಬುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಈ ಹಿಂದೆ ಬಿಜೆಪಿ ಮುಖಂಡರೊಬ್ಬರು, “ಬಿಜೆಪಿಯೊಳಗೆ ಉನ್ನತ ನಾಯಕರ ಬೆಂಬಲವಿಲ್ಲದೆ ಒಬ್ಬ ಶಾಸಕರು ಹೀಗೆಲ್ಲಾ ಹೇಳಿಕೆ ನೀಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಹಾಗಾಗಿ ಬಿಜೆಪಿ ಹೈಕಮಾಂಡ್‌ನ ಈ ಕ್ರಮವು ಕಣ್ಣೊರೆಸುವ ತಂತ್ರ ಎಂದು ಹಲವರು ಬಣ್ಣಿಸಿದ್ದಾರೆ.

ಇದನ್ನೂ ಓದಿ: ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಲು ಬಿಎಸ್‌ವೈ ಯತ್ನ; ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಮೋದಿಗೆ BJP ಶಾಸಕರ ಪತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights