‘ನನ್ನ ತೇಜೋವಧೆ ಮಾಡುವ ಪ್ಲ್ಯಾನ್’ ದರ್ಶನ್ ಸ್ನೇಹಿತರ ವಿರುದ್ಧ ನಿರ್ಮಾಪಕ ಉಮಾಪತಿ ಆಕ್ರೋಶ!

ನಟ ದರ್ಶನ್ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ನಿರ್ಮಾಪಕ ಹೆಸರು ತಳುಕುಹಾಕಿಕೊಂಡಿದೆ. ಈ ಬಗ್ಗೆ ಮಾತನಾಡಿದ ಉಮಾಪತಿ ನನ್ನ ತೇಜೋವಧೆ ಮಾಡುವ ಪ್ಲ್ಯಾನ್ ಮಾಡಲಾಗಿದೆ ಎಂದು ದರ್ಶನ್ ಸ್ನೇಹಿತರ ವಿರುದ್ಧ  ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಉಮಾಪತಿ, ‘ಪ್ರಕರಣದ ಆರೋಪಿ ಅರುಣಾಕುಮಾರಿ ಉಮಾಪತಿ ಸಂಪರ್ಕದಲ್ಲಿದ್ದರು. ಪ್ರಾಪರ್ಟಿ ವಿಚಾರವಾಗಿ ಏಪ್ರಿಲ್ ನಿಂದಲೂ ನನಗೆ ಈಕೆ ಪರಿಚಯ. ಈಕೆ ಪರಿಚಯವಿದ್ದಾಕ್ಷಣ ನಾನು ಈ ಪ್ರಕರಣದಲ್ಲಿದ್ದೇನೆಂದು ಅಲ್ಲ. ಈ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಪ್ರಕರಣದ ವಿಚಾರಣೆ ಮಾಡಲಿ. ಸತ್ಯಾಸತ್ಯತೆ ತಿಳಿಯುತ್ತದೆ’ ಎಂದಿದ್ದಾರೆ.

‘ಯಾರೂ ಕೂಡ ಯಾರ ತಲೆ ತೆಗೆಯಲು ಸಾಧ್ಯವಿಲ್ಲ. ನಾನು ನನ್ನ ಮೇಲೆ ಇರುವ ಆರೋಪವನ್ನು ಸಾಭೀತುಪಡಿಸಲು ಹೊರಟಿದ್ದೇನೆ. ದೂರು ದಾಖಲಾಗಿದೆ. ವಿಚಾರಣೆ ಬಳಿಕ ಯಾರು ತಪ್ಪಿಕಸ್ಥರು ಯಾರು ಗೊತ್ತಾಗುತ್ತದೆ” ಎಂದಿದ್ದಾರೆ.

ಪ್ರಕರಣ ಏನು..?

ನಟ ದರ್ಶನ್ ಆಸ್ತಿ ಪತ್ರ ಮತ್ತು ಸಹಿಯನ್ನು ನಕಲು ಮಾಡಿ, ಅದರ ಆಧಾರದ ಮೇಲೆ ಬ್ಯಾಂಕಿನಲ್ಲಿ ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಸೃಷ್ಟಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ವಿಚಾರ ತಿಳಿದು ನಟ ದರ್ಶನ್ ಅವರು ಭಾನುವಾರ ತಮ್ಮ ಸ್ನೇಹಿತರಾದ ದೂರುದಾರ ಹರ್ಷ ಮಲೆಂಟಾ, ನಿರ್ಮಾಪಕ ಉಮಾಪತಿ ಹಾಗೂ ಇತರರೊಂದಿಗೆ ಮೈಸೂರಿನ ಎನ್.ಆರ್.ಉಪ ವಿಭಾಗದ ಎಸಿಪಿ ಕಚೇರಿಗೆ ಖುದ್ದು ಹಾಜರಾಗಿದ್ದರು.

ಜೂನ್.16ರಂದು ನಿರ್ಮಾಪಕ ಉಮಾಪತಿ ಅವರು ಹರ್ಷ ಮಲೆಂಟಾಗೆ ಕರೆ ಮಾಡಿ, ಕೆನರಾ ಬ್ಯಾಂಕಿನ ಮಾನ್ಯೇಜರ್ ಅರುಣಕುಮಾರಿ ನನಗೆ ಸಿಕ್ಕಿದ್ದು, ನೀನು ರೂ.25 ಕೋಟಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀಯಾ? ಅದರ ಭದ್ರತೆಗಾಗಿ ನಿನ್ನ ಆಸ್ತಿ ಮತ್ತು ದರ್ಶನ್ ಆಸ್ತಿ ಪತ್ರಗಳನ್ನು  ನಕಲು ಮಾಡಿ ಸಲ್ಲಿಸಿದ್ದೀಯಾ ಎಂದು ಕೇಳಿದ್ದಾರೆ.

ಗಾಬರಿಯಾದ ಹರ್ಷ ಬ್ಯಾಂಕಿನ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ್ದು, ಅದೇ ದಿನ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರೊಂದಿಗೆ ಮೈಸೂರಿಗೆ ಬಂದು, ಕೆಲವು ಆಸ್ತಿಪತ್ರಗಳ ಜೆರಾಕ್ಸ್ ಪ್ರತಿಯನ್ನು ಹರ್ಷ ಮಲೆಂಟಾ ಅವರಿಗೆ ತೋರಿಸಿದ್ದಾರೆ.

ನೀವು ಗಣ್ಯವ್ಯಕ್ತಿಯೊಬ್ಬರ ಆಸ್ತಿಪತ್ರ ಫೋರ್ಜರಿ ಮಾಡಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳುವುದಾಗಿ ಬೆದರಿಸಿ ರೂ.25 ಲಕ್ಷಕ್ಕಾಗಿ ಬೇಡಿಕೆ ಇರಿಸಿ ಹೊರಟಿದ್ದಾರೆ.

ಜೂನ್.17ರಂದು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಬಂದಿದ್ದ ಮಹಿಳೆ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹರ್ಷ ಮಾಲೆಂಟಾ ಜು.3ರಂದು ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರ ವಿರುದ್ಧ ದೂರು ನೀಡಿದ್ದರು.

‘ಹೆಬ್ಬಾಳದ ರಿಂಗ್ ರೋಡ್ ಬಳಿ ಬರುವಂತೆ ತಿಳಿಸಿದ್ದರು. ಈ ವೇಳೆ ಅಲ್ಲಿಗೆ ಹೋಗಾದ ಸಾಲಕ್ಕೆ ಸಲ್ಲಿಸಿದ್ದ ಅರ್ಜಿ ಪತ್ರವನ್ನು ಹಾಗೂ ಇತರೆ ಆಸ್ತಿ ಪತ್ರಗಳ ಜೆರಾಕ್ಸ್ ಪ್ರತಿಯನ್ನು ನೀಡಿದರು. ಈ ವೇಳೆ ನಾನು ಆಸ್ತಿ ಪತ್ರಗಳ ಫೋರ್ಜರಿ ಮಾಡಿರುವುದಾಗಿ ಆರೋಪ ಮಾಡಿದರು. ಬಳಿಕ ಮಾಧ್ಯಮಗಳು ಹಾಗೂ ಪೊಲೀಸರಿಗೆ ದೂರು ನೀಡಬಾರದು ಎಂದಾದರೆ ರೂ.25 ಲಕ್ಷ ನೀಡಬೇಕೆಂದು ಬೆದರಿಕೆ ಹಾಕಿದ್ದರು’ ಎಂದು ಹರ್ಷ ಅವರು ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ದರ್ಶನ್ ಅವರು ನನ್ನ ಆಸ್ತಿ ಪತ್ರಗಳು ಫೋರ್ಜರಿ ಆಗಿರುವ ವಿಚಾರ 1 ತಿಂಗಳ ಹಿಂದೆ ತಿಳಿದಿತ್ತು. ಬಂಧಿತ ಆರೋಪಿ ಬಾಯಿ ಬಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಪೊಲೀಸರು ಠಾಣೆ ಕರೆದಿದ್ದಕ್ಕೆ ಹೋಗಿದ್ದೆ. ಸ್ನೇಹಿತರಿಂದಲೇ ಮೋಸವಾಗಿದೆ ಎಂದು ತಿಳಿದಿದ್ದೇ ಆದರೆ, ಯಾರನ್ನೂ ಬಿಡುವುದಿಲ್ಲ. ನನ್ನ ಹೆಸರು ಬಳಕೆಯಾಗಿದೆ. ಅದ್ದರಿಂದಲೇ ಪೊಲೀಸ್ ಠಾಣೆಗೆ ಹೋಗಿದ್ದೆ. ಇದಕ್ಕೆ ರೆಕ್ಕೆಪುಕ್ಕ ಬೆಳೆಸೋದು ಬೇಡ. ಯಾರೂ ಎಂದು ತಿಳಿಯಲಿ ರೆಕ್ಕೆಪುಕ್ಕವಲ್ಲ, ತಲೆಯನ್ನೇ ಕಡಿಯೋನು ಎಂದು ನಿಮಗೆಲ್ಲರಿಗೂ ಗೊತ್ತು ಎಂದು ಗುಡಿಗಿದ್ದಾರೆ.

ಡಿಸಿಪಿ ಪ್ರದೀಪ್ ಅವರು ಮಾತನಾಡಿ, ಪ್ರಕರಣ ಸಂಬಂಧ ಈ ವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಪೊಲೀಸರು ಅರುಣಕುಮಾರಿ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಪ್ರಕರಣದ ಆರೋಪಿ ಅರುಣಕುಮಾರಿ ನಿರ್ಮಾಪಕ ಉಮಾಪತಿಯವರೊಂದಿಗೆ ಸಂಪರ್ಕದಲ್ಲಿದ್ದು ನಿರ್ಮಾಪಕ ಉಮಾಪತಿಯ ಅವರ ಮೇಲೆ ದರ್ಶನ ಸ್ನೇಹಿತರು ಅನುಮಾನ ಪಡುತ್ತಿದ್ದಾರೆ. ಅರುಣಾಗೆ ಉಮಾಪತಿ ಆಫರ್ ನೀಡಿದ್ದರಾ ಅನ್ನೋ ಅನುಮಾನ ಮೂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights