ರಾಜೀನಾಮೆಗೆ ರೆಡಿಯಾದ ಈಶ್ವರಪ್ಪ!? ಯಡಿಯೂರಪ್ಪ ಪದಚ್ಯುತಿಗೆ RSS ಮೂಲದ BJPಗರ ಸಿದ್ದತೆ!?

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸ್ವಜನ ಪಕ್ಷಪಾತ, ಇಲಾಖೆಯ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ಸಚಿವ ಈಶ್ವರಪ್ಪ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಪದಚ್ಯುತಿಗೊಳಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರ ರಚನೆಯಾದಾಗಿನಿಂದಲೂ ಬಿಎಸ್‌ವೈ ವಿರುದ್ಧ ಆರ್‌ಎಸ್‌ಎಸ್‌ ಮೂಲಕ ಸಚಿವ-ಶಾಸಕರು ಗುಟುರು ಹಾಕುತ್ತಿದ್ದು, ಇದೀಗ ಅದು ಬಹಿರಂಗಗೊಳ್ಳುತ್ತಿದೆ. ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ಈಶ್ವರಪ್ಪ ರಾಜೀನಾಮೆಯ ಅಸ್ತ್ರ ಬಳಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದೇ ಅಸ್ತ್ರವನ್ನು ಇನ್ನೂ ಇಬ್ಬರು ಸಚಿವರು ಅನುಸಲಿದ್ದಾರೆ ಎಂದು ಹೇಳಲಾಗಿದೆ.

ಸಿಎಂ ವಿರುದ್ಧ ಬಹಿರಂಗವಾಗಿ ದೂರು ನೀಡಿದ ಈಶ್ವರಪ್ಪ ತಮ್ಮ ಸಚಿವ ಸ್ತಾನಕ್ಕೆ ರಾಜೀನಾಮೆ ನೀಡಬಹುದು ಎಂಬ ವದಂತಿಗಳು ಬುಧವಾರದಿಂದಲೇ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಅಂತಹ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಬಾರದು, ಮುಂದೆ ಎದುರಾಗಿರುವ ಉಪ-ಚುನಾವಣೆಗಳ ಮೇಲೆ ಗಮನ ಹರಿಸಿ ಎಂದು ಸೂಚಿಸಿರುವುದಾಗಿ ತಿಳಿದು ಬಂದಿದೆ.

ಸಿಎಂ ಬಿಎಸ್‌ವೈ ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಕುಂಟು ನೆಪವನ್ನಿಟ್ಟುಕೊಂಡು ಈಶ್ವರಪ್ಪ ರಾಜೀನಾಮೆಗೆ ಮುಂದಾಗಿದ್ದರೂ ಸಹ, ಇದರ ಹಿಂದಿನ ಅಸಲಿಯತ್ತು ಬೇರೆಯೇ ಇದೆ. ಶಿವಮೊಗ್ಗದಲ್ಲಿ ಈ ಇಬ್ಬರೂ ಪ್ರಭಾವಿಗಳೇ ಆಗಿದ್ದರೂ, ರಾಜ್ಯದಲ್ಲಿ ಬಿಎಸ್‌ವೈ ವರ್ಚಸ್ಸು ಹೆಚ್ಚಾಗಿದೆ. ಅಲ್ಲದೆ, ಆರ್‌ಎಸ್‌ಎಸ್‌ ಮೂಲದವರನ್ನು ಸಿಎಂ ಮಾಡುವ ಇರಾದೆಯನ್ನೂ ಸಂಘಪರಿವಾರ ಮೂಲದ ಶಾಸಕ-ಸಚಿವರ ಬಣ ಹೊಂದಿದೆ.

ಹೀಗಾಗಿ, ರಾಜೀನಾಮೆಯ ನೆಪದಲ್ಲಿ ಸರ್ಕಾರವನ್ನು ಅಸ್ತಿರಗೊಳಿಸಿ, ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು. ಉಪಚುನಾವಣೆಯಲ್ಲಿ ಬಿಜೆಪಿಗೆ ಸೋತರೆ ಯಡಿಯೂರಪ್ಪನವರ ಖುರ್ಚಿ ಅಲಗಾಡುವುದು ಗ್ಯಾರಂಟಿ ಎನ್ನಲಾಗಿದೆ.

ಇದನ್ನೂ ಓದಿ: ಎತ್ತಿಗೆ ಜ್ವರ ಎಮ್ಮೆಗೆ ಬರೆ: ಸಚಿವರ ತಪ್ಪಿಗೆ ವೈದ್ಯಾಧಿಕಾರಿ ಅಮಾನತು!

ಇದಕ್ಕೆ ಪುಷ್ಟಿ ನೀಡುವಂತೆ, ಸಚಿವ ಸಂಪುಟ ವಿಸ್ತರಣೆಯಾದಾಗಿನಿಂದಲೂ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್‌, ಮೇ ತಿಂಗಳಿನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹೇಳಿದ್ದರು. ಇದೀಗ ಈಶ್ವರಪ್ಪ ಸಿಎಂ ವಿರುದ್ಧ ದೂರು ನೀಡಿರುವುದು, ಸಿಎಂ ಬದಲಾವಣೆಯ ಸಾಧ್ಯತೆಯನ್ನು ಹೆಚ್ಚಿಸಿದೆ.

ಅಲ್ಲದೆ, ಸಿಎಂ ವಿರುದ್ಧವೇ ನಿರಂತರವಾಗಿ ಯತ್ನಾಳ್‌ ಆರೋಪ-ವಾಗ್ದಾಳಿ ನಡೆಸುತ್ತಿದ್ದರೂ ಸಹ ಬಿಜೆಪಿ ಹೈಕಮಾಂಡ್‌ ಯತ್ನಾಳ್‌ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಯತ್ನಾಳ್‌ ಅವರನ್ನು ಸಂಘಪರಿವಾರದ ಹಿನ್ನೆಲೆಯ ಸಚಿವ-ಶಾಸಕರೇ ಮುಂದೆ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈಗ ಆರ್‌ಎಸ್‌ಎಸ್‌ನಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ಈಶ್ವರಪ್ಪ ಅವರೇ ನೇರವಾಗಿ ಬಿಎಸ್‌ವೈ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ. ಪರಿವಾರಕ್ಕೆ ನಿಷ್ಠರಾಗಿರುವ ಈಶ್ವರಪ್ಪ ಜೊತೆಗೆ ಆರ್‌ಎಸ್‌ಎಸ್‌ ಹಿನ್ನೆಲೆಯವರು ನಿಲ್ಲುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಅಲ್ಲದೆ, ಬಿಎಲ್‌ ಸಂತೋಷ್‌ ಕೂಡ ಬಿಎಸ್‌ವೈ ವಿರುದ್ದ ಆಗಾಗ ಗುಡುಗುವುದು ಸಾಮಾನ್ಯವಾಗಿ ಕಂಡು ಬಂದಿದೆ. ಇದೆಲ್ಲವೂ ಬಿಎಸ್‌ವೈ ಕುರ್ಚಿಯನ್ನು ಅಲುಗಾಡಿಸುವುದು ನಿಶ್ಚತವೆಂದು ಹೇಳಲಾಗಿದೆ.

ಇಕ್ಕಟ್ಟಿನಲ್ಲಿ ಯಡಿಯೂರಪ್ಪ:

ಸಿಎಂ ಬಿಎಸ್‌ವೈಗೆ ಇದೀಗ ನಾಲ್ಕು ಬಿಕ್ಕಟ್ಟುಗಳು ಎದುರಾಗಿವೆ. ಒಂದು, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧದ ಅತ್ಯಾಚಾರ- ಸಿಡಿ ಪ್ರಕರಣ, ಎರಡು, ಮೂರು ಕ್ಷೇತ್ರಗಳ ಉಪಚುನಾವಣೆಗಳನ್ನು ಗೆಲ್ಲಬೇಕು. ಮತ್ತು ಮೂರನೆಯದು, ತಮ್ಮ ವಿರುದ್ದವೇ ಸಚಿವರ ಆರೋಪ. ಇದೆಲ್ಲದರ ನಡುವೆ, ನ್ಯಾಯಾಲಯವು ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದೆ.

ಈ ಎಲ್ಲಾ ಬಿಕ್ಕಟ್ಟುಗಳನ್ನು ನಿಭಾಯಿಸುವ ಇಕ್ಕಟ್ಟಿನಲ್ಲಿ ಬಿಎಸ್‌ವೈ ಸಿಲುಕಿಕೊಂಡಿದ್ದಾರೆ. ಇದೆಲ್ಲವೂ ಯಡಿಯೂರಪ್ಪರನ್ನು ಕುಗ್ಗಿಸುವ ಸಾಧ್ಯತೆಯ ಜೊತೆಗೆ, ಅವರ ಖುರ್ಚಿಯನ್ನೂ ಅಲುಗಾಡಿಸಲಿದೆ ಎಂದು ಹೇಳಲಾಗಿದೆ.

ಹೀಗಾಗಿ ಪಂಚ ರಾಜ್ಯಗಳ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಫಲಿತಾಂಶ ಬರುವುದಕ್ಕೆ ಮುನ್ನವೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಲು ಹೈಕಮಾಂಡ್, ಸಂಘಪರಿವಾರ, ಬಿಎಸ್‍ವೈ ವಿರೋಧಿ ಬಣ ವ್ಯವಸ್ಥಿತ ಜಾಲ ಹೆಣೆದಿದೆ ಎಂದು ಹೇಳಲಾಗುತ್ತಿದೆ.

17 ಶಾಸಕರನ್ನು ಬಿಜೆಪಿಗೆ ಕರೆತಂದು ಸರ್ಕಾರ ರಚನೆ ಮಾಡಿದ ಯಡಿಯೂರಪ್ಪನವರಿಗೆ ಆರಂಭದಿಂದಲೂ ಅಡಚಣೆಯಾಗುತ್ತಲೇ ಬಂದಿದೆ. ಇತ್ತೀಚೆಗೆ ಸಾಕಷ್ಟು ಮುಜುಗರದ ಘಟನೆಗಳು ನಡೆದಿವೆ. ಮುಂದಿನ ವಿಧಾನಸಭೆ ಚುನಾವಣೆಗೆ ಹೋಗಬೇಕಾದರೆ ನಾಯಕತ್ವ ಬದಲಾವಣೆ ಮಾಡಬೇಕೆಂಬುದು ಬಿಎಸ್‍ವೈ ವಿರೋಧಿ ಬಣ ಹಾಗೂ ಸಂಘ ಪರಿವಾರದ ಹಲವರ ಅಭಿಪ್ರಾಯವಾಗಿದೆ. ಏಕಾಏಕಿ ನಾಯಕತ್ವ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅದಕ್ಕಾಗಿ ತಕ್ಕ ವೇದಿಕೆಯನ್ನು ಸಿದ್ದ ಮಾಡಲಾಗುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ

ಇದನ್ನೂ ಓದಿ: ಭಿನ್ನಾಭಿಪ್ರಾಯವಿದ್ದರೆ ಸಿಎಂ ಜೊತೆ ಚರ್ಚಿಸಿ; ಈಶ್ವರಪ್ಪ ವಿರುದ್ಧ ಬೊಮ್ಮಾಯಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights