ಕವನ: ಅವ್ವನ ಬಳಗ – ದಶಕದ ನಂತರ ಸಂಭ್ರಮ

ಮನೆಯಲಿ ಮದುವೆ
ದಶಕದ ನಂತರ ಸಂಭ್ರಮ

ಅವ್ವ ಕರೆದಳು ತನ್ನ
ಬಳಗವನೆಲ್ಲ..
ಅವಳವ್ವ-ಅಪ್ಪನ ಬಳಗ
ಅವರ ಮಕ್ಕಳು ಮಡದಿಯರ
ಬಳಗ
ತನ್ನ ಅಕ್ಕ ತಂಗಿಯರ ಬಳಗ
ಮಕ್ಕಳ ಮಡದಿ ಮನೆಯವರ
ಬಳಗ..
ದಾಟಿತು ಮುನ್ನೂರರ ಗಡಿ…

ಮದುವೆಗೆ ಮಿತಿ ಹೇರಿತು
ಸರ್ಕಾರ ಐವತ್ತರ ಗಡಿ…..
ಅವರಿಗೇನು ಆಚಿಲ್ಲ…ದರ್ದಿಲ್ಲ..
ಕೊಟ್ಟ ಬೆಲೆಗೆ ಖರೀದಿಯಾಗಿ
ಸಂಬಂಧದ ಕಳಚಿಕೊಂಡವರು…
ಅಧಿಕಾರದಾಸೆಗೆ ಬಳಗ ಬಿಟ್ಟು
ಬಂದವರು…

ಕರೆದ ಬಳಗವ ಬರಬೇಡಿ
ಎನ್ನಲು ಅವ್ವಳದೇನು
ಅಧಿಕಾರದಾಹದ ರಾಜಕೀಯ
ಪಕ್ಷವೇ….
ಬಹುಮತಕ್ಕಾಗಿ ಬಿಕರಿಯಾಗುವರ
ಪಟ್ಟಿ ಮಾಡಲು…

ಅವ್ವಳದು ರೋಗ ಮೀರಿದ
ಸಂಬಂಧ…
ಆಳುವವರದು ಸಂಬಂಧ
ವಿಲ್ಲದ ರೋಗ…
ಮತಬೇಡುವಾಗ ಲಕ್ಷ
ಮೀರಿದರೂ ಬಾರದ ಬೇನೆ
ಮದುವೆ ಮನೆಗೆ ಐವತ್ತಕ್ಕೆ
ಆವರಿಸುವುದೇಕೆ ?

ರೋಗಕೆ ಕಾರಣ ಹುಡುಕುತ್ತಿಲ್ಲ
ರೋಗಿಯ ಜೀವ ಉಳಿಸುತ್ತಿಲ್ಲ.
ಹಾಸಿಗೆ, ಮದ್ದು ಕೊಡಿಸಲಾಗುತ್ತಿಲ್ಲ…
ಮದುವೆ, ಜಾತೆಯ ತಡೆದು..
ಬಡವರ ಹೊಟ್ಟೆಯ ಮೇಲೆ ಹೊಡೆದು
ಕಾಣದ ರೋಗ ತಡೆಯುವ ಮಂತ್ರ
ಜಪಿಸುವ ನಾಯಕರು….

ಸಂಸ್ಖತಿಯ ಭಾಷಣ ಬಿಗಿವರು
ಪುರಾಣ, ಪುಣ್ಯ ಕಥೆ ಹೇಳುವರು
ಸಂಬಂಧಗಳ ಬೆಲೆ ಗೊತ್ತಿಲ್ಲದವರು
ನಮ್ಮನಾಳುವವರು….

ಅವ್ವ ತಾ ಕರೆದ ಬಳಗವ ಬಿಟ್ಟು
ಮನೆಯ ಮದುವೆಯ ಮಾಡಿ
ಸಂಬಂಧಗಳ ಕಡಿದುಕೊಂಡು
ಅಧಿಕಾರದ ವ್ಯಾಪಾರ ಮುಗಿಸಿ
ಮತ್ತೆ ಬಿಕರಿಯಾಗಲು
ಸಂಬಂಧಗಳೇನು ವ್ಯಾಪಾರದ
ಸರಕುಗಳೇ?

– ಶಂಕರ ಪಾಗೋಜಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights