ಉಪಚುನಾವಣೆ ಫಲಿತಾಂಶಕ್ಕೆ ಪಾಲಿಕೆ ಫಲಿತಾಂಶ ಬುನಾದಿ? 3 ಕ್ಷೇತ್ರಗಳಲ್ಲಿ ಗೆಲ್ಲುತ್ತಾ ಕಾಂಗ್ರೆಸ್‌?

ರಾಜ್ಯದ 10 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣಾ ಫಲಿತಾಂಶ ಶುಕ್ರವಾರ ಹೊರ ಬಿದ್ದಿದೆ. 10 ಸಂಸ್ಥೆಗಳ ಪೈಕ 07ರಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಈ ಗೆಲುವು ನಾಳೆ (ಮೇ 02) ಪ್ರಕಟವಾಗುವ ಉಪಚುನಾವಣೆಯ ಫಲಿತಾಂಶಕ್ಕೂ ಕನ್ನಡಿ ಹಿಡಿಯಲಿದೆಯೇ? ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಬಹುದೇ? ಎಂದು ಕುತೂಹಲವನ್ನು ಸ್ಥಳೀಯ ಸಂಸ್ಥೆಗಳ ಫಲಿತಾಂಶ ಹುಟ್ಟು ಹಾಕಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಬಿಜೆಪಿಯಿಂದ  ಮಾಜಿ ರೈಲ್ವೇ ರಾಜ್ಯ ಸಚಿವ ದಿವಂಗತ ಸುಯರೇಶ್‌ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಮತ್ತು ಕಾಂಗ್ರೆಸ್‌ನಿಂದ ಶಾಸಕ ಸತೀಶ್‌ ಜಾರಕಿಹೊಳಿ ಕಣದಲ್ಲಿದ್ದಾರೆ. ಜಾರಕಿಹೊಳಿ ಕುಟುಂಬದ ಭದ್ರಕೋಟೆಯಂತಿರುವ ಬೆಳಗಾವಿಯ ಕೆಲವು ವಿಧಾನಸಭಾ ಕ್ಷೇತ್ರಗಳ ಜನ ಬೆಂಬಲದಿಂದ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

2008ರಲ್ಲಿ ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರ ಮಸ್ಕಿ. 2008ರಿಂದ ಮೂರು ಬಾರಿ ವಿಧಾನಸಭಾ ಚುನಾವಣೆಗಳು ನಡೆದಿದ್ದು, ಮೂರೂ ಚುನಾವಣೆಯಲ್ಲೂ ಈ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್‌ ಗೆಲುವು ಸಾಧಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಪ್ರತಾಪಗೌಡ, ಉಳಿದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು.

ಇದೀಗ, ಮತ್ತೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಈಗ ನಡೆಯುತ್ತಿರುವ ನಾಲ್ಕನೇ ಚುನಾವಣೆ (ಉಪಚುನಾವಣೆ)ಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ತಮ್ಮ ಗೆಲುವು ಸುಲಭ ಎಂದು ಅವರು ಭಾವಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಕಳೆದ ಚುನಾವಣೆ(2018)ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಸೋಲುಂಡಿದ್ದ ಬಸನಗೌಡ ತುರ್ವಿಹಾಳ ಅವರನ್ನು ಪಕ್ಷಕ್ಕೆ ಕರೆತಂದಿರುವ ಕಾಂಗ್ರೆಸ್‌ ತಮ್ಮ ಮಾಜಿ ಶಾಸಕನ ವಿರುದ್ದ ಕಣಕ್ಕಿಳಿಸಿತ್ತು. ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡಬೇಕಿದೆ.

ಉಳಿದಂತೆ, ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಕಾವು ತೀವ್ರಗೊಂಡಿದೆ. ಇಲ್ಲಿ ಮುಖ್ಯವಾಗಿ ನಾಲ್ಕು ಅಭ್ಯರ್ಥಿಗಳ ನಡುವೆ ಹೋರಾಟ ನಡೆಯಲಿದೆ. ಈ ಚತುಷ್ಕೋನ  ಹಣಾಹಣಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಹಾಗೂ ಬಿಜೆಪಿ ವಿರುದ್ದ ಬಂಡಾಯ ಎದ್ದಿರುವ ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಡುವೆ ಭಾರೀ ಪೈಪೋಟಿ ನಡೆದಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ನಿಂದ ದಿವಂಗತ ಬಿ. ನಾರಾಯಣ ರಾವ್ ಅವರ ಪತ್ನಿ ಮಾಲಾ ಅವರು ಕಣದಲ್ಲಿದ್ದರೆ, ಬಿಜೆಪಿಯಿಂದ ಶರಣು ಸಲಗಾರ್‌, ಜೆಡಿಎಸ್‌ನಿಂದ ಸೈಯದ್ ಯಸ್ರಬ್ ಅಲಿ ಖಾದ್ರಿ ಹಾಗೂ ಪಕ್ಷೇತರ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಸ್ಪರ್ಧಿಸಿದ್ದಾರೆ. ಇವರ ಪೈಕಿ ಜಾತಿ-ಧರ್ಮಗಳ ಸಮೀಕರಣವೇ ಮುಖ್ಯ ದಾಳವಾಗಿದ್ದು, ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲವನ್ನು ಕೆರಳಿಸಿದೆ. ಕಳೆದ ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಈ ಬಾರಿಯೂ ಬಿಜೆಪಿಯಲ್ಲಿನ ಬಂಡಾಯದಿಂದಾಗಿ ಅವಕಾಶ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಈ ಮೂರು ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಭಾನುವಾರ ಪ್ರಕಟವಾಗುವ ಫಲಿತಾಂಶದಲ್ಲಿ ತಿಳಿಯಲಿದೆ.

ಇದನ್ನೂ ಓದಿ: ಸಮೀಕ್ಷೆ: ತಮಿಳಲ್ಲಿ ಸ್ಟ್ಯಾಲಿನ್; ಕೇರಳದಲ್ಲಿ ವಿಜಯನ್‌ಗೆ ಅಧಿಕಾರ; ದಕ್ಷಿಣ ರಾಜ್ಯಗಳಲ್ಲಿ BJPಗೆ ಮುಖಭಂಗ!

ನಿನ್ನೆ (ಶುಕ್ರವಾರ) ಪ್ರಕಟವಾದ ಸ್ಥಳೀಯ ಸಂಸ್ತೆಗಳ ಫಲಿತಾಂಶದಲ್ಲಿ 10 ಸ್ಥಳೀಯ ಸಂಸ್ಥೆಗಳ ಪೈಕಿ 07ರಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 07 ಪಾಲಿಕೆ, ಪುರಸಭೆಗಳಲ್ಲಿ ಅಧಿಕಾರ ಹಿಡಿದಿದೆ. ಜೆಡಿಎಸ್‌ ಎರಡು ಪುರಸಭೆಗಳನ್ನು ಗೆದ್ದಿದ್ದರೆ, ಆಡಳಿತಾರೂಢ ಬಿಜೆಪಿ ಒಂದೇ ಒಂದು ಪಾಲಿಕೆಯಲ್ಲಿ ಮಾತ್ರ ಗೆದ್ದಿದ್ದು ಭಾರೀ ಮುಖಭಂಗ ಅನುಭವಿಸಿದೆ.

ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ- ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಬಿಜೆಪಿ ಕೇವಲ ಮಡಿಕೇರಿ ನಗರಸಭೆಯನ್ನು ಮಾತ್ರ ಗೆದ್ದಿದೆ. ಆದರೆ, ಸಿಎಂ ಯಡಿಯೂರಪ್ಪ ಅವರ ತವರು ಮತ್ತು ಸಚಿವ ಈಶ್ವರಪ್ಪ ಅವರು ಪ್ರಭಾವ ಹೊಂದಿರುವ ಶಿವಮೊಗ್ಗದ ಎರಡೂ ಸ್ಥಳೀಯ ಸಂಸ್ಥೆ (ಭದ್ರವತಿ ಮತ್ತು ತೀರ್ಥಹಳ್ಳಿ)ಯಲ್ಲಿಯೂ ಬಿಜೆಪಿ ಸೋಲುಂಡಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದಿದೆ.

ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ.

ಇದನ್ನೂ ಓದಿ: ಸಮೀಕ್ಷೆ: ತಮಿಳಲ್ಲಿ ಸ್ಟ್ಯಾಲಿನ್; ಕೇರಳದಲ್ಲಿ ವಿಜಯನ್‌ಗೆ ಅಧಿಕಾರ; ದಕ್ಷಿಣ ರಾಜ್ಯಗಳಲ್ಲಿ BJPಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights