ಕೊರೊನಾದಿಂದ ಅನಾಥರಾದ ಮಕ್ಕಳಿಗೆ ತಮ್ಮ ಪೋಷಕರಿಗೆ ಏನಾಯಿತು ಎಂಬುದರ ಅರಿವೇ ಇಲ್ಲ!

“ನಮ್ಮ ತಾಯಿ ಮತ್ತು ತಂದೆ ನಮ್ಮನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ಯಾವಾಗ ಬರುತ್ತಾರೆ? ಅವರು ಎಲ್ಲಿಗೆ ಹೋಗಿದ್ದಾರೆ? ಅವರಿಗೆ ಶೀಘ್ರದಲ್ಲೇ ಬರಲು ಹೇಳಿ, ನಾವು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ.” ಇವು ಐದು ವರ್ಷದ ಅವಳಿ ಸಹೋದರರ ಪ್ರಶ್ನೆಗಳು.

ಪಂಜಾಬ್‌ ಕಪುರ್ಥಾಲಾ ಗ್ರಾಮದಲ್ಲಿ ತಮ್ಮ ಹೆತ್ತವರನ್ನು ಕೋವಿಡ್‌ನಿಂದ ಕಳೆದುಕೊಂಡ ನಂತರ, ಅವಳಿ ಮಕ್ಕಳು ಅಮೃತಸರದ ಮಜಿತಾಯ ತಮ್ಮ ಮಾವನ ಮನೆಯಲ್ಲಿ ಆಸರೆ ಪಡೆದುಕೊಂಡಿದ್ದಾರೆ. ಕೊರೊನಾ ವೈರಸ್‌ಗೆ ತಮ್ಮ ತಂದೆ-ತಾಯಿ ಬಲಿಯಾದರು ಎಂಬುದರ ಅರಿವಿಲ್ಲದ ಆ ಮಕ್ಕಳು ಮೂರು ವಾರಗಳಿಂದ ತಮ್ಮ ಮಾವನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಪ್ರತಿದಿನ ತಮ್ಮ ಹೆತ್ತವರ ಬಗ್ಗೆ ಮಾವನನ್ನು ಪೀಡಿಸುತ್ತಿದ್ದಾರೆ.

ಸಣ್ಣ ಭೂ ಹಿಡುವಳಿಯನ್ನು ಹೊಂದಿದ್ದ 50 ವರ್ಷ ಹರೆಯದ ರೈತ ಮೇ ತಿಂಗಳಿನಲ್ಲಿ ಕೊರೊನಾಗೆ ಬಲಿಯಾದರು. ಆತನ ಮರಣದ 22 ದಿನಗಳ ಬಳಿಕ ಆತನ ಪತ್ನಿಗೆ ಸಾವನ್ನಪ್ಪಿದರು. ಹೀಗಾಗಿ ಐದು ವರ್ಷದ ಅವಳಿ ಮಕ್ಕಳು ಅನಾಥರಾಗಿದ್ದಾರೆ.

ಗಂಡನ ಭೋಗ್ (ತಿಥಿ) ಕಾರ್ಯದ ದಿನ ತನ್ನ ಸಹೋದರಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಕೆ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಆಕೆಗೆ ವೆಂಟಿಲೇಟರ್ ಅಗತ್ಯವಿತ್ತು. ಅದರೆ, ಸಮಯಕ್ಕೆ ಸರಿಯಾಗಿ ವೆಂಟಿಲೇಟರ್‌ ಸಿಗಲಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಅವಳಿ ಮಕ್ಕಳ ಮಾವ ತಿಳಿಸಿದ್ದಾರೆ.

“ನನ್ನನ್ನು ಹೊರತುಪಡಿಸಿ ಈ ಮಕ್ಕಳಿಗೆ ಬೇರೆ ಯಾವ ಹತ್ತಿರದ ಸಂಬಂಧಿಗಳು (ಅಜ್ಜಿ, ಚಿಕ್ಕಪ್ಪ ಅಥವಾ ಚಿಕ್ಕಮ್ಮ) ಇರಲಿಲ್ಲ. ನಾನು ಅವರ ಮಾಮಾ, ಹಾಗಾಗಿ ನಾನು ಅವರನ್ನು ಕರೆತಂದೆ. ಈಗ, ಅವರ ಜವಾಬ್ದಾರಿ ನನ್ನದು” ಎಂದು ಅವರು ಹೇಳಿದ್ದಾರೆ.

“ಅವರು ತಮ್ಮ ಹೆತ್ತವರ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಅವರು ತಮ್ಮ ತಂದೆಯನ್ನು ಡೆಡ್ಡಾ ಎಂದು ಕರೆಯುತ್ತಾರೆ. ಅವರ ಡೆಡ್ಡಾ ಮತ್ತು ಮಮ್ಮಾ (ತಾಯಿ) ಅವರನ್ನು ಎಷ್ಟು ಪ್ರೀತಿಸುತ್ತಿದ್ದರು. ಅವರು ತಾವು ಬಯಸಿದ ಎಲ್ಲಾ ಆಟಿಕೆಗಳನ್ನು ಕೊಡಿಸುತ್ತಿದ್ದರು ಎಂದು ಯಾವಾಗಲೂ ಹೇಳುತ್ತಾರೆ ”ಎಂದು ಅನಾಥ ಮಕ್ಕಳ ಮಾವ ಹೇಳಿದ್ದಾರೆ.

ಇದನ್ನೂ ಓದಿ:ಕೊರೊನಾ 3ನೇ ಅಲೆ; ಹೆಚ್ಚಲಿವೆ ಸಾವು-ನೋವುಗಳ ಸಂಖ್ಯೆ; ಮಕ್ಕಳ ಆರೈಕೆಗಾಗಿ ವಿಶೇಷ ವ್ಯವಸ್ಥೆಗೆ ತಜ್ಞರ ಸಲಹೆ!

“ಅವರು ಆಡುತ್ತಿದ್ದಾಗಲೂ ಇದ್ದಕ್ಕಿದ್ದಂತೆ ಮೌನವಾಗಿಬಿಡುತ್ತಾರೆ. ನಂತರ, ತಮ್ಮ ಹೆತ್ತವರ ಬಗ್ಗೆ ಕೇಳಲು ಆರಂಭಿಸುತ್ತಾರೆ. ಅವರು ರಾತ್ರಿಯ ಸಮಯದಲ್ಲಿ ತುಂಬಾ ಅಳುತ್ತಾರೆ. ತಮ್ಮ ಅಪ್ಪ-ಅಮ್ಮರೊಂದಿಗೆ ತಾವು ಮಲಗಬೇಕು ಎಂದು ಬಯಸುತ್ತಾರೆ. ತಮ್ಮ ಹೆತ್ತವರನ್ನು ಬರಹೇಳಲು ಪದೇ ಪದೇ ಒತ್ತಾಯಿಸುತ್ತಾರೆ” ಎಂದು ಆ ಮಾವ ಹೇಳಿದ್ದಾರೆ.

“ನಾವು ಇಂತಹ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿದ್ದೆವು. ಆದರೆ, ಈಗ ಇದೆಲ್ಲವೂ ನಮ್ಮ ಮನೆಗಳಲ್ಲಿಯೇ ನಡೆಯುತ್ತಿದೆ. ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ನಮಗೆ ತಿಳಿಯುತ್ತಿಲ್ಲ. ಆದರೆ, ನಾವು ಆ ಮಕ್ಕಳನ್ನು ನಮ್ಮ ಮಕ್ಕಳಂತೆ ಬೆಳೆಸುತ್ತೇವೆ” ಎಂದು ಆ ಮಕ್ಕಳ ಅತ್ತೆ ಹೇಳಿದ್ದಾರೆ.

ಇದೇ ರೀತಿಯಲ್ಲಿ ಜಲಂಧರ್‌ನ ಅಣ್ಣ-ತಂಗಿಯರು ತಮ್ಮ ಅಪ್ಪ-ಅಮ್ಮರನ್ನು ಕಳೆದುಕೊಂಡಿದ್ದಾರೆ. ಮೂರು ವರ್ಷದ ಹುಡುಗಿ ಮತ್ತು ಐದು ವರ್ಷದ ಹುಡುಗ ಇತ್ತೀಚೆಗೆ ಕೊರೊನಾದಿಂದ ತಮ್ಮ ಹೆತ್ತವರನ್ನು ಕಳೆದುಕೊಂಡರು. ಅಂದಿನಿಂದ ಇಬ್ಬರನ್ನೂ ಅವರ ಅಜ್ಜಿಯರು ನೋಡಿಕೊಳ್ಳುತ್ತಿದ್ದಾರೆ.

“ಅವರು ದಿನವಿಡೀ ತಮ್ಮ ಹೆತ್ತವರನ್ನು ಕೇಳುತ್ತಾರೆ. ನಾವು ತುಂಬಾ ಅಸಹಾಯಕರಾಗಿದ್ದೇವೆ” ಎಂದು ಸಂಬಂಧಿಯೊಬ್ಬರು ಹೇಳಿದರು.

ಈ ನಾಲ್ಕು ಮಕ್ಕಳು ಪಂಜಾಬ್‌ ರಾಜ್ಯದಲ್ಲಿ ಕೊರೊನಾದಿಂದ ಅನಾಥರಾದವರಲ್ಲಿ ಅತ್ಯಂತ ಕಿರಿಯವರಾಗಿದ್ದಾರೆ. ರಾಜ್ಯದ 22 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಇಬ್ಬರನ್ನೂ ಕಳೆದುಕೊಂಡ ನಂತರ 28 ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಜಿಲ್ಲೆಗಳು ಇನ್ನೂ ತಮ್ಮ ದಾಖಲೆಗಳನ್ನು ಕ್ರೂಢೀಕರಿಸುತ್ತಿವೆ.

ಈ 28 ಮಕ್ಕಳಲ್ಲಿ ಒಂಬತ್ತು ಮಕ್ಕಳು 3 ರಿಂದ 10 ವರ್ಷ ವಯಸ್ಸಿನವರಾಗಿದ್ದರೆ, 14 ಮಕ್ಕಳು 11 ರಿಂದ 15 ವರ್ಷದೊಳಗಿನವರು. ಉಳಿದ ಐದು ಮಕ್ಕಳು 16 ರಿಂದ 18 ವರ್ಷ ವಯಸ್ಸಿನವರು. ಪಟ್ಟಿಯಲ್ಲಿ 16 ಗಂಡು ಮತ್ತು 12 ಹೆಣ್ಣು ಮಕ್ಕಳಿದ್ದಾರೆ.

ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಇದನ್ನೂ ಓದಿ: ಕೊರೊನಾ 3ನೇ ಅಲೆ: ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಕೋವಿಡ್‌ಗೆ ಒಳಗಾಗುವ ಆತಂಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights