ಗೋಹತ್ಯೆ ನಿಷೇಧ: ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿಗೆ ತಂದ ಬಿಜೆಪಿ ಸರ್ಕಾರ

ರಾಜ್ಯದಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020” (ಗೋಹತ್ಯೆ ನಿಷೇಧ ಮಸೂದೆ)ಯನ್ನು ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. ಸುಗ್ರೀವಾಜ್ಞೆಯ ಅಂಕಿತಕ್ಕೆ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿತ್ತು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಪ್ರಸ್ತುತ ಮಸೂದೆ ಅಂಗೀಕಾರವಾಗಿದ್ದರೂ, ವಿಧಾನ ಪರಿಷತ್ತಿನಲ್ಲಿ ಅದಕ್ಕೆ ತಡೆಯಾಗಿತ್ತು. ಮಸೂದೆ ಜಾರಿಗೊಳಿಸುವ ನಿಟ್ಟಿನಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗದ ಕಾರಣ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಈ ಕುರಿತು ರಾಜ್ಯ ಬಿಜೆಪಿಯು ಟ್ವೀಟ್ ಮಾಡಿದ್ದು, “ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನನ್ನೂ ಕೂಡಾ ಜಾರಿಗೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ” ಎಂದು ಬರೆದುಕೊಂಡಿದೆ.

ಡಿಸಂಬರ್ 28 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದು, “ಮಸೂದೆಯು ಕಾನೂನಾಗಿ ಜಾರಿಯಾದರೂ ಎಮ್ಮೆ, ಕೋಣದ ಮಾಂಸ ಮಾರಾಟಕ್ಕೆ ಯಾವುದೇ ನಿಷೇಧ ಇರುವುದಿಲ್ಲ. ಅಲ್ಲದೆ ಚರ್ಮೋದ್ಯಮಕ್ಕೂ ಈ ಕಾಯ್ದೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ” ಎಂದು ಅವರು ತಿಳಿಸಿದ್ದರು.

“ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 1964ರ ಕಾಯ್ದೆಯಲ್ಲಿ ಲೋಪಗಳಿದ್ದ ಹಿನ್ನೆಲೆ, ಕೆಲ ತಿದ್ದುಪಡಿ ಮಾಡಲಾಗಿದೆ. 1964 ರ ಕಾಯ್ದೆಯನ್ವಯ 12 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅವಕಾಶವಿತ್ತು. ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ, ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧಿಸಲು ನಿರ್ಬಂಧ ಹೇರಲಾಗಿದೆ. ಎಮ್ಮೆ ಮತ್ತು ಕೋಣಗಳನ್ನು 13 ವರ್ಷದ ಬಳಿಕ ವಧಿಸಲು ಅವಕಾಶ ನೀಡಲಾಗುತ್ತದೆ. ದನದ ಮಾಂಸ ತಿನ್ನುವುದಕ್ಕೆ ನಾವು ಯಾವುದೇ ನಿಷೇಧವನ್ನು ಹೇರುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“1964 ರ ಕಾಯ್ದೆಯಲ್ಲಿ ಜಾನುವಾರುಗಳ ಹತ್ಯೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಅವಕಾಶವಿರಲಿಲ್ಲ. ಇದೀಗ ಜಾನುವಾರು ಹತ್ಯೆಗೈದರೆ ಶಿಕ್ಷೆ ಹಾಗೂ ದಂಡ ವಿಧಿಸುವ ಅಧಿಕಾರವನ್ನು ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಪೊಲೀಸರಿಗೆ ನೀಡಲಾಗಿದೆ. ಹಳೆಯ ಕಾನೂನು ಬಿಗಿಯಾಗಿರಲಿಲ್ಲ. ಈಗಿನ ಕಾಯ್ದೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಿದರೆ ಅದನ್ನು ವಶಕ್ಕೆ ಪಡೆಯಲಾಗುವುದು. ಅಲ್ಲದೆ, ವಾಹನವನ್ನು ಬ್ಯಾಂಕ್ ಗ್ಯಾರಂಟಿ ಮೂಲಕ ಹಿಂಪಡೆಯಬಹುದು” ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.


ಇದನ್ನೂ ಓದಿ: TRS ಮತ್ತು ಕಾಂಗ್ರೆಸ್‌ ಮುಖಂಡರು BJP ಸೇರುತ್ತಾರೆ; ಸಿಎಂ ಕೆಸಿಆರ್‌ ಅವರನ್ನು ಜೈಲಿಗೆ ಕಳಿಸುತ್ತೇವೆ: ಬಿಜೆಪಿ ಅಧ್ಯಕ್ಷ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights