21% ಮಾತ್ರ ಸಂಪೂರ್ಣ ಕೋವಿಡ್ ಲಸಿಕೆ ಹಾಕಲಾಗಿದೆ; ಬಿಜೆಪಿ ಸಂಭ್ರಮ ಹಾಸ್ಯಾಸ್ಪದ!: ಸಿದ್ದರಾಮಯ್ಯ

ದೇಶದಲ್ಲಿ ಒಂದು ಬಿಲಿಯನ್ (ನೂರು ಕೋಟಿ) ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಬಿಜೆಪಿ ಸಂಭ್ರಮಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ, “ದೇಶದಲ್ಲಿ 21% ರಷ್ಟು ಮಾತ್ರ ಸಂಪೂರ್ಣ ಲಸಿಕೆ ಹಾಕಲಾಗಿದೆ. ಹೀಗಿರುವಾಗ, ಬಿಜೆಪಿ ಸಂಭ್ರಮಾಚರಣೆ ಮಾಡುತ್ತಿರುವ ಹಾಸ್ಯಾಸ್ಪದವಾಗಿದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಇಲ್ಲಿಯ ವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ? ಎಂದು ಪ್ರಶ್ನಿಸಿದ್ದಾರೆ.

ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ ಎಂದು ಹೇಳಿದ್ದಾರೆ.

ಅಮೆರಿಕ 56%, ಚೀನಾ 70% ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ 21% ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? ಎಂದು ಪ್ರಶ್ನಿಸಿದ್ದಾರೆ.

ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ಮೋದಿ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ ಎಂದಿದ್ದಾರೆ. 

ಇದನ್ನೂ ಓದಿ: ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ “ವಿಐಪಿ ಸಂಸ್ಕೃತಿ ಇಲ್ಲ”: ಪ್ರಧಾನಿ ಮೋದಿ ಭಾಷಣದ ಪ್ರಮುಖ 5 ಅಂಶಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights