ಬಿಹಾರದಲ್ಲಿ ಮತ್ತೆ ಸಿಎಂ ಆಗ್ತಾರ ನಿತೀಶ್‌: ಬಿಜೆಪಿ ಹೇಳುತ್ತಿರುವುದು ಏನು?

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್‌ಡಿಯ ಮೈತ್ರಿಕೂಟ ಗೆಲುವು ಸಾಧಿಸಿದೆ. ನಿನ್ನೆ ನಿತೀಶ್‌ ಕುಮಾರ್‌ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೆ ನಿತೀಶ್ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೈತ್ರಿಕೂಟದಲ್ಲಿ ಹೇಳಲಾಗುತ್ತಿತ್ತಾದರೂ, ಇದೀಗ ಮುಂದಿನ ಸಿಎಂ ಯಾರು ಎಂಬುದು ಎನ್‌ಡಿಎ ಒಳಗೆ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ನ. 15ರಂದು ಮೈತ್ರಿಕೂಟದ ಸಭೆ ನಡೆಯಲಿದ್ದು, ಅಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.

ಜೆಡಿಯು ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವು ಚುನಾವಣೆಗು ಮುನ್ನವೇ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುತ್ತಿದ್ದು, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ನಿತೀಶ್‌ ಮುಖ್ಯಮಂತ್ರಿ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ, ಚುನಾವಣೆಯಲ್ಲಿ ಬಿಜೆಪಿಗಿಂತಲೂ ಜೆಡಿಯು ಕಡಿಮೆ ಕ್ಷೇತ್ರಗಳನ್ನು ಗೆದಿದ್ದು, ಆ ಕಾರಣದಿಂದಾಗಿ ಸಿಎಂ ಯಾರು ಎಂಬ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: ಬಿಹಾರ ವಿಧಾನಸಭೆಯಲ್ಲಿ 25% ಶಾಸಕರು ಮೇಲ್ವರ್ಗದವರು; ಬಿಜೆಪಿ ಶಾಸಕರೇ ಹೆಚ್ಚು!

ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 108 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 43 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಬಿಜೆಪಿ 74 ಸ್ಥಾನಗಳನ್ನು ಗೆದ್ದಿದೆ. ಹೀಗಾಗಿ, ಬಿಜೆಪಿಗೆ ಹೆಚ್ಚಿನ ಮನ್ನಣೆ ನೀಡಬೇಕೆಂದು ಮೈತ್ರಿಯೊಳಗಿನ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ನಾಯಕರು, ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಅನಿವಾರ್ಯವಾಗಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರು. ಆನಂತರದಲ್ಲಿ ಜೆಡಿಯುಗಿಂತ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಬರಬೇಕೆಂದೇ ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈಗ ತಮ್ಮದೇ ದೊಡ್ಡ ಪಕ್ಷ ಹಾಗಾಗಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಫಲಿತಾಂಶದ ಜೊತೆಗೆ ಈ ಬೆಳವಣಿಗೆಗಳಿಂದ ಬೇಸತ್ತಿರುವ ನಿತೀಶ್ ಕುಮಾರ್ ‘ಮುಖ್ಯಮಂತ್ರಿ ಆಗಲು ಮನಸ್ಸು ಒಪ್ಪುತ್ತಿಲ್ಲ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಚರ್ಚೆಗಳು ಮತ್ತು ಬೆಳವಣಿಗೆಗಳಿಂದಾಗಿಯೇ ಮೂರನೇ ಸ್ಥಾನಕ್ಕೆ ದೂಡಲ್ಪಟ್ಟಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಆರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಇನ್ನೂ ಖಚಿತವಾಗಿಲ್ಲ. ಇದೇ ಹಿನ್ನೆಲೆಯಲ್ಲಿ ನವೆಂಬರ್ 15ರಂದು ಎನ್ ಡಿಎ ಮೈತ್ರಿಕೂಟದ ಮಹತ್ವದ ಸಭೆ ಕರೆಯಲಾಗಿದೆ. ಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತಿತರ ನಾಯಕರು ಭಾಗಿಯಾಗಲಿದ್ದಾರೆ.

ನವೆಂಬರ್ 15ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಭೆಯ ಬಳಿಕ ಮೈತ್ರಿಕೂಟದ ವತಿಯಿಂದ ಅಧಿಕೃತವಾಗಿ ಮುಖ್ಯಮಂತ್ರಿ ಯಾರು ಎಂಬ ಸಂಗತಿ ಘೋಷಣೆಯಾಗುವ ಸಾಧ್ಯತೆ ಇದೆ.

ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ ಬಹುಮತಕ್ಕೆ ಬೇಕಿದ್ದ 122 ಸ್ಥಾನಗಳನ್ನು ಗೆಲ್ಲದಿದ್ದರೂ ತೀವ್ರ ಪೈಪೋಟಿ ನೀಡಿದೆ. ಮತ್ತು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು-ಸೋಲಿನ ಪ್ರಮಾಣ 1,000ದ ಒಳಗಡೆ ಇದೆ. ಅಂಚೆ ಮತಗಳ ಎಣಿಕೆ ಸರಿಯಾಗಿ ಆಗಿಲ್ಲ ಎಂಬ ದೂರಿದೆ. ಕೆಲವು ಕಡೆ ಪೂರ್ಣ ಪ್ರಮಾಣದಲ್ಲಿ ಮತ ಎಣಿಕೆ ಮಾಡಿಲ್ಲ ಎಂಬ ಗುರುತರ ಆರೋಪವೂ ಕೇಳಿಬಂದಿದೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ‘ಬಿಜೆಪಿ ಚೋರ್ ದರ್ವಾಜಾ (ಕಳ್ಳ ಕದ)ದ ಮೂಲಕ ಅಧಿಕಾರ ಹಿಡಿದಿದೆ. ನಿಜವಾದ ಗೆಲುವು ನಮ್ಮದೆ. ಅವರು ಕುರ್ಚಿಯ ಮೇಲೆ ಕೂರಬಹುದು, ನಾವು ಬಿಹಾರ ಜನತೆಯ ಹೃದಯದಲ್ಲಿ ಪ್ರತಿಷ್ಠಾಪಿತರಾಗಿದ್ದೇವೆ’ ಎಂದು ಹೇಳುವ ಮೂಲಕ ನಿತೀಶ್ ಕುಮಾರ್ ಅವರ ನೈತಿಕತೆಯನ್ನು ನಡುಗಿಸಿದ್ದಾರೆ.


ಇದನ್ನೂ ಓದಿ: ಬಿಹಾರದಲ್ಲಿ ಗೆದ್ದಿದ್ದು ಮಹಾಘಟಬಂಧನ್; ಬಿಜೆಪಿ ಕಳ್ಳದಾರಿಯಲ್ಲಿ ಗೆಲವು ಸಾಧಿಸಿದೆ: ತೇಜಸ್ವಿ ಯಾದವ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights