ಪತ್ರಕರ್ತ ಜುಬೇರ್ ಬಂಧನ : BJP ಯ ದಮನಕಾರಿ ನೀತಿಗೆ ಖಂಡನೆ

Fact Check ವೆಬ್‌ಸೈಟ್‌ AltNews ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಅಡಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಜುಬೇರ್​ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್​ 153 (ಗಲಭೆಗೆ ಪ್ರಚೋದನೆ), 295A(ಧರ್ಮ ಅಥವಾ ಧಾರ್ಮಿಕ ನಂಬಿಕೆ ಅವಮಾನಿಸುವ ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

AltNews ಸಂಸ್ಥಾಪಕ ಪ್ರತಿಕ್‌ ಸಿನ್ಹಾ ಪ್ರತಿಕ್ರಿಯಿಸಿ, ದೆಹಲಿ ಪೊಲೀಸರು ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದಿದ್ದರು. ಆದರೆ ಈ ಪ್ರಕರಣದಲ್ಲಿ ಜುಬೇರ್ ಅವರನ್ನು ಬಂಧಿಸಿದ್ದಾರೆ, ಆದರೆ ಪ್ರಕಣದ FIR ಪ್ರತಿ ನೀಡಿಲ್ಲ ಎಂದು ತಿಳಿಸಿದ್ದಾರೆ.

 

ಪ್ರಕರಣದ ಹೆಚ್ಚಿನ ತನಿಖೆಯ ಉದ್ದೇಶಕ್ಕಾಗಿ ಸೈಬರ್ ಕ್ರೈಂ ಘಟಕದ ಅಧಿಕಾರಿಗಳು ಜುಬೈರ್‌ನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿದ್ದಾರೆ. ಸಾಕಷ್ಟು ಸಾಕ್ಷ್ಯಾಧಾರಗಳ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಡೆರೆಕ್ ಒ’ಬ್ರೇನ್, “ಪ್ರತಿದಿನವೂ ಬಿಜೆಪಿಯ ಸುಳ್ಳು ಸುದ್ದಿಯ ಕಾರ್ಖಾನೆಯನ್ನು ಬಹಿರಂಗಪಡಿಸುವ ವಿಶ್ವದ ಅತ್ಯುತ್ತಮ ಪತ್ರಕರ್ತರಲ್ಲಿ ಒಬ್ಬರಾದ ಮೊಹಮ್ಮದ್ ಜುಬೇರ್ ಅವರ ಬಂಧನವನ್ನು ಬಲವಾಗಿ ಖಂಡಿಸುತ್ತೇವೆ” ಎಂದು ಹೇಳಿದ್ದಾರೆ.

2017ರಲ್ಲಿ ಪ್ರಾರಂಭವಾದ AltNews ವಿಶ್ವದ ಅತ್ಯಂತ ಪ್ರಮುಖವಾದ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಇದರ ಸಂಸ್ಥಾಪಕರು ಹಲವು ವರ್ಷಗಳಿಂದ ಬಲಪಂಥೀಯ ಗುಂಪುಗಳಿಂದ ಆನ್‌ಲೈನ್ ಟ್ರೋಲಿಂಗ್ ಮತ್ತು ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚೆಗೆ ಪ್ರವಾದಿ ಮುಹಮ್ಮದ್ ಬಗ್ಗೆ ನಿಂದನಾತ್ಮಕ ಹೇಳಿಕೆಯಿಂದ ಗಲ್ಫ್ ರಾಷ್ಟ್ರಗಳು ಭಾರತದ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದವು, ನಂತರ ನೂಪುರ್ ಶರ್ಮಾ ಅವರನ್ನು BJP ಯು ಅಮಾನತ್ತುಗೊಳಿಸಿತ್ತು, ಈ ಘಟನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ  ಭಾರಿ ಸದ್ದು ಮಾಡಿತ್ತು, ನಂತರ ನೂಪುರ್ ಶರ್ಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಕಾರಣಕ್ಕೆ ಕ್ಷಮೆ ಯಾಚಿಸಿದ್ದರು, ಈ ಸಂದರ್ಭದಲ್ಲಿ ಮೊಹಮ್ಮದ್ ಜುಬೇರ್ ಹೆಸರು ಕೇಳಿಬರುತ್ತಿತ್ತು, ಆದರೆ ಈಗ ಅವರನ್ನು ಬಂಧಿಸುವ ಮೂಲಕ ಪತ್ರಕರ್ತರ ಹಕ್ಕನ್ನು ತುಳಿಯುವ ಪ್ರವೃತ್ತಿಯನ್ನು ಮುಂದುವರೆಸಿದೆ.

ಈಗ 2018ರ ಟ್ವೀಟ್ ಒಂದಕ್ಕೆ ಸಂಬಂಧಿಸಿ ದಿಟ್ಟ ಪತ್ರಕರ್ತ, ಆಲ್ಟ್‌ನ್ಯೂಸ್ ಸಹ ಸಂಪಾದಕ ಮೊಹಮ್ಮದ್ ಜುಬೇರ್‌ರನ್ನು ಬಂಧಿಸಿರುವ ದೆಹಲಿ ಪೊಲೀಸರ ಕ್ರಮಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜುಬೇರ್‌ರನ್ನು ಬಂಧಿಸುವ ಮೂಲಕ ಸತ್ಯವನ್ನು ಬಂಧಿಸಿಡಲು ಸಾಧ್ಯವಿಲ್ಲ ಎಂದಿರುವ ಜನರು ಟ್ವಿಟರ್ ನಲ್ಲಿ #IStandWithZubair ಹ್ಯಾಸ್‌ಟ್ಯಾಗ್ ಟ್ರೆಂಡಿಂಗ್ ಮಾಡಿದ್ದಾರೆ.

ಜುಬೇರ್ ಬಂಧನವನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, “ಬಿಜೆಪಿಯ ದ್ವೇಷ, ಮತಾಂಧತೆ ಮತ್ತು ಸುಳ್ಳನ್ನು ಬೆತ್ತಲು ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಅವರಿಗೆ ಬೆದರಿಕೆಯಾಗಿ ಪರಿಣಮಿಸಿದ್ದಾರೆ. ಸತ್ಯದ ಒಂದು ಧ್ವನಿಯನ್ನು ಬಂಧಿಸಿದರೆ ಅದು ಸಾವಿರಾರು ದನಿಗಳಾಗಿ ಮೊಳಗುತ್ತದೆ. ಯಾವಾಗಲೂ ದೌರ್ಜನ್ಯದ ಮೇಲೆ ಸತ್ಯವೇ ಜಯಗಳಿಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಪತ್ರಿಕೋದ್ಯಮ ಎಂದರೆ ಪಟ್ಟಭದ್ರ ಹಿತಾಶಕ್ತಿಗಳು ಏನನ್ನು ಪ್ರಕಟಿಸಲು ಬಯಸುವುದಿಲ್ಲವೋ ಅದನ್ನು ಪ್ರಕಟಿಸುವುದು; ಉಳಿದಿದ್ದ ಸಾರ್ವಜನಿಕ ಸಂಪರ್ಕವಷ್ಟೆ. (ಜಾರ್ಜ್ ಆರ್ವೆಲ್, ಎಡಿಟ್ ಮಾಡಲಾಗಿದೆ) ಎಂದು ಹೋರಾಟಗಾರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.

ಯಾರು ಸುಳ್ಳು ಸಂದೇಶ ಹರಡಿದರೂ ಅದನ್ನು ಆಲ್ಟ್‌ನ್ಯೂಸ್ ಬಹಿರಂಗಗೊಳಿಸುತ್ತದೆ. ಸತ್ಯದ ಪರ ಅತ್ಯುತ್ತಮ ಕೆಲಸ ಮಾಡುತ್ತಿರುವ ಮೊಹಮ್ಮದ್ ಜುಬೇರ್ ಬಂಧನ ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಒತ್ತಾಯಿಸಿದ್ದಾರೆ.

Fact Check ವೆಬ್‌ಸೈಟ್‌ AltNews ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ಬಂಧನವನ್ನು  ಏನ್‌ಸುದ್ದಿ.ಕಾಂ ತೀವ್ರವಾಗಿ ಖಂಡಿಸುತ್ತದೆ, ಮತ್ತು ತನ್ನ ವಿರುದ್ದ ಇರುವ ಧ್ವನಿಗಳನ್ನು ದಮನ ಮಾಡಲು ಮುಂದಾಗಿರುವ BJPಯ ಈ ನಡೆಯನ್ನು ವಿರೋದಿಸುತ್ತ, ಕೂಡಲೆ ಮೊಹಮ್ಮದ್ ಜುಬೇರ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತದೆ.


ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights