ಪ್ರತಾಪ್‌ಸಿಂಹ ವಿರುದ್ದ ನಂಜನಗೂಡು ಜನರ ಆಕ್ರೋಶ; ನಿಮ್ಮದಲ್ಲದ ಕ್ಷೇತ್ರದಲ್ಲಿ ನಿಮಗೇನು ಕೆಲಸ ಎಂದ ಲಿಂಗಾಯತರು!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಅವರ ವಿರುದ್ಧ ನಂಜನಗೂಡಿನ ಲಿಂಗಾಯತ ಸಮುದಾಯ ತಿರುಗಿ ಬಿದ್ದಿದೆ. ದೇವಾಲಯ ತೆರವು ಪ್ರಕರಣವನ್ನು ಮುಂದಿಟ್ಟುಕೊಂಡು ತನ್ನ ವರ್ಚಸ್ಸು ವೃದ್ಧಿಸಿಕೊಳ್ಳಲು ಪ್ರತಾಪ್‌ ಸಿಂಹ ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹುಚ್ಚುಗಣಿ ಮಹದೇವಮ್ಮನ ದೇವಾಲಯ ನೆಲಸಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್‌ ಮೋಹನಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಯನ್ನು ವರ್ಗಾಯಿಸಿರುವುದರಿಂದ ವೀರಶೈವ ಲಿಂಗಾಯತರು ಬೇಸರವಾಗಿದ್ದು, “ಪ್ರತಾಪ್‌ಸಿಂಹ ಲಿಂಗಾಯತ ವಿರೋಧಿಯಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟಂಬರ್ 28 ರಂದು ನಂಜನಗೂಡು ತಾಲ್ಲೂಕು ವೀರಶೈವ ಮಹಾಸಭೆಯ ನೇತೃತ್ವದಲ್ಲಿ ನಂಜನಗೂಡು ಮಿನಿ ವಿಧಾನಸೌಧದ ಎದುರು ಜಮಾಯಿಸಿದ ವೀರಶೈವ-ಲಿಂಗಾಯತ ಸಮಾಜದ ನಾಯಕರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಸಂಘಟಗಳ ಒಕ್ಕೂಟ, ರಾಜ್ಯ ರೈತ ಸಂಘವು ಇದಕ್ಕೆ ಬೆಂಬಲಿಸಿವೆ.

“ಮೈಸೂರು-ಕೊಡಗು ಸಂಸದರಿಗೆ, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡಿನಲ್ಲೇನು ಕೆಲಸ? ಹುಚ್ಚುಗಣಿ ಪ್ರಕರಣಕ್ಕೆ ತಲೆ ಹಾಕಿದ್ದು ಯಾಕ್ಕೆ? ಮೇಲಧಿಕಾರಿಗಳ ಆದೇಶವನ್ನು ಪಾಲಿಸಿದ್ದೇ ತಹಸೀಲ್ದಾರ್‌‌ ಅವರ ತಪ್ಪಾಯಿತೆ? ಮೇಲಧಿಕಾರಿಗಳ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ? ಪ್ರತಾಪ್‌ಸಿಂಹ ಅವರಿಗೆ ಲಿಂಗಾಯತ ಸಮುದಾಯದ ಮೂರು ಲಕ್ಷ ಮತಗಳು ಕಳೆದ ಚುನಾವಣೆಯಲ್ಲಿ ಬಂದಿವೆ. ಮುಂದಿನ ಚುನಾವಣೆಯಲ್ಲಿ ನಿಮ್ಮ ವಿರುದ್ಧ ಮತ ಚಲಾಯಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಪ್ಪರ್ ಕೃಷ್ಣ ಯೋಜನೆಗೆ 2500 ಕೋಟಿ ರೂ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸರ್ಕಾರ ನಿರ್ಧಾರ!

“ನಮ್ಮ ಸಂಸದರು ವಿ.ಶ್ರೀನಿವಾಸ ಪ್ರಸಾದ್. ನಾವು ಅವರೊಂದಿಗೆ ಮಾತನಾಡುತ್ತೇವೆ. ಪ್ರತಾಪ್‌ಸಿಂಹ ಅವರು ಲಿಂಗಾಯತರ ಮೇಲೆ ಯಾಕೆ ಪ್ರಭಾವ ಬೀರುತ್ತಿದ್ದಾರೆಂದು ತಿಳಿಯದು. ಪ್ರತಾಪ್‌ ಸಿಂಹ ಲಿಂಗಾಯತರ ವಿರೋಧಿಯಾಗಿದ್ದಾರೆ. ಮಹಿಳಾ ವಿರೋಧಿಯಾಗಿದ್ದಾರೆ” ಎಂದು ನಂಜನಗೂಡು ತಾಲ್ಲೂಕು ವೀರಶೈವ ಮಹಾಸಭಾ ಘಟಕದ ಉಪಾಧ್ಯಕ್ಷರಾದ ಮಂಜುಳಾ ಮಧು ಗುಡುಗಿದ್ದಾರೆ.

“ಮೋಹನಕುಮಾರಿಯವರು ಲಿಂಗಾಯತರು, ಅಬಲೆ; ಅವರನ್ನು ವರ್ಗಾಯಿಸಿದರೆ ಯಾರೂ ಕೇಳುವುದಿಲ್ಲ ಎಂದು ನೀವು ತಿಳಿದುಕೊಂಡಿದ್ದರೆ, ಮಹಿಳೆಯರೇ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಷ್ಟ ಹೇಳಲು ಕರೆ ಮಾಡಿದ ಮಹಿಳೆಗೆ ‘ನಿನ್ನ ಕಂತೆ, ಪುರಾಣ ಹೇಳಲು ಪೋನ್‌ ಮಾಡಿದ್ದೀಯಾ, ಇಡಮ್ಮ ಪೋನ್‌’ ಎಂದು ಹೇಳಿದ್ದೀರಿ. ಲಿಂಗಾಯತ ಮಹಿಳೆ ಆಗಿರಲಿ, ಮತ್ಯಾರೇ ಮಹಿಳೆಯರಾಗಿರಲಿ, ಮಾತನಾಡುವಾಗ ಎಚ್ಚರಿಕೆ ಇರಲಿ. ರೋಹಿಣಿ ಸಿಂಧೂರಿಯವರ ಮೇಲೆ ಟಾರ್ಗೇಟ್ ಮಾಡಿದಿರಿ. ನೀವು ಹೀಗೆ ದಬ್ಬಾಳಿಕೆ ಮುಂದುವರಿಸಿದರೆ ಯಾವ ಮಹಿಳೆಯೂ ಅಧಿಕಾರಿಯಾಗಲೂ, ಕೊನೆಯ ಪಕ್ಷ ಕಾನ್‌ಸ್ಟೆಬಲ್‌ ಆಗಲೂ ಇಷ್ಟಪಡುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನೂ ತರಾಟೆಗೆ ಕೊಂಡಿರುವ ಅವರು, “ಬಿ.ಎಸ್.ಯಡಿಯೂರಪ್ಪನವರಿಂದಾಗಿ ನೀವು ಅಧಿಕಾರಕ್ಕೆ ಬಂದಿದ್ದೀರಿ, ಅವರಿಂದಾಗಿ ಸಚಿವರಾಗಿದ್ದೀರಿ. ಲಿಂಗಾಯತರೆಲ್ಲ ಒಂದಾಗದೆ ಇದ್ದಿದ್ದರೆ, ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತಿರಲಿಲ್ಲ. ನಮ್ಮ ತಾಲ್ಲೂಕಿನಲ್ಲಿ ಬಿಜೆಪಿ ಗೆಲ್ಲುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ತಿಳಿಸಿಕೊಡುತ್ತೇವೆ. ತಹಸೀಲ್ದಾರ್‌ ವರ್ಗಾವಣೆಯನ್ನು ರದ್ದುಗೊಳಿಸಬೇಕು” ಎಂದು ಕೂಗು ಕೇಳಿಬಂದಿದೆ.

ಲಿಂಗಾಯತರು ವಿರೋಧಿಸಿಲ್ಲ

ಮೋಹನ್‌ಕುಮಾರಿ ವಿರುದ್ಧದ ಪ್ರತಿಭಟನೆಯಲ್ಲಿ ಲಿಂಗಾಯತ ಸಮುದಾಯ ಮುಂಚೂಣಿಯಲ್ಲಿ ಇರಲಿಲ್ಲ. ಹೇಳಬೇಕೆಂದರೆ ಗಲಾಟೆ ಮಾಡುವಂತಹ ಪ್ರಕರಣವೇನೂ ಇದು ಆಗಿರಲಿಲ್ಲ. ಪ್ರತಾಪ್‌ಸಿಂಹ ಅವರು ಹಿಂದುತ್ವ ರಾಜಕಾರಣ ಮಾಡುವ ಮೂಲಕ ನಂಜನಗೂಡಿನಲ್ಲಿ ಪ್ರಬಲರಾಗಲು ಯತ್ನಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ನಂಜನಗೂಡಿನ ಸ್ಥಳೀಯ ಮುಖಂಡರು ಆರೋಪಿಸುತ್ತಾರೆ.

ಬೇರೆಯವರು ನಿಷ್ಕ್ರಿಯರೆಂದು ಬಿಂಬಿಸಲು ಯತ್ನ

ನಂಜನಗೂಡು ವಿಧಾನಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದೆ. ಹಿರಿಯ ದಲಿತ ನಾಯಕ, ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಹರ್ಷವರ್ಧನ್‌‌ ಅವರು ನಂಜನಗೂಡಿನ ಶಾಸಕರಾಗಿದ್ದಾರೆ. ಹರ್ಷವರ್ಧನ್‌ ಹಾಗೂ ಪ್ರತಾಪ್ ಸಿಂಹ ನಡುವೆ ‘ಜುಬಿಲಿಯಂಟ್‌’ ಕಾರ್ಖಾನೆ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿತ್ತು. ಹರ್ಷವರ್ಧನ್‌ ಅವರನ್ನು ಕಡೆಗಣಿಸಿ, ತಾನೇ ಡಾಮಿನೇಟ್‌ ಆಗಬೇಕೆಂದು ನಂಜನಗೂಡಿನ ದೇವಾಲಯ ಪ್ರಕರಣದಲ್ಲಿ ಪ್ರತಾಪ್‌ಸಿಂಹ ಮೂಗು ತೂರಿಸಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸುತ್ತಾರೆ.

ನಂಜನಗೂಡಿನ ಜುಬಿಲಿಯಂಟ್‌ ಕಾರ್ಖಾನೆಯಲ್ಲಿ ಕೊರೊನಾ ಉಲ್ಬಣವಾದಾಗ ಶಾಸಕ ಬಿ.ಹರ್ಷವರ್ಧನ್‌ ಅವರು ಕಾರ್ಖಾನೆಗೆ ಬೀಗ ಹಾಕಿಸಿದ್ದರು. ಮುಂದಿನ ದಿನಗಳಲ್ಲಿ ಪ್ರತಾಪ್‌ ಸಿಂಹ ಕಾರ್ಖಾನೆಯ ಪರ ನಿಂತು ಬಾಗಿಲು ತೆರೆಸಿದ್ದರು. ಬೇರೆ ಶಾಸಕರನ್ನು ನಿಷ್ಕ್ರಿಯರು ಎಂದು ಬಿಂಬಿಸಲು ಪ್ರತಾಪ್‌ಸಿಂಹ ಯತ್ನಿಸುತ್ತಿದ್ದಾರೆ. ತನಗೆ ಸಂಬಂಧಪಡದ ಕ್ಷೇತ್ರಕ್ಕೂ ಪ್ರವೇಶಿಸುತ್ತಿದ್ದಾರೆ ಎಂದು ಟೀಕಿಸುತ್ತಾರೆ ಮುಖಂಡರು.

ಇದನ್ನೂ ಓದಿ: 2023ರ ಚುನಾವಣೆಯಲ್ಲಿ 35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ಮೀಸಲು: ಹೆಚ್‌ಡಿ ಕುಮಾರಸ್ವಾಮಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights