ನಾಗರ ಪಂಚಮಿ: ಹಾವುಗಳ ಸಾವಿಗೆ ಕಾರಣವಾಗುವ ಆಚರಣೆಗಳು ಮತ್ತು ಮಿಥ್ಯೆಗಳು!

ದೇಶಾದ್ಯಂತ ಇಂದು (ಶುಕ್ರವಾರ) ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ವೇಳೆ ಹಾವಿಗೆ ಪೂಜೆ ಮಾಡುವುದರಿಂದ, ಹಾವಿಗೆ ಹಾಲೆರೆಯುವುದರಿಂದ ಒಳ್ಳೆಯದಾಗುತ್ತದೆ ಎಂದು ಜನರು ನಂಬಿಸಿದ್ದಾರೆ. ಅಲ್ಲದೆ, ನಾಗರ ಹಾವನ್ನು ದೇವರ ಅವತಾರವೆಂದು, ಅದರ ಹಣೆಯಲ್ಲಿ ವಜ್ರ (ನಾಗಮಣಿ) ಇದೆಯೆಂದು ಮತ್ತು ಅದನ್ನು ಆರಾಧನೆ ಮಾಡುವುದರಿಂದ ಹಲವಾರು ಕಾಯಿಲೆಗಳು ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

ಒಮ್ಮೆ ಒಬ್ಬ ಹೆಂಗಸು ತನ್ನ ಮಗಳು, ಸುಂದರ ಮತ್ತು ಶ್ರೀಮಂತ ಹುಡಗನನ್ನು ಮದುವೆ ಆಗಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಪುರೋಹಿತನ ಬಳಿ ಕೇಳುತ್ತಾಳೆ. ಆ ಪುರೋಹಿತ ಮಹಿಳೆಗೆ, “ನಿನ್ನ ಮಗಳು ನಾಗರ ಪಂಚಮಿಯ ದಿನ ಒಂದು ನಾಗರ ಹಾವನ್ನು ಮದುವೆ ಆಗಬೇಕು, ನಾಗರ ಪಂಚಮಿಯ ದಿನ ಮದುವೆ ಆದರೆ ಆ ಹಾವೇ ಒಂದು ಸುಂದರ ಯುವಕನಾಗಿ ಮತ್ತು ನಾಗಮಣಿ ಅದರ ಬಳಿ ಇರುವುದರಿಂದ ಶ್ರೀಮಂತನಾಗಿಯೂ ಬದಲಾಗುತ್ತಾನೆ” ಎಂದು ಸಲಹೆ ನೀಡುತ್ತಾನೆ.

ಅಂತೆಯೇ ಅವರು ಒಂದು ನಾಗರ ಹಾವನ್ನು ಹಿಡಿದು, ಪ್ರಜ್ಞೆ ತಪ್ಪಿಸಿ ’ಮದುವೆ’ ಮಾಡಿಸುತ್ತಾರೆ. ಮುಂದೇನಾಯಿತು ಎಂಬ ಕಾತರವೇ? ಅಂಥದ್ದೇನಿಲ್ಲ ಹಾವು ಎಚ್ಚರಗೊಂಡಮೇಲೆ ಒತ್ತಡ ಮತ್ತು ಗಾಬರಿಯಲ್ಲಿದ್ದ ಹಾವು ತನ್ನ ಆತ್ಮರಕ್ಷಣೆಗಾಗಿ ಆ ಹುಡುಗಿಯನ್ನು ಕಚ್ಚಿ ಓಡಿಹೋಯಿತು. ಇಂತಹ ನೂರಾರು ಘಟನೆಗಳು ನಮ್ಮ ದೇಶದಲ್ಲಿ ನಡೆದುಹೋಗಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಹಾವಿನ ಬಗ್ಗೆ ಆಪಾರವಾದ ತಪ್ಪು ಕಲ್ಪನೆಗಳು ಇದೆ ಮತ್ತು ಈ ಕಾರಣಕ್ಕೆ ಹಾವುಗಳ ಜೊತೆ ತಪ್ಪಾಗಿ ನಡೆದುಕೊಂಡು ಅವುಗಳ ಸಾವಿಗೂ ಕಾರಣವಾಗಿದೆ ಎಂಬುದು ಆತಂಕಕಾರಿ ವಿಚಾರ.

ಈ ನಾಗರ ಪಂಚಮಿಯ ದಿನ ಹಾವುಗಳ ಕುರಿತು ಇರುವ ಮಿಥ್ಯೆ ಮತ್ತು ಸತ್ಯಗಳನ್ನು ತಿಳಿದುಕೊಳ್ಳೋಣ

೧. ಹಾವುಗಳು ಹಾಲು ಕುಡಿಯುತ್ತವೆ:

ನಾಗರ ಪಂಚಮಿಯ ದಿನ ಜನರು ಹುತ್ತಗಳಿಗೆ, ಹಾವುಗಳಿಗೆ ಹಾಲುಣಿಸುವುದು ಹಬ್ಬದ ಬಹುಮುಖ್ಯ ಭಾಗವಾಗಿದೆ. ಮತ್ತು ಹಾಲು ಕುಡಿಯುತ್ತದೆ ಎನ್ನುವುದು ಹಾವುಗಳ ಕುರಿತು ಇರುವ ಅತ್ಯಂತ ದೊಡ್ಡ ಮಿಥ್ಯೆ. ವೈಜ್ಞಾನಿಕವಾಗಿ ಜೀವರಾಶಿಯಲ್ಲಿ ಹಾಲು ಕುಡಿಯುವ ಜೀವಿಗಳು ಎಂದರೆ ಸಸ್ತನಿಗಳು, ಹಾವುಗಳು ಸರಿಸೃಪಗಳು ಹಾಗಾಗಿ ಹಾವುಗಳು ಹಾಲು ಕುಡಿಯುದಿಲ್ಲ.

Drive to save snakes on Nag Panchami

ಹಾಲು ಕುಡಿಯುವ ದೃಶ್ಯ ನಾನು ನೋಡಿದ್ದೇನಲ್ಲ..?

ಸಾಮಾನ್ಯವಾಗಿ ನಾಗರ ಪಂಚಮಿ ಅಥವಾ ಯಾವುದಾರು ವಿಶೇಷ ಸಂದರ್ಭದಲ್ಲಿ ಪೂಜಾರಿಗಳು ಹಾವುಗಳನ್ನು ಹಿಡಿದು ಅವುಗಳಿಗೆ ಆಹಾರ, ನೀರು ಏನೂ ಸಿಗದಂತೆ ಮಾಡಿ ತಿಂಗಳು ಗಟ್ಟಲೆ ಇಡಲಾಗುತ್ತದೆ. ಇದರಿಂದ ಹಾವುಗಳು ಬಳಲಿ ಡೀಹೈಡ್ರೇಟ್ ಆಗುತ್ತದೆ. ಅಂತ ಹಾವುಗಳಿಗೆ ಮಾತ್ರ ಬಲವಂತವಾಗಿ ಹಾಲು ಕುಡಿಸಲಾಗುತ್ತದೆ. ಹಾವುಗಳು ಶೀತ ರಕ್ತದ ಸರೀಸೃಪಗಳು ಅವುಗಳಿಗೆ ಬಲವಂತವಾಗಿ ಹಾಲು ಕುಡಿಸುವುದರಿಂದ ಅವಕ್ಕೆ ಸಾವು ಸಂಭವಿಸುತ್ತದೆ!

೨. ನಾಗರ ಹಾವುಗಳು ಕ್ರೂರ ಜೀವಿಗಳು, ಹಾವುಗಳಿಗೆ 12 ವರ್ಷ ದ್ವೇಷ ಇರುತ್ತದೆ:

ಸಿನೆಮಾದವರಿಗೆ ದೊಡ್ಡ ನಮಸ್ಕಾರ ಹೊಡಿಯಬೇಕು. ಇಂತಹದೊಂದು ತಪ್ಪು ಕಲ್ಪನೆಗೆ ಪುರಾಣಗಳ ಜೊತೆಜೊತೆಗೆ ಹೆಚ್ಚಿನ ಕೊಡುಗೆ ನೀಡಿದ್ದು ಸಿನೆಮಾ ರಂಗ. ದ್ವೇಷ ಎನ್ನುವುದು ಹೆಚ್ಚು ಅಭಿವೃದ್ದಿಗೊಂಡ ಮನುಷ್ಯರ ಮೆದಿಳಿನಲ್ಲಿ ಇರುತ್ತದೆಯೇ ಹೊರತು ಹಾವುಗಳಲ್ಲಿ ಇರುವುದೇ ಇಲ್ಲ. ಹಾವುಗಳು ದ್ವೇಷ ಮಾಡುವ ಜೀವಿಗಳಲ್ಲ, ಅವುಗಳಿಗೆ ಅಷ್ಟು ತೀಕ್ಷ್ಣವಾದ ನೆನಪಿನ ಶಕ್ತಿ ಇಲ್ಲ ಮತ್ತು ಅವುಗಳ ಮೆದಿಳು ಅಷ್ಟು ’ಅಭಿವೃದ್ಧಿಯೂ’ ಆಗಿಲ್ಲ. ದಶಕಗಳ ಕಾಲ ಮನುಷ್ಯರ ಮುಖವನ್ನು ನೆನಪಿನಲ್ಲಿಟ್ಟುಕೊಂಡು ಸಾಯಿಸಲು ಬರುತ್ತದೆ ಎನ್ನುವ ಮೂಢ ನಂಬಿಕೆ ಹುಟ್ಟಲು ಕಾರಣಕರ್ತರು ನಮ್ಮ ಸಿನೆಮಾದವರು.

೩. ನಾಗರ ಹಾವಿನ ಬಳಿ ನಾಗಮಣಿ ಇದೆ, ಅದರಿಂದ ಸನ್ಮೋಹಿನಿ ಮಾಡುತ್ತದೆ.

ಇದು ತಮಾಷೆಯಾಗಿದೆಯಾದರೂ ಪುರಾಣ ಮತ್ತು ಸಿನೆಮಾ ಜುಗಲ್‌ಬಂದಿಯಿಂದಾಗಿ ಈ ನಂಬಿಕೆಯೂ ರೂಢಿಯಲ್ಲಿದೆ. ಹಾವುಗಳ ಹಣೆಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ವಜ್ರ(ನಾಗಮಣಿ) ಇದೆ ಎನ್ನುವ ಕಾರಣಕ್ಕೆ ಅದೆಷ್ಟೋ ನಾಗರಗಳನ್ನು ಹಿಡಿದು ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ.

೪. ಹಾವುಗಳಿಗೆ ಏಳು ತಲೆಗಳು ಇರುತ್ತದೆ.

ಏಳು ತಲೆಯ ಹಾವು ಈ ದೇವಸ್ಥಾನದಲ್ಲಿ ಕಾವಲಿದೆ, ಆ ನಿಧಿಗೆ ಕಾವಲಿದೆ, ಅವನು ಏಳು ತಲೆಯ ಹಾವು ನೋಡಿದನಂತೆ ಹಾಗಾಗಿ ಸತ್ತುಹೋದ. ಇಂತಹ ಹಲವಾರು ಮಾತುಗಳನ್ನು ನಾವು ಕೇಳಿರುತ್ತೇವೆ. ಇನ್ನೂ ಕೆಲವರು ಈಗ ಇಲ್ಲ ಮುಂಚೆ ಇತ್ತು, ದೇವರುಗಳಿಗೆ ಏಳೆಡೆಯ ಹಾವು ಕಾವಲು ಇರುತ್ತಿತ್ತು ಎಂದು ಹೇಳುತ್ತಾರೆ. ಈಗ ಅಸ್ತಿತ್ವದಲ್ಲಿ ಇಲ್ಲದ ಡೈನಾಸಾರ್‌ಗಳ ಪಳೆಯುಳಿಕೆಗಳಿಂದ ಮತ್ತು ಹಲವಾರು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಡೈನಾಸಾರ್ ಗಳು ಇದ್ದವು ಎನ್ನುವ ನಿರ್ಧಾರಕ್ಕೆ ವಿಜ್ಞಾನಿಗಳು ಬಂದಿದ್ದಾರೆ. ಆದರೆ ಏಳು ತಲೆಯ ಹಾವುಗಳು ಇರುವ/ಇದ್ದ ಕುರಿತಾಗಿ ಯಾವುದೇ ಆಧಾರಗಳು ಲಭ್ಯವಿಲ್ಲ.

೫. ಹಾವುಗಳು ಹಾರುತ್ತವೆ.

ಹಾವುಗಳು ಹಾರುತ್ತದೆ ಎನ್ನುವುದನ್ನು ಕೆಲವೇ ಕೆಲವು ಜನರು ನಂಬುತ್ತಾರೆ, ಹಾರುವ ಕೆಲಸ ಏನಿದ್ದರು ಪಕ್ಷಿಗಳದ್ದು. ಸರೀಸೃಪಗಳು ತೆವಳುತ್ತವೆ. ಕೆಲವು ಸಂದರ್ಭದಲ್ಲಿ ಮತ್ತು ಕೆಲವು ಹಾವುಗಳು ಮಾತ್ರ ತಮ್ಮ ದೇಹ ರಚನೆ, ತೂಕ ಆಧಾರದ ಮೇಲೆ ಮರದ ರೆಂಬೆಯಿಂದ ಮತ್ತೊಂದು ರೆಂಬೆಗೆ ಅಥವಾ ಆಳದ ಜಾಗವನ್ನು ದಾಟುವಾಗ ಜಿಗಿಯುತ್ತದೆ ಆದರೆ ಹಾವುಗಳು ಹಾರುವುದಿಲ್ಲ.

ಹಾವುಗಳ ಕುರಿತು ಭಾರತದಲ್ಲಿ ಇಂತಹ ಇನ್ನೂ ಹತ್ತಾರು ಮೂಢ ನಂಬಿಕೆಗಳು ಆಚರಣೆಯಲ್ಲಿದೆ. ಕೆಲವನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ವಾಸುಕಿ, ಶೇಶನಾಗ ಮತ್ತು ಹಲವು ಪುರಾಣಗಳನ್ನು ಆಧರಿಸಿ ಹಾವುಗಳನ್ನು ಶತಮಾನಗಳನ್ನು ಹಿಂದೂ ಸಂಪ್ರದಾಯದ ಪ್ರಕಾರ ದೇವರೆಂದು ಆರಾಧಾನೆ ಮಾಡಲಾಗುತ್ತಿದೆ. ಅಲ್ಲದೇ ಬೇರೆ ಸಂಪ್ರದಾಯದಲ್ಲಿಯೂ ಆರಾಧನೆ ಇದೆ. ಈಜಿಪ್ಟ್ ಪುರಾಣದ ವಾಜೆಟ್ ನಲ್ಲಿಯೂ ನಾಗ ದೇವಿಯನ್ನು ಆರಾಧಾನೆ ಮಾಡಲಾಗುತ್ತದೆ. ಮತ್ತು (ಬೈಬಲ್ ನ ಸರ್ಪೆಂಟ್ ಸೈತಾನ್) ಹಾವುಗಳನ್ನು ಕೆಟ್ಟ ರಾಕ್ಷಸ ಎಂಬಂತೆಯೂ ನೋಡಲಾಗುತ್ತದೆ. ಆದರೆ ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಇಂದಿಗೂ ನಾಗರ ಹಾವುಗಳ ಆರಾಧನೆ ಮುಂದುವರೆದಿದೆ. ಒಟ್ಟಾರೆಯಲ್ಲಿ ಹಾವುಗಳ ಅತೀಯಾದ ಆರಾಧನೆ ಅಥವಾ ದ್ವೇಷ ಈ ಎರಡರಿಂದಲೂ ಹಾವುಗಳ ಅತ್ಯಂತ ತಪ್ಪಾಗಿ ಅರ್ಥ ಮಾಡಿಕೊಳ್ಳಲಾದ ಜೀವಿಯಾಗಿದೆ ಮತ್ತು ಇದರಿಂದಾಗಿ ನಿರಪರಾದಿ ಮುಗ್ದ ಹಾವಿನ ಜೀವಕ್ಕೂ ಅಪಾಯ ತಂದೊಡ್ಡಿದೆ.

– ಸರೋವರ್ ಬೆಂಕಿಕೆರೆ

ಆಧಾರ: PUGDUNDEE SAFARIS

ಇದನ್ನೂ ಓದಿ: ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಸುರಿಯದೆ ಬಡ ಜನರಿಗೆ ವಿತರಿಸಿದ ಜನತೆ….

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights