ಮೈಸೂರು: ಪ್ರತಿಮೆ ಇಡುವ ವಿಚಾರದಲ್ಲಿ ವಿವಾದದ ಕೇಂದ್ರವಾಗಿದ್ದ ಮಾತೃಮಂಡಳಿ ವೃತ್ತ ನೆಲಸಮ

ಮೈಸೂರು ನಗರದಲ್ಲಿರುವ ಮಾತೃಮಂಡಳಿ ವೃತ್ತವು ಪ್ರತಿಮೆಗಳನ್ನು ಇಡುವ ವಿಚಾರದಲ್ಲಿ ಇತ್ತೀಚೆಗೆ ವಿವಾದದ ಕೇಂದ್ರಬಿಂದುವಾಗಿ ಮಾರ್ಪಟ್ಟಿತ್ತು. ಇದೀಗ, ವೃತ್ತವನ್ನು ಗುರುವಾರ ನೆಲಸಮ ಮಾಡಲಾಗಿದೆ.

ಒಂದು ಬಣ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯನ್ನು ವೃತ್ತದಲ್ಲಿ ಇಡಬೇಕು ಎಂದು ಪ್ರತಿಪಾದಿಸಿದ್ದರೆ, ಮತ್ತೊಂದು ಬಣ ಕುವೆಂಪು ಅವರ ಪ್ರತಿಮೆಯನ್ನು ಇಡಬೇಕು ಎಂದು ಒತ್ತಾಯಿಸುತ್ತಿತ್ತು.

ಈ ನಡುವೆ ಅನುಮತಿ ಪಡೆಯದೆ ಅಂಬೇಡ್ಕರ್‌ ಪ್ರತಿಮೆ ಇಟ್ಟಿರುವುದರಿಂದ ಪೊಲೀಸರು ಪ್ರತಿಮೆಯನ್ನು ತೆರವುಗೊಳಿಸಿದ್ದರು. ಇದರಿಂದ ಬೇಸರಗೊಂಡಿದ್ದ ಯುವಕನೊಬ್ಬ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ಬಣಗಳ ನಡುವೆ ಕಚ್ಚಾಟದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ವೃತ್ತವನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿದೆ. ಇದನ್ನು ಖಂಡಿಸಿ ತಡೆಯಲು ಬಂದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಆಂದೋಲನ ಪತ್ರಿಕೆ ವರದಿ ಮಾಡಿದೆ.

ದಾರ್ಶನಿಕರ ಹೆಸರಲ್ಲಿ ಜಗಳ ಸಲ್ಲದು

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು ಅವರು ದೇಶಕಂಡ ಮಹಾನ್‌ ಮಾನವತಾವಾದಿಗಳು ಹಾಗೂ ದಾರ್ಶಕನಿಕರು. ಆದರೆ ಜಾತಿವಾದಿ ಸಮಾಜ ಈ ದಾರ್ಶನಿಕರನ್ನು ಜಾತಿಯ ಗೂಟಕ್ಕೆ ಕಟ್ಟಿರುವುದು ವಿಷಾದನೀಯ. ಈ ಇಬ್ಬರು ಮಹಾನೀಯರು ಸಮಾಜದಲ್ಲಿನ ಅಸಮಾನತೆ, ಶ್ರೇಣಿಕೃತ ವ್ಯವಸ್ಥೆಯನ್ನು ಪ್ರಶ್ನಿಸಿದವರು. ದುರಾದೃಷ್ಟವಶಾತ್‌ ಅಂಬೇಡ್ಕರ್‌ ಎಂದರೆ ದಲಿತರಿಗೆ, ಕುವೆಂಪು ಎಂದರೆ ಒಕ್ಕಲಿಗರಿಗೆ ಎಂಬ ವಿಂಗಡಣೆ ಆಗಿರುವುದು ಮಾತ್ರ ವಿಷಾದನೀಯ ಎಂದು ಸ್ಥಳೀಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

“ಕುವೆಂಪು ಹಾಗೂ ಅಂಬೇಡ್ಕರ್‌ ಅವರನ್ನು ಸಮಾನ ದೂರದಲ್ಲಿಟ್ಟು ಅಣಕ ಮಾಡುವ ರಾಜಕೀಯ ವ್ಯವಸ್ಥೆ ಒಂದು ಕಡೆ ಇದ್ದರೆ, ಈ ಇಬ್ಬರ ಹೆಸರಲ್ಲಿ ಜಗಳ ಆಡುತ್ತಿರುವ ಜನವರ್ಗ ಒಂದು ಕಡೆ ಇದೆ. ನಿನ್ನೆ ಆಗಿರುವ ಘಟನೆಗೂ ಇಂಥದ್ದೇ ಕಾರಣವಿದೆ” ಎಂದು ಅವರು ಹೇಳಿದ್ದಾರೆ.

ಮೈಸೂರು ನಗರದ ಪಡುವಾರಹಳ್ಳಿ, ಒಂಟಿಕೊಪ್ಪಲು ಭಾಗದಲ್ಲಿ ಇರುವ ಮಾತೃಮಂಡಳಿ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆ ಇಡಬೇಕೆಂದು ದಲಿತರು ಆಗ್ರಹಿಸುತ್ತಿದ್ದರೆ, ಕುವೆಂಪು ಪ್ರತಿಮೆ ಇಡಬೇಕೆಂದು ಒಕ್ಕಲಿಗರು ಬಯಸುತ್ತಿದ್ದರು. ಈ ಭಾಗದಲ್ಲಿ ದಲಿತರು, ನಾಯಕರು ಹಾಗೂ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.

ಇದನ್ನೂ ಓದಿ: 58 ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು; ಬಿಜೆಪಿಗೆ ಮುಖಭಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights