ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ನಮ್ಮ ರಾಜ್ಯದಲ್ಲಿ ಹಣವಿದೆ – ಇಚ್ಛಾಶಕ್ತಿ ಇಲ್ಲ: ರಮೇಶ್‌ ಕುಮಾರ್

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಖಾಸಗಿ ಶಾಲೆಗಳನ್ನು ಬೆಳೆಸಲಾಗಿದೆ. ಈ‌ ಸಂದರ್ಭದಲ್ಲಿ ಪೋಷಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ತಮ್ಮಂತೆ ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಾವಾದ‌ ಇರುತ್ತದೆ. ಹೀಗಾಗಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್‌ ಕುಮಾರ್‌ ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಫೀಸ್‌ ಇಳಿಸಿ, ಮಕ್ಕಳ ಭವಿಷ್ಯ ಉಳಿಸಿ’ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೆಹಲಿಯ ಶಾಲೆಗಳು ಈ ಮಟ್ಟಕ್ಕೆ ಬೆಳೆಯಲು‌ ಮನುಷ್ಯನ ಇಚ್ಛಾಶಕ್ತಿ ಕಾರಣ. ಅಲ್ಲಿನ ಸರ್ಕಾರ ಖಾಸಗಿ ಸಂಸ್ಥೆಗಳನ್ನು ಹೊಂದಿರುವವರನ್ನು‌ ತಮ್ಮೊಂದಿಗೆ ಸೇರಿಸಿಕೊಂಡಿಲ್ಲ. ಆ ಶಕ್ತಿ ಕರ್ನಾಟಕದ ರಾಜಕಾರಣಕ್ಕೆ ಇಲ್ಲ. ನಮಗೆ ಸರ್ಕಾರಿ, ಖಾಸಗಿ ಎಲ್ಲಾ ಸಂಸ್ಥೆಗಳು ಬೇಕು ಎನ್ನುತ್ತಿದ್ದೇವೆ. ದೆಹಲಿಯಲ್ಲಿ ಖಾಸಗಿ ಶಾಲೆಗಳಿಂದ ತಮ್ಮ ಮಕ್ಕಳನ್ನು ತೆಗೆದು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ನಮ್ಮ ರಾಜ್ಯದಲ್ಲಿ‌ಹಣವಿಲ್ಲವೆಂದಲ್ಲ. ಇಚ್ಛಾಶಕ್ತಿ ಬೇಕು ಎಂದಿದ್ದಾರೆ.

ದೇಶವನ್ನು, ಜನರನ್ನು ಪ್ರೀತಿಸುವ ನಾವು ಯಾವುದೇ ಒಳ್ಳೆಯ ಬೆಳವಣಿಗೆಗಳನ್ನು ಬೆಂಬಲಿಸಬೇಕು. ಆಗ ಒಳ್ಳೆಯ ಜನಪ್ರತಿನಿಧಿಗಳಾಗಲು‌ ಸಾಧ್ಯ. ನಾನು‌ ಈ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ್ದನ್ನು ಹುಚ್ಚು ಎಂದು ಮೂದಲಿಸುವವರು ಇದ್ದಾರೆ. ಒಳ್ಳೆಯ ಉದ್ದೇಶ ಇರುವ ಈ ಹುಚ್ಚಿನಲ್ಲಿಯೇ ಇರಲು ನಾನು ಇಷ್ಟಪಡುತ್ತೇನೆ. ನನಗೆ ದೇಶ, ಜನ ಮುಖ್ಯ, ಹಾಗಾಗಿ ಒಳ್ಳೆಯದನ್ನು ಬೆಂಬಲಿಸುತ್ತಿದ್ದೇನೆ. ಈ ಹೋರಾಟವನ್ನು‌ ಬೆಳೆಸಿ‌ ಒಂದು ಹೊಸರೂಪ‌‌ ನೀಡೋಣ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜಕೀಯ ನಿವೃತ್ತಿ ಎಂಬ ವದಂತಿ; ಸ್ಪಷ್ಟನೆ ನೀಡಿದ ಮಾಜಿ ಸ್ಪೀಕರ್!

ನಿಷ್ಕ್ರಿಯಗೊಂಡಿದ್ದ ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ ಶಾಸನಕ್ಕೆ‌ ಮರುಜೀವ ನೀಡಲು ನಾನು ಹೊರಟಾಗ ಎಲ್ಲಾ ಪಕ್ಷಗಳೂ‌ ವಿರೋಧ‌ಮಾಡಿದವು. ನನ್ನ ಸ್ಥಿತಿ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ಅಭಿಮನ್ಯುವಿನಂತಾಗಿತ್ತು. ಹೈಕೋರ್ಟ್ ಗೆ ಸಾರ್ವಜನಿಕ ‌ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಯಿತು. ನಮ್ಮ ಅಹವಾಲು ಇದ್ದದ್ದು ಆ‌ ಶಾಸನದಲ್ಲಿ ಇದ್ದಂತೆ ಸಾವನ್ನಪ್ಪಿದ ರೋಗಿಯ ಮನೆಯವರಿಗೆ ಹಣದ ಅಗತ್ಯ ಇದ್ದಲ್ಲಿ‌ಹಣ ನೀಡಬೇಕು ಎಂಬುದು. ಮುಖ್ಯ ನ್ಯಾಯಾಧೀಶರು ತಕ್ಷಣ ಆದೇಶ ನೀಡಿದರು. ನಮಗೆ ಇನ್ನೊಬ್ಬರ ಸಾವಿನ ಬಗ್ಗೆ ಕರುಣೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ ಎಲ್ಲಾ ಪಕ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾಯಕರು ಇದ್ದಾರೆ. ಹೀಗಾಗಿ ಇವರು ಪೋಷಕರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಇದಕ್ಕೆ ವ್ಯಾಪಕ ಚಳುವಳಿಯ ಅಗತ್ಯವಿದೆ. ನಾವು ಕೇಳಬೇಕಾಗಿರುವುದು ಇಷ್ಟೇ, ದೆಹಲಿಯ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಗಿದ್ದು ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ನಮ್ಮ ನಾಯಕರಲ್ಲಿ ಇಷ್ಟನ್ನೇ ಕೇಳಬೇಕಿದೆ ಎಂದು ರಮೇಶ್‌ ಕುಮಾರ್ ಹೇಳಿದ್ದಾರೆ.

ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಬೇಕು. ಫೀಸ್ ಹೆಚ್ಚಳವನ್ನು ಪ್ರಶ್ನಿಸಬೇಕು. ಇದಕ್ಕಾಗಿ ನಿರಾಶರಾಗದೆ‌ ಹೋರಾಡಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಇದನ್ನೂ ಓದಿ: ನಾನು ದೆಹಲಿ ಸಿಎಂ ಕೇಜ್ರಿವಾಲ್‌ ಅವರ ದೊಡ್ಡ ಅಭಿಮಾನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights