ಹೆಚ್ಚು ಜನಸಂದಣಿ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲುವುದಿಲ್ಲ; ಮೆಟ್ರೋ ನಿಯಮಾವಳಿಗಳು!

ಕೊರೊನಾ ಸೋಂಕಿನ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ಸಂಚಾರ ಸೆ.07 (ಸೋಮವಾರ)ದಿಂದ ಮತ್ತೆ ಆರಂಭವಾಗಲಿದೆ. ಸೆ.7ರಿಂದ ನೇರಳೆ ಮಾರ್ಗದಲ್ಲಿ ಮತ್ತು ಸೆ.9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ. ಸೆಪ್ಟೆಂಬರ್ 11ರಿಂದ ಎಲ್ಲಾ ರೈಲುಗಳು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಎರಡು ಮಾರ್ಗದಲ್ಲಿ ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಪ್ರತಿನಿತ್ಯ ಜನದಟ್ಟಣೆಯ ಅವಧಿಯಲ್ಲಿ ಪ್ರತಿ 5 ನಿಮಿಷಕ್ಕೊಂದಂತೆ ಹಾಗೂ ಬೇರೆ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ಸಂಚರಿಲಿದೆ. ಅಲ್ಲದೆ, ಪ್ರತಿ ರೈಲಿನಲ್ಲಿ 400 ಪ್ರಯಾಣೀಕರಿಗೆ ಮಾತ್ರ ಅವಕಾಶವಿದೆ. ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚಿದ್ದರೆ, ಜನದಟ್ಟಣೆ ನಿರ್ವಹಿಸಲು ಸಾಧ್ಯವಾಗದಿದ್ದರೇ ಅಂತಹ ನಿಲ್ದಾಣಗಳನ್ನು ರೈಲು ನಿಲ್ಲದೆ ಮುಂದಿನ ನಿಲ್ದಾಣದಲ್ಲಿ ರೈಲು ನಿಲುಗಡೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ನಿರ್ಧರಿಸಿದೆ.

ದಟ್ಟಣೆ ತಪ್ಪಿಸಲು ಟೋಕನ್‌ ಮಾರಾಟವನ್ನು ನಿಷೇಧಿಸಲಾಗಿದ್ದು, ಮೆಟ್ರೋದಲ್ಲಿ ಓಡಾಟ ನಡೆಸುವವರು  ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬೇಕು. ಕಾರ್ಡ್ ರಿಚಾರ್ಜ್‌ ಮಾಡಿಸಿದ ಏಳು ದಿನದೊಳಗೆ ಆ ಕಾರ್ಡ್‌ ಮೂಲಕ ಪ್ರಯಾಣ ಮಾಡಬೇಕು. ಈ ಮೊದಲು ರಿಚಾರ್ಜ್ ಮಾಡಿದ ಸ್ಮಾರ್ಟ್ ಕಾರ್ಡ್ ಬಳಸಲು 60 ದಿನಗಳ ಸಮಯವಿತ್ತು. ಈಗ ಕೇವಲ 7 ದಿನಕ್ಕೆ ಇಳಿಸಲಾಗಿದೆ. ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್‌ಕೋಡ್ ಅಥವಾ ಪೇಟಿಎಂ ಮೂಲಕ ರಿಚಾರ್ಜ್ ಮಾಡಿಕೊಲ್ಳಬಹುದು. ಸೆ.7ರಿಂದ ಮೊಬೈಲ್‌ ಆ್ಯಪ್‌ ಬಳಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಸ್ಮಾರ್ಟ್ ಕಾರ್ಡ್‌‌ಗಳನ್ನು ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಗೇಟ್ ರೀಡರ್‌ನಿಂದ 3 ಸೆಂ.ಮೀ ದೂರದಿಂದಲೇ ಪ್ರಸ್ತುತಪಡಿಸಬೇಕು.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹತ್ತಲು ಮತ್ತು ಇಳಿಯಲು 60 ಸೆಕೆಂಡುಗಳ ಕಾಲ ರೈಲು ನಿಲ್ಲಿಸಲಾಗುತ್ತದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಮಾತ್ರ 75 ಸೆಕೆಂಡುಗಳು ರೈಲು ನಿಲುಗಡೆ ಮಾಡುವುದಾಗಿ ನಿಗಮ ತಿಳಿಸಿದೆ.

ಕಂಟೈನ್‌ ‌ಮೆಂಟ್‌ ವಲಯಗಳಲ್ಲಿ ಬರುವ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ನಿಲುಗಡೆಯನ್ನು ನಿರ್ಬಂಧಿಸಲಾಗಿದ್ದು, ಆ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಬಾಗಿಲುಗಳನ್ನು ತೆರೆಯುವುದಿಲ್ಲ. ಆಗ ಪ್ರಯಾಣಿಕರು ತಮಗೆ ಹತ್ತಿರದ ನಿಲ್ದಾಣವನ್ನು ಅವಲಂಬಿಸಲಬೇಕಾಗುತ್ತದೆ.

ಮೆಟ್ರೋ ಪ್ರಯಾಣಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯವಾಗಿದೆ.  ಪ್ರವೇಶ ದ್ವಾರ, ನಿರ್ಗಮನ ದ್ವಾರ ಹಾಗೂ ಪ್ಲಾಟ್ ಫಾರ್ಮ್‌ನಲ್ಲಿ ಹಳದಿ ಗುರುತಿನ ಜಾಗದಲ್ಲಿ ನಿಲ್ಲಬೇಕು ಜೊತೆಗೆ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರಿಗೆ ಕೇವಲ ಒಂದು ಬ್ಯಾಗ್ ತರಲು ಮಾತ್ರ ಅನುಮತಿ ನೀಡಲಾಗಿದೆ. ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶವಿದೆ. ಸೀನುವಿಕೆ, ಕೆಮ್ಮು ಮತ್ತು ಉಸಿರಾಟದ ಲಕ್ಷಣಗಳು, 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಇರುವವರ ಪ್ರವೇಶ ನಿರ್ಬಂಧಿಸಲಾಗುತ್ತದೆ.

ಬಿಎಂಆರ್‌ಸಿಎಲ್ ತನ್ನ ಪ್ರಯಾಣಿಕರ ಆರೋಗ್ಯ ದೃಷ್ಠಿಯಿಂದ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಸ್ವಚ್ಛತೆಗೆ ಆದ್ಯತೆ ನೀಡಿದೆ. ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಬಾಕ್ಸ್‌ಗಳನ್ನು ಹಾಕಲಾಗಿದ್ದು, ರೈಲುಗಳಲ್ಲಿ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: “ಮಹಾನಾಯಕ” ಧಾರವಾಹಿ ಪ್ರಸಾರ ನಿಲ್ಲಿಸುವಂತೆ ಬೆದರಿಕೆ: ರಾಘವೇಂದ್ರ ಹುಣಸೂರು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights