ಡಿ 7,8 ರಂದು ಸಚಿವಾಕಾಂಕ್ಷಿಗಳ ಸಭೆ : ಸಿಪಿ ಯೋಗೇಶ್ವರ್ ಗೆ ಮಂತ್ರಿಯೋಗ ತಪ್ಪಿಸಲು ತಂತ್ರ?

ಯಾವಾಗ ಸಿಎಂ ಯಡಿಯೂರಪ್ಪ ವಿಧಾನಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ನೂರಕ್ಕೆ ನೂರು ಕೊಡುತ್ತೇವೆ ಎಂದರೋ ಆಗಿನಿಂದ ಮತ್ತಷ್ಟು ಮೂಲ ಬಿಜೆಪಿಗರಲ್ಲಿ ಅಸಮಧಾನ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಡಿ 7,8 ರಂದು ಸಚಿವಾಕಾಂಕ್ಷಿಗಳ ಸಭೆ ನಡೆಯಲಿದ್ದು, ಈ ವೇಳೆ ಸಿಪಿ ಯೋಗೇಶ್ವರ್ ಗೆ ಮಂತ್ರಿಯೋಗ ತಪ್ಪಿಸಲು ತಂತ್ರ ರೂಪಿಸಲಾಗುತ್ತಾ ಎನ್ನುವ ಅನುಮಾನ ಸೃಷ್ಟಿಯಾಗಿದೆ.

ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಸಿಗುವುದಾದರೆ ಗೆದ್ದ ನಮಗ್ಯಾಕೆ ಇಲ್ಲ ಅನ್ನೋ ಪ್ರಶ್ನೆ ಮೂಲ ಬಿಜೆಪಿಗರಲ್ಲಿ ಹುಟ್ಟಿಸಿದೆ. ಹೌದು…. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷ ತೊರೆದು ಬಿಜೆಪಿ ಸೇರಿದ 17 ಶಾಸಕರಿಂದ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಇದರಿಂದ ವಲಸೆ ಬಿಜೆಪಿಗರಿಗೆ ಸಚಿವ ಸ್ಥಾನದ ಮಣೆ ಹಾಕಲಾಗುತ್ತಿದೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದ್ದ ಸಿಪಿ ಯೋಗೇಶ್ವರ್ ಅವರಿಗೂ ಸದ್ಯ ಸಚಿವ ಸ್ಥಾನ ನೀಡಬೇಕು ಎನ್ನುವ ಲಾಬಿ ನಡೆದಿದೆ.

ಸಚಿವ ರಮೇಶ್ ಜಾರಕಿಹೊಳಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಆದರೆ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವು ಬಿಎಸ್‌ವೈ ಆಪ್ತರು ಸಿಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡದಂತೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ತಮ್ಮ ಆಪ್ತರ ವಿರೋಧಕ್ಕೂ ಮಣಿಯದ ಸಿಎಂ ಬಿಸ್‌ ಯಡಿಯೂರಪ್ಪ, ಯೋಗೇಶ್ವರ್‌ಗೆ ಸಚಿವ ಸ್ಥಾನ ಪಕ್ಕಾ ಅನ್ನೋದನ್ನ ಖಾತರಿಪಡಿಸಿದ್ದಾರೆ. ಆ ಮೂಲಕ ರಮೇಶ್ ಜಾರಕಿಹೊಳಿ ಮೂಲಕ ಲಾಬಿ ನಡೆಸಿದ್ದ ಸಿ.ಪಿ ಯೋಗೇಶ್ವರ್‌, ಮಂತ್ರಿಗಿರಿ ಪದವಿಯ ಬಗ್ಗೆ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ.

ಈ ನಿರ್ಧಾರ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಅಸಮಧಾನದ ಹೊಗೆ ಆಡಲು ಆರಂಭವಾಗಿದೆ. ಈ ಬಗ್ಗೆ ಚರ್ಚಿಸಲು ಡಿ 7,8 ರಂದು ಸಚಿವಾಕಾಂಕ್ಷಿಗಳ ಸಭೆ ನಡೆಯಲಿದ್ದು, ಶಾಸಕ ರೇಣುಕಾಚಾರ್ಯ ಇದರ ನೇತೃತ್ವ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಭೆ ಬಳಿಕ  ಸಚಿವಾಕಾಂಕ್ಷಿಗಳು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights