ಮರಾಠ ಅಭಿವೃದ್ಧಿ ನಿಗಮ: ಆದೇಶ ಹಿಂಪಡೆಯದಿದ್ದರೆ ಡಿ.05ಕ್ಕೆ ಕರ್ನಾಟಕ ಬಂದ್‌!

ರಾಜ್ಯದ ಬಿಜೆಪಿ ಸರ್ಕಾರ ಚುಣಾವಣಾ ಗಿಮಿಕ್‌ಗಾಗಿ ಮರಾಠ ಅಭಿವೃದ್ಧಿ ಒಕ್ಕೂಟವನ್ನು ರಚಿಸಲು ಆದೇಶಿಸಿದೆ. ಸರ್ಕಾರದ ಆದೇಶದ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನ.27ರ ಒಳಗೆ ತನ್ನ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲವಾದರೆ, ಡಿ.05 ರಂದು ಕರ್ನಾಟಕ‌ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಕರ್ನಾಟಕದಲ್ಲಿ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವುದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಯಾದರೆ ಕನ್ನಡಿಗರಿಗೆ ಅಂತ್ಯ ಹಾಡಿದಂತೆ. ಡಿ.5ರಂದು ಕರ್ನಾಟಕ ಬಂದ್ ಕುರಿತು ನ.27ರ ವೇಳೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಷ್ಟರೊಳಗೆ ರಾಜ್ಯ ಸರ್ಕಾರ ಈ ತೀರ್ಮಾನವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನವನ್ನು ಕರಾಳ ದಿನವನ್ನಾಗಿ ಆಚರಿಸುವ ಮರಾಠರಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಿ ರೂ.50 ಕೋಟಿ ಅನುದಾನ ನೀಡಿರುವ ಸರ್ಕಾರದ ತೀರ್ಮಾನದ ವಿರುದ್ಧ ಕನ್ನಡ ಸಂಘಟನೆಗಳು ಕಿಡಿ ಕಾರಿವೆ.

ಬೀದರ್ ಜಿಲ್ಲೆ, ಬೆಳಗಾವಿ ಮತ್ತು ಬಸವಕಲ್ಯಾಣದಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮರಾಠಿಗರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದರು.


Read Also: ವಿಜಯೇಂದ್ರರ ವಿಜೃಂಭಣೆಗೆ ಅಭ್ಯಂತರವಿಲ್ಲ; ಆದರೆ, ಗೆಲುವು ಒಬ್ಬರಿಂದ ಅಲ್ಲ: ಸಚಿವ ಈಶ್ವರಪ್ಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights