ರೈತರ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರ ಪಟ್ಟಿ ಇದು; ಇವರನ್ನು ಕ್ಷಮಿಸಬಹುದೇ?

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈತರ ಧೀರ್ಘ ಮತ್ತು ದಿಟ್ಟ ಹೋರಾಟದ ಎದುರು ಮಂಡಿಯೂರಿದೆ. ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ. ಒಂದು ವರ್ಷದಿಂದ ಧೀರೋಧಾತ್ತ ಹೋರಾಟ ನಡೆಸಿದ ರೈತರು ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ಆದರೆ ಈ ಹೋರಾಟದಲ್ಲಿ ರೈತರು ತೆತ್ತ ಬಲೆ ಅಪರಿಮಿತವಾದುದು. 700 ಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ತೆತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಇಡಿ ಒಂದು ವರ್ಷ ರೈತರನ್ನು ಕೆಟ್ಟ ಪದಗಳಿಂದ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಟೀಕಿಸಿದರು. ಇಲ್ಲಸಲ್ಲದ ಆರೋಪ ಹೊರಿಸಿದರು. ಅವರನ್ನು ಕ್ಷಮಿಸಲು ಸಾಧ್ಯವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ರೈತರನ್ನು ಅವಮಾನಿಸಿದ ಬಿಜೆಪಿ ನಾಯಕರು ಮತ್ತು ಅವರ ಆಧಾರ ರಹಿತ ಆರೋಪಗಳು, ಕೆಟ್ಟ ಹೇಳಿಕೆಗಳು ಕೆಳಗಿನಂತಿವೆ. ನೀವೂ ಓದಿ, ಅವರನ್ನು ಕ್ಷಮಿಸಬೇಕೊ? ಶಿಕ್ಷಸಬೇಕೊ ತೀರ್ಮಾನಿಸಿ.

2021ರ ಆಗಸ್ಟ್ 17 ರಂದು ಮೈಸೂರಿನಲ್ಲಿ ಮಾತನಾಡಿದ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು “ರೈತರ ಆದಾಯ ದ್ವಿಗುಣಕ್ಕೆ ಮೋದಿ ಕಾಯ್ದೆಗಳನ್ನು ತಂದಿದ್ದಾರೆ. ಇದನ್ನು ಸಹಿಸಿದವರು ಹೋರಾಟಕ್ಕೆ ಇಳಿದಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟ ದಲ್ಲಾಳಿಗಳ, ಮಧ್ಯವರ್ತಿಗಳ ಧರಣಿಯಾಗಿ ಬದಲಾಗಿದೆ” ಎಂದು ಹೇಳಿದ್ದರು.

2021ರ ಸೆಪ್ಟಂಬರ್ 21 ರಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿ, ದೆಹಲಿಯ ಗಡಿಗಳಲ್ಲಿ ಮತ್ತು ದೇಶದ ಇತರೆಡೆ ನಡೆಯುತ್ತಿರುವ ರೈತ ಹೋರಾಟವನ್ನು “ಕಾಂಗ್ರೆಸ್, ಫಾರಿನ್ ಏಜೆಂಟರ್, ಎಂಎಸ್‌ಪಿ ಏಜೆಂಟರ್ ರೈತ ಹೋರಾಟಕ್ಕೆ ಸ್ಪಾನ್ಸರ್ ಮಾಡುತ್ತಿದ್ದಾರೆ” ಎಂದು ಟೀಕಿಸಿದ್ದರು.

ಇನ್ನು ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ್ ಅಂತು “ಇದು ರೈತರ ಪ್ರತಿಭಟನೆಯಲ್ಲ, ಭಯೋತ್ಪಾದಕರ ಕೃತ್ಯ. ಖಾಲಿಸ್ತಾನ ಮತ್ತು ಕಾಂಗ್ರೆಸ್‌‌ನವರು ಇದರ ಹಿಂದೆ ಇದ್ದು, ಮೋದಿ ಬೆಳವಣಿಗೆ ಸಹಿಸದೆ ಹತಾಶರಾದವರು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ” ಎಂದು ಅಸೂಕ್ಷ್ಮವಾಗಿ ಮಾತನಾಡಿದ್ದರು.

ನಾಲಿಗೆ ಹರಿಯಬಿಟ್ಟ ಕೇಂದ್ರದ ನಾಯಕರು

“ನಿಮಗೆ ಪಾಠ ಕಲಿಸಲು ಎರಡು ನಿಮಿಷ ಸಾಕು” ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಹೇಳಿದ್ದರು. ಇದಾದ ಕೆಲವೇ ದಿನದಲ್ಲಿ ಅವರ ಮಗ ಆಶಿಸ್ ಮಿಶ್ರಾ ಮತ್ತು ಇನ್ನಿತರ ಬಿಜೆಪಿ ಮುಖಂಡರು ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮುಗಿಸಿ ವಾಪಸ್ ತೆರಳುತ್ತಿದ್ದ ರೈತರ ಮೇಲೆ ಕಾರು ಹರಿಸಿದರು. ನಾಲ್ವರು ರೈತರು ಸೇರಿ 8 ಜನರ ಕೊಲೆಗೆ ಕಾರಣರಾದರು.

“ಈ ಪ್ರತಿಭಟನೆ ಮಾಡುತ್ತಿರುವವರು ಖಲಿಸ್ತಾನ್‌ ಧ್ವಜ ಹಿಡಿದ ಭಯೋತ್ಪಾದಕರು” ಎಂದು ರಾಜಸ್ತಾನದ ದೌಸಾ ಕ್ಷೇತ್ರದ ಬಿಜೆಪಿ ಸಂಸದೆ ಜಸ್‌ ಕೌರ್‌ ಮೀನಾ ನಾಳಿಗೆ ಹರಿಬಿಟ್ಟಿದ್ದರು. ಅಲ್ಲದೆ ಈ ಪ್ರತಿಭಟನಾ ನಿರತ ರೈತರಲ್ಲಿ ಎ.ಕೆ.-47 ಕೂಡಾ ಇದೆ ಎಂದು ಅವರು ಆಪಾದಿಸಿದ್ದರು.

“ಹೋರಾಟನಿರತ ರೈತರು ಬಿರಿಯಾನಿ ತಿನ್ನುವ ಮೂಲಕ ಇಡೀ ದೇಶಕ್ಕೆ ಹಕ್ಕಿ ಜ್ವರ ಹರಡುತ್ತಿದ್ದಾರೆ” – ರಾಜಸ್ಥಾನದ ರಾಮ್‌ಗಂಜ್‌ ಮಂಡಿ ಕ್ಷೇತ್ರದ ಬಿಜೆಪಿ ಶಾಸಕ ಮದನ್ ದಿಲಾವರ್.

“ಖಲಿಸ್ತಾನಿಗಳು ಮತ್ತು ಮಾವೋವಾದಿಗಳು ಇವರು” ಎಂದು ಬಿಜೆಪಿ ಐಟಿಸೆಲ್ಲಿನ ಮುಖ್ಯಸ್ಥ ಅಮಿತ್‌ ಮಾಳವೀಯಾ ಮಾಡಿದ ಆರೋಪಿಸಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ 746 ರೈತರು ಆತ್ಮಹತ್ಯೆ; ದೇಶದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ

“ದೇಶದಲ್ಲಿ ಆಂದೋಲನ್ ಜೀವಿ ಎಂಬ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಪ್ರತಿ ಪ್ರತಿಭಟನೆಯಲ್ಲಿಯೂ ಅವರನ್ನು ನೋಡಬಹುದು, ಅವರು ದೇಶಕ್ಕೆ ಪರವಾಲಂಬಿಯಾಗಿದ್ದಾರೆ. ಶ್ರಮ ಜೀವಿ ಮತ್ತು ಬುದ್ದಿಜೀವಿ ಎಂಬ ಪದಗಳನ್ನು ಕೇಳಿದ್ದೇವೆ. ಆದರೆ, ಈ ದೇಶದಲ್ಲಿ ಕೆಲವು ಸಮಯದಿಂದ ಆಂದೋಲನ್ ಜೀವಿ ಎಂಬ ಹೊಸ ಪದವು ಅಸ್ತಿತ್ವಕ್ಕೆ ಬಂದಿರುವುದನ್ನು ನಾನು ನೋಡುತ್ತಿದ್ದೇನೆ. ವಿದ್ಯಾರ್ಥಿ ಹೋರಾಟದಲ್ಲಿಯೂ ಇರುತ್ತಾರೆ, ರೈತರ ಹೋರಾಟದಲ್ಲಿಯೂ ಇರುತ್ತಾರೆ.. – ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದ ಮಾತುಗಳಿವು.

“ಗೂಂಡಾಗಳು ರೈತರ ವೇಶದಲ್ಲಿ ಕೂತಿದ್ದಾರೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವೈ. ಸತ್ಯಕುಮಾರ್ ಇಲ್ಲಸಲ್ಲದ ಆರೋಪ ಹೊರಿಸಿದ್ದರು. ಖಲಿಸ್ತಾನಿ ಮತ್ತು ಜಿಹಾದಿ ಪಡೆಗಳು ಭಯೋತ್ಪಾದನೆ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದೂ ಈ ನಾಯಕ ಹೇಳಿದ್ದ.

“ರಾಷ್ಟ್ರ ವಿರೋಧಿ ಚಿಂತನೆಯ ಬೀಜಗಳನ್ನು ಹೊಂದಿರುವವರು ದಿಶಾ ರವಿಯಾದರೂ ಸರಿ ಅಥವಾ ಬೇರೆಯವರಾದರೂ ಸರಿ, ಅದನ್ನು ಸಂಪೂರ್ಣವಾಗಿ ನಾಶಮಾಡಬೇಕು” – ಅನಿಲ್ ವಿಜ್, ಹರಿಯಾಣದ ಗೃಹ ಸಚಿವ.

“ಉಗ್ರವಾದಿಗಳು ಚಳವಳಿಯನ್ನು ಹೈಜಾಕ್‌ ಮಾಡಿದ್ದಾರೆ. ಖಲಿಸ್ತಾನಿ ಮತ್ತು ಪಾಕಿಸ್ತಾನ ಪರ ಘೋಷಣೆಗಳನ್ನು ಪ್ರತಿಭಟನಾ ನಿರತ ರೈತರು ಕೂಗಿದ್ದಾರೆ” ಎಂದು ಮತ್ತೊಬ್ಬ ಬಿಜೆಪಿ ಕಾರ್ಯದರ್ಶಿ ದುಷ್ಯಂತ್‌ ಕುಮಾರ್‌ ಗೌತಮ್ ಮನಬಂದಂತೆ ಮಾತನಾಡಿದ್ದರು.

ಅವರು ಮನೆಯಲ್ಲಿದ್ದರೂ ಸಾಯುತ್ತಿದ್ದರು. ಕೆಲವು ರೈತರು ಸಹಾನುಭೂತಿಗಾಗಿ ಮತ್ತು ಕೆಲವರು ಜಾತಿಯ ಕಾರಣದಿಂದಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು – ಹೋರಾಟದ ಕಣದಲ್ಲಿ ಹುತಾತ್ಮರಾದ ರೈತರ ಕುರಿತು ಹರಿಯಾಣ ಕೃಷಿ ಸಚಿವ ಜೆ.ಪಿ. ದಲಾಲ್ ಹೇಳಿಕೆ.

ಇದನ್ನೂ ಓದಿ: ರೈತ ಹೋರಾಟ: ಸರ್ವಾಧಿಕಾರಿ ಎಷ್ಟೇ ಬಲಶಾಲಿಯಾಗಿದ್ದರೂ, ಜನಶಕ್ತಿಗೆ ಮಣಿಯಲೇಬೇಕು: ಸಿದ್ದರಾಮಯ್ಯ

“ಅನಪೇಕ್ಷಿತ ಪಡೆಗಳು ಇಲ್ಲಿವೆ. ಇವು ಮುಕ್ತವಾಗಿ ಖಲಿಸ್ತಾನವನ್ನು ಬೆಂಬಲಿಸುತ್ತಿವೆ. ಕಿಸಾನ್ ಎಂಬ ಪದವು ಪವಿತ್ರವಾಗಿದೆ, ಅದನ್ನು ಎಲ್ಲರೂ ಗೌರವದಿಂದ ಕಾಣುತ್ತಾರೆ. ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ಈ ಪದವು ಕಳಂಕಿತವಾಗಿದೆ. ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಯನ್ನು ಕಸಿದುಕೊಳ್ಳಲಾಗಿದೆ, ಕೊಲೆಗಳು ನಡೆಯುತ್ತಿವೆ, ರಸ್ತೆಗಳು ನಿರ್ಬಂಧಿಸಲ್ಪಟ್ಟಿವೆ. ಇದು ಪ್ರಜಾಪ್ರಭುತ್ವ ವಿರೋಧಿ ಘಟನೆಗಳಾಗಿದ್ದು, ನಾನು ಇದನ್ನು ಖಂಡಿಸುತ್ತೇನೆ” ಎಂದು ಹರ್ಯಾಣಾದ ಮುಖ್ಯಮಂತ್ರಿ ಎಂದು ಮನೋಹರ ಲಾಲ್‌ ಖಟ್ಟರ್ ಹೇಳಿದ್ದರು.

“ತುಕ್ಡೇ ಗ್ಯಾಂಗ್‌ ಈ ಪ್ರತಿಭಟನೆಯನ್ನು ಹೈಜಾಕ್‌ ಮಾಡಿದೆ” ಎಂದು ಬಿಹಾರದ ಭಾಜಪ ನಾಯಕ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದರು.

“ಅರಾಜಕತಾ ಷಡ್ಯಂತ್ರಗಳ ಪ್ರಯೋಗಪಶುಗಳು ಈ ರೈತರು” ಎಂದು ಆರ್‌ಎಸ್‌ಎಸ್‌ಮುಖಂಡ ಬಿ.ಎಲ್‌ ಸಂತೋಷ್ ಆರೋಪಿಸಿದ್ದರು.

“ಕರಾಳ ಷಡ್ಯಂತ್ರ. ತುಕುಡೇ ಗ್ಯಾಂಗ್‌ ಈ ಚಳವಳಿಯ ನೇತೃತ್ವ ಕಸಿದುಕೊಂಡಿದ್ದು ಕರಾಳ ಹುನ್ನಾರ ಹೊಂದಿದೆ” ಎಂದು ಆಗಿನ ಕೇಂದ್ರ ಕಾನೂನುಸಚಿವ ರವಿಶಂಕರ್‌ ಪ್ರಸಾದ್ ಹೇಳಿದ್ದರು.

”ಈ ಪ್ರತಿಭಟನೆಗಳ ಹಿಂದೆ ಚೀನಾ ಮತ್ತು ಪಾಕಿಸ್ತಾನ ಇವೆ. ಈ ಚಳವಳಿ ರೈತರದ್ದಲ್ಲ. ಇದರಲ್ಲಿ ಖಂಡಿತ ಚೀನಾ ಮತ್ತು ಪಾಕಿಸ್ತಾನದ ಕೈವಾಡ ಇದೆ” ಎಂದು ಕೇಂದ್ರ ಮಂತ್ರಿ ರಾವ್‌ ಸಾಹೇಬ್‌ ದನ್ವೆ ಹೇಳಿದ್ದರು. ಹಾಗಾದರೆ ಈಗ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡು ಚೀನಾ ಮತ್ತು ಪಾಕಿಸ್ತಾನದ ಎದುರು ಸೋಲಪ್ಪಿಕೊಂಡರು ಅರ್ಥವೇ?

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯನ್ನು ಅತ್ಯಾಚಾರಗೈದು ಕೊಂದ ತಂದೆ; ನೇಣು ಬಿಗಿದ ಸ್ಥಿತಿಯಲ್ಲಿ ಆಕೆಯ ಪತಿಯ ಮೃತದೇಹ ಪತ್ತೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights