‘ಅನ್ಯ ಪಕ್ಷಗಳ ಲಿಂಗಾಯತ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ’ – ಡಿಕೆಶಿ

‘ಬೇರೆ, ಬೇರೆ ಪಕ್ಷಗಳ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳುವ ಮೂಲಕ ರಾಜ ರಾಜಕೀಯದಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ಹೇಳಿದರು.

‘ಅನ್ಯ ಪಕ್ಷಗಳ ಬಹಳಷ್ಟು ಮಂದಿ ಲಿಂಗಾಯತ ಸಮುದಾಯದ ನಾಯಕರು, ಕಾರ್ಯಕರ್ತರು ನಮ್ಮ ಪಕ್ಷದತ್ತ ಮುಖ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಅವರು ಸೇರಿದಂತೆ ಸಮುದಾಯದ ಅನೇಕ ನಾಯಕರು ಇದ್ದಾರೆ. ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಶಾಸಕರು ಇದ್ದಾರೆ, ನಾಯಕತ್ವ ಗುಣ ಇರುವವರೂ ಇದ್ದಾರೆ. ಈ ಸಮುದಾಯದ ಅನೇಕ ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಈಗಲೇ ಆ ಬಗ್ಗೆ ಹೆಚ್ಚಿನ ವಿವರ ನೀಡುವುದಿಲ್ಲ. ಅವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೆಚ್ಚಿನ ಮಾಹಿತಿ ನೀಡುತ್ತೇನೆ.

ಸಾಂಪ್ರದಾಯಿಕ ವೃತ್ತಿ ಅವಲಂಬಿತರ ಹಿತ ಕಾಯಲು ಸಂವಾದ:

ಈ ಭಾಗದಲ್ಲಿ ಮಳೆ ಆಗುತ್ತಿದ್ದು ರೈತರಲ್ಲಿ ಸಂತಸವಿದೆ. ಇಂದು ಮತ್ತು ನಾಳೆ ಬಿಜಾಪುರ, ಬಾಗಲಕೋಟೆಯಲ್ಲಿ ಬಂಜಾರ ಸಮಾಜದ ತಾಂಡಾಗಳಿಗೆ ಭೇಟಿ ನೀಡುತ್ತೇನೆ. ಇದರ ಜತೆಗೆ ನೇಕಾರರು ಹಾಗೂ ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳುತ್ತೇನೆ.

ಕೋವಿಡ್ ಸಮಯದಲ್ಲಿ ಅವರಿಗೆ ಆಗಿರುವ ತೊಂದರೆಗಳೇನು, ಮುಂದೆ ನಾವೇನು ಮಾಡಬಹುದು? ಅವರಿಗೆ ಯಾವ ರೀತಿ ಕಾರ್ಯಕ್ರಮ ರೂಪಿಸಬಹುದು? ಅವರ ಬೇಡಿಕೆ ಏನು? ಅವರ ರಕ್ಷಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಅರಿಯಬೇಕಿದೆ. ಹೀಗಾಗಿ ಅವರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಲು ಅವರ ಜತೆ ಖುದ್ದಾಗಿ ಸಂವಾದ, ಚರ್ಚೆ ಮಾಡಲು ಬಂದಿದ್ದೇನೆ.

ನಾನು ಈಗಾಗಲೇ ಕರಾವಳಿ ಭಾಗದ ಮೀನುಗಾರರನ್ನು ಭೇಟಿ ಮಾಡಿದ್ದು, ಅವರ ಸಮಸ್ಯೆಗಳು ಭೀಕರವಾಗಿವೆ. ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಹಾಗೂ ಅನ್ನ ನೀಡಲು ಜೀವ ಪಣಕ್ಕಿಟ್ಟು ಶ್ರಮಿಸುತ್ತಿದ್ದಾನೆ.

ಮುಂದೆ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ವಿವಿಧ ಸಮುದಾಯಗಳನ್ನು ಭೇಟಿ ಮಾಡಲಿದ್ದೇನೆ. ಇವರು ತಮ್ಮ ವೃತ್ತಿ ಉಳಿಸಿಕೊಂಡು ನಮ್ಮ ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಿ ಪಕ್ಷದ ಕಾರ್ಯಕ್ರಮ ರೂಪಿಸಲು ಅವರ ಅಭಿಪ್ರಾಯ ಸಂಗ್ರಹಿಸಬೇಕಿದೆ.

ಚುನಾವಣೆ ಸದ್ಯದಲ್ಲಿ ಇಲ್ಲ. ಆದರೆ ಕೋವಿಡ್ ನಿಂದಾಗಿ ರಾಜಕೀಯ ಸಭೆ-ಸಮಾರಂಭಗಳಿಗೆ ನಿರ್ಬಂಧ ಹಾಕಿದ್ದಾರೆ. ಕೋವಿಡ್ ನಿಂದ ಅನೇಕರು ಸತ್ತಿದ್ದಾರೆ. ಅನೇಕರಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಲಾಗಿದ್ದರೂ, ಅದು ಯಾರಿಗೂ ತಲುಪಿಲ್ಲ. ಇಂತಹ ವಿಚಾರದಲ್ಲಿ ಜನರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲು ನಾವು ಕಾರ್ಯಕರ್ತರಿಗೆ ಹೇಳಿದ್ದೇವೆ.

ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದ್ದೇವೆ ಎಂದು ಸರಕಾರ ಎಲ್ಲ ಕಡೆ ಪ್ರಚಾರ ಪಡೆಯುತ್ತಿದೆ. ಆದರೆ ಎಲ್ಲೂ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ.

ಬೆಂಗಳೂರಿಗೆ ವಿಶೇಷ ಕಾರ್ಯಕ್ರಮ ಬೇಕು:

ಬೆಂಗಳೂರು ರಾಜ್ಯದ ಹೃದಯ ಭಾಗ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಿತ ಹಾಗೂ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಅಲ್ಲಿನ ನಾಯಕರ ಜತೆ ಚರ್ಚಿಸಿದ್ದೇವೆ. ಬೆಂಗಳೂರಿಗಾಗಿ ಪ್ರತ್ಯೇಕ ಹಾಗೂ ಆಕರ್ಷಕ ಕಾರ್ಯಕ್ರಮ ರೂಪಿಸಬೇಕಿದೆ’ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights