ಕರ್ನಾಟಕದ ರೈತ ಹೋರಾಟಗಾರರಿಂದ ಪ್ರಧಾನಿಗೆ ಪತ್ರ: ರೈತರು ಪತ್ರದಲ್ಲಿ ಹೇಳಿದ್ದೇನು?

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ದ ದೇಶದ ಮತ್ತು ಕರ್ನಾಟಕದ ರೈತರು ಅದನ್ನು ವಿರೋಧಿಸಿ ಹೋರಾಟ ಆರಂಭಿಸಿದ್ದಾರೆ. ಕರ್ನಾಟಕದ ದಲಿತ, ರೈತ ಮತ್ತು ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ ಮತ್ತು ಎಲ್ಲಾ ಪ್ರಗತಿಪರ, ಜನಪರ, ಕನ್ನಡಪರ ಸಂಘಟನೆಗಳು ರೈತರ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದು ಇಂದಿನ ಭಾರತ್ ಬಂದ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಟ್ಟಿ ಮತ್ತು ಸಮವರ್ತಿಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಏಕಪಕ್ಷೀಯವಾಗಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕೆಲವು ಕಾಯ್ದೆಗಳನ್ನು ತಂದಿರುವುದನ್ನು ನಾವು ಖಂಡಿಸುತ್ತೇವೆ. ಸದರಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು ಕೊರೊನಾ ಲಾಕ್‌ಡೌನ್ ಇದ್ದ ಸಂದರ್ಭದಲ್ಲೇ ಅವಸರದಲ್ಲಿ ಸುಗ್ರೀವಾಜ್ಞೆಯ ಮೂಲಕ ಅವುಗಳನ್ನು ಕೇಂದ್ರವು ಜಾರಿಗೆ ತಂದಿರುವುದರ ದುರುದ್ದೇಶ ನಮಗೆ ಅರ್ಥವಾಗಿದೆ. ಹೀಗಾಗಿ ದೇಶದ ಸಮಸ್ತ ರೈತರು, ರೈತ ಸಂಘಟನೆಗಳು ಮತ್ತು ಪ್ರಜ್ಞಾವಂತ ನಾಗರಿಕರು ಇದನ್ನು ವಿರೋಧಿಸುತ್ತಾ ಸ್ವಯಂಪ್ರೇರಿತ ಭಾರತ್ ಬಂದ್‌ನಲ್ಲಿ ಭಾಗಿಯಾಗುತ್ತೇವೆಂದು ಘೋಷಿಸಿದ್ದಾರೆ.

ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿಗೆ ಪ್ರತಿಭಟನಾ ಮೆರವಣಿಗೆ

ರೈತರ ಆಕ್ಷೇಪಗಳು, ಹೋರಾಟಕ್ಕೆ ಕಾರಣಗಳು

1. ಎಪಿಎಂಸಿ ಸೇರಿದಂತೆ ಈಗಿನ ವ್ಯವಸ್ಥೆಯಲ್ಲಿ ಲೋಪಗಳಿದ್ದವು. ರೈತರು ಕೇಳುತ್ತಿದ್ದದ್ದು ಈಗಿರುವ ವ್ಯವಸ್ಥೆಯ ಸಬಲೀಕರಣ. ನೀವು ಮಾಡಲು ಹೊರಟಿರುವುದು ಈಗಿರುವ ಅರೆಬರೆ ವ್ಯವಸ್ಥೆಯನ್ನೂ ಕಿತ್ತು ಹಾಕಿ ರೈತರನ್ನು ಬೀದಿಗೆ ತರುವುದು.
2. ಈ ಕಾಯ್ದೆಗಳ ಹೆಸರುಗಳು ದೊಡ್ಡ ಮೋಸ. ರೈತರನ್ನು ನಾಶ ಮಾಡಿ, ಕಾರ್ಪೋರೇಟ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಅಂಶಗಳೇ ಕಾಯ್ದೆಯಲ್ಲಿವೆ. ಆದರೆ ಹೆಸರು ಮಾತ್ರ ರೈತರ ಪರ. ಇದು ವಂಚನೆ.
3. ರೈತರು, ರೈತ ಸಂಘಟನೆಗಳು ಯಾರೂ ಇಷ್ಟು ವರ್ಷಗಳಲ್ಲಿ ಕೇಳದೇ ಇದ್ದುದನ್ನು ನೀವು ತರಲು ಹೊರಟಿದ್ದೀರಿ. ಇದನ್ನು ಸುಗ್ರೀವಾಜ್ಞೆಯಾಗಿ ತಂದ ಸಂದರ್ಭದಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ಆಗುತ್ತಲೇ ಇವೆ. ಆದರೂ ಏಕೆ ಮಸೂದೆ ತಂದು ಕಾಯ್ದೆ ಮಾಡಿದಿರಿ?
4. ದೇಶದ ಆರ್ಥಿಕತೆಯಲ್ಲಿ ಎಲ್ಲವೂ ಕುಸಿದಾಗಲೂ ಉಳಿದುಕೊಂಡಿದ್ದು ಕೃಷಿ. ಕೃಷಿ ಕ್ಷೇತ್ರಕ್ಕೆ ದೇಶದ ಶೇ.100ರಷ್ಟು ಜನರು ಗ್ರಾಹಕರು. ಹಾಗಾಗಿ ದೊಡ್ಡ ಉದ್ದಿಮೆಪತಿಗಳ ಕಣ್ಣು ಇದರ ಮೇಲೆ ಬಿದ್ದಿದೆ. ಈಗಿರುವ ಕಾಯ್ದೆಗಳು, ವ್ಯವಸ್ಥೆಯು ಅರ್ಧಂಬರ್ಧ ರಕ್ಷಣೆಯನ್ನು ರೈತರಿಗೆ ಒದಗಿಸುತ್ತಿದ್ದು, ಈ ದೊಡ್ಡ ಉದ್ದಿಮೆಪತಿಗಳು ಅದನ್ನೂ ಒಪ್ಪುತ್ತಿಲ್ಲ; ಹಾಗಾಗಿ ಇದನ್ನು ತರಲು ಹೊರಟಿದ್ದೀರಿ.
5. ಈಗಿರುವ ಕನಿಷ್ಠ ಬೆಂಬಲ ಬೆಲೆಯೇ ನ್ಯಾಯಯುತವಾಗಿಲ್ಲ; ನಮಗೆ ವೈಜ್ಞಾನಿಕ ಬೆಲೆ ಬೇಕು ಎಂದು ಕೇಳಿದ್ದೆವು. 2014ರ ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನು ನೀವೇ ಪ್ರಕಟಿಸಿದ್ದಿರಿ. ಆದರೆ ಈ 6 ವರ್ಷಗಳಲ್ಲಿ ಕನಿಷ್ಠ ಬೆಂಬಲ ಬೆಲೆಯು ಇನ್ನೂ ಕನಿಷ್ಠವಾಗುತ್ತಾ ಹೋಯಿತು. ಇದೀಗ ಅದನ್ನೂ ಕಿತ್ತು ಹಾಕಲು ಹೊರಟಿದ್ದೀರಿ.
6. ಇದುವರೆಗೆ ಸಣ್ಣ ವ್ಯಾಪಾರಿಗಳೊಂದಿಗೆ ವ್ಯವಹಾರ ಮಾಡುವುದೇ ನಮಗೆ ಕಷ್ಟವಾಗಿತ್ತು. ಆದರೂ ಈ ಸಣ್ಣ ವ್ಯಾಪಾರಿಗಳು ನಮಗೆ ಕೈಗೆ ಸಿಗುವವರು, ಅವರೊಂದಿಗೆ ಗುದ್ದಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದವು. ಆದರೆ ನೀವು ಅವರನ್ನೂ ಇಲ್ಲವಾಗಿಸಿ, ಕಣ್ಣಿಗೇ ಕಾಣದ ಭಾರೀ ದೊಡ್ಡ ಬಂಡವಾಳಶಾಹಿಗಳೊAದಿಗೆ ವ್ಯವಹಾರಕ್ಕೆ ನಮ್ಮನ್ನು ದೂಡುತ್ತಿದ್ದೀರಿ. ಉದ್ದೇಶ ಸ್ಪಷ್ಟ. ನೀವು ಅಂಬಾನಿ, ಅದಾನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದೀರಿ.
7. ನಿರಂತರ ಪ್ರತಿಭಟನೆ ನಡೆಸಿದವರ ದನಿಗೆ ಓಗೊಡದೇ, ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಬಂದಾಗ, ಹೆದ್ದಾರಿಗಳನ್ನು ಅಗೆದು ತಡೆಯೊಡ್ಡಿದ್ದೀರಿ. ಕೊರೆಯುವ ಛಳಿಯಲ್ಲಿ ಜಲಫಿರಂಗಿಗಳನ್ನು ಹಾರಿಸಿದ್ದೀರಿ; ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಅಪಪ್ರಚಾರ ಯಂತ್ರಾಂಗದ ಮೂಲಕ ರೈತ ಹೋರಾಟಗಾರರ ಮೇಲೆ ಅಪಪ್ರಚಾರ ನಡೆಸಿದ್ದೀರಿ. ಈಗಲೂ ಶಾಂತಿಯುತವಾಗಿರುವ ದೇಶದ ರೈತರು ಮತ್ತು ಪ್ರಜ್ಞಾವಂತ ನಾಗರಿಕರ ತಾಳ್ಮೆ ಪರೀಕ್ಷಿಸುತ್ತಿದ್ದೀರಿ.

ಬೆಂಗಳೂರಿನ ಟೌನ್ ಹಾಲ್ ಮುಂದೆ ಪ್ರತಿಭಟನೆ

ರೈತರ ಹಕ್ಕೊತ್ತಾಯಗಳೇನು?

1. ಕಳೆದ ವಿಧಾನ ಸಭೆಯಲ್ಲಿ ಅನುಮೋದನೆ ದೊರಕದಿದ್ದರೂ ಸುಗ್ರೀವಾಜ್ಞೆಗಳ ಮೂಲಕ ರಾಜ್ಯ ಸರ್ಕಾರ ರಾಜ್ಯದ ಜನರ ಮೇಲೆ ಹೇರಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಕೈಬಿಡಬೇಕು.
2. ಕೇಂದ್ರ ಸರ್ಕಾರವು ಸರ್ವಾಧಿಕಾರಿ ರೀತಿಯಲ್ಲಿ ಜಾರಿಗೆ ತಂದಿರುವ, ಎಪಿಎಂಸಿಯನ್ನು ನಗಣ್ಯಗೊಳಿಸುವ ತಿದ್ದುಪಡಿ ಕಾಯ್ದೆ, ಕಾರ್ಪೊರೇಟ್ ಪರವಾದ ಕಾಂಟ್ರಾಕ್ಟ್ ಕೃಷಿ ಕಾಯ್ದೆ ಹಾಗೂ ಕೃಷಿ ಕಂಪನಿಗಳಿಗೆ ಆಹಾರ ಧಾನ್ಯಗಳ ಕಳ್ಳ ದಾಸ್ತಾನಿಗೆ ಅನುವು ಮಾಡಿಕೊಡುವ ಅಗತ್ಯ ಸರಕುಗಳ ಕಾಯ್ದೆಗಳನ್ನು ರಾಜ್ಯ ಸರ್ಕಾರ ಧಿಕ್ಕರಿಸಬೇಕು.
3. ದಶಕಗಳಿಂದ ಫಾರಂ ನಂ. 50-53 ಹಾಗೂ 94ಸಿ/94ಸಿಸಿ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಬಡಜನರ ಭೂಮಿ ಮತ್ತು ಮನೆ/ನಿವೇಶನಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಮತ್ತು ಗಂಡ-ಹೆಂಡತಿ ಇಬ್ಬರ ಹೆಸರಿಗೆ ಜಂಟಿ ಖಾತೆ ನೀಡಬೇಕು.
4. ಎಪಿಎಂಸಿಯನ್ನು ಭ್ರಷ್ಟಮುಕ್ತಗೊಳಿಸಿ ಬಲಪಡಿಸಬೇಕು; ಸ್ವಾಮಿನಾಥನ್ ವರದಿಯನ್ನು ಜಾರಿಗೆ ತಂದು ರೈತರ ಬೆಳೆಗೆ ಸ್ಥಿರ ಮತ್ತು ನ್ಯಾಯಯುತ ಬೆಲೆ ಒದಗಿಸಬೇಕು
5. ಕಾರ್ಮಿಕ ಕಾಯ್ದೆಗಳನ್ನು ಕಾರ್ಮಿಕರ ಪರವಾಗಿ ಬಲಪಡಿಸಬೇಕು
6. ದಲಿತ–ದಮನಿತರ ಅಭಿವೃದ್ಧಿಗೆ ಮೀಸಲಾಗಿರುವ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳನ್ನು ದುರ್ಬಲಗೊಳಿಸದೆ ಮುಂದುವರಿಸಬೇಕು.
7. ಕನ್ನಡ ಭಾಷೆ ಹಾಗೂ ಕರ್ನಾಟಕದ ನೆಲ-ಜಲ-ಶ್ರಮ-ಸಂಪನ್ಮೂಲಗಳ ನೈಜ ಅಭಿವೃದ್ಧಿಗೆ, ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು.


ಇದನ್ನೂ ಓದಿ: ರೈತ ಪ್ರತಿಭಟನೆಯನ್ನು ಮೋದಿ ಸರ್ಕಾರ ಮಣಿಸಲಾಗದು: 05 ಕಾರಣಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights