ಮಾತಾಡುವ ಬಗೆ: ಮಕ್ಕಳೊಂದಿಗೆ ಮಾತಾಡುವುದ ಕಲಿತರೆ, ಎಲ್ಲರೊಂದಿಗೂ ಬೆರೆಯಬಹುದು: ಅದು ಹೇಗೆ?

ಯಾರೇ ಆಗಲಿ ಮಕ್ಕಳೊಂದಿಗೆ ಮಾತಾಡುವುದನ್ನು ಕಲಿತರೆ ಯಾರೊಂದಿಗಾದರೂ ಮಾತಾಡಬಲ್ಲರು ಮತ್ತು ತಮ್ಮ ವಿಚಾರವನ್ನು ಮನವರಿಕೆ ಮಾಡಿಕೊಡಬಲ್ಲರು. ಮಕ್ಕಳ ಜೊತೆ ಮಾತಾಡುವಾಗ ವಹಿಸಬೇಕಾದ ಎಚ್ಚರ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮತ್ತು ಸರಳವಾಗಿ ಇರಬೇಕಾಗುತ್ತದೆ.

ಮಾತಿನ ರೀತಿ

ಮಕ್ಕಳ ಜೊತೆ ನಿತ್ಯ ವ್ಯವಹರಿಸುವಂತಹ ಪೋಷಕರು, ಶಿಕ್ಷಕರು, ತರಬೇತಿದಾರರು ಮತ್ತು ಯಾರೇ ಹಿರಿಯರಾದರೂ ಒಂದು ಮಹಾಸತ್ಯವನ್ನು ಅರಿತುಕೊಳ್ಳಲೇಬೇಕು. “ನಾವು ಮಕ್ಕಳೊಂದಿಗೆ ಆಡುವ ಮಾತಿನ ರೀತಿಗಳೇ ಮಕ್ಕಳ ನೀತಿಗಳಾಗುತ್ತವೆ ಮತ್ತು ಒಳಧ್ವನಿಗಳಾಗುತ್ತವೆ.”

ಪೋಷಕರು ಮತ್ತು ಶಿಕ್ಷಕರು ಆಡುವ ಮಾತು ಮತ್ತು ಮಾತಿನ ರೀತಿ ಅದೆಷ್ಟು ಪ್ರಭಾವಿಸುತ್ತವೆಂದರೆ, ಮಕ್ಕಳಿಗೇ ಗೊತ್ತಿಲ್ಲದಂತೆ ಅದನ್ನು ತಮ್ಮೊಳಗೆ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಅದು ನಕಾರಾತ್ಮಕವಾಗಿದ್ದು, ಮುಂದೊಂದು ದಿನ ಮಕ್ಕಳು ಬೆಳೆದಾದ ಮೇಲೆ ಅದನ್ನು ತಿಳಿಯುತ್ತಾರೆಂದೇ ಇಟ್ಟುಕೊಳ್ಳಿ. ಆದರೆ ಅವರಿಗೆ ಅದರಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ಎಳೆಯದರಲ್ಲಿ ಟ್ಯೂನ್ ಆಗಿರುತ್ತಾರೆ. ಅದು ಈಗ ರೂಢಿಗತವಾಗಿರುತ್ತದೆ. ಅದೇ ಸ್ವಭಾವವೇ ಆಗಿಬಿಟ್ಟಿರುತ್ತದೆ. ಅಲ್ಲಿಗೆ ಮುಂದೆ ಮಾಡಬೇಕಾಗಿರುವುದು ತಮ್ಮ ಮನಸ್ಸಿಗೆ, ವರ್ತನೆಗಳಿಗೆ, ಸ್ವಭಾವಕ್ಕೆ ತರಬೇತಿ ಕೊಡುವಂತಹ ಮಹಾಸಾಹಸ ಮಾಡಬೇಕು.

ಮಾತಿನ ರೀತಿ ಎಂದರೆ ಹೇಗೆಲ್ಲಾ ಇರುತ್ತದೆ ಎಂಬುದನ್ನು ಸ್ವಲ್ಪ ಗಮನಿಸೋಣ

1. ಮಕ್ಕಳ ಎದುರು ದೊಡ್ಡವರು ಯಾವ ಪದಗಳನ್ನು ಉಪಯೋಗಿಸಿ ಮಾತಾಡುತ್ತಾರೆ.

2. ಮಕ್ಕಳ ಮಾತಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ. ನಕಾರಾತ್ಮಕವಾಗಿಯೋ, ಸಕಾರಾತ್ಮಕವಾಗಿಯೋ, ಭರವಸೆ ನೀಡುವಂತೆಯೋ, ಉಡಾಫೆಯಿಂದಲೋ, ಬೇಸರದಿಂದಲೋ, ಕೋಪದಿಂದಲೋ, ಗೊಂದಲಮಯವಾಗಿಯೋ, ಆಸಕ್ತಿಯಿಂದಲೋ, ಕಾಳಜಿಯಿಂದಲೋ, ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೋ; ಒಟ್ಟಾರೆ ಮಾತಾಡುವ ರೀತಿಯೆಂಬುದು ಭಾವವನ್ನೂ ಕೂಡ ಒಳಗೊಂಡಿರುತ್ತದೆ.

3. ಮಾತಿನಲ್ಲಿ ಸಂಬಂಧದ ಅಭಿವ್ಯಕ್ತಿ ಬಹಳ ಮುಖ್ಯವಾಗುತ್ತದೆ. ಕಾಳಜಿ ತೋರುವಂತೆ, ಪ್ರೀತಿ ತುಂಬಿರುವಂತೆ, ಸ್ನೇಹಪೂರ್ವಕವಾಗಿ, ತಿರಸ್ಕಾರದಿಂದಲೋ, ನೀನು ನನಗೆ ಮುಖ್ಯ ಎಂದೋ, ಅಮುಖ್ಯ ಎಂದೋ; ಹೀಗೆ ಸಂಬಂಧವನ್ನು ಬಲಪಡಿಸುವ ಅಥವಾ ಸಡಿಲಗೊಳಿಸುವ ರೀತಿಯೂ ಕೂಡ ಇದರಲ್ಲಿ ಒಳಗೊಂಡಿರುತ್ತದೆ.

4. ಮಕ್ಕಳಿಗೆ ಅರ್ಥವೇ ಆಗದೇ ಇರುವಷ್ಟರ ಮಟ್ಟಿಗೆ ಎಲ್ಲಾ ಮಾಹಿತಿಗಳನ್ನು ನೀಡುವಂತೆ ಮಾತಾಡಬಾರದು. ಹಾಗೆಯೇ ಮಾತಾಡುವ ರೀತಿಯಲ್ಲಿ ನಿನಗೆ ಏನೂ ಗೊತ್ತಿಲ್ಲ. ನಾನು ನಿನಗೆಲ್ಲಾ ಹೇಳುತ್ತಿದ್ದೇನೆ ಎನ್ನುವಂತೆಯೂ ಕೂಡಾ ಇರಬಾರದು. ಮುಖ್ಯವಾಗಿ ಏನೆಂದರೆ ಮಕ್ಕಳೇ ತಾವಾಗಿ ನಮ್ಮನ್ನು ಪ್ರಶ್ನಿಸುವಂತೆ ಮಾಡಿದರೆ ಅದು ಪೋಷಕ ಮತ್ತು ಶಿಕ್ಷಕ ಅಥವಾ ತರಬೇತುದಾರರ ಯಶಸ್ಸು.

5. ನಾವು ಆಡುವ ಮಾತಿನ ರೀತಿ ಅವರಲ್ಲಿ ಅನುರಣನಗೊಳ್ಳುತ್ತಿರುತ್ತದೆ. ಅನುರಣನವೆಂದರೆ ಮೊದಲು ಪ್ರಭಾವಿಸಿದ ಸಾಲು ಅಥವಾ ಮತ್ತೊಂದು ನಮ್ಮ ಮನಸ್ಸಿನೊಳಗೆ ಹೊಕ್ಕು ಅದನ್ನು ಮುಂದುವರಿಸುವಂತಹ ಧ್ವನಿ. ಅದೊಂದು ಸಂಮೋಹಕ್ಕೊಳಗಾಗಿರುವಂತೆ ಪದೇ ಪದೇ ಪುನರಾವರ್ತಿತವಾಗುತ್ತಿರುವಂತಹ ಮನದೊಳಗಿನ ಭಾವನೆ. ಗುಂಗುನಿಸುವುದು ಎಂದೂ ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಯಾವುದೋ ಕಾವ್ಯದ ಸಾಲುಗಳು, ಕಾದಂಬರಿಯ ಸನ್ನಿವೇಶಗಳು, ವಿಷಯಗಳು, ತತ್ವಗಳು ಮನದೊಳಗೆ ಹೊಕ್ಕು ನಮ್ಮೊಳಗೆ ಸದಾ ಪ್ರತಿಧ್ವನಿಸುವಂತೆ ಮಕ್ಕಳಿಗೂ ಕೂಡ ಅವರನ್ನು ಸಮೀಪದಿಂದ ಮಾತನಾಡಿಸುವ ರೀತಿಯು ಪ್ರೀತಿಯನ್ನು, ಸಂತೋಷವನ್ನು ಉಂಟುಮಾಡಿದಂತೆ ಅದು ಅನುರಣನಗೊಳ್ಳುತ್ತಿರುತ್ತದೆ. ಹಾಗೆಯೇ, ಒಂದು ವೇಳೆ ಹಿರಿಯರ ಮಾತಾಡುವ ರೀತಿ ಹೆದರಿಕೆಯನ್ನು ಹುಟ್ಟಿಸಿದರೆ, ಆತಂಕವನ್ನು ಹುಟ್ಟಿಸಿದರೆ, ಅನುರಣನಗೊಳ್ಳುವ ಬದಲು ದುಃಸ್ವಪ್ನದಂತೆ ಕಾಡುತ್ತಿರುತ್ತದೆ. ಅತಿಯಾದ ಬೋಧನೆಗಳು, ಅದರಲ್ಲೂ ಅವರ ವರ್ತನೆಗಳಲ್ಲಿ ಕಾಣದ ಬೋಧನೆಗಳು, ಸಿಕ್ಕಾಪಟ್ಟೆ ಜೀವನ, ಬದುಕು, ಭವಿಷ್ಯ ಎಂದೆಲ್ಲಾ ದೊಡ್ಡ ದೊಡ್ಡ ಪ್ರವಚನಗಳನ್ನು ಕೊಡುವುದರಿಂದ ಜಿಗುಪ್ಸೆ ಹೊಂದುತ್ತಾರೆ. ಒಟ್ಟಾರೆ ನಮ್ಮ ಮಾತಿನ ರೀತಿ ಅವರಲ್ಲಿ ಅನುರಣಿಸಬೇಕೇ ಹೊರತು, ದುಃಸ್ವಪ್ನವನ್ನೋ ಅಥವಾ ಜಿಗುಪ್ಸೆಯನ್ನು ಉಂಟು ಮಾಡಬಾರದೆಂಬುದೇ ತಾತ್ಪರ್ಯ.

6. ತಾವು ಮೆಚ್ಚುವ ಹಿರಿಯರ ಮಾತಿನ ರೀತಿಯನ್ನು ಮಕ್ಕಳು ತಮಗೇ ಅರಿವಿಲ್ಲದಂತೆ ಅನುಸರಿಸುತ್ತಿರುತ್ತಾರೆ. ಮೆಚ್ಚುಗೆಯೇ ಅನುಸರಿಸಲು ಮೊದಲ ಪ್ರೇರಣೆ.

7. ಹಿರಿಯರು ಮಕ್ಕಳಿಗೆ ಅರ್ಥವಾಗಲಿ ಬಿಡಲಿ ತಾವು ಹೇಳಲೇ ಬೇಕಾದನ್ನು ಪೂರ್ತಿ ಹೇಳಿಯೇ ತೀರುವಂತಹ ಧಾವಂತವನ್ನು ಖಂಡಿತವಾಗಿಯೂ ಹೊಂದಿರಬಾರದು. ಯಾಕೆಂದರೆ ಉದ್ದುದ್ದವಾದುದನ್ನು ಕೇಳಲು ಯಾವ ಮಕ್ಕಳಿಗೂ ಆಗುವುದಿಲ್ಲ. ಜೊತೆಗೆ ಚಿಕ್ಕದಾಗಿ ಹೇಳಿದರೆ ಅರ್ಥವಾಗುತ್ತದೆ. ಅವರಿಗೆ ಅರ್ಥವಾಗಿರುವುದನ್ನು ಅವರಿಂದ ಕೇಳಿ ತಿಳಿದು ಮತ್ತೆ ಮಾತಾಡಿದರೆ ಆ ಬಗೆ ಮಕ್ಕಳಿಗೆ ಇಷ್ಟವಾಗುತ್ತದೆ. ಜೊತೆಗೆ ತಮ್ಮ ಭಾಗವಹಿಸುವಿಕೆಯಿಂದ ಅವರಿಗೆ ಸಹಜವಾಗಿಯೇ ಕ್ರಿಯಾಶೀಲವಾಗುತ್ತಾರೆ.

8. ಪರಿಣಾಮಕಾರಿಯಾದ ಉದಾಹರಣೆಗಳನ್ನು ನೀಡುವುದೆಂದರೆ, ನೆಹರು, ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್‍ರವರ ಜೀವನದಿಂದ ಉದ್ದರಿಸಿದ ಸನ್ನಿವೇಶಗಳನ್ನು ಹೇಳುವುದಲ್ಲ. ಅವರು ತಾವು ಸಾಕ್ಷೀಕರಿಸುವ, ಅನುಭವಿಸುವ, ದಿನನಿತ್ಯ ಪರಿಚಯವಿರುವ ಸಂಗತಿಗಳನ್ನೇ ಉದಾಹರಣೆಯಾಗಿ ಹೇಳಬೇಕು. ಯಾರೇ ಮಹಾನ್ ವ್ಯಕ್ತಿಗಳ ಬಗ್ಗೆ ಪರಿಚಯಿಸಬೇಕಾದರೂ ಕೂಡಾ ಮಕ್ಕಳಿಗೆ ಅರಿವಿಗೆ ಬರದಿರುವ ಅನುಭವ ಮತ್ತು ಸಂಗತಿಗಳಿಗೆ ಸಾಮ್ಯತೆಗಳನ್ನು ಕಂಡುಕೊಂಡೇ ಹೇಳಬೇಕು. ಆಗ ಅವರಿಗೆ ಅದನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ.

9. ಮಕ್ಕಳ ಜೊತೆಗೆ ಆಡುವ ಪ್ರತಿ ಮಾತಿಗೊಂದು ಗುರಿ ಇರಬೇಕು. ಗೊತ್ತುಗುರಿ ಇಲ್ಲದೆ ಮಾತಾಡಬಾರದು ಎನ್ನುವುದನ್ನು ಮಕ್ಕಳೊಂದಿಗೆ ಆಡುವ ಪ್ರತಿ ಮಾತಿನಲ್ಲೂ ಗಮನವಹಿಸಬೇಕು. ಏನು ಮಾತಾಡುತ್ತಿದ್ದೇವೆ ಎಂಬುದು ಸ್ಪಷ್ಟವಾಗಿ ಗೊತ್ತಿರಬೇಕು. ಏತಕ್ಕಾಗಿ ಮಾತಾಡುತ್ತಿದ್ದೇನೆ ಎಂಬ ಗುರಿಯೂ ಸ್ಪಷ್ಟವಾಗಿರಬೇಕು.

10. ಅದು ಮಾಡಬೇಡ, ಇದು ಮಾಡಬೇಡ ಅನ್ನುವುದರ ಪಟ್ಟಿಯೊಡನೆ ಹಲವು ರೀತಿಯ ಎಚ್ಚರಿಕೆಗಳನ್ನು ನೀಡುವುದು ಕೂಡ ಸರಿಯಾದ ಮಾತಿನ ರೀತಿಯಲ್ಲ. ಮಕ್ಕಳು ಸಾರಾಸಗಟಾಗಿ ಅಂತಹ ಹಿರಿಯರನ್ನು ತಿರಸ್ಕರಿಸುತ್ತಾರೆ.

ಆತ್ಮಾವಲೋಕನ

ಸರಿ, ಈಗ ಏನು ಮಾಡಬೇಕು? ಮೊದಲು ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮುಖ್ಯವಾಗಿ ನಾವು ಮಕ್ಕಳೊಂದಿಗೆ ಹೇಗೆ ವರ್ತಿಸುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು.

ನಮ್ಮ ಎಲ್ಲಾ ದಿನನಿತ್ಯದ ಜಂಜಾಟಗಳೊಡನೆ, ಒಂದಷ್ಟು ಸಮಯ ಕೊಟ್ಟುಕೊಂಡು ನಮ್ಮ ಬಾಲ್ಯ, ಆ ಬಾಲ್ಯದಲ್ಲಿ ನಮ್ಮೊಡನೆ ಮಾತಾಡುತ್ತಿದ್ದ ಪೋಷಕರು, ಶಿಕ್ಷಕರು, ಇತರರು, ಅವರ ಮಾತಿನ ವರಸೆ; ಇತ್ಯಾದಿಗಳನ್ನು ನೆನಪಿಸಿಕೊಳ್ಳಬೇಕು. ನಕಾರಾತ್ಮಕವಾಗಿ ಮತ್ತು ಸಕಾರಾತ್ಮಕವಾಗಿ ಪ್ರಭಾವ ಬೀರಿರುವವರನ್ನು ನೆನಪಿಸಿಕೊಂಡರೆ, ಅವುಗಳು ಇಂದು ನಮ್ಮಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿವೆ ಎಂಬುದನ್ನು ನಾವು ಗಮನಿಸಿಕೊಳ್ಳಬಹುದು. ಇದರಿಂದಾಗಿ ನಾವು ನಮ್ಮ ಜೊತೆಗಿರುವ ಮಕ್ಕಳ ಜೊತೆಗೆ ಮಾತಾಡುವ ರೀತಿಯನ್ನು ಗಮನಿಸಿಕೊಳ್ಳಬಹುದು. ಅದರನ್ನು ನಿಯಂತ್ರಿಸಿಕೊಳ್ಳಬಹುದು.

ನಮ್ಮ ಬಾಲ್ಯದ ನೆನಪುಗಳನ್ನು, ನಮ್ಮೊಡನೆ ಆಡಿ, ಮಾತಾಡಿ, ಒಡನಾಡಿರುವಂತಹ ಹಿರಿಯರನ್ನು, ಅವರು ನಮ್ಮೊಡನೆ ವರ್ತಿಸುತ್ತಿದ್ದ ರೀತಿಗಳನ್ನು, ಅವುಗಳು ನಮ್ಮಲ್ಲಿ ಈಗ ಯಾವ ರೀತಿಯಲ್ಲಿ ಪ್ರಭಾವಿಸಿವೆ ಎಂಬುದನ್ನು ಗಮನಿಸಿಕೊಂಡರೆ ನಾವು ಮಕ್ಕಳೊಂದಿಗೆ ಮಾಡುವ ಬಹುತೇಕ ತಪ್ಪುಗಳು ಕಡಿಮೆಯಾಗುತ್ತವೆ.

ಇದನ್ನೂ ಓದಿ: ಸ್ನೇಹಿತೆಯನ್ನು ಭೇಟಿ ಮಾಡಿದ ಯುವಕ; ಯುವತಿಯಿಂದಲೇ ಸ್ನೇಹಿತನಿಗೆ ಹೊಡೆಸಿ ಹಲ್ಲೆ ಮಾಡಿದ ಬಜರಂಗದಳದ ಕಾರ್ಯಕರ್ತರು!

ಇಂದು ನಾವಿರುವ ವಯಸ್ಸಿನಲ್ಲಿ, ಅಂದು ಇದೇ ವಯಸ್ಸಿನ ಹಿರಿಯರು ನಮ್ಮೊಡನೆ ವರ್ತಿಸಿರುವ ರೀತಿಗಳು ಮೂಡಿಸಿರುವ ಛಾಪುಗಳನ್ನು ಗಮನಿಸಿಕೊಳ್ಳೋಣ. ನಮ್ಮ ಬಾಲ್ಯದ ಹಲವು ಸಂಗತಿಗಳು ನಮ್ಮ ಇಂದಿನ ಹಲವು ವಿಷಯಗಳಲ್ಲಿ ಅನೇಕ ರೀತಿಗಳಲ್ಲಿ ನಮ್ಮೊಳಗೆ ಕಾಣಿಸುತ್ತಿರುವುದನ್ನು ಗಮನಿಸಿಕೊಳ್ಳೋಣ. ಇದು ಮೌನವಾಗಿ ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಸಾಧ್ಯವಿದೆ. ಎಷ್ಟೋ ಬಾರಿ ನಮ್ಮ ಸಮ ವಯಸ್ಕರು ಸಂಧಿಸಿದಾಗ ಅಥವಾ ಹಿರಿಯರನ್ನು ಸಂಧಿಸಿ ಮಾತುಗಳನ್ನಾಡುವಾಗ ನಮ್ಮ ಬಾಲ್ಯದ ಸಂಗತಿಗಳು ಮನೋಭಾವಗಳು ಸ್ಮರಣೆಗೆ ಬರುವ ಸಾಧ್ಯತೆಗಳಿರುತ್ತವೆ. ದಿನಚರಿ ಬರೆದಿಡುವ ಅಭ್ಯಾಸವಿದ್ದರಂತೂ ಆತ್ಮಾವಲೋಕನಕ್ಕೆ ಬಹಳ ಅನುಕೂಲವಾಗುತ್ತದೆ. ಆದರೆ ದಿನಚರಿ ಬರೆದಿಡುವ ಅಭ್ಯಾಸ ಭಾರತೀಯರಲ್ಲಿ ತೀರಾ ಕಡಿಮೆ. ಇಲ್ಲವೇ ಇಲ್ಲ ಎನ್ನಿಸುವಷ್ಟು ಕಡಿಮೆ. ತೀರಾ ಶಿಷ್ಟ ಮತ್ತು ವಿಶಿಷ್ಟ ವ್ಯಕ್ತಿಗಳು ಮಾತ್ರ ಆ ರೀತಿ ಬರೆದಿಡುವುದು ಎನ್ನುವ ಧೋರಣೆಯೇ ಬಹಳ.

ನಾವು ಮಾಡಿಕೊಳ್ಳುವ ಆತ್ಮಾವಲೋಕನಗಳು ನಮ್ಮ ಮಕ್ಕಳ ಜೊತೆಗಿನ ವರ್ತನೆಗಳನ್ನು ಸಾಕಷ್ಟು ತಿದ್ದುತ್ತವೆ ಮತ್ತು ಅದು ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಬಹಳಷ್ಟು ಪೂರಕವಾಗಿರುತ್ತವೆ.

ಭಾಷಾ ಪರಿಸರ

ಹಿರಿಯರು ಮಕ್ಕಳೊಡನೆ ಮಾತಾಡುವ ರೀತಿಗಳೇ ಒಂದು ರೀತಿಯ ಅನೌಪಚಾರಿಕವಾದ ನೈತಿಕ ವಾತಾವರಣವನ್ನು ನಿರ್ಮಿಸಿರುತ್ತದೆ. ಅದರಲ್ಲಿ ಸಹಜವಾಗಿಯೇ ಮಕ್ಕಳು ಅದರಂತೆಯೇ ನಡೆದುಕೊಳ್ಳುತ್ತಾರೆ. ಅವರೂ ಕೂಡ ಇತರರ ಜೊತೆಗೆ ಅದೇ ರೀತಿಯಲ್ಲಿ ಮಾತಾಡುತ್ತಾರೆ. ಹೀಗಾಗಿ ಹಿರಿಯರು ಮಾತಾಡುವಂತಹ ರೀತಿಗಳೇ ಮಕ್ಕಳ ರೀತಿಗಳೂ ಕೂಡಾ ಆಗಿದ್ದು ಒಟ್ಟಾರೆ ಒಂದು ಭಾಷಾ ಪರಿಸರವನ್ನು ನಿರ್ಮಾಣ ಮಾಡಿರುತ್ತದೆ.

ಬಳಸುವ ಭಾಷೆಯು ಮುದವಾಗಿರುವ ಕಾರಣದಿಂದ, ಸ್ನೇಹಪೂರ್ವಕವಾಗಿರುವ ಕಾರಣದಿಂದ ಅಲ್ಲಿರುವವರಿಗೆಲ್ಲಾ ಸಕಾರಾತ್ಮಕವಾದಂತಹ ಪ್ರೇರಣೆಗಳು ಉಂಟಾಗುತ್ತಿರುತ್ತವೆ. ಕೆಲಸ ಕಾರ್ಯಗಳೂ ಕೂಡ ಸುಲಲಿತವಾಗಿಯೇ ಆಗುತ್ತಿರುತ್ತದೆ. ಪರಸ್ಪರ ಸದಾಶಯಗಳೊಂದಿಗೆ ಕೆಲಸ ಕಾರ್ಯಗಳನ್ನು ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕೆಂದರೆ ಸದ್ಭಾಷಾ ಪರಿಸರವನ್ನು ನಿರ್ಮಾಣ ಮಾಡಲೇ ಬೇಕು.

ಇದರಿಂದ ವ್ಯಕ್ತಿ, ಕುಟುಂಬ ಮತ್ತು ಸಮಾಜ ಸ್ವಸ್ಥ ಮನಸ್ಸನ್ನು ಹೊಂದಲು ಸಾಧ್ಯ.

– ಯೋಗೇಶ್‌ ಮಾಸ್ಟರ್

ಇದನ್ನೂ ಓದಿ: ಕೆನಡಾ ಸಂಸತ್ ಚುನಾವಣೆ: ಭಾರತೀಯ ಮೂಲದ 17 ಜನರಿಗೆ ಭರ್ಜರಿ ಗೆಲುವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights