ಭೂ ವಿವಾದ: ಅರ್ಚಕನನ್ನು ಜೀವಂತವಾಗಿ ಸುಟ್ಟು ಹಾಕಿದ ದುಷ್ಕರ್ಮಿಗಳು!

ಭೂ ವಿವಾದದಲ್ಲಿ ಭೂಮಿಯನ್ನು ಅತಿಕ್ರಮಣ ಮಾಡಲು ದೇವಸ್ಥಾನದ ಅರ್ಚಕರೊಬ್ಬರನ್ನು ಪೆಟ್ರೋಲ್‌ ಸುರಿದು ಜೀವಂತವಾಗಿ ಸುಟ್ಟುಹಾಕಿರುವ ಅಮಾನವೀಯ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಅರ್ಚಕರನ್ನು ಆಸ್ಪತ್ರೆಗೆ ಕೊಂಡೋಯ್ದರೂ,  ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಕರೌಲಿ ಜಿಲ್ಲೆಯ ಸಪೋತ್ರಾದಲ್ಲಿ “ಕೃಷ್ಣ ದೇವಾಲಯದ ಟ್ರಸ್ಟ್‌”ಗೆ ದೇರಿದ 5.2 ಎರಕೆ ಭೂಮಿಯನ್ನು ರಾಧಾ ಕೃಷ್ಣ ದೇವಸ್ಥಾನದ ಅರ್ಚಕ ಬಾಬು ಲಾಲ್ ವೈಷ್ಣವ್ ತಮ್ಮ ಜೀವನಕ್ಕಾಗಿ ಪಡೆದುಕೊಂಡಿದ್ದರು. ಟ್ರಸ್ಟ್‌ಗೆ ಸೇರಿದ ಭೂಮಿಯು ಸಾಮಾನ್ಯವಾಗಿ ದೇವಾಲಯದ ಉಸ್ತುವಾರಿ ಪುರೋಹಿತರ ಬಳಕೆಗಾಗಿ ನೀಡಲಾಗುತ್ತದೆಯಾದ್ದರಿಂದ ಆ ಭೂಮಿಯನ್ನು ಅರ್ಚಕ ಪಡೆದುಕೊಂಡಿದ್ದರು.

ಅರ್ಚಕ ಬಾಬು ಲಾಲ್ ವೈಷ್ಣವ್ ಆ ಜಮೀನಿನಲ್ಲಿ ಒಂದು ಮನೆಯನ್ನು ನಿರ್ಮಿಸಲು ಮುಂದಾಗಿದ್ದರು. ಅದಕ್ಕಾಗಿ  ಭೂಮಿಯನ್ನು ಸಮತಟ್ಟುಗೊಳಿಸಿದ್ದರು. ಇದನ್ನು ಸಹಿಸದ ಮೀನಾ ಸಮುದಾಯದ ಗುಂಪಿನ ಜನರು ಆಕ್ಷೇಪಿಸಿ ವೊಡ್ಡಿದ್ದರು. ಗ್ರಾಮದ ಮುಖಂಡರು ನ್ಯಾಯ ಪಂಚಾಯತಿ ಮಾಡಿ ಅರ್ಚಕರು ಅಲ್ಲಿ ಮನೆ ಕಟ್ಟಿಕೊಳ್ಳಬಹುದು ಎಂದು ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಐವರು ರಾತ್ರಿ ಜಮೀನಿನಲ್ಲಿ ಮಲಗಿದ್ದ ಅರ್ಚಕರ ಮೇಲೆ ಪೆಟ್ರೋಲ್‌ ಸುರಿದು ಸುಟ್ಟುಹಾಕಿದ್ದಾರೆ.

ಅರ್ಚಕರು ಸಾಯುವುದಕ್ಕೂ ಮುನ್ನ ನೀಡಿದ ಹೇಳಿಕೆಯ ಆಧಾರ ಮೇಲೆ ಆರೋಪಿಗಳಾದ ಕೈಲಾಶ್ ಮೀನಾ, ಶಂಕರ್ ಮೀನಾ, ನಮೋ ಮೀನಾ ಎಂಬುವವರನ್ನು ಬಂಧಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಅಪರಾಧಿಗಳು ಕಾನೂನಿನ ಭಯ ಇಲ್ಲದೆ ಮುಕ್ತವಾಗಿದ್ದಾರೆ. ಜನರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಗೃಹ ಇಲಾಖೆಯನ್ನ ನಿರ್ವಹಿಸುತ್ತಿದ್ದರೂ ಈ ಪರಿಸ್ಥಿತಿ ಇದೆ ಎಂದು ರಾಜಸ್ಥಾನ ಘಟಕದ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಏರುತ್ತಿರುವುದನ್ನು ಗಮನಿಸಿದರೆ ಇಲ್ಲಿ ಯಾವ ಹೆಣ್ಣು, ಮಗು, ಹಿರಿಯರು ಅಥವಾ ದಲಿತರು ಸುರಕ್ಷಿತವಾಗಿದ್ದಾರೆಂದು ಅನಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ಈಗಲಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಬೇಕಿದೆ. ಆರೋಪಿಗಳಿಗೆ ಕಠಿಣ ಸಜೆ ವಿಧಿಸುವಂತೆ ಮಾಡಿ ಅರ್ಚಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕಿದೆ ಎಂದು ಬಿಜೆಪಿ ನಾಯಕಿ ವಸುಂಧರಾ ಆಗ್ರಹಿಸಿದ್ಧಾರೆ.


ಇದನ್ನೂ ಓದಿ: ಬಿಜೆಪಿ ಅಜೆಂಡಾ ಸಾಧನೆಗಾಗಿ ಕೊರೊನಾ ನಿಯಮಗಳ ದುರುಪಯೋಗ: ತೀಸ್ತಾ ಸೆಟಲ್ವಾಡ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights