ಪ್ರಕೃತಿಯೂ ಶೋಕಿಸುತ್ತಾ ಅಳುತ್ತಿರುವಂತೆ ಕಾಣುತ್ತಿದೆ; ಅಪ್ಪು ಬಗ್ಗೆ ಕಿಚ್ಚನ ಭಾವನಾತ್ಮಕ ಬರಹ

ನಟ ಕಿಚ್ಚ ಸುದೀಪ್ ಅವರು ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಬಗ್ಗೆ ಕಂಬನಿ ಮಿಡಿದಿದ್ದು, ‘ಭರಿಸಲಾಗದ ಶೂನ್ಯ’ ಎಂಬ ಪೋಸ್ಟ್‌ನೊಂದಿಗೆ ಪುನೀತ್‌ ಅವರ ಜೊತೆಗಿನ ಪಯಣದ ಬಗ್ಗೆ ಧೀರ್ಘವಾಗಿ ಬರೆದು, ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಬಾರ್ನ್ ಸ್ಟಾರ್’ ಎಂಬ ಟೈಟಲ್‌ ಕೊಟ್ಟು, ತಮ್ಮ ಭಾವನಾತ್ಮಕ ಮಾತುಗಳನ್ನು ಬರೆದಿರುವ ಕಿಚ್ಚ, “ಇದು ಬಾಲ್ಯದಿಂದಲೂ ಬಂದ ಪ್ರಯಾಣ. ನಾನು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಯಾದಾಗ ಅವರು ಈಗಾಗಲೇ ಸ್ಟಾರ್ ಆಗಿದ್ದರು. ಅವರು “ಭಾಗ್ಯವಂತ” ಸಿನಿಮಾ ಯಶಸ್ವಿಯ ಪ್ರವಾಸದಲ್ಲಿದ್ದರು, ಆ ಸಿನಿಮಾ ಭಾರೀ ಹಿಟ್ ಆಗಿತ್ತು. ನನ್ನ ತಂದೆ ಚಿತ್ರರಂಗದವರಿಗೆ ಚಿರಪರಿಚಿತ ಹೆಸರಾಗಿದ್ದರಿಂದ, ಪುನೀತ್ ಅವರ ಥಿಯೇಟರ್ ಭೇಟಿಯ ನಂತರ ಮನೆಗೆ ಊಟಕ್ಕೆ ಬಂದರು. ಆಗ ನಾನು ಅವರನ್ನು ಮೊದಲು ಭೇಟಿಯಾದೆ ಮತ್ತು ಪ್ರಾಯಶಃ ಇಬ್ಬರ ವಯಸ್ಸು ಒಂದೇ ಆಗಿದ್ದರಿಂದ ತಕ್ಷಣವೇ ನಮ್ಮನ್ನು ಬೆರೆಯುವಂತೆ ಮಾಡಿತು. ಆ ಊಟದ ಹರವಿಗಿಂತ ನನ್ನ ಆಟಿಕೆಗಳ ಬಗ್ಗೆ ಅವರಿಗೆ ಕುತೂಹಲವಿತ್ತು . ನಾನು ಮತ್ತು ಅವರು ಆಟದಲ್ಲಿ ನಿರತನಾಗಿದ್ದಾಗ ಅವನು ಉತ್ಸಾಹದಿಂದ ಆಟವಾಡುತ್ತಿದ್ದ, ಅವನ ಹಿಂದೆ ತಟ್ಟೆಯೊಂದನ್ನು ಹಿಡಿದ ಮಹಿಳೆ ಓಡುತ್ತಿದ್ದದ್ದು ನನಗೆ ಇನ್ನೂ ನೆನಪಿದೆ. ಅದು ನನ್ನನ್ನು ಹೆಚ್ಚು ಉತ್ಸುಕನನ್ನಾಗಿ ಮಾಡಿತು. ನನ್ನ ನೆರೆಹೊರೆಯವರು ಮತ್ತು ಸುತ್ತಮುತ್ತಲಿನ ಮಕ್ಕಳು ನಮ್ಮ ಮನೆಯ ಸುತ್ತಲೂ ಜಮಾಯಿಸಿದ್ದರು, ಏಕೆಂದರೆ ಅದು ನಮ್ಮ ಮನೆಗೆ ಬಂದಿದ್ದದ್ದು ಬೇರೆ ಯಾವುದೋ ಮಗು ಅಲ್ಲ…. ಅದು ಹೊಸ ಸ್ಟಾರ್ ಕಿಡ್ ಮತ್ತು ದಂತಕಥೆ ಡಾ. ರಾಜ್‌ಕುಮಾರ್ ಅವರ ಮಗ ಪುನೀತ್.

ನಂತರ, ನಾವು ಹಲವು ಬಾರಿ ಒಬ್ಬರನ್ನು ಭೇಟಿಯಾದೆವು. ನಾವು ಇಂದೇ ಇಂಡಸ್ಟ್ರಿಯಲ್ಲಿ ಸಹೋದ್ಯೋಗಿಗಳೂ ಆದೆವು. ಇನ್ನು ಆತ ಗೆಳೆಯನಷ್ಟೇ ಅಲ್ಲ, ದೊಡ್ಡ ಸ್ಪರ್ಧಿಯೂ ಆಗಿದ್ದ. ಅಸಾಧಾರಣ ನಟ, ಡಾನ್ಸರ್, ಹೋರಾಟಗಾರ ಮತ್ತು ಮಹಾನ್ ವ್ಯಕ್ತಿ. ನಾನು ಈ ಸ್ಪರ್ಧೆಯನ್ನು ಆನಂದಿಸುತ್ತೇನೆ. ಅವರಂತೆ ಅದೇ ಪೀಳಿಗೆಯ ನಟನಾಗಿ ಬಂದಿದ್ದಕ್ಕೆ ನನಗೆ ಸಂತೋಷ ಮತ್ತು ಗೌರವವಿದೆ.

“ಇಂದು ಚಲನಚಿತ್ರೋದ್ಯಮವು ಅಪೂರ್ಣವಾಗಿ ಕಾಣುತ್ತಿದೆ. ಇದೊಂದು ಕಪ್ಪು ಚುಕ್ಕಿ. ಸಮಯವು ಕ್ರೂರವಾಗಿ ಕಾಣುತ್ತದೆ. ಸ್ಥಳವು ದುಃಖಕರವಾಗಿ ಕಾಣುತ್ತದೆ. ನಿನ್ನೆ ಪ್ರಕೃತಿಯೂ ಶೋಕಿಸುತ್ತಾ ಅಳುತ್ತಿರುವಂತೆ ತೋರುತ್ತಿತ್ತು. ಇದು ಮಂದವಾದ ದಿನ, ಕಪ್ಪು ಮೋಡಗಳು ಮತ್ತು ಜಿನುಗುವಿಕೆಯೊಂದಿಗಿನ ಕತ್ತಲೆ. ನಾನು ಬೆಂಗಳೂರಿಗೆ ಬಂದಿಳಿದು ಅವನನ್ನು ಇರಿಸಿದ್ದ ಕಡೆಗೆ ಹೊರಟೆ, ನಾನು ಇನ್ನೂ ಒಪ್ಪಿಕೊಳ್ಳದ ವಾಸ್ತವವನ್ನು ಸಮೀಪಿಸುತ್ತಿದ್ದಂತೆ, ನನ್ನ ಉಸಿರು ಭಾರವಾಗತೊಡಗಿತು.

ಅವನು ಮಲಗಿದ್ದನ್ನು ನೋಡಿ ಎಲ್ಲರ ಎದೆಯ ಮೇಲೂ ಬೆಟ್ಟ ಬಿದ್ದಂತಿತ್ತು. ಹಲವಾರು ಪ್ರಶ್ನೆಗಳು ಮತ್ತು ಹಲವಾರು ಆಲೋಚನೆಗಳು. ಏಕೆ , ಹೇಗೆ !!!!

ಮೊದಲ ಬಾರಿಗೆ ನಾನು ಸರಾಗವಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಇಲ್ಲಿ ಒಬ್ಬ ಸಹೋದ್ಯೋಗಿ, ಸ್ನೇಹಿತ, ಅವನು ಇರಬಾರದಲ್ಲಿದ್ದನು. ನಾನು ಅವನನ್ನು ಹೆಚ್ಚು ಹೊತ್ತು ನೋಡಲಾಗಲಿಲ್ಲ. ಆ ದೃಶ್ಯ ಈಗಲೂ ನನ್ನನ್ನು ಕಾಡುತ್ತಿದೆ.

“ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡಿ ಮತ್ತಷ್ಟು ನೋವಾಯಿತು. ಅವರು ನನಗೆ ಒಂದು ಸಾಲು ಹೇಳಿದರು. “ಅವನು (ಪುನೀತ್) ನನಗಿಂತ 13 ವರ್ಷ ಚಿಕ್ಕವನು, ನಾನು ಅವನನ್ನು ಈ ತೋಳುಗಳಲ್ಲಿ ಹೊತ್ತು ಆಡಿಸಿದ್ದೇನೆ. ಇಲ್ಲಿಯವರೆಗೆ ಸಾಕಷ್ಟು ನೋಡಿದ್ದೇನೆ, ಇನ್ನೂ ಏನೆಲ್ಲಾ ನೋಡಬೇಕು.”

ಆ ಸಾಲುಗಳು ಇಲ್ಲಿಯವರೆಗೂ ಪ್ರತಿಧ್ವನಿಸುತ್ತಿವೆ. ಪ್ರತಿಯೊಬ್ಬರೂ ಆಘಾತಕ್ಕೊಳಗಾಗಿದ್ದಾರೆ, ನೋಂದಿದ್ದಾರೆ ಮತ್ತು ಅತಾಶೆಗೊಂಡಿದ್ದಾರೆ. ಇದನ್ನು ಎಲ್ಲರೂ ಒಪ್ಪಿಕೊಳ್ಳಲು ಬಹಳ ಸಮಯ ಹಿಡಿಯುತ್ತದೆ. ನಾವೆಲ್ಲರೂ ಏನೇ ಮಾಡಿದರೂ, ಒಂದು ಸ್ಥಳವು ಖಾಲಿಯಾಗಿ ಉಳಿದಿದೆ. ಯಾರೂ ತುಂಬಲಾರದ ಸ್ಥಾನ ಅದು. ಒಬ್ಬ ಮಹಾನ್ ಮಾನವನಿಗೆ ಸೇರಿದ ಸ್ಥಳ, “ಪುನೀತ್”…. ನಮ್ಮ ಪ್ರೀತಿಯ “ಅಪ್ಪು” . ಶಾಂತಿಯಿಂದ ಹೋಗು, ರೆಸ್ಟ್‌ ಇನ್ ಪವರ್‌ ಮೈ ಫ್ರೆಂಡ್‌... ಎಂದು ಕಿಚ್ಚ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅರ್ಧಕ್ಕೆ ಉಳಿದುಹೋಗಿವೆ ಪುನೀತ್‌ ನಟನೆಯ ಸಾಲು ಸಾಲು ಸಿನಿಮಾಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights