Kashmir : ಇಂಟರ್‌ನೆಟ್ ಮೇಲಿನ ನಿರ್ಬಂಧಗಳ ಬಗ್ಗೆ ನಿರಾಶಾದಾಯಕ ತೀರ್ಪು

ಜಮ್ಮು  ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್ ಬಳಕೆಯ ಮೇಲೆ ವಿಧಿಸಲಾಗುತ್ತಿರುವ ಬೇಕಾಬಿಟ್ಟಿ ನಿರ್ಬಂಧಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟು ಯಾವ ಪ್ರಯತ್ನಗಳನ್ನೂ ಮಾಡಿಲ್ಲ.

ಆರ್ಟಿಕಲ್ ೩೭೦ರ ರದ್ಧತಿಯ ನಂತರ ಜಮ್ಮು-ಕಾಶ್ಮೀರದಲ್ಲಿ ವಿಧಿಸಲಾUರುವ ಇಂಟರ್‌ನೆಟ್ ನಿರ್ಬಂಧವನ್ನು ತೆರೆವು ಮಾಡಬೇಕೆಂದು ಕೋರಿದ್ದ “ಅನುರಾಧಾ ಬಾಸಿನ್ ಮತ್ತು ಭಾರತ ಒಕ್ಕೂಟ” (೨೦೨೦) ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ತೀರ್ಪು ಬೇಸರ ಹುಟ್ಟಿಸುವಂತಿದೆ. ವಾಸ್ತವವಾಗಿ ಕೋರ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಧನವಾಗಿ ಮುಕ್ತ ಮಾಧ್ಯಮ ಹಾಗೂ ಇಂಟರ್‌ನೆಟ್‌ಗಳ ಪ್ರಾಮುಖ್ಯತೆಯ ಬಗ್ಗೆ ಮತ್ತು ನ್ಯಾಯಾಲಯದ ತೀರ್ಪುಗಳಲ್ಲಿ ಇರಬೇಕಾದ ವಿಧಾನಬದ್ಧತೆ ಹಾಗೂ ತರ್ಕ ಬದ್ಧತೆಗಳನ್ನೂ ಒಳಗೊಂಡು ಹಲವಾರು ವಿಷಯಗಳ ಬಗ್ಗೆ ವಿವರವಾದ ಚರ್ಚೆಗಳನ್ನು ಮಾಡುತ್ತದೆ. ಆದರೂ ತನ್ನ ತೀರ್ಮಾನಗಳಲ್ಲಿ ಮಾತ್ರ ತಾನು ತೀರ್ಪಿನುದ್ದಕ್ಕೂ ಚರ್ಚಿಸಿದ ವಿಷಯಗಳಿಗೆ ತದ್ವಿರುದ್ಧವಾದ ಲುವುಗಳಿಗೆ ತಲುಪುತ್ತದೆ.

ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್ ನಿರ್ಬಂಧವನ್ನು ವಿಧಿಸಿ ಹೊರಡಿಸಿದ ಸರ್ಕಾರಿ ಆದೇಶವನು ಅರ್ಜಿದಾರರಿಗೆ ಒದಗಿಸುವುದನ್ನು ಸರ್ಕಾರ ನಿರಾಕರಿಸಲು ಸಾಧ್ಯವಿಲ್ಲ ಎಂದು ಕೋರ್ಟು ಸ್ಪಷ್ಟಪಡಿಸುತ್ತದೆ. ಆದರೆ ವಿಚಾರಣೆಯ ಪ್ರಕ್ರಿಯೆಯಲ್ಲಿ ಸರ್ಕಾರದ ಪರವಾಗಿ ವಾದಿಸುತ್ತಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ಅವರು ಅರ್ಜಿದಾರರು ಕೇಳುವ ಎಲ್ಲಾ ಆದೇಶಗಳನ್ನು ಒದಗಿಸಲೇಬೇಕೆಂಬ ಕಡ್ಡಾಯ ಸರ್ಕಾರಕ್ಕಿಲ್ಲ ಎಂದು ವಾದಿಸಿದರು. ಆದರೆ ಯಾವ ಕಾನೂನಿನನ್ವಯ ಸರ್ಕಾರಕ್ಕೆ ಅ ವಿಶೇಷವಾದ ಅಧಿಕಾರವಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಲಿಲ್ಲ. ಅಂತಿಮವಾಗಿ ಆ ವಾದವು ಪುರಸ್ಕೃತವಾಗದೆ ಕೇವಲ “ಮಾದರಿ ಆದೇಶ”ಗಳನ್ನು ಮಾತ್ರ ಕೋರ್ಟಿನ ಮುಂದೆ  ಮಂಡಿಸಲಾಯಿತು.

ಹೀಗೆ ಸರ್ಕಾರವು ಕೋರ್ಟನ್ನೇ ಲೇವಡಿ ಮಾಡಿದರೂ ಸಹ ನ್ಯಾಯಾಲಯ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಸಾಕ್ಷಿ ಪುರಾವೆಗಳಿಗೆ ಸಂಬಂಧಿಸಿದ ಮಹತ್ವದ ನಿಯಮಗಳನ್ವಯ ತಮ್ಮ ಬಳಿ ಇರುವ ಸಾಕ್ಷಿಯನ್ನು ಪ್ರಕರಣಕ್ಕೆ ಸಂಬಂಧಪಟ್ಟವರು ಕೋರ್ಟಿನಲ್ಲಿ ಹಾಜರುಪಡಿಸಬೇಕು. ಹಾಗೆ ಮಾಡದಿದ್ದಲ್ಲಿ ಅವರ ಬಗ್ಗೆ  ವ್ಯತಿರಿಕ್ತವಾದ ತೀರ್ಮಾನವನ್ನು ಕೋರ್ಟು ಕೈಗೊಳ್ಳುತ್ತದೆ. ಹೀಗಾಗಿ ಸರ್ಕಾರವು ಇಂಟರ್‌ನೆಟ್ ನಿರ್ಬಂಧದ ಬಗ್ಗೆ ಸರ್ಕಾರವು ಅಧಿಕೃತವಾದ ಆದೇಶವನ್ನು ಹಾಜರುಪಡಿಸದಿದ್ದಾಗ ನ್ಯಾಯಾಲಯವು ಅಂತಹ ಒಂದು ಸರ್ಕಾರಿ ಆದೇಶವು ಇಲ್ಲವೆಂದೇ ಪರಿಗಣಿಸಬೇಕಿತ್ತು. ಮತ್ತು ಆ ಆಧಾರದಲ್ಲಿ ಇಂಟರ್‌ನೆಟ್ ನಿರ್ಬಂಧವನ್ನು ಕಾನೂನುಬಾಹಿರವೆಂದು ಘೋಷಿಸಿ ಕೂಡಲೇ ತೆರವು ಮಾಡಬೇಕಿತ್ತು. ಆದರೆ ನ್ಯಾಯಾಲಯವು ಅದೇನನ್ನೂ ಮಾಡದೆ ಇಂಟರ್‌ನೆಟ್ ನಿರ್ಬಂಧದಂತಹ ಆದೇಶವನ್ನು ಕೋರ್ಟುಗಳಲ್ಲಿ ಸಾರ್ವಜನಿಕರು ಮುಂದೆಂದಾದರೂ ಪ್ರಶ್ನಿಸಲು ಸಾಧ್ಯವಾಗುವಂತೆ ಕನಿಷ್ಟ ಪಕ್ಷ ಆದೇಶವನ್ನು ಪ್ರಕಟಿಸಬೇಕೆಂದು ಸರ್ಕಾರಕ್ಕೆ ಮೃದುವಾದ ಮನವಿಯನ್ನು ಮಾಡುತ್ತಾ ತನ್ನ ತೀರ್ಪನ್ನು ಕೊನೆಗೊಳಿಸಿದೆ.

ಪ್ರಕರಣದ ಇತರ ಎಲ್ಲಾ ವಿಷಯಗಳ ಬಗ್ಗೆಯೂ ಸಹ ಕೋರ್ಟು ಇದೇ ಮಾರ್ಗವನ್ನು ಅನುಸರಿಸುತ್ತದೆ. ಹಕ್ಕುಗಳು, ರಾಷ್ಟ್ರೀಯ ಭದ್ರತೆ, ಮೂಲಭೂತ ಸ್ವಾತಂತ್ರ್ಯಗಳು ಇತ್ಯಾದಿಗಳ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾ ಸರ್ಕಾರದ ವಾದಗಳನ್ನು ತಿರಸ್ಕರಿಸುವಂತೆ ಕಂಡರೂ ಅಂತಿಮವಾಗಿ ಅಹವಾಲುದಾರರಿಗೆ ಯಾವುದೇ ಆರ್ಥಪೂರ್ಣ ಪರಿಹಾರವನ್ನೂ ಕೂಡಾ ಯಾವೊಂದು ವಿಷಯದಲ್ಲೂ ಕೋರ್ಟು ನೀಡಿಲ್ಲ. ಸರ್ಕಾರಕ್ಕೆ ಕೋರ್ಟು ನೀಡಿರುವ ಎರಡು “ನಿರ್ದೇಶನಗಳು” ಎಷ್ಟು ಅಮೂರ್ತವಾಗಿದೆಯೆಂದರೆ ಅದರ ಜಾರಿಗೆ ಯಾವ ಸಮಯ ಮಿತಿಯೂ ಇಲ್ಲ ಹಾಗೂ ಸರ್ಕಾರವು ಕ್ಷುಲ್ಲಕವಾದ ಕ್ರಮಗಳನ್ನು ತೆಗೆದುಕೊಂಡೂ ಸಹ ಕೋರ್ಟು ಆದೇಶವನ್ನು ಜಾರಿಗೆ ತರಲಾಗಿದೆಯೆಂದೂ ಘೋಷಿಸಿಕೊಳ್ಳಬಹುದು. ವಾಸ್ತವದಲ್ಲಿ ಕೋರ್ಟು ನೀಡಿರುವ ಈ ಪರಿಣಾಮಶೂನ್ಯ ಆದೇಶದಿಂದಾಗಿ ಜಮ್ಮು ಕಾಶ್ಮೀರದಲ್ಲಿ ಕೆಲವು ಕಡೆ ಮಾತ್ರ ಕೆಲವು ವೆಬ್‌ಸೈಟುಗಳಿಗೆ ಅವಕಾಶ ಮಾಡಿಕೊಟ್ಟು ಉಳಿದೆಡೆ ನಿರ್ಬಂಧವನ್ನು ಮುಂದುವರೆಸಿ  ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಇಂಟರ್‌ನೆಟ್ ನಿರ್ಬಂಧದ ಆದೇಶವನ್ನೂ ಸಹ ಕೋರ್ಟು ನಿರ್ದೇಶನದ ಪಾಲನೆ ಎಂದು ಸರ್ಕಾರ ಹೇಳಿಕೊಳ್ಳಬಹುದಾಗಿದೆ.

ಹೀಗಾಗಿ ಈ ಆದೇಶವು ಇಂಟರ್‌ನೆಟ್ ನಿರ್ಬಂಧದಂತಹ ಮಹತ್ವದ ಸಂಗತಿಯ ಬಗ್ಗೆ ಸರ್ಕಾರದೊಡನೆ ಸಮಾಲೋಚನೆ ಮಾಡಿ ಅದರ ಸಲಹೆ ಮತ್ತು ಶಿಫಾರಸ್ಸುಗಳನ್ನು ತೆಗೆದುಕೊಂಡು ಸಿದ್ಧಪಡಿಸಿದ ನೀತಿ ನಿರ್ಣಯದಂತೆ ಇದೆಯೇ ಹೊರತು ಒಂದು ಸಾಂವಿಧಾನಿಕ ನ್ಯಾಯಾಲಯವು ತನಗೆ ಸಂವಿಧಾನವು ಕೊಟ್ಟಿರುವ ಅಧಿಕಾರವನ್ನು ಬಳಸಿಕೊಂಡು ಸರ್ಕಾರದ ಅಕ್ರಮಗಳಿಗೆ ತಡೆಯೊಡ್ಡುವ ಆದೇಶದಂತಿಲ್ಲ. ಹೀಗಾಗಿ ಈ ಆದೇಶವು ಸರ್ಕಾರದ ಅನುಸರಣೆಯ ಫಲವೋ ಅಥವಾ ಹೇಡಿತನವೋ ಎಂಬುದನ್ನು ಓದುಗರೇ ತೀರ್ಮಾನಿಸಬೇಕು.

ಭಾರತದ ಜನತೆಯ ಮೇಲೆ ವಿಧಿಸಲಾಗುತ್ತಿರುವಷ್ಟು ಇಂಟರ್‌ನೆಟ್ ನಿಷೇಧವನ್ನು ಜಗತ್ತಿನ iತ್ಯಾವುದೇ ದೇಶಗಳು ವಿಧಿಸುತ್ತಿಲ್ಲ. ಅತ್ಯಂತ ಸೀಮಿತವಾಗಿ ಅಲ್ಲಲ್ಲಿ ಅಷ್ಟಿಷ್ಟು ನೀಡಿದ ಅವಕಾಶಗಳನ್ನು ಹೊರತುಪಡಿಸಿದರೆ ಜಮ್ಮು ಕಾಶ್ಮೀರದಲ್ಲಿ ಇಂಟರ್‌ನೆಟ್ ನಿರ್ಬಂಧವನ್ನು ವಿಧಿಸಿ ಐದು ತಿಂಗಳಾಗಿವೆ. ಸರ್ಕಾರಕ್ಕೆ ಈ ಅಧಿಕಾರವನ್ನು ಕೊಡುವುದು ವಸಾಹತು ಕಾಲದಿಂದಲೂ ಬದಲಾಗದೆ ಮುಂದುವರೆದುಕೊಂಡು ಬಂದಿರುವ ೧೯೭೪ರ ಕ್ರಿಮಿನಲ್ ಪ್ರೊಸೆಜರ್ ಕೋಡಿನ ೧೪೪ನೇ ಸೆಕ್ಷನ್ ಮತ್ತು ೧೮೮೫ರ ಟೆಲಿಗ್ರಾಫ್ ಆಕ್ಟ್‌ನ ಸೆಕ್ಷನ್ ೭ರಡಿ ರೂಪಿಸಲಾದ ೨೦೧೭ರ ಟೆಲಿಕಾಂ ಸೇವೆಗಳ ತಾತ್ಕಾಲಿಕ ರದ್ದು ನಿಯಮಾವಳಿಗಳು. ಇವೆರಡೂ ಕಾಯಿದೆಗಳ ಮೂಲ ವಸಾಹತುಶಾಹಿ ಆಡಳಿತದಲ್ಲಿರುವುದೇ ಈ ಇಂಟರ್‌ನೆಟ್ ನಿರ್ಬಂಧದ ಬಗ್ಗೆ ಗಂಭೀರವಾದ ವಿಷಯಗಳನ್ನು ಬಿಚ್ಚಿಡುತ್ತವೆ.

ಇಂಟರ್‌ನೆಟ್ ಎಂಬುದು ಭಾರತದ ಬಹುಪಾಲು ಜನರ ನಿತ್ಯಜೀವನದ ಪ್ರಮುಖ ಭಾಗವಾಗಿದೆ. ಈಗದು ಕೇವಲ ಇಂಗ್ಲೀಷ್ ಮಾತನಾಡುವ, ಮಧ್ಯಮವರ್ಗದ ನಗರವಾಸಿಗಳು ಮಾತ್ರ ಬಳಸುವ ಸಾಧನವಾಗಿಲ್ಲ. ಅಗ್ಗದ ಸಂಪರ್ಕ ದರ ಮತ್ತು ಬಹುಭಾಷೆಯಲ್ಲಿ ವಿಷಯಗಳು ದೊರೆಯುವುದರಿಂದ ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚೂಕಡಿಮೆ ೫೦ ಕೋಟಿಯಷ್ಟಾಗಿದೆ. ಹೀಗಾಗಿ ಜಗತ್ತಿನಲ್ಲಿ  ಚೀನಾವನ್ನು ಬಿಟ್ಟರೆ ಅತಿ ಹೆಚ್ಚು ಇಂಟರ್‌ನೆಟ್ ಬಳಸುವುದು ಭಾರತವೇ ಆಗಿದೆ.

ಆದರೆ ಇಂಟರ್‌ನೆಟ್ ಬಳಕೆಯ ವಿಸ್ತರಣೆಯು ಈಗ ಒಂದು ವೈರುಧ್ಯಕರ ಸನ್ನಿವೇಶವನ್ನು ಎದುರಿಸುತ್ತಿದೆ. ಒಂದೆಡೆ ಪ್ರಭುತ್ವವು ಹೆಚ್ಚೆಚ್ಚು ಜನರು ಇಂಟರ್‌ನೆಟ್ಟನ್ನು ಬಳಸಬೇಕೆಂದು ಬಯಸುತ್ತದೆ. ಮತ್ತೊಂದು ಕಡೆ ಅದರ ದುರ್ಬಳಕೆಯನ್ನು ತಡೆಯಬಲ್ಲ ಮತ್ತು ಶಿಕ್ಷಿಸಬಲ್ಲ ಸಾಮರ್ಥ್ಯವನ್ನು ಮಾತ್ರ ಬೆಳೆಸಿಕೊಂಡಿಲ್ಲ. ಈ ಎರಡೂ ಅಂಶಗಳು ಒಟ್ಟಾಗಿ ಯಾವುದೇ ಶಿಕ್ಷಾಭೀತಿ ಇಲ್ಲದೆ ಪದೇಪದೇ ದೇಶದಲ್ಲಿ ಎಲ್ಲೆಂದರಲ್ಲಿ ಇಂಟರ್‌ನೆಟ್ ನಿರ್ಬಂಧ ಮಾಡುವ ಮಾರ್ಗವನ್ನು ಅನುಸರಿಸುವಂತೆ ಮಾಡಿದೆ. ಮೊದಲನೆಯದಾಗಿ ಸರ್ಕಾರವು ಪೊಲಿಸರಿಗೆ ನಿಯಂತ್ರಣ ಮಾಡಲು ಬೇರಾವುದೇ ಸುಧಾರಿತ ಸಾಧನವನ್ನು ಕೊಡದಿರುವುದರಿಂದ ಸಂದರ್ಭವು ಉದ್ವಿಘ್ನಗೊಳ್ಳುತ್ತಿದ್ದಂತೆ ಪೊಲೀಸ್ ವ್ಯವಸ್ಥೆ ಬಹಳ ಸಲೀಸಾಗಿ ಇಂಟರ್‌ನೆಟ್ ನಿರ್ಬಂಧದ ಮಾರ್ಗ ಹಿಡಿಯುತ್ತದೆ. ಎರಡನೆಯದಾಗಿ ಸಾರ್ವಜನಿಕರ ಮೇಲೆ ಅಕ್ರಮವಾಗಿ ಹೇರುವ ಇಂಟರ್‌ನೆಟ್ ನಿರ್ಬಂಧವನ್ನು ತಡೆಯುವಂಥ ಯಾವ ಕ್ರಮಗಳೂ ನಂತರ ಮುಂದುವರೆಯುವುದಿಲ್ಲ. ಇಂಟರ್‌ನೆಟ್ ನಿರ್ಬಂಧದಿಂದಾಗಿ ಭೌತಿಕ ನಷ್ಟವನ್ನು ಹೊಂದುವ ವ್ಯಕ್ತಿಗಳಿಗೆ ಯಾವ ಪರಿಹಾರವೂ ದೊರೆಯುವುದಿಲ್ಲ.

ಅನುರಾಧಾ ಬಾಸಿನ್ ಪ್ರಕರಣವು ಕನಿಷ್ಟಪಕ್ಷ ಎರಡನೇ ವಿಷಯದಲ್ಲಾದರೂ ನ್ಯಾಯ ಒದಗಿಸುವ ಅವಕಾಶವನ್ನು ಸುಪ್ರೀಂ ಕೋರ್ಟಿಗೆ ಒದಗಿಸಿತ್ತು. ದೇಶದ ಭದ್ರತೆಯ ಕಾಳಜಿಗಳಿಗಿಂತ ಹೆಚ್ಚಾಗಿ ತಮ್ಮ ಅಣತಿಯನ್ನೊಪ್ಪದ ಜನರಿಗೆ ಶಿಕ್ಷೆ ವಿಧಿಸುವ ಸಲುವಾಗಿ ಹೆಚ್ಚೆಚ್ಚು ಬಳಕೆಯಾಗುವ ಈ ಇಂಟರ್‌ನೆಟ್ ನಿರ್ಬಂಧದ ದುರ್ಬಳಕೆಯನ್ನು ತಡೆಗಟ್ಟಲು ನಿರ್ಬಂಧ ಜಾರಿಯಾದ ನಂತರದ ಹೊಣೆಗಾರಿಕೆಯನಾದರೂ ನಿಗದಿಪಡಿಸುವ ಕೆಲವು ಕ್ರಮಗಳಿಗೆ ಸುಪ್ರೀಂ ಕೋರ್ಟು ಮುಂದಾಗಬಹುದಿತ್ತು. ಆದರೆ ಅದು ಜಾರ್ಜ್ ಬರ್ನಾಡ್ ಶಾರವರ ಮಾತುಗಳಲ್ಲಿ ಹೇಳುವುದಾದರೆ ಅವಕಾಶವನ್ನು ತಪ್ಪಿಸಿಕೊಳ್ಳಲೆಂದೇ ಅವಕಾಶವನ್ನು ಬಳಸಿಕೊಂಡಿದೆ. ಆ ಮೂಲಕ ಅದು ತನ್ನ ವಿಶ್ವಾಸಾರ್ಹತೆಗೂ ಮತ್ತು ನಮ್ಮ ಹಕ್ಕುಗಳಿಗೂ ಧಕ್ಕೆಯನ್ನು ತಂದಿದೆ.

ಕೃಪೆ: Economic and Political Weekly

ಅನು: ಶಿವಸುಂದರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights