Karnataka : ಡೆಪ್ಯೂಟಿ ಸ್ಪೀಕರ್ ಸ್ಥಾನ – ರೇಸ್‌ನಲ್ಲಿ ಆನಂದ್‌ ಮಾಮನಿ, ಅರಗ ಜ್ಞಾನೇಂದ್ರ….

ಅವಿಶ್ವಾಸಕ್ಕೆ ಹೆದರಿ ಕೃಷ್ಣಾ ರೆಡ್ಡಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿರವು ವಿಧಾನ ಸಭೆಯ ಡೆಪ್ಯೂಟಿ ಸ್ಪೀಕರ್‍ ಸ್ಥಾನ ಅಲಂಕರಿಸಲು ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ.

ಸವದತ್ತಿಯ ಶಾಸಕ ಆನಂದ್‌ ಮಾಮನಿ ಅವರಿಗೆ ಈ ಸ್ಥಾನ ಒಲಿಯಬಹುದು ಎಂದೇ ಹೇಳಲಾಗಿತ್ತಾದರೂ ಕಡೆಯ ಕ್ಷಣದಲ್ಲಿ ಮತ್ತೊಂದು ಹೆಸರು ಚಾಲ್ತಿಗೆ ಬಂದಿದೆ.

ಹಿರಿಯ ಶಾಸಕ, ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ ಅವರು ಕೂಡ ಡೆಪ್ಯೂಟಿ ಸ್ಪೀಕರ್‍ ಸ್ಥಾನದ ರೇಸ್‌ನಲ್ಲಿ ಇದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾದ ಸಂದರ್ಭದಲ್ಲಿ ಡೆಪ್ಯೂಟಿ ಸ್ಪೀಕರ್‍ ಸ್ಥಾನಕ್ಕೆ ಜೆಡಿಎಸ್‌ನ ಕೃಷ್ಣಾ ರೆಡ್ಡಿ ಆಯ್ಕೆಯಾಗಿದ್ದರು.

ಮೈತ್ರಿ ಸರಕಾರ ಉರುಳಿ ಬಿಜೆಪಿ ಸರಕಾರ ಬಂದು ಆರು ತಿಂಗಳಾದರೂ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಈಗ ಬಿಜೆಪಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿತ್ತು.

ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್‍ ಕಾಗೇರಿಯವರು ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲೇ ರೆಡ್ಡಿ ಮಂಗಳವಾರ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಹೇಳಿದ್ದರು.

ಪ್ರಸಕ್ತ ನಡೆಯುತ್ತಿರುವ ಬಜೆಟ್ ಅಧಿವೇಶನದ ಅಂತ್ಯದ ವೇಳೆಗೆ ಹೊಸ ಡೆಪ್ಯೂಟಿ ಸ್ಪೀಕರ್‍ ಆಯ್ಕೆ ನಡೆಯಲಿದ್ದು, ಮಾಮನಿ ಮತ್ತು ಜ್ಞಾನೇಂದ್ರ, ಇವರಿಬ್ಬರಲ್ಲಿ ಯಾರಿಗೆ ಅದೃಷ್ಟ ಒಲಿಯುತ್ತದೆ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights