ರಾಜ್ಯ ಸಚಿವ ಸಂಪುಟದಿಂದ ನಾಲ್ವರಿಗೆ ಕೋಕ್‌? ನಿಷ್ಠರಿಗೆ ಮಣೆ ಹಾಕಲು ಬಿಎಸ್‌ವೈ ಹೊಸ ಪ್ಲಾನ್‌

ಮುಖಯಮಂತ್ರಿ ಯಡಿಯೂರಪ್ಪ ಅವರಂದುಕೊಂಡಂತೆ ನಡೆದರೇ ರಾಜ್ಯ ಸಚಿವ ಸಂಪುಟಕ್ಕೆ 8 ಮಂದಿ ಹೊಸ ಮಂತ್ರಿಗಳ ಸೇರ್ಪಡೆಯಾಗಲಿದೆ. ಈಗಿರುವ ಮಂತ್ರಿಗಳ ಪೈಕಿ ನಾಲ್ವರನ್ನು ಕೈಬಿಟ್ಟು ಹೊಸದಾಗಿ 8 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಒಲವು ತೋರಿದ್ದಾರೆ ಎಂದು ದಿಲ್ಲಿ ಮೂಲಗಳು ಹೇಳಿವೆ.

ಆದರೆ ಈ ಬಗ್ಗೆ ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರು ಕೈಗೊಳ್ಳಲಿದ್ದು, ಅವರ ಮನವೊಲಿಕೆಗೆ ಸಿಎಂ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.ಸಂಪುಟದಲ್ಲಿ ಸದ್ಯ ಆರು ಸ್ಥಾನ ಖಾಲಿ ಇದ್ದು ಆ ಪೈಕಿ ನಾಲ್ಕು ಸ್ಥಾನ ತುಂಬುವುದಲ್ಲದೇ ಈಗಿರುವ ಮಂತ್ರಿಗಳಲ್ಲಿ ನಾಲ್ವರನ್ನು ಕೈಬಿಟ್ಟು ಅವರ ಬದಲಿಗೆ ಪಕ್ಷ ನಿಷ್ಢಠಿಗೆ ಮಣೆ ಹಾಕುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ.

ಈ ಕುರಿತಾಗಿ ಮುಖ್ಯಮಂತ್ರಿ ಬಿಎಸ್‌ವೈ ಅವರು ಪಕ್ಷದ ಸಂಘಟನಾ ಕಾರ್‍ಯದರ್ಶಿ ಬಿಎಲ್ ಸಂತೋಷ್ ಅವರ ಜೊತೆ ಸಮಾಲೊಚನೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಯಡಿಯೂರಪ್ಪನವರ ಪ್ಲಾನ್‌ಗೆ ವರಿಷ್ಠರು ಒಪ್ಪಿಗೆ ನೀಡಿದರೆ ಬಳಿಕ ಯಾರನ್ನು ಕೈಬಿಡಬೇಕು ಎನ್ನುವದನ್ನು ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಗುರುವಾರ ದಿಲ್ಲಿಗೆ ಆಗಮಿಸಿದ ಯಡಿಯೂರಪ್ಪನವರು ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಅಹವಾಲು ಹೇಳಿಕೊಂಡರು. ಸಂಪಟು ವಿಸ್ತರಣೆಗೆ ಅನುಮತಿ ನೀಡುವಂತೆಯೂ ಅವರು ಪ್ರಧಾನಿಗೆ ಮನವಿ ಮಾಡಿದ್ದಾಗಿ ತಿಳಿದುಬಂದಿದೆ. ಈ ವಿಚಾರವನ್ನು ಪಕ್ಷಾಧ್ಯಕ್ಷರ ಜೊತೆ ಚರ್ಚಿ ಆಖೈರು ಮಾಡಿಕೊಳ್ಳುವಂತೆ ಮೊದಿ ಅವರು ಸೂಚಿಸಿದರೆಂದು ಹೇಳಲಾಗಿದೆ.

ಸಂಪುಟ ವಿಸ್ತರಣೆ ವಿಚಾರದಲ್ಲಿ ವರಿಷ್ಠರ ಮೀನಾಮೇಷ ನಿಲುವಿನಿಂದ ಬೇಸತ್ತು ಅವರ ಮೇಲೆ ಖುದ್ದು ಒತ್ತಡ ಹೇರುವ ಸಲುವಾಗಿಯೇ ಯಡಿಯೂರಪ್ಪ ಬಲವಂತವಾಗಿ ದಿಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಮಧ್ಯೆ ಶಾಸಕ ರೇಣುಕಾಚಾರ್ಯ ಸೇರಿದಂತೆ ಹಲವಾರು ಮಂದಿ ಸಚಿವಾಕಾಂಕ್ಷಿಗಳು ದಿಲ್ಲಿಗೆ ದೌಡಾಯಿಸಿದ್ದು ತಮಗೆ ಪರಿಚಿತ ನಾಯಕರ ಮೂಲಕ ಹೈಕಮಾಂಡ್ ಕಣ್ಣಿಗೆ ಕಾಣಿಸಿಕೊಳ್ಳಲು ಎಡತಾಕುತ್ತಿದ್ದಾರೆ ಎನ್ನಲಾಗಿದೆ. ನೂತನವಾಗಿ ಎಂಎಲ್ಸಿಗಳಾಗಿರವು ನಾಗರಾಜ್, ಶಂಕರ್, ವಿಶ್ವನಾಥ್, ಯೋಗೀಶ್ವರ ಅಲ್ಲದೇ ಉಮೇಶ್ ಕತ್ತಿ ಹಾಗೂ ಮುರುಗೇಶ ನಿರಾಣಿ ಸಚಿವಾಕಾಂಕ್ಷಗಳ ಮೊದಲ ಲಿಸ್ಟ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಹೈಕೋರ್ಟ್‌ನಲ್ಲಿ ಅರ್ಜಿ; ಹೊಸ ಎಂಎಲ್‌ಸಿಗಳಿಗಿಲ್ವಾ ಸಚಿವ ಸ್ಥಾನ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights