ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಇನ್ನಿಲ್ಲ
ಕನ್ನಡದ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರು ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳೆದ್ದಿದ್ದಾರೆ. ಪುನೀತ್ ಅವರು ತಮ್ಮ 46ನೇ ವಯಸ್ಸಿಗೇ ತಮ್ಮ ಅಭಿಮಾನಿಗಳನ್ನು ಅಗಲಿದ್ದಾರೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ಕಸರತ್ತು ನಡೆಸುತ್ತಿದ್ದ ವೇಳೆ, ಕುಸಿದು ಬಿದ್ದ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಭಿಮಾನಿಗಳಿಗೆ ಅವರ ಪಾರ್ತೀವ ಶರೀರ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಬೆಳಗ್ಗೆ ಆಸ್ಪತ್ರೆಗೆ ದಾಖಲಾದ ವೇಳೆ, ಲಘು ಹೃದಯಾಘಾತವಾಗಿದೆ ಎಂದು ಹೇಳಲಾಗಿತ್ತು. ನಟ ಶಿವರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್, ನಟ ರವಿಚಂದ್ರನ್, ಸಿಎಂ ಬಸವರಾಜ ಬೊಮ್ಮಾಯಿ ಆಸ್ಪತ್ರೆಗೆ ದಾವಿಸಿದ್ದರು. ಈ ವೇಳೆಗೆ, ಅವರು ಕೊನೆಯುಸಿರೆಳೆದಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಚಿತ್ರನಟ ,ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರೂ ಆಗಿದ್ದ ಪುನೀತ್ ರಾಜ್ಕುಮಾರ್, ಅಪ್ಪು, ವೀರ ಕನ್ನಡಿಗ, ರಾಜಕುಮಾರ, ನಟಸಾರ್ವಭೌಮ, ದೊಡ್ಮನೆಹುಡ್ಗ, ಪೃಥ್ವಿ ಸೇರಿದಂತೆ 26 ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಅಲ್ಲದೆ, ಡಾ. ರಾಜ್ಕುಮಾರ್ ಅವರ ಜೊತೆಗೂ ಹಲವು ಸಿನಿಮಾಗಳಲ್ಲಿ ಬಾಲ ನಟರಾಗಿ 10 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪುನೀತ್ ಅವರು ಬಾಲ ನಟರಾಗಿ ನಟಿಸಿದ್ದ ಬೆಟ್ಟದ ಹೂವು ಸಿನಿಮಾಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಸಿದ್ದಾರೆ. ಅಲ್ಲದೆ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಸಿನಿಮಾಗಳ ನಟನೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಉತ್ತಮ ಬಾಲ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನಾಯಕ ನಟರಾಗಿ ನಟಿಸಿದ್ದ ಮಿಲನ ಮತ್ತು ಜಾಕಿ ಚಿತ್ರಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಉತ್ತಮ ನಟ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು.
ಅಲ್ಲದೆ, ಹುಡುಗರು, ಯಾರೇ ಕೂಗಾಡಲಿ, ರಣ ವಿಕ್ರಮ, ರಾಜಕುಮಾರ ಸಿನಿಮಾಗಳಿಗೆ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.