ಗೋಮೂತ್ರ, ಸಗಣಿ ಕೊರೊನಾಗೆ ಮದ್ದಲ್ಲ ಎಂದ ಪತ್ರಕರ್ತರ ಬಂಧನ!

ಮಣಿಪುರದ ಬಿಜೆಪಿ ಮುಖ್ಯಸ್ಥ ಎಸ್ ಟಿಕೇಂದ್ರ ಸಿಂಗ್ ಕೊರೊನಾದಿಂದ ಸಾವನ್ನಪ್ಪಿದ ಸಂದರ್ಭದಲ್ಲಿ ಅವರಿಗೆ ಸಂತಾಪ ಸೂಚಿಸಿದ್ದ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಖೇಮ್ ಮತ್ತು ಸಾಮಾಜಿಕ ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ಅವರು ಗೋಮೂತ್ರ ಮತ್ತು ಸಗಣಿ ಕೊರೊನಾಗೆ ಮದ್ದಲ್ಲ ಎಂದಿದ್ದರು. ಅವರ ಈ ಹೇಳಿಕೆ ಟಿಕೇಂದ್ರ ಸಿಂಗ್‌ ಅವರ ಸಾವನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಮಣಿಪುರ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಇಬ್ಬರನ್ನೂ ಬಂಧಿಸಿದ್ದಾರೆ.

ಈ ಇಬ್ಬರೂ ತಮ್ಮ ಫೇಸ್‌ಬುಕ್‌ ಪೋಸ್ಟ್‌‌ನಲ್ಲಿ, ‘ಗೋವಿನ ಸೆಗಣಿ ಅಥವಾ ಮೂತ್ರ ಕೊರೊನಾ ಸೋಂಕಿಗೆ ಪರಿಹಾರವಲ್ಲ’ ಎಂದು ಬರೆದಿದ್ದರು. ಈ ಬಗ್ಗೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಉಷಮ್ ದೇಬನ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ. ಪ್ರೇಮಾನಂದ ಮೀಟೆಯವರು ವಾಂಗ್ಖೇಮ್ ಮತ್ತು ಲೈಚೋಂಬಮ್ ವಿರುದ್ಧ ದೂರು ದಾಖಲಿಸಿದ್ದು, ಇದರ ನಂತರ ಪೊಲೀಸರು ಅವರನ್ನು ಅವರ ನಿವಾಸಗಳಿಂದ ಬಂಧಿಸಿ ಕರೆದೊಯ್ದಿದ್ದಾರೆ.

ಈ ಬಂಧನದ ನಂತರ ಅವರಿಗೆ ಸೋಮವಾರ ಜಾಮೀನು ನೀಡಲಾಗಿತ್ತು. ಆದರೆ ಇದರ ನಂತರ ಸರ್ಕಾರವು ಅವರ ವಿರುದ್ದ NSA ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಿರಣಕುಮಾರ್ ಅವರು ಸೋಮವಾರ ಹೊರಡಿಸಿದ ಆದೇಶದಲ್ಲಿ, “ಮುಂದಿನ ಆದೇಶದವರೆಗೆ ಮತ್ತು ಜಾಮೀನಿನ ಮೇಲೆ ಬಿಡುಗಡೆ ಆಗುವರೆಗೆ ವಾಂಗ್ಖೇಮ್ ಅವರನ್ನು ‘ರಾಷ್ಟ್ರೀಯ ಭದ್ರತಾ ಕಾಯ್ದೆ 1980’ ರ ಸೆಕ್ಷನ್ 3 (2) ರ ಅಡಿಯಲ್ಲಿ ಬಂಧಿಸಲಾಗುವುದು” ಎಂದು ಹೇಳಿದ್ದಾರೆ.

ಎರೆಂಡ್ರೊ ಲೈಚೋಂಬಮ್ ಅವರ ಮೇಲೆ NSA ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಂಫಾಲ್ ವೆಸ್ಟ್ ಪೊಲೀಸ್ ವರಿಷ್ಠಾಧಿಕಾರಿ ಎಲ್. ಮೇಘಚಂದ್ರ ಸಿಂಗ್ ಹೇಳಿದ್ದಾರೆ. ಲೈಚೋಂಬಮ್‌ ರಾಜಕೀಯ ಸಂಘಟನೆಯಾದ ‘ಪೀಪಲ್ಸ್ ರಿಸರ್ಜೆನ್ಸ್‌‌ ಆಂಡ್‌‌ ಜಸ್ಟಿಸ್‌ ಅಲೈಯನ್ಸ್‌ (ಪಿಆರ್‌‌ಜೆಎ) ಕನ್ವೀನರ್ ಆಗಿದ್ದಾರೆ.

ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ವಾಂಗ್ಖೇಮ್‌ ಮತ್ತು ಲೈಚೋಂಬಮ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಈ ಹಿಂದೆ ಕೂಡಾ ಎರಡು ಬಾರಿ ಬಂಧಿಸಲಾಗಿತ್ತು.

Read Also: ಕಡಿಮೆಯಾಗಿದ್ದು ಕೊರೊನಾ ಪ್ರಕರಣಗಳಲ್ಲ; ಕೊರೊನಾ ಪರೀಕ್ಷೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights