JDU ನಲ್ಲಿ ಬಿರುಕು : CAA & NRC ವಿರೋಧಿಸಿ ರಾಜೀನಾಮೆಗೆ ಮುಂದಾದ ಪ್ರಶಾಂತ್‌ ಕಿಶೋರ್‌…

ಪೌರತ್ವ ತಿದ್ದುಪಡಿ ಕಾಯ್ದೆಗೆ ತಮ್ಮ ಪಕ್ಷ ಬೆಂಬಲ ನೀಡಿದ್ದನ್ನು ವಿರೋಧಿಸಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪವನ್ನು ಪಕ್ಷದ ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಿಟ್ಟಿದ್ದಾರೆ. ಆದರೆ ನಿತೀಶ್‌ ಕುಮಾರ್‌ ಅದಕ್ಕೆ ಸಮ್ಮತಿ ಸೂಚಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ನಿತೀಶ್ ಕುಮಾರ್ ಅವರೊಂದಿಗೆ ಎರಡು ಗಂಟೆಗಳ ಕಾಲ ಸಭೆ ನಡೆಸಿ ಹೊರಬಂದ ನಂತರ ಕಿಶೋರ್, ಸಿಎಎ ಮತ್ತು ಎನ್ಆರ್‌ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಬಗ್ಗೆ ನನಗೆ ವಿರೋಧವಿದೆ. ಈ ನಿಲುವುಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದ್ದಾರೆ.

 

“ನಾನು ನಿತೀಶ್‌ ಕುಮಾರ್‌ ಅವರನ್ನು ಭೇಟಿಯಾಗಿ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಒಟ್ಟಾಗಿ ದೇಶಕ್ಕೆ ಹೇಗೆ ಹಾನಿಕಾರಕವಾಗಿದೆ ಎಂಬುದನ್ನು ವಿವರಿಸಿದ್ದೇನೆ. ನನ್ನ ಹಿಂದಿನ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ. ಈಗ ನಿತೀಶ್ ಕುಮಾರ್‌ರವರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ” ಎಂದು ಕಿಶೋರ್ ಹೇಳಿದ್ದಾರೆ.

ತಮ್ಮ ಸರ್ಕಾರವು ಬಿಹಾರದಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ನಿತೀಶ್‌ ಕುಮಾರ್‌ರವರು ಪ್ರಶಾಂತ್‌ ಕಿಶೋರ್‌ರವರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಕಾಯ್ದೆನ್ನು ಬೆಂಬಲಿಸಿದ್ದಕ್ಕಾಗಿ ಕಿಶೋರ್, ಸರಣಿ ಟ್ವೀಟ್‌ಗಳ ಮೂಲಕ ತೀವ್ರವಾಗಿ ಪಕ್ಷವನ್ನು ಟೀಕಿಸಿದ್ದರು. ಗಾಂಧಿ ಮತ್ತು ಸಂವಿಧಾನವನ್ನು ತನ್ನ ಪ್ರಣಾಳಿಕೆಯನ್ನಾಗಿ ಮಾಡಿಕೊಂಡ ಪಕ್ಷವು ಈ ವಿಭಜನಕಾರಿ, ಸಂವಿಧಾನವಿರೋಧಿ ಕಾಯ್ದೆಯನ್ನು ಬೆಂಬಲಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಆಗ ಕೆಲವು ಪಕ್ಷದ ಮುಖಂಡರು ಪ್ರಶಾಂತ್‌ ಕಿಶೋರ್‌ರವರನ್ನು ಉಚ್ಛಾಟಿಸಬೇಕೆಂದು ಆಗ್ರಹಿಸಿದ್ದರು. ಆದರೂ ಪಕ್ಷದ ಮುಖಂಡರ ಬೇಡಿಕೆಗಳು ಮತ್ತು ಮಾತುಗಳಿಂದ ತಾನು ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಜೆಡಿಯು ಪಕ್ಷದ ವಕ್ತಾರ ಪವನ್ ವರ್ಮಾ ಮತ್ತು ಎಂಎಲ್‌ಸಿ ಗುಲಾಮ್ ರಸೂಲ್ ಬಲ್ಯಾವಿ ಅವರು ಸಹ ಪ್ರಶಾಂತ್‌ ಕಿಶೋರ್ ನಿಲುವಿಗೆ ಬೆಂಬಲ ಸೂಚಿಸಿ ದನಿಗೂಡಿಸಿದ್ದರು. ಬಲ್ಯಾವಿ ಸಿಎಬಿ ವಿರುದ್ಧ ಪ್ರತಿಭಟನಾ ಮೆರವಣಿಗೆಯಲ್ಲಿ ಸಹ ಭಾಗವಹಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights