ಕರ್ನಾಟಕ ಕಾಂಗ್ರೆಸ್‌ ಸೋಷಿಯಲ್ ಮೀಡಿಯಾ ನಿರ್ವಹಿಸುತ್ತಿದ್ದ ಕಂಪನಿ ಮೇಲೆ IT ದಾಳಿ; ಹಿಂದಿನ ಹುನ್ನಾರವೇನು?

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವಂತೆ ಮಾಡಲು ಮತ್ತು ತಮ್ಮನ್ನು ಸಿಎಂ ಅಭ್ಯರ್ಥಿ ಎಂದು ಪ್ರಮೋಟ್ ಮಾಡಿಕೊಳ್ಳುವ ಸಲುವಾಗಿ ಪ್ರಚಾರದ ಕೆಲಸಕ್ಕೆ ಮುಂದಾಗಿದ್ದರು. ಈ ಪ್ರಚಾರದ ಕೆಲಸವನ್ನು ಡಿಸೈನ್ ಬಾಕ್ಸ್ಡ್ ಎಂಬ ಪಿಆರ್ ಕಂಪೆನಿಗೆ ನೀಡಲಾಗಿತ್ತು. ಆದರೆ, ಇಂದು ಬೆಳ್ಳಂ ಬೆಳಗ್ಗೆಯೇ ರಾಜ್ಯದಲ್ಲಿ ಡಿಸೈನ್ ಬಾಕ್ಸ್ಡ್ ಕಚೇರಿ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅಲ್ಲದೆ, ಡಿಸೈನ್ ಬಾಕ್ಸ್ಡ್ ಕಂಪೆನಿ ಮುಖ್ಯಸ್ಥ ನರೇಶ್ ಅಗರ್ವಾಲ್ ತಂಗಿದ್ದ ಜೆ ಡಬ್ಲ್ಯೂ ಮ್ಯಾರಿಯೆಟ್  ಹೋಟೆಲ್ ನಲ್ಲೂ ಐಟಿ ದಾಳಿ ನಡೆದಿದೆ. ಒಟ್ಟು 13 ಅಧಿಕಾರಿಗಳ ತಂಡದಿಂದ ಎರಡು ಕಡೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. ಆದರೆ, ಇದು ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸುವ ತಂತ್ರವೇ? ಎಂಬ ಪ್ರಶ್ನೆ ಹುಟ್ಟುಹಾಕಿದೆ.

ಚುನಾವಣಾ ರಣತಂತ್ರಗಳನ್ನು ರಚಿಸಲು ಮತ್ತು ಪಕ್ಷದ-ಅಭ್ಯರ್ಥಿಯ ಪ್ರಚಾರಕ್ಕೆ ಇತ್ತೀಚೆಗೆ ಎಲ್ಲಾ ರಾಜಕೀಯ ಪಕ್ಷಗಳೂ ಪಿಆರ್​ ಕಂಪೆನಿಗಳನ್ನು ನೇಮಿಸಿಕೊಳ್ಳುವುದು ವಾಡಿಕೆಯಾಗಿದೆ. ಇದೇ ರೀತಿ ಮುಂದಿನ ಚುನಾವಣೆಯಲ್ಲಿ ತನ್ನ ಪರವಾಗಿ ಕೆಲಸ ಮಾಡಲು ಡಿ.ಕೆ. ಶಿವಕುಮಾರ್​ ಡಿಸೈನ್ ಬಾಕ್ಸ್ಡ್ ಎಂಬ ಪಿಆರ್​ ಕಂಪೆನಿಯನ್ನು ನೇಮಕ ಮಾಡಿದ್ದರು. ಈ ಕಂಪೆನಿ ಸಹ ಡಿ.ಕೆ. ಶಿವಕುಮಾರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ರೀತಿ ಬಿಂಬಿಸುತ್ತಿದ್ದವು. ಅಲ್ಲದೆ, ಡಿಕೆಶಿ ಮುಂದಿನ ಸಿಎಂ ಅಭ್ಯರ್ಥಿ ಎಂಬ ವಿಚಾರವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತವಾಗಿತ್ತು.

ಆದರೆ, ಒಂದು 8 ಅಧಿಕಾರಿಗಳ ಐಟಿ ತಂಡ ಡಿಸೈನ್ ಬಾಕ್ಸ್ಡ್ ಕಚೇರಿ ಮೇಲೆ ದಾಳಿ ನಡೆಸಿದ್ದರೆ, 5 ಅಧಿಕಾರಿಗಳ ಮತ್ತೊಂದು ತಂಡ ಕಂಪೆನಿ ಮುಖ್ಯಸ್ಥ ನರೇಶ್ ಅಗರ್ವಾಲ್ ತಂಗಿದ್ದ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್​ ಮೇಲೆ ದಾಳಿ ನಡೆಸಿದೆ. ಈ ವೇಳೆ ಹೋಟೆಲ್ ಕೋಣೆಯಲ್ಲಿ ಡಿ.ಕೆ. ಶಿವಕುಮಾರ್​ ಅವರ ಪೋಟೋ ಸಹ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೆ, ಐಟಿ ಅಧಿಕಾರಿಗಳು ಅನೇಕ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದು, ಇದು ತಮ್ಮ ಪ್ರಬಲ ಪ್ರತಿಸ್ಪರ್ಧಿ ಡಿ.ಕೆ. ಶಿವಕುಮಾರ್ ಅವರನ್ನು ಮುಗಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ತಂತ್ರವೇ? ಎಂಬ ಊಹಾಪೋಹಗಳು ಪ್ರಶ್ನೆಗಳು ಮನೆ ಮಾಡುತ್ತಿವೆ.​

ರಾಜ್ಯ ಕಾಂಗ್ರೆಸ್​ನಿಂದಲೇ ಡಿಕೆಶಿ ವಿರುದ್ಧ ಹೈಕಮಾಂಡ್​ಗೆ ದೂರು?

ಮುಂದಿನ ಚುನಾವಣೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದೇ ವೇಳೆಗೆ ವಿವಿಧ ಹಗರಣಗಳಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಸಿಎಂ ಗಾಧಿ ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಪಕ್ಷದಲ್ಲಿ ತಾವೇ ಪ್ರಬಲ ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಡಿ.ಕೆ. ಶಿವಕುಮಾರ್​ ತಮ್ಮ ಪರ ಪ್ರಚಾರಕ್ಕೆ ಡಿಸೈನ್ ಬಾಕ್ಸ್ಡ್ ಕಂಪೆನಿಯನ್ನು ನೇಮಕ ಮಾಡಿಕೊಂಡಿದ್ದರು.

ಈ ಕಂಪೆನಿ ಕೆಪಿಸಿಸಿ ಮತ್ತು ಡಿಕೆಶಿ ಪರವಾಗಿ ಕೆಲಸ ಮಾಡುವ ಜೊತೆಗೆ ಪಕ್ಷದೊಳಗಿನ ಡಿ.ಕೆ. ಶಿವಕುಮಾರ್ ಪ್ರತಿಸ್ಪರ್ಧಿಗಳ ವಿರುದ್ಧವೂ ನಕಾರಾತ್ಮಕ ಕೆಲಸ ಮಾಡಲು ತೊಡಗಿತ್ತು. ಈ ವಿಚಾರ ಸಾಮಾನ್ಯವಾಗಿ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಡಿಸೈನ್ ಬಾಕ್ಸ್ಡ್​​ ಕಂಪೆನಿ ವಿರುದ್ಧ ಸ್ವತಃ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹೈಕಮಾಂಡ್​ಗೆ ದೂರು ನೀಡಿತ್ತು. ಈ ವೇಳೆ ಡಿಕೆಶಿ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಹೈಕಮಾಂಡ್ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಬಲದ ಬಗ್ಗೆ ಬೂತ್​ ಮಟ್ಟದಲ್ಲಿ ಸಂಶೋಧನೆ ನಡೆಸಲು ಸೂಚನೆ ನೀಡಿತ್ತು.

ಅದರಂತೆ ಡಿಸೈನ್ ಬಾಕ್ಸ್ಡ್​ ಕಂಪೆನಿ ಎಲ್ಲಾ ಕ್ಷೇತ್ರದಲ್ಲೂ ಚುನಾವಣಾ ಸಂಶೋಧನೆಗೆ ಮುಂದಾಗಿತ್ತು. ಆದರೆ, ಈ ಸಂದರ್ಭದಲ್ಲೇ ಆ ಕಂಪೆನಿ ಮೇಲೆ ಐಟಿ ದಾಳಿ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಇದು ಡಿಕೆಶಿ ಅವರನ್ನು ಮುಗಿಸಲು ನಡೆಸುತ್ತಿರುವ ತಂತ್ರವೇ? ಎಂಬ ಪ್ರಶ್ನೆಯೂ ಮೂಡುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights