ಕೊರೊನಾ ಸಂದರ್ಭದಲ್ಲಿ ಕ್ರಿಕೆಟ್ ದೇವರ ಸ್ಪೂರ್ತಿದಾಯಕ ಮಾತುಗಳು!

ಇತ್ತೀಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾದ ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಕೊರೊನಾ ಸಂದರ್ಭದಲ್ಲಿ ಕೇಳಲೇ ಬೇಕಾದ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕೊರೊನಾ ಸಮಯದಲ್ಲಿ ಬಯೋ-ಬಬಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್,” ನಾನು 24 ವರ್ಷಗಳ ವೃತ್ತಿಜೀವನದ ಪ್ರಮುಖ ಭಾಗವನ್ನು ಒತ್ತಡದಲ್ಲಿ ಕಳೆದಿದ್ದೆ. ಅದನ್ನು ಎದುರಿಸಲು ಅದರ ಸ್ವೀಕಾರ ಅಗತ್ಯ ಎಂದು ಹೇಳಿದರು. ಅಕಾಡೆಮಿ ಆಯೋಜಿಸಿದ್ದ ಚರ್ಚೆಯಲ್ಲಿ ಸಚಿನ್, ಆಟಕ್ಕೆ ದೈಹಿಕವಾಗಿ ತಯಾರಿ ಮಾಡುವುದರ ಜೊತೆಗೆ, ನೀವು ಮಾನಸಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕಾಲಾನಂತರದಲ್ಲಿ ನಾನು ಅರಿತುಕೊಂಡೆ. ನನ್ನ ಮನಸ್ಸಿನಲ್ಲಿ, ನಾನು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಪಂದ್ಯವು ಪ್ರಾರಂಭವಾಗುತ್ತಿತ್ತು. ಒತ್ತಡದ ಮಟ್ಟ ತುಂಬಾ ಹೆಚ್ಚಿತ್ತು “ಎಂದು ಸಚಿನ್ ಹೇಳಿಕೊಂಡಿದ್ದಾರೆ.

ನನ್ನ ಮನಸ್ಸನ್ನು ಹಾಯಾಗಿಡಲು ನಾನು ಏನಾದರೂ ಮಾಡುತ್ತಿದ್ದೆ. ಅವುಗಳಲ್ಲಿ ಬ್ಯಾಟಿಂಗ್ ಅಭ್ಯಾಸ, ಟಿವಿ ನೋಡುವುದು ಮತ್ತು ವಿಡಿಯೋ ಗೇಮ್‌ಗಳನ್ನು ಆಡುವುದರ ಜೊತೆಗೆ ನನ್ನ ದಿನನಿತ್ಯದ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಕ್ರೀಡೆಯಲ್ಲಿ ಕ್ರೀಡಾಪಟು ಏರಿಳಿತ ಕಾಣುವುದು ಸಹಜ, ಆದರೆ ಸೋತಾಗ ಸಮಚಿತ್ತದಿಂದ ಸ್ವೀಕರಿಸಬೇಕು, ದೇಹಕ್ಕೆ ಗಾಯವಾದಾಗ ವೈದ್ಯರು ಪರೀಕ್ಷಿಸಿ ಹೇಗೆ ಔಷಧಿ ಕೊಡುತ್ತಾರೆಯೋ ಮನಸ್ಸಿಗೆ ಗಾಯವಾದಾಗಲೂ ಮತ್ತೊಬ್ಬರಿಂದ ಸಹಾಯ ಪಡೆದುಕೊಂಡು ಗುಣಪಡಿಸಲು ನೋಡಬೇಕು, ನೀವು ಸೋತಾಗ, ಮಾನಸಿಕವಾಗಿ ಕುಗ್ಗಿದಾಗ ನಿಮ್ಮ ಸುತ್ತ ಜನರಿರಬೇಕಷ್ಟೆ.

ಇಲ್ಲಿ ಬದುಕಿನ ಸತ್ಯಗಳನ್ನು ಸ್ವೀಕರಿಸುವುದು ಮುಖ್ಯವಾಗುತ್ತದೆ. ಅದು ಒಬ್ಬ ಕ್ರೀಡಾಪಟುವಿಗೆ ಮಾತ್ರವಲ್ಲ, ಆತನ ಸುತ್ತ ಇರುವ ಜನರಿಗೂ ಅನ್ವಯವಾಗುತ್ತದೆ. ನೀವು ವಾಸ್ತವವನ್ನು ಅರಿತಾಗ ಮುಂದಿನ ದಾರಿ ಹುಡುಕುತ್ತೀರಿ, ಜೀವನದಲ್ಲಿ ನಾವು ಯಾರಿಂದ ಬೇಕಾದರೂ ಕಲಿಯಬಹುದು, ನಾನು ಆಟವಾಡುತ್ತಿದ್ದ ದಿನದಲ್ಲಿ ಚೆನ್ನೈಯಲ್ಲಿ ಹೊಟೇಲ್ ಸಿಬ್ಬಂದಿಯಿಂದ ಕಲಿತೆ, ನಾನು ಉಳಿದುಕೊಂಡಿದ್ದ ಹೊಟೇಲ್ ನಲ್ಲಿ ಸಿಬ್ಬಂದಿ ಬಂದು ಟೇಬಲ್ ಮೇಲೆ ದೋಸೆ ಇಟ್ಟು ನನಗೊಂದು ಸಲಹೆ ಕೊಟ್ಟ, ನನ್ನ ಮೊಣಕೈ ಗಾಯದಿಂದ ಬ್ಯಾಟಿಂಗ್ ಸರಿಯಾಗಿ ಮಾಡಲಾಗುತ್ತಿಲ್ಲ ನಿಮಗೆ ಎಂದು ಹೇಳಿದ. ನನಗೆ ನನ್ನ ಸಮಸ್ಯೆ ಸರಿಯಾಗಿ ಗೊತ್ತಾಯಿತು ಎಂದು ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನವನ್ನು ನೆನೆದಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸತತವಾಗಿ ದುಡಿಯುತ್ತಿರುವ ವೈದ್ಯರು, ಪೊಲೀಸರು, ಮುಂಚೂಣಿ ಕಾರ್ಯಕರ್ತರ ಶ್ರಮಕ್ಕೆ ಸಚಿನ್ ತೆಂಡೂಲ್ಕರ್ ಧನ್ಯವಾದ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights