ಬಿಜೆಪಿಯಲ್ಲಿ ಮತ್ತೆ ಆಂತರಿಕ ಬೇಗುದಿ; ದೆಹಲಿಗೆ ತೆರಳಿದ ಗೃಹ ಸಚಿವ ಬೊಮ್ಮಾಯಿ!

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದೆ. ಸೋಂಕನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಬಿಜೆಪಿಯಲ್ಲಿ ಆಂತರಿಕ ಬೇಗುದಿಯನ್ನು ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ ರವಿ ಅವರು ಸರ್ಕಾರದ ವಿರುದ್ದ ಹರಿಹಾಯ್ದಿದ್ದರು.

ಉಪಚುನಾವಣೆ ಫಲಿತಾಂಶ, ಆಕ್ಸಿಜನ್‌ ಕೊರತೆಯಿಂದ ಚಾಮರಾಜನಗರದಲ್ಲಿ ರೋಗಿಗಳ ಸಾವು, ಬೆಂಗಳೂರು ಬೆಡ್‌ ದಂದೆಗೆ ಸಂಬಂಧಿಸಿದಂತೆ ಸರ್ಕಾರ ವಿರುದ್ದ ಮಾತನಾಡಿದ್ದ ಸಿ.ಟಿ ರವಿ, ಈ ಬಗ್ಗೆ ಹೈಕಮಾಂಡ್‌ಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಬೆನ್ನಲ್ಲೇ, ಮಾಧ್ಯಮದ ಮುಂದೆ ಪ್ರತ್ಯಕ್ಷರಾದ ಸಂಸದ ತೇಜಸ್ವಿ ಸೂರ್ಯ ಅವರು, ಬೆಡ್‌ ದಂದೆಗೆ ಸಂಬಂಧಿಸಿದಂತೆ ಕೋಮು ಬಣ್ಣ ಬಳಿಯಲು ಮುಂದಾಗಿದ್ದರು. ಆದರೆ, ಅವರ ಪ್ರಯತ್ನವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡ ನೆಟ್ಟಿಗರು ಸರ್ಕಾರ ವಿಫಲತೆಗಳನ್ನು ಎತ್ತಿ ಹಿಡಿದಿದ್ದಾರೆ.

ರಾಜ್ಯದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ, ಶಾಸಕರೂ ಆಗಿರುವ ಸಿ.ಟಿ ರವಿ ಅವರೇ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವುದು ರಾಜ್ಯ ಬಿಜೆಪಿ ಘಟಕ ಮತ್ತು ರಾಜ್ಯ ಸರ್ಕಾರದ ವಿರುದ್ದ ಹೈಕಮಾಂಡ್‌ಗೆ ಸಿಟ್ಟು ತರಿಸಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ಹಾಗೂ ನಿರ್ವಹಿಸುತ್ತಿರುವ ಕೆಲಸಗಳ ಬಗ್ಗೆ ಹೈಕಮಾಂಡ್‌ಗೆ ತಿಳಿಸಲು ರಾಜ್ಯ ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ದಿಹಲಿಗೆ ತೆರಳಿದ್ದಾರೆ.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬೇಡಿಕೆಯಷ್ಟು ಆಕ್ಸಿಜನ್‌ ನೀಡುವ ಕುರಿತು ಉಂಟಾದ ಗೊಂದಲದ ಬಗ್ಗೆ ದೆಹಲಿಯಲ್ಲಿ ಚರ್ಚಿಸಲಾಗುವುದು ಎಂದು ಗೃಹ ಸಚಿವರ ಆಪ್ತ ಮೂಲಗಳು ತಿಳಿಸಿವೆ.

ಸರಕಾರ 1,700 ಟನ್‌ ಆಕ್ಷಿಜನ್‌ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಹೈಕೋರ್ಟ್‌ ಸಹ ರಾಜ್ಯಕ್ಕೆ 1,200 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಒದಗಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಇದರ ವಿರುದ್ಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಸುಪ್ರೀಂ ಕೋರ್ಟ್‌ ಈ ಬಗ್ಗೆ ರಾಜ್ಯದ ಅಗತ್ಯವನ್ನು ಪೂರೈಸುವಂತೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರೆ ಮೇರೆಗೆ ಗೃಹ ಸಚಿವರು ದಿಲ್ಲಿಗೆ ತೆರಳಿದ್ದಾರೆ ಎಂದೂ ಹೇಳಲಾಗುತ್ತಿದೆ.

Read Also: ಕೊರೊನಾ ನಿಯಂತ್ರಣ: ಮುಂಬೈ ಮಾದರಿಗೆ ಸುಪ್ರೀಂ ಮೆಚ್ಚುಗೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights