ಸ್ವಾತಂತ್ರ್ಯ ದಿನ: ‘ಕಿಸಾನ್ ಮಝ್ದೂರ್ ಅಝಾದಿ ಸಂಗ್ರಾಮ್ ದಿವಸ್’ ಆಚರಣೆಗೆ ರೈತರ ನಿರ್ಧಾರ

ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಆದರೆ, ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳಿಂದಾಗಿ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಸ್ವಾತಂತ್ರ್ಯ ದಿನವನ್ನು ‘ಕಿಸಾನ್ ಮಝ್ದೂರ್ ಅಝಾದಿ ಸಂಗ್ರಾಮ್ ದಿವಸ್’ ಆಗಿ ಆಚರಿಸಲು ಪ್ರತಿಪ್ರಭಟನಾ ನಿರತ ರೈತರು ನಿರ್ಧರಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಕರೆಯ ಹಿನ್ನೆಲೆಯಲ್ಲಿ ದೇಶಾದ್ಯಂತದ ರೈತರು ಸ್ವಾತಂತ್ರ ದಿನಾಚರಣೆಯಂದು ತೆಹ್ಸಿಲ್ ಹಾಗೂ ಬ್ಲಾಕ್ ಮಟ್ಟದಲ್ಲಿ ‘ತಿರಂಗಾ ರ್ಯಾಲಿ’ ನಡೆಸಲಿದ್ದಾರೆ. ಆದರೆ, ರ್ಯಾಲಿ ದಿಲ್ಲಿ ಪ್ರವೇಶಿಸದು ಎಂದು ಅವರು ಒತ್ತಿ ಹೇಳಿದ್ದಾರೆ.

”ಆಗಸ್ಟ್ 15 ಅನ್ನು ತಿರಂಗಾ ರ್ಯಾಲಿ ಆಯೋಜಿಸುವ ಮೂಲಕ ಕಿಸಾನ್ ಮಜ್ದೂರ್ ಅಝಾದಿ ಸಂಗ್ರಾಮ್ ದಿವಸ್ ಆಗಿ ಆಚರಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಎಲ್ಲ ಘಟಕಗಳಿಗೆ ಕರೆ ನೀಡಿದೆ” ಎಂದು ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಎಸ್ಸಿಸಿ)ಯ ಕವಿತಾ ಕುಲಕರ್ಣಿ ಹೇಳಿದ್ದಾರೆ. ”ಅಂದು ರೈತರು ತೆಹ್ಸಿಲ್ ಹಾಗೂ ಜಿಲ್ಲಾ ಕೇಂದ್ರದಲ್ಲಿ ಟ್ರಾಕ್ಟರ್, ಮೋಟಾರು ಸೈಕಲ್ ಹಾಗೂ ಎತ್ತಿನಗಾಡಿಗಳೊಂದಿಗೆ ಬ್ಲಾಕ್, ತೆಹ್ಸೀಲ್ ಹಾಗೂ ಜಿಲ್ಲೆ ಕೇಂದ್ರ ಕಚೇರಿಗೆ ತಿರಂಗಾ ರ್ಯಾಲಿ ನಡೆಸಲಿದ್ದಾರೆ. ವಾಹನಗಳಿಗೆ ರಾಷ್ಟ್ರಧವಜ ಅಳವಡಿಸಿ ಈ ರ್ಯಾಲಿ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.

ರ್ಯಾಲಿ ದೇಶಾದ್ಯಂತ ಪೂರ್ವಾಹ್ನ 11 ಗಂಟೆಯಿಂದ ಅಪರಾಹ್ನ 1 ಗಂಟೆ ವರೆಗೆ ನಡೆಯಲಿದೆ. ಸಿಂಘು, ಟಿಕ್ರಿ ಹಾಗೂ ಗಾಝಿಪುರ ಗಡಿ ಸೇರಿದಂತೆ ದಿಲ್ಲಿ ಗಡಿಯಲ್ಲಿ ಕೂಡ ತಿರಂಗ ರ್ಯಾಲಿ ಹಾಗೂ ದಿನಪೂರ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಇನ್ನೋರ್ವ ರೈತ ನಾಯಕ ಅಭಿಮನ್ಯು ಕೊಹಾರ್ ಹೇಳಿದ್ದಾರೆ. ”ಸಿಂಘುವಿನಲ್ಲಿ ರೈತರು ಪ್ರತಿಭಟನಾ ಸ್ಥಳದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಕೆಎಂಪಿ ಎಕ್ಸ್ಪ್ರೆಸ್ವೇ ವರೆಗೆ ತ್ರಿವರ್ಣ ಧ್ವಜದೊಂದಿಗೆ ರ್ಯಾಲಿ ನಡೆಸಲಿದ್ದಾರೆ.

ಈ ಸಂದರ್ಭ ರೈತ ಒಕ್ಕೂಟಗಳ ಧ್ವಜವನ್ನು ತಮ್ಮ ವಾಹನದಲ್ಲಿ ಅಳವಡಿಸಲಿದ್ದಾರೆ” ಎಂದು ರೈತ ನಾಯಕ ಜಗಮೋಹನ್ ಸಿಂಗ್ ಹೇಳಿದ್ದಾರೆ. ”ರ್ಯಾಲಿಗಳು ದೇಶಾದ್ಯಂತ ಬ್ಲಾಕ್ ಹಾಗೂ ತೆಹ್ಸಿಲ್ ಮಟ್ಟದಲ್ಲಿ ನಡೆಯಲಿದೆ. ಅಲ್ಲದೆ, ಶಾಂತಿಯುತವಾಗಿ ನಡೆಯಲಿದೆ. ದಿಲ್ಲಿ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ನಾವು ಮತ್ತ ಸ್ಪಷ್ಟಪಡಿಸುತ್ತಿದ್ದೇವೆ” ಎಂದು ಅಭಿಮನ್ಯು ಕೊಹಾರ್ ಹೇಳಿದ್ದಾರೆ. ”ಜನವರಿ 26ರಂದು ನಡೆದ ಘಟನೆಗಳು ನಮ್ಮ ಚಳವಳಿಗೆ ಧಕ್ಕೆ ತಂದವು. ಆದುದರಿಂದ ಆಗಸ್ಟ್ 15ರಂದು ನಡೆಯಲಿರುವ ತಿರಂಗಾ ಮಾರ್ಚ್ ಯಾವುದೇ ನಗರ ಪ್ರವೇಶಿಸದು. ಆದರೆ, ನಮ್ಮ ಬೇಡಿಕೆ ಈಡೇರುವ ವರೆಗೆ ಚಳವಳಿ ನಿಲ್ಲದು” ಎಂದು ಜಗಮೋಹನ್ ಸಿಂಗ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights