ವಲಸೆ 2.0: ಮುಂಬೈ ರೈಲು ನಿಲ್ದಾಣಗಳಲ್ಲಿ 2020ರ ವಲಸೆ ದೃಶ್ಯಗಳು ಮರುಕಳಿಸುತ್ತಿವೆ!

ಮಹಾರಾಷ್ಟ್ರವು ‘ಬಹುತೇಕ’ ಲಾಕ್ ಡೌನ್ ಹಂತದಲ್ಲಿದೆ. ಸಾರ್ವಜನಿಕ ಸಭೆ-ಆಂದೋಲನವನ್ನು ನಿರ್ಬಂಧಿಸಲಾಗಿದೆ. ಜನರು ಮನೆಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಅಗತ್ಯ ಸೇವೆಗಳ ಹೊರತಾಗಿ ಉಳಿದವುಗಳನ್ನು ಮುಚ್ಚಲಾಗಿದೆ. ಇದೆಲ್ಲವೂ 2020ರಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಮತ್ತು ವಲಸೆ ಚಿತ್ರಣವನ್ನು ಮತ್ತೆ ಕಟ್ಟಿಕೊಡುತ್ತಿವೆ.

ಈಗ ಕೆಲಸವಿಲ್ಲದೆ ಅಥವಾ ಉದ್ಯೋಗವಿಲ್ಲದ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ-ಸ್ಥಳಗಳಿಗೆ ಮರಳುತ್ತಿದ್ದಾರೆ. 2020 ರಲ್ಲಿ, ಅವರಿಗೆ ತಮ್ಮೂರಿಗೆ ಹಿಂತಿರುಗಲು ಯಾವುದೇ ರೈಲ್ವೆ ಸೇವೆಗಳಿರಲಿಲ್ಲ. ಹೀಗಾಗಿ ಅವರು ನಡೆದುಕೊಂಡೇ ಹೋದರು. ಈ ಬಾರಿ ಒಂದೇ ವ್ಯತ್ಯಾಸವೆಂದರೆ ರೈಲುಗಳು ಓಡುತ್ತಿವೆ ಮತ್ತು ಆದ್ದರಿಂದ ಕಾರ್ಮಿಕರು ಮನೆಗೆ ಮರಳುತ್ತಿದ್ದಾರೆ.

ಮುಂಬೈನ ಚೆಂಬೂರು ಪ್ರದೇಶದಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದ ಮಹೇಶ್ ಉದಿಯಾರ್ ಅವರು ತಮ್ಮೂರು ತಮಿಳುನಾಡಿನ ನಾಗರ್‌ಕೋಯಿಲ್‌ಗೆ ತೆರಳಲು ರೈಲುಗಾಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್‌ಎಂಟಿ)ನಲ್ಲಿ ಕಾಯುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅವರಿಗೆ ಯಾವುದೇ ಕೆಲಸವಿಲ್ಲದ ಕಾರಣ ಅವರು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಮುಂಬೈನಿಂದ ತಮಿಳುನಾಡಿಗೆ ಹೊರಟಿದ್ದಾರೆ.

“ಈ ಸಮಯದಲ್ಲಿ ಆಟೋಗಳನ್ನು ಹೊರತೆಗೆಯಲು ಅನುಮತಿ ಇಲ್ಲ. ಹೀಗಾಗಿ ಇಲ್ಲಿ ಇರುವುದರಿಂದ ಜೀವನ ನಿರ್ವಹಣೆ ಕಷ್ಟ.! ಆಟೋ ಮಾಲೀಕರು ಈ ತಿಂಗಳು ನನಗೆ ಸಂಬಳವನ್ನು ನೀಡುವುದಿಲ್ಲ. ಕೆಲಸವಿಲ್ಲದಿದ್ದರೆ ನಾವು ಇಲ್ಲಿ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ, ನಾನು ಮನೆಗೆ ಮರಳಲು ನಿರ್ಧರಿಸಿದೆ” ಎಂದು ಮಹೇಶ್ ಹೇಳಿದರು.

ಕಾರ್ಮಿಕರು ಮತ್ತು ಇತರರು ರಾಜ್ಯವನ್ನು ತೊರೆಯದಂತೆ ಮಹಾರಾಷ್ಟ್ರ ಸರ್ಕಾರ ಮನವಿ ಮಾಡಿದೆ. “ನಾವು ನಿಮ್ಮೆಲ್ಲರನ್ನೂ ನೋಡಿಕೊಳ್ಳುತ್ತೇವೆ. ನಾವು ನಿಮಗೆ ಆಹಾರ ಮತ್ತು ಆಹಾರ ಧಾನ್ಯಗಳನ್ನು ಒದಗಿಸುತ್ತೇವೆ” ಎಂದು ರಾಜ್ಯ ಕಾರ್ಮಿಕ ಸಚಿವ ಹಸನ್ ಮುಶ್ರಿಫ್ ಹೇಳಿದ್ದಾರೆ.

ಆದರೆ ಈ ಮನವಿ ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾಡಿದ ಇತರ ಪ್ರಕಟಣೆಗಳೂ ಹೆಚ್ಚು ಪರಿಣಾಮ ಬೀರುತ್ತಿಲ್ಲ. ಏಪ್ರಿಲ್ 13 ರಂದು ರಾಜ್ಯವನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಕಾರ್ಮಿಕ ವರ್ಗದ ವ್ಯಾಪಾರಿಗಳು, ಆಟೋವಾಲಾಗಳು ಮತ್ತು ಇತರ ಜನರಿಗೆ ಪರಿಹಾರವಾಗಿ 1500 ರೂ. ನೀಡುತ್ತೇವೆ ಎಂದು ಘೋಷಿಸಿದರು. ಆದರೆ, ಈ ಪರಿಹಾರದ ಹಣವು ಮುಂಬೈನಂತಹ ನಗರದಲ್ಲಿ ಬದುಕಲು ‘ತುಂಬಾ ಕಡಿಮೆ’ ಎಂದು ರಾಜ್ಯವನ್ನು ತೊರೆಯುತ್ತಿರುವ ಕಾರ್ಮಿಕರು ಹೇಳುತ್ತಿದ್ದಾರೆ.

ಮತ್ತೆ ಶುರುವಾಯಿತು ವಲಸೆ: ಊರುಗಳಿಗೆ ತೆರಳಲು ಮುಂಬೈ ರೈಲು ನಿಲ್ದಾಣದಲ್ಲಿ ಜಮಾಯಿಸಿದ  ಸಾವಿರಾರು ಜನ

ಅವ್ನೇಶ್ ಕುಮಾರ್ ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಅಮೃತಶಿಲೆಯ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಅವ್ನೇಶ್ ಮತ್ತು ಅವನ ಸ್ನೇಹಿತರು ಕುರ್ಲಾದ ಲೋಕಮಾನ್ಯ ತಿಲಕ್ ಟರ್ಮಿನಸ್‌ನ ಹೊರಗೆ ದೀರ್ಘ ಸರತಿಯಲ್ಲಿ ಕಾಯುತ್ತಿದ್ದರು. “ಕಳೆದ ವರ್ಷ, ನಾವು ಬಸ್ ಮೂಲಕ ಮಹಾರಾಷ್ಟ್ರ ಗಡಿಗೆ ಹೋಗಿದ್ದೆವು. ಅಲ್ಲಿಂದ ಟ್ರಕ್ ಮೂಲಕ ಇಂದೋರ್‌ಗೆ ಹೋದೆವು. ನಂತರ ನಾವು ಉತ್ತರ ಪ್ರದೇಶ ಗಡಿಯವರೆಗೆ ನಡೆದೆವು. ನಂತರ, ಉನ್ನಾವೋದಲ್ಲಿ ಮನೆಗೆ ಹೋಗಲು ನಮಗೆ ಟ್ರಕ್ ಸಿಕ್ಕಿತು. ಈ ವರ್ಷ, ಕನಿಷ್ಠ ನಾವು ನೇರವಾಗಿ ನಮ್ಮ ರಾಜ್ಯಕ್ಕೆ ಹೋಗಲು ರೈಲು ಸಿಗುತ್ತದೆ. ಆದರೆ, ಇನ್ನೂ ನಮ್ಮ ರೈಲ್ವೇ ಟಿಕೆಟ್‌ ಕನ್ಫರ್ಮ್‌ ಆಗಿಲ್ಲ. ಅದಕ್ಕಾಗಿ ಕಾಯಬೇಕು ಎಂದು ಪೊಲೀಸರು ಹೇಳಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

“ಕೇಂದ್ರ ರೈಲ್ವೆ ಇದುವರೆಗೆ 230 ವಿಶೇಷ ಬೇಸಿಗೆ ರೈಲುಗಳನ್ನು ಘೋಷಿಸಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅದು ಹೆಚ್ಚಾಗಬಹುದು. ನಮ್ಮ ವರದಿಗಳ ಪ್ರಕಾರ, ಈ ರೈಲುಗಳು ಸಂಪೂರ್ಣ ಸಾಮರ್ಥ್ಯದೊಂದಿಗೆ ಸಂಚರಿಸುತ್ತವೆ” ಎಂದು ಕೇಂದ್ರ ರೈಲ್ವೆಯ ಚೀಫ್‌ ಪಿಆರ್‌ಓ ಶಿವಾಜಿ ಸುತಾರ್ ಹೇಳಿದರು.

ಇದನ್ನೂ ಓದಿ: ಲಾಕ್‌ಡೌನ್‌ನಲ್ಲಿ ಭಾರತದ ಬಿಲಿಯನೇರ್‌ಗಳ ಆದಾಯ 35% ಹೆಚ್ಚಾಗಿದೆ; ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ: ಆಕ್ಸ್‌ಫ್ಯಾಮ್ ವರದಿ

ಏತನ್ಮಧ್ಯೆ, ಮಹಾರಾಷ್ಟ್ರ ಸರ್ಕಾರವು ಕಾರ್ಮಿಕರಿಗೆ ಆಹಾರ ಮತ್ತು ಆಹಾರ ಧಾನ್ಯಗಳನ್ನು ನೀಡುವುದಾಗಿ ಘೋಷಿಸಿದೆ.  ಆಹಾರವನ್ನು ಶಿವ ಭೋಜನ್ ಥಾಲಿ ಯೋಜನೆ ಮತ್ತು ಧಾನ್ಯಗಳನ್ನು ಪಡಿತರ ವ್ಯವಸ್ಥೆಯ ಮೂಲಕ ನೀಡುತ್ತದೆ. ಇದು ಏಳು ಕೋಟಿ ಜನರನ್ನು ಒಳಗೊಳ್ಳುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.

ಆದರೆ, ಕೇವಲ 65 ಲಕ್ಷ ಜನರು ಮಾತ್ರ ಒಂದು ಕಿಲೋಗ್ರಾಂ ಅಕ್ಕಿಗೆ 2 ರೂ. ಮತ್ತು ಒಂದು ಕಿಲೋಗ್ರಾಂ ಗೋಧಿಗೆ 3 ರೂ. ಕೊಟ್ಟು ಖರೀದಿಸುವ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಜನರು 40 ಲಕ್ಷ ಮಾತ್ರ. ಅಲ್ಲದೆ, ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯಡಿ ಬರುವವರು 24 ಲಕ್ಷ ಜನರು ಮಾತ್ರ. ಆದರೆ, ಈ ಅಂತ್ಯೋದಯ ಯೋಜನೆ ವ್ಯಾಪ್ತಿಗೆ ಒಳಪಡಬಹುದಾದವರ ಸಂಖ್ಯೆ 65 ಲಕ್ಷದಟ್ಟಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಮೂಲಗಳು ತಿಳಿಸಿವೆ.

ಹೀಗಾಗಿ, “ಪಡಿತರ ಚೀಟಿಯ ಸ್ಥಿತಿಯನ್ನು ಸ್ವಲ್ಪ ಸಮಯದವರೆಗೆ ಬದಿಗಿಡುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಇದು ಸಂದಿಗ್ಧ ಪರಿಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿಯೂ, ರಾಜ್ಯದ ಗೋದಾಮುಗಳು ಧಾನ್ಯಗಳಿಂದ ತುಂಬಿರುವುದರಿಂದ, ಶಾಪಿಂಗ್ ಮಾಡಲು ಬರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ಪಡಿತರವನ್ನು ನೀಡಬೇಕು. ಆದರೆ, ಈ ರೀತಿಯ ಯೋಜನೆಯಾಗಲೂಈ – ಚಿಂತನೆಯಾಗಲೀ ಸರ್ಕಾರಕ್ಕಿಲ್ಲ. ಇದು ಹೊರ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ಕಾರಣವಾಗಿದೆ” ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಉಲ್ಕಾ ಮಹಾಜನ್ ಹೇಳಿದರು.

News18 Kannada - ವಲಸೆ ಕಾರ್ಮಿಕರನ್ನು ಇನ್ನೂ ಯಾಕೇ ಮನೆಗೆ ಕಳಿಸಿಲ್ಲ? - ಮಹಾರಾಷ್ಟ್ರ  ಸರ್ಕಾರಕ್ಕೆ ಸುಪ್ರೀಂ ತರಾಟೆ Top Court slammed Maharashtra Govt On Migrants -  Karnataka Kannada News, Today's ...

ಕಾರ್ಮಿಕರು ನಗರವನ್ನು ತೊರೆಯಲು ಕೊರೊನಾ ಕಾರಣವಲ್ಲ. ಸೋಂಕಿನ ಬಗ್ಗೆ ಅವರು ಭಯ-ಭೀತರಾಗಿಲ್ಲ. ಆದರೆ, ಅವರಿಗೆ ಇರುವ ಒಂದೇ ಭಯ ಲಾಕ್‌ಡೌನ್‌. ಈಗ ಮಿನಿ ಲಾಕ್‌ಡೌನ್‌ ಜಾರಿಯಲ್ಲಿದೆ. ಇದು ಕಳೆದ ವರ್ಷದಂತೆ ವಿಸ್ತರಿಸಬಹುದು. ಲಾಕ್‌ಡೌನ್‌ ವಿಸ್ತರಣೆ ಮತ್ತು ಅದರ ಪರಿಣಾಮಗಳು ಬಡ ಕಾರ್ಮಿಕರನ್ನು ಕಾಡುತ್ತಿವೆ. ಹೀಗಾಗಿ ಅವರು ಮತ್ತೆ ವಲಸೆ ಆರಂಭಿಸಿದ್ದಾರೆ.

ಕರ್ನಾಟಕದ ಧಾರವಾಡ ಜಿಲ್ಲೆಯ ರುದ್ರನಾಥ್ ಗೌಡ ಪಾಟೀಲ್ ಥಾಣೆಯ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳು ಈಗ ಮುಚ್ಚಲ್ಪಟ್ಟಿವೆ. ಹೀಗಾಗಿ, ರುದ್ರನಾಥ್ ಅವರಿಗೆ ಯಾವುದೇ ಕೆಲಸವಿಲ್ಲ. ಆದ್ದರಿಂದ ಅವರ ಮಾಲೀಕರು ತಾವು ಮನೆಗೆ ಹಿಂತಿರುಗಿ, ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ಮರಳಿ ಬರುವಂತೆ ಸೂಚಿಸಿದ್ದಾರೆ. ಅದಕ್ಕಾಗಿ ಆತ ತನ್ನೂರಿಗೆ ಮರಳಿದ್ದಾರೆ.

ಕಾರ್ಮಿಕರಿಗಾಗಿ ಮಹಾರಾಷ್ಟ್ರ ಸರ್ಕಾರ ಏನೇ ಘೋಷಿಸಿದರೂ, ಲಾಕ್‌ಡೌನ್ ಮತ್ತು ನಿರುದ್ಯೋಗದ ಭಯ ಬಡವರು ಮತ್ತು ಕಾರ್ಮಿಕರನ್ನು ಕಾಡುತ್ತಿದೆ.

ಕೊರೊನಾವೈರಸ್ ಹರಡುವಿಕೆಯನ್ನು ತಡೆಯುವ ಪ್ರಯತ್ನದಲ್ಲಿ ಬುಧವಾರ ರಾತ್ರಿ 8 ಗಂಟೆಯಿಂದ ಮಹಾರಾಷ್ಟ್ರದಾದ್ಯಂತ ಕರ್ಫ್ಯೂ ತರಹದ ನಿರ್ಬಂಧಗಳು ಜಾರಿಗೆ ಬಂದಿವೆ. ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ಮೇ 1 ರವರೆಗೆ ವಿಧಿಸಲಾಗಿದೆ. ರಾಜ್ಯದಲ್ಲಿ ಬುಧವಾರ 58,952 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಲಾಕ್‌ಡೌನ್‌ಗೆ ಒಂದು ವರ್ಷ: ನಿರುದ್ಯೋಗದ ಹೊಡೆತದಿಂದ ಹೊರಬರಲಾರದ ಭಾರತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights