ಅನೈತಿಕ ಪೊಲೀಸ್‌ಗಿರಿ: ಆರೋಪಿಗಳ ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕ!

ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿಯ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮೌನತಾಳಿದೆ. ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಅಲ್ಲದೆ, ಬಿಜೆಪಿ ಶಾಸಕ ಉಮಾಪತಿ ಕೋಟ್ಯಾನ್‌ ಅವರೇ ಆರೋಪಿಗಳ ಬೆಂಬಲಕ್ಕಿಳಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಕಡೆಗೆ ತೆರಳುತ್ತಿದ್ದ ಮುಸ್ಲಿಂ ವ್ಯಕ್ತಿಯ ಕಾರಿನಲ್ಲಿ ಹಿಂದೂ ಮಹಿಳೆಯರಿಬ್ಬರು ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಬಜರಂಗದಳದ ದುಷ್ಕರ್ಮಿಗಳು ಅವರನ್ನು ತಡೆದು ಹಲ್ಲೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸಮಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರ ಜೊತೆಗೆ ಮೂಡಬಿದಿರೆ ಶಾಸಕ ಉಮಾಪತಿ ಕೋಟ್ಯಾನ್ ಅವರು ಇರುವ ಚಿತ್ರ ವೈರಲ್ ಆಗಿದೆ. ಈ ಚಿತ್ರವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಅದನ್ನು ಪ್ರಶ್ನಿಸಿದೆ.

‘ಅನೈತಿಕ ಪೊಲೀಸ್‌ಗಿರಿಯನ್ನು ಸಹಿಸುವುದಿಲ್ಲ’ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಸಿಎಂ ಹಾಗೂ ಗೃಹಚಿವರು ಈಗ ಮೌನಕ್ಕೆ ಜಾರಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ನಿಮ್ಮ ಶಾಸಕ ಉಮಾಪತಿ ಕೋಟ್ಯಾನ್ ಆರೋಪಿಗಳ ಬೆಂಬಲಕ್ಕೆ ನಿಂತಿದ್ದಾರೆ, ಈಗೇನಂತೀರಿ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

 

“ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ರಾತ್ರೋರಾತ್ರಿ ಠಾಣೆ ನುಗ್ಗಿ ಮೂಡುಬಿದಿರೆ ಅನೈತಿಕ ಪೊಲೀಸ್‌ಗಿರಿ ಘಟನೆಯ ಆರೋಪಿಗಳನ್ನು ಕರೆತಂದಿದ್ದೇಕೆ? ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಎಸಗಿದವರ ರಕ್ಷಣೆಗೆ ನಿಲ್ಲುವ ಬಿಜೆಪಿಯ ಹಳೆಯ ಚಾಳಿ. ಕಾನೂನು ಸುವ್ಯವಸ್ಥೆಯ ಕುಸಿತಕ್ಕೆ ಹಾಗೂ ಬಿಜೆಪಿ ಶಾಸಕರ ಈ ವರ್ತನೆಗೆ ಬೊಮ್ಮಾಯಿ ಅವರು ಉತ್ತರಿಸಬೇಕು” ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ:ರೈತ ಪರ ಟ್ವೀಟ್: ವರುಣ್ ಗಾಂಧಿ, ಮೇನಕಾ ಗಾಂಧಿಯನ್ನು ಕಾರ್ಯಕಾರಿಣಿ ಪಟ್ಟಿಯಿಂದ ತೆಗೆದ ಬಿಜೆಪಿ!

“ರಾಜ್ಯದಲ್ಲಿ ಜಾತಿ, ಧರ್ಮಗಳ ಹೆಸರಲ್ಲಿ ಒಡಕು ಮೂಡಿಸುವ, ವಿಭಜಿಸಿ ಆಳುವ ಕೆಲಸ ಮಾಡುತ್ತಿದೆ ಬಿಜೆಪಿ. ಈ ವಿಭಜನಾ ಮನಸ್ಥಿತಿಯ ಬಿಜೆಪಿಯೇ ನಿಜವಾದ ‘ತುಕಡೆ ಗ್ಯಾಂಗ್’. ಅನೈತಿಕ ಪೊಲೀಸ್‌ಗಿರಿ ನಡೆಸುವವರ ಸಹಕಾರಕ್ಕೆ ನಿಂತು ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಸ್ಥಾಪಿಸುತ್ತಿದೆ ಸರ್ಕಾರ. ಬೊಮ್ಮಾಯಿ ಅವರೇ, ನಿಮ್ಮ ‘ಕಠಿಣ ಕ್ರಮ’ ಎಲ್ಲಿ ಹೋಯ್ತು!?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸುಮಾರು ಆರರಿಂದ ಎಂಟು ಜನ ಬಜರಂಗದಳದ ದುಷ್ಕರ್ಮಿಗಳು ಬೈಕ್‌ಗಳಲ್ಲಿ ಸಂತ್ರಸ್ತರನ್ನು ಹಿಂಬಾಲಿಸಿ ಕಾರನ್ನು ತಡೆದಿದ್ದಾರೆ. ಹಿಂದೂ ಮಹಿಳೆಯರನ್ನು ಕಾರಿನಿಂದ ಇಳಿಯುವಂತೆ ಕೈಹಿಡಿದು ಹೊರಗೆ ಎಳೆದಿದ್ದು, ಮುಸ್ಲಿಮರ ಕಾರಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ ಎಂದು ವಾರ್ತಾಭಾರತಿ ಪತ್ರಿಕೆ ವರದಿ ಮಾಡಿತ್ತು.

ಜೊತೆಗೆ ಹಿಂದೂ ಮಹಿಳೆಯರನ್ನು ಕಾರಿನಲ್ಲಿ ಕರೆದುಕೊಂಡು ಕೊಂಡುಹೋದ ಮುಸ್ಲಿಂ ದಂಪತಿಗಳಿಗೂ ದುಷ್ಕರ್ಮಿಗಳು ನಿಂದಿಸಿ, ಹಲ್ಲೆಗೈದಿದ್ದಾರೆ ಎಂದು ಪತ್ರಿಕೆ ವರದಿ ಹೇಳಿದೆ. ಘಟನೆಯ ಬಗ್ಗೆ ಮೂಡುಬಿದ್ರಿ ಪೊಲೀಸರು ಐಪಿಸಿ ಸೆಕ್ಷನ್ 354, 153 (ಎ), 504 ಮತ್ತು 506 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಒಂದು ವರ್ಷದಲ್ಲಿ 1.36 ಲಕ್ಷ ಜನರು ಆತ್ಮಹತ್ಯೆ; ಮಾನಸಿಕ ಒತ್ತಡವೇ ಮೂಲ ಕಾರಣ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights