ಬಿಜೆಪಿಗೆ ತಾಕತ್ತಿದ್ದರೆ ಕನ್ನಡ ವಿಚಾರದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಲಿ: ಹೆಚ್‌ಡಿಕೆ ಸವಾಲು!

ಲೋಕಸಭಾ ಸಚಿವಾಲಯದ ಅಡಿಯಲ್ಲಿ ಬರುವ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ ಸಂಸ್ಥೆಯು ಕನ್ನಡವನ್ನು ಕಡೆಗಣಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ. ತಾವು ಕನ್ನಡ ವಿರೋಧಿಗಳಲ್ಲ ಎಂದಾದರೆ ಈಗ ಆಗಿರುವ ಪ್ರಮಾದವನ್ನು ತಾಕತ್ತಿದ್ದರೆ ಬಿಜೆಪಿ ಸರಿಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗಿಗೆ ಆದ್ಯತೆ ನೀಡಿದೆ. ಕನ್ನಡಭಿಮಾನವಿಲ್ಲದ 25 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದರ ಫಲವಿದು” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ಇದೇ 22ರಿಂದ ಭಾಷೆಗಳ ಕಲಿಕಾ ತರಬೇತಿ ಆನ್‌ಲೈನಲ್ಲಿ ಆರಂಭವಾಗುತ್ತಿದೆ. ಇದರಲ್ಲಿ ವಿವಿಧ ರಾಜ್ಯಗಳ ಸಂಸದರು, ಶಾಸಕರು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಫ್ರೆಂಚ್, ಜರ್ಮನ್, ಜಪಾನೀಸ್, ಪೊರ್ಚುಗೀಸ್, ರಷ್ಯನ್‌, ಸ್ಪ್ಯಾನಿಷ್ಅನ್ನು ಕಲಿಸಲಾಗುತ್ತಿದೆ. ಇದರಲ್ಲಿ ಕನ್ನಡವನ್ನು ಸೇರಿಸಬೇಕು. ಇಲ್ಲವೇ ನಾವೆಲ್ಲರೂ ಇದನ್ನು ದಿಕ್ಕರಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ವರ್ಚಸ್ಸು ಕುಸಿತ; ಪ್ರಾಬಲ್ಯವನ್ನು ಹೆಚ್ಚಿಸಲು BJPಯ 5 ತಂತ್ರಗಳು ಹೀಗಿವೆ!

’ಕೇಂದ್ರ ಪ್ರತಿ ಬಾರಿ ಕನ್ನಡ ನಿರ್ಲಕ್ಷಿಸುತ್ತಿದೆ. ಇದರ ವಿರುದ್ಧ ನಾವೇ ಕೆಲವರು ಮಾತನಾಡುವಂತಾಗಿದೆ. ಕನ್ನಡ ಭಾಷೆ ವಿಚಾರದಲ್ಲಿನ ಕೇಂದ್ರದ ಇಂಥ ನಡವಳಿಕೆಗಳ ವಿರುದ್ಧ ಎಲ್ಲರೂ ಹೋರಾಡಬೇಕು. ಅವರು ನಿರ್ಲಕ್ಷಿಸುವುದು ನಾವು ಎಚ್ಚರಿಸುವುದು, ಅತ್ತು ಕರೆದು ಔತಣ ಪಡೆಯುವುದು ನಿಲ್ಲಬೇಕು. ‘ಕನ್ನಡ ಮರೆತರೆ ಕಷ್ಟ‘ ಎಂಬ ಸಂದೇಶ ರವಾನಿಸಬೇಕು’ ಎಂದು ಹೇಳಿದ್ದಾರೆ.

’ಕೇಂದ್ರ ಸರ್ಕಾರ ಕನ್ನಡದ ವಿಚಾರದಲ್ಲಿ ನಿರ್ಲಕ್ಷ್ಯ ಭಾವ ತಳೆದಿದ್ದರೂ ಬಿಜೆಪಿಯ ಯಾವೊಬ್ಬ ಸಂಸದರೂ ಇದರ ಬಗ್ಗೆ ಮಾತನಾಡಿರುವುದನ್ನು ನಾನಂತೂ ನೋಡಿಲ್ಲ. ಇಷ್ಟರಲ್ಲೇ ಜನರಿಗೆ ಅರ್ಥವಾಗಬೇಕು “ಬಿಜೆಪಿ ಮೂಲಭೂತವಾಗಿ ಕನ್ನಡ ವಿರೋಧಿ” ಎಂದು. ತಾವು ಕನ್ನಡ ವಿರೋಧಿಗಳಲ್ಲ ಎಂದಾದರೆ ಈಗ ಆಗಿರುವ ಪ್ರಮಾದವನ್ನು ತಾಕತ್ತಿದ್ದರೆ ಬಿಜೆಪಿ ಸರಿಪಡಿಸಲಿ’ ಎಂದು ಆಗ್ರಹಿಸಿದ್ದಾರೆ.

ಒಕ್ಕೂಟ ಸರ್ಕಾರದ ಕ್ರಮಕ್ಕೆ ಕನ್ನಡ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸ್ತ್ರೀಯ ಭಾಷೆಯಾದ ಕನ್ನಡಕ್ಕೆ ಸ್ಥಾನ ನೀಡದಿರುವುದು ನೋವಿನ ಸಂಗತಿ ಎಂದು ಕನ್ನಡಪರ ಹೋರಾಟಗಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಚುನಾವಣಾ ಸೋಲಿಗೆ ಕಾರಣ: ಸಿಪಿಎಂ ನಾಯಕರ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights