ಮಣಿಯದ ಕೇಂದ್ರ – ಜಗ್ಗದ ರೈತ: 2024ರ ವರೆಗೂ ದೆಹಲಿ ಗಡಿಯಲ್ಲಿ ಮುಂದುವರೆಯುತ್ತೆ ಹೋರಾಟ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ನೀತಿಗಳು ರದ್ದಾಗದಿದ್ದರೆ, 2024ರ ಮೇ ತಿಂಗಳವರೆಗೂ ದೆಹಲಿ ಗಡಿಯಲ್ಲಿ ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ರೈತ ಹೋರಾಟಗಾರ, ಭಾರತೀಯ ಕಿಸಾನ್‌ ಯೂನಿಯನ್‌ನ (ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌ ಭಾನುವಾರ ಹೇಳಿದ್ದಾರೆ.

2024ರ ಏಪ್ರಿಲ್‌-ಮೆ ತಿಂಗಳಿನಲ್ಲಿ ಮುಂದಿನ ಲೋಕಸಭಾ ಚುನಾವಣೆ ನಡೆಯಲಿದ್ದು, ಅಲ್ಲಿಯ ವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ. ಕೃಷಿ ನೀತಿಗಳು ರದ್ದಾಗದೇ ಹಿಂದೆ ಸರಿಯುವ ಮಾತೇ ಇಲ್ಲ. ಈ ಹೋರಾಟ ‘ಸೈದ್ಧಾಂತಿಕ ಕ್ರಾಂತಿ’ಯಾಗಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ರೈತರು  2020ರ ನವೆಂಬರ್‌ 26 ರಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ದೇಶದ ಎಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿಯೂ ಹೋರಾಟ ನಡೆಯುತ್ತಿದೆ. ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ ನೀಡಿದೆ. ಆದರೆ, ಆ ಕಾಯ್ದೆಗಳು ರದ್ದಾಗಲೇಬೇಕು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನುಬದ್ಧ ಖಾತರಿ ಬೇಕು ಎಂದು ಅವರು ಆಗ್ರಹಿಸಿದ್ದಾರೆ.

Read Also: ಸೋಮವಾರ ರೈತ ಮಹಿಳಾ ದಿನ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತ ವನಿತೆಯರು ಸಜ್ಜು!

ಕೃಷಿ ಕಾಯ್ದೆಗಳ ವಿರುದ್ದ ರೈತರದ್ದು ಸೈದ್ಧಾಂತಿಕ ಕ್ರಾಂತಿ. ಅದು ವಿಫಲವಾಗಲು ಬಿಡುವುದಿಲ್ಲ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ರದ್ದಾಗದೆ ಗ್ರಾಮಗಳಿಗೆ ಹಿಂದಿರುವುದನ್ನು ರೈತರೂ, ಗ್ರಾಮಸ್ಥರು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.

‘26ರಂದು ಟ್ರ್ಯಾಕ್ಟರ್ ಜಾಥಾ ಖಚಿತ’

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಜಾಥಾ ನಡೆಸುವುದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ‘ದೆಹಲಿಯ ಹೊರಭಾಗದಲ್ಲಿರುವ ರಿಂಗ್‌ ರೋಡ್‌ನಲ್ಲಿ ರ್ಯಾಲಿ ನಡೆಯಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.

ಟ್ರ್ಯಾಕ್ಟರ್‌ ರ್ಯಾಲಿ ಶಾಂತಿಯುತವಾಗಿ ನಡೆಯಲಿದೆ. ಗಣರಾಜ್ಯೋತ್ಸವ ಪಥಸಂಚಲನಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತ್ರಿವರ್ಣ ಧ್ವಜ ಹಾಕಿಕೊಳ್ಳಲಿದ್ದಾರೆ. ದಹಲಿ ಗಡಿಯಲ್ಲಿ ರೈತರ ಪಥ ಸಂಚಲನ ನಡೆಯಲಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

‘ರೈತರ ಚಳವಳಿಯ ಭಾಗವಾಗಿರುವವರು ಅಥವಾ ಪ್ರತಿಭಟನೆಗೆ ಬೆಂಬಲ ನೀಡಿದವರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸುತ್ತಿದೆ. ರೈತರ ಎಲ್ಲ ಸಂಘಟನೆಗಳು ಇದನ್ನು ಖಂಡಿಸುತ್ತಿವೆ. ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಇದರ ವಿರುದ್ಧ ಹೋರಾಟ ನಡೆಯ
ಲಿದೆ’ ಎಂದು ಕ್ರಾಂತಿಕಾರಿ ಕಿಸಾನ್‌ ಯೂನಿಯನ್‌ನ ಅಧ್ಯಕ್ಷ ದರ್ಶನ್‌ ಪಾಲ್‌ ಹೇಳಿದ್ದಾರೆ.

Read Also: ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯ ಮುಂದೆ ಹೋಗಲ್ಲ: ರೈತ ಮುಖಂಡ ದರ್ಶನ್‌ ಪಾಲ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights