ಟ್ವೀಟ್‌ ಮಾಡಿದ್ದು ನನ್ನ ಕರ್ತವ್ಯ; ಕೋರ್ಟ್‌ ಗೌರವಿಸಿ ದಂಡ ಕಟ್ಟುತ್ತೇನೆ: ಪ್ರಶಾಂತ್‌ ಭೂಷಣ್‌

ಜನರು ನ್ಯಾಯಕ್ಕಾಗಿ ತಲುಪಬಲ್ಲ ಅತ್ಯುನ್ನತ ಅಂಗವಾಗಿದ್ದು ಸುಪ್ರೀಂಕೋರ್ಟ್‌ , ಅದು ದುರ್ಬಲವಾದರೆ, ಗಣರಾಜ್ಯವೇ ದುರ್ಬಲವಾದಂತೆ. ಹಾಗಾಗಿ ಸುಪ್ರೀಂ ಕೋರ್ಟ್ ಯಾವ ಶಿಕ್ಷೆ ನೀಡಿದರೂ ಅದನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದು ನಾನು ಈ ಮೊದಲೇ ಹೇಳಿದ್ದೆ.  ಅದಕ್ಕಾಗಿ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ ಎಂದುಯ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಪ್ರಶಾಂತ್‌ ಭೂಷಣ್‌ ಅವರಿಗೆ ಒಂದು ರೂಪಾಯಿಯ ದಂಡ ವಿಧಿಸಿದ್ದು, ಈ ಬಗ್ಗೆ ಇಂದು ಪತ್ರಿಕಾ ಗೋಷ್ಟಿಯಲ್ಲಿ ಪ್ರಶಾಂತ್‌ ಭೂಷಣ್‌ ಮಾತನಾಡಿ,  ನಾನು ಯಾವ ಟ್ವೀಟ್‌ ಗಳನ್ನು ಮಾಡಿದ್ದಕ್ಕಾಗಿ ನನ್ನನ್ನು ತಪ್ಪಿತಸ್ಥನೆಂದು ಘೋಷಿಸಿದೆಯೋ, ಅದು ಈ ದೇಶದ ನಾಗರಿಕನ ಅತ್ಯುನ್ನತ ಕರ್ತವ್ಯವಾಗಿತ್ತು ಎಂದೇ ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಕಾರ್ಯವೈಖರಿ ಹಾಗೂ ಹಿಂದಿನ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ವರ್ಷಗಳ ವಕೀಲ ವೃತ್ತಿಗೆ ನಿ‍ಷೇಧ” ಎಂದು ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ ತೀರ್ಪು ನೀಡಿತ್ತು.

ತೀರ್ಪಿನಲ್ಲಿ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಹಾಗೂ ವಕೀಲಿ ವೃತ್ತಿ ನಿ‍ಷೇಧಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಯಾವುದು ಆಯ್ದುಕೊಳ್ಳಲಿದ್ದಾರೆ ಎಂದು ಹಲವರು ಚರ್ಚಿಸಿದ್ದರು. ಅದಕ್ಕೆ ತೆರೆ ಎಳೆದಿರುವ ಪ್ರಶಾಂತ್ ಭೂಷಣ್‌ರವರು “1 ರೂ ದಂಡವನ್ನು ಕಟ್ಟುತ್ತೇನೆಂದು’ ಘೋಷಿಸಿದ್ದಾರೆ.

ತನ್ನ ಪರವಾಗಿ ನಿಂತ ನಾಗರಿಕರು ಮತ್ತು ವಕೀಲರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿ, ಸುಪ್ರೀಂಕೋರ್ಟು ಪ್ರಬಲವಾಗಬೇಕು ಮತ್ತು ಸ್ವತಂತ್ರವಾಗಿರಬೇಕು ಎಂದು ನಾನು ಬಯಸುತ್ತೇನೆ ಎಂದು ಪ್ರಶಾಂತ್‌ ಭೂಷಣ್‌ ಹೇಳಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಮತ್ತು ಅಂಜಲಿ ಭಾರದ್ವಾಜ್ ಭಾಗವಹಿಸಿದ್ದರು.


Read Also: ಪ್ರಶಾಂತ್ ಭೂಷಣ್‌ಗೆ 1 ರೂ ದಂಡ ವಿಧಿಸಿದ ಸುಪ್ರೀಂ: ದಂಡ ನಿರಾಕರಿಸಿದರೆ 3 ವರ್ಷ ವಕೀಲಿಕೆಗೆ ನಿರ್ಬಂಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights