ಬ್ರಾಹ್ಮಣರ ಕೈಗೆ ಕುರಾನ್‌ ಕೊಟ್ಟಂತಿದೆ ಹಿಂದಿ ಹೇರಿಕೆ: IRS ಅಧಿಕಾರಿ ಬಾಲಮುರುಗನ್

ಹಿಂದಿಯೇತರರು ಹಾಗೂ ಹಿಂದಿ ಭಾಷೆ ಗೊತ್ತಿಲ್ಲದವರ ಮೇಲೆ ಹಿಂದಿ ಹೇರಿಕೆ ಮಾಡುವುದು ಬ್ರಾಹ್ಮಣರ ಕೈಗೆ ಕುರಾನ್‌ ಕೊಂಟ್ಟಂತೆ ಎಂದು ತಮಿಳುನಾಡಿನ ಭಾರತೀಯ ಕಂದಾಯ ಇಲಾಖೆ ( IRS ‌) ಅಧಿಕಾರಿ ಬಿ. ಬಾಲಮುರುಗನ್ ಹೇಳಿದ್ದಾರೆ.

ತಮಿಳು ಭಾ‍‍‍ಷಿಗರಾದ ಬಾಲಮುರುಗನ್‌ ಅವರನ್ನು ಚೆನೈನಲ್ಲಿರುವ ಜಿಎಸ್‌ಟಿ ಕಛೇರಿಯ ಹಿಂದಿ ಸೆಲ್‌ಗೆ ಕಳೆದ ವರ್ಷ ವರ್ಗಾವಣೆ ಮಾಡಲಾಗಿದೆ. ಹಿಂದಿ ಬಾರದ ಅವರನ್ನು ಹಿಂದಿ ಸೆಲ್‌ಗೆ ವರ್ಗಾಯಿಸಿರುವುದರಿಂದ ಕರ್ತವ್ಯ ನಿರ್ವಹಿಸಲು ಕಷ್ಟಕರವಾಗಿದ್ದು, ಕೆಲಸಕ್ಕೆ ತೊಡಕು ಉಂಟಾಗಿದೆ. ಹೀಗಾಗಿ ಹಿಂದಿಯನ್ನು ಓದುಲು , ಬರೆಯಲು, ಮಾತನಾಡಲು ಬಾರದವರನ್ನು ಹಿಂದಿ ಸೆಲ್‌ಗೆ ನೇಮಿಸುವುದು ಎಷ್ಟು ಸರಿ, ಕನಿಷ್ಟ ವರ್ಗಾವಣೆ ಆಗುವವರಿಗೆ ಅಲ್ಲಿ ಕೆಲಸ ಮಾಡುವ ಇಚ್ಛೆಯಾದರೂ ಇರಬೇಕು ಎಂದು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಗೆ (CBIC) ಆಗಸ್ಟ್‌ 09ರಂದು ಪತ್ರ ಬರೆದಿದ್ದಾರೆ.

“ಹಿಂದಿ ಸೆಲ್‌ನಲ್ಲಿನ ಕೆಲಸದ ಅಧಿಕೃತ ಸಂವಹನ ಭಾಷೆ ಹಿಂದಿ. ಅಧಿಕೃತವಾಗಿ ಎಲ್ಲಾ ಅಧಿಕಾರಿಗಳು ಹಿಂದಿ ಭಾಷೆಯನ್ನೇ ಬಳಸಬೇಕು ಮತ್ತು ಈ ಭಾಷೆಯಲ್ಲೇ ಮೇಲ್ವಿಚಾರಣೆ ಮಾಡಬೇಕು. ಆದರೆ, ನನಗೆ ಹಿಂದಿಯಲ್ಲಿ ABCD ಯೂ ಗೊತ್ತಿಲ್ಲ. ಹಾಗಾಗಿ ಹಿಂದಿ ಕೋಶದಲ್ಲಿ ಕೆಲಸ ಮಾಡಲು ಆಸಕ್ತಿ ಇಲ್ಲ. ನನ್ನನ್ನು ಹಿಂದಿ ಕೋಶಕ್ಕೆ ನೇಮಕ ಮಾಡುವುದು ನನ್ನ ಮೇಲಿನ ಹಿಂದಿ ಹೇರಿಕೆಯಲ್ಲದೇ ಮತ್ತೇನೂ ಅಲ್ಲ. ಇದು ಹೇಗಿದೆ ಎಂದರೆ ಬ್ರಾಹ್ಮಣನಿಗೆ ಬೈಬಲ್ ಅಥವಾ ಕುರಾನ್ ಕೊಟ್ಟು, ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ನಿರ್ದೇಶಿಸುವಂತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ ಎಂಬುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

ಇದನ್ನೂ ಓದಿ: ಹಿಂದಿ ರಾಜ್ಯ ಉತ್ತರ ಪ್ರದೇಶದಲ್ಲಿಯೇ 7.97 ಲಕ್ಷ ವಿದ್ಯಾರ್ಥಿಗಳು ಹಿಂದಿಯಲ್ಲೇ ಫೇಲ್‌!

“ಹಿಂದಿ ತಿಳಿದಿರುವ ಮತ್ತು ಹಿಂದಿ ಸೆಲ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಧಿಕಾರಿಗಳನ್ನು ಮಾತ್ರ ಅಲ್ಲಿಗೆ ನೇಮಿಸಬೇಕು ಎಂದು CBIC ಅಧ್ಯಕ್ಷರು ಮತ್ತು ಸಿಬಿಐಸಿಯ ಎಲ್ಲಾ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ನಾನು ವಿನಂತಿಸುತ್ತೇನೆ. ಹಿಂದಿ ತಿಳಿಯದ ಕಾರಣ ನಾವು ಸಹಿ ಮಾಡುವ ಖಡತಗಳಲ್ಲಿ ಏನು ಬರೆದಿದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೂ ನಮಗೆ ಸಾಧ್ಯವಿಲ್ಲ.

ಇಲ್ಲಿ ಕೆಲಸ ಮಾಡುವ ಅರ್ಧದಷ್ಟು ಜನರಿಗೆ ಹಿಂದಿ ಭಾಷೆಯ ಗಂಧ ಗಾಳಿ ಗೊತ್ತಿಲ್ಲ. ಇಂತವರನ್ನು ಹಿಂದಿ ಕೋಶಕ್ಕೆ ನೇಮಕ ಮಾಡಿರುವುದು ನ್ಯಾಯಯೋಚಿತವೇ? ಹಿಂದಿ ಹೇರಿಕೆಯ ರಾಜಕೀಯಕ್ಕೆ ಇಳಿಯಲು ಇಷ್ಟವಿಲ್ಲದಿದ್ದರೂ, ಒಬ್ಬ ಅಧಿಕಾರಿಯನ್ನು ಇದಕ್ಕೆ ಒಳಪಡಿಸುವುದು ಅನ್ಯಾಯವಾಗಿದೆ. ನಾನು CBICಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ” ಎಂದು ಬಾಲಮುರುಗನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

CBIC ಎಲ್ಲಾ IRS ಅಧಿಕಾರಿಗಳ ಕೇಡರ್ ನಿಯಂತ್ರಣ ಪ್ರಾಧಿಕಾರವಾಗಿದ್ದು, ಹಿಂದಿ ಸೆಲ್, ಹಿಂದಿ ಅನುಷ್ಠಾನದ ಬಗ್ಗೆ ತ್ರೈಮಾಸಿಕ ಸಂಖ್ಯಾಶಾಸ್ತ್ರೀಯ ವರದಿಗಳನ್ನು ಸಂಗ್ರಹಿಸುತ್ತದೆ. ಹಾಗಾಗಿ ತನ್ನ ಅಧಿಕೃತ ಕೆಲಸದಲ್ಲಿ ಹಿಂದಿ ಭಾಷೆಯ ಬಳಕೆಯು ಅಗತ್ಯವಾಗಿದೆ. ಆದರೆ, ಹಿಂದಿ ತಿಳಿಯದ ಅಧಿಕಾರಿಯನ್ನು ಹಿಂದಿ ಕೋಶಕ್ಕೆ ನೇಮಕ ಮಾಡಿದರೆ ಇಲಾಖೆಯ ಕೆಲಸ ಸಾಂಗೋಪವಾಗಿ ನಡೆಯುವುದಾದರೂ ಹೇಗೆ? ಈ ಕುರಿತು CBIC ಅಧಿಕಾರಿ ಬಾಲಮುರುಗನ್‌ ಪತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ? ಎಂಬುದನ್ನು ಕಾದುನೋಡಬೇಕಿದೆ.


ಇದನ್ನೂ ಓದಿ: ಹಿಂದಿ ಥೆರಿಯತು ಪೊಡಾ: ಹಿಂದಿ ಹೇರಿಕೆಯ ವಿರುದ್ಧ ಟೀ-ಶರ್ಟ್‌ ಟ್ರೆಂಡಿಂಗ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights