ಭಾರತದ ಖ್ಯಾತ ಓಟಗಾರ್ತಿ ಹಿಮಾ ದಾಸ್‌ ಅಸ್ಸಾಂ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ!

ಭಾರತದ ಖ್ಯಾತ ಓಟಗಾರ್ತಿ ಹಿಮಾ ದಾಸ್ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ಅಸ್ಸಾಂ ಸರ್ಕಾರ ನೇಮಕ ಮಾಡಿದೆ.

ಧಿಂಗ್‌ ಎಕ್ಸ್‌ಪ್ರೆಸ್‌ ಎಂದೇ ಖ್ಯಾತಿ ಪಡೆದಿರುವ ಹಿಮಾ ದಾಸ್‌ ಅವರನ್ನು ಉಪ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ನೇಮಕ ಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ ಎಂದು ಕಳೆದ ವರ್ಷ ಅಸ್ಸಾಂ ಹಣಕಾಸು ಸಚಿವರು ಘೋಷಿಸಿದ್ದರು.

ಈ ಹಿನ್ನಲೆಯಲ್ಲಿ ಹಿಮಾ ದಾಸ್‌ ಅವರನ್ನು ಗುರುವಾರ ಹುದ್ದೆಗೆ ಅಧಿಕೃತವಾಗಿ ನೇಮಿಸಲಾಗಿದೆ ಎಂದು ಫಿನಾನ್ಸ್‌ ಮಿನಿಸ್ಟರ್‌ ಹಿಮಂತ್‌ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತರಬೇತಿ ಪಡೆಯುತ್ತಿರುವ ಹಿಮಾ ದಾಸ್‌, ತಮ್ಮನ್ನು ಡಿಎಸ್‌ಪಿಯಾಗಿ ನೇಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಅಸ್ಸಾಂ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ ಸೋನೊವಾಲ್ ಅವರಿಗೆ ಧನ್ಯವಾದ ತಿಳೀಸಿದ್ದಾರೆ.

21 ವರ್ಷದ ಹಿಮಾ ದಾಸ್ ಪ್ರಸ್ತುತ ಎನ್‌ಐಎಸ್-ಪಟಿಯಾಲದಲ್ಲಿ ಒಲಿಂಪಿಕ್ಸ್‌ ಅರ್ಹತೆಗಾಗಿ ತರಬೇತಿ ಪಡೆಯುತ್ತಿದ್ದಾರೆ.

ಹಿಮಾ ದಾಸ್ ಹಿನ್ನೆಲೆ

ಭತ್ತದ ಗದ್ದೆಯ ಬದುಗಳ ಮೇಲೆ ಬರಿಗಾಲಲ್ಲಿ ಓಡುತ್ತಿದ್ದ ಹಿಮಾದಾಸ್ ಈಗ ವಿಶ್ವ ಅಥ್ಲೆಟಿಕ್ ಜೂನಿಯರ್ ಚಾಂಪಿಯನ್‍ಶಿಪ್‍ನ ಚಿನ್ನದ ಪದಕ ಮುಡಿಗೇರಿಸಿಕೊಂಡ ಓಟದ ಜಿಂಕೆ. ಅಸ್ಸಾಂನ ನಾಗಾಂವ ಜಿಲ್ಲೆಯ ಧಿಂಗ್ ಹಳ್ಳಿಯ ಬಡರೈತ ಕುಟುಂಬದ ಈ ಕೂಸಿಗೆ ಕ್ರೀಡಾ ಹಿನ್ನೆಲೆ ಇಲ್ಲ. ಹುಟ್ಟಿದೂರಿನಲ್ಲಿ ಕ್ರೀಡೆಯ ಮೂಲ ಸೌಕರ್ಯದ ಯಾವ ಸವಲತ್ತೂ ಇರಲಿಲ್ಲ. ಇಂಥಾ ಹುಡುಗಿ ಇಡೀ ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡಿದ್ದಾಳೆ. ಭಾರತದ ಕ್ರೀಡಾ ಇತಿಹಾಸದಲ್ಲೇ ಅಥ್ಲೆಟಿಕ್ಸ್‌ನಲ್ಲಿ ಪ್ರಪ್ರಥಮ ಬಾರಿಗೆ ಚಿನ್ನ ಪಡೆದವಳು ಹಿಮಾ ದಾಸ್!

ಇನ್ನು ಹಿಮಾಳ ವೈಯುಕ್ತಿಕ ಹಿನ್ನೆಲೆಯನ್ನು ಗಮನಿಸಿದರೆ ಅವಳ ಸಾಧನೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ. ಶಾಲಾ ದಿನಗಳಲ್ಲಿ ಹುಡುಗರ ತಂಡದಲ್ಲಿ ಪುಟ್ಬಾಲ್ ಆಡುತ್ತಿದ್ದ ಹಿಮಾ ಫಿನ್ಲೆಂಡ್‍ನಲ್ಲಿ ನಡೆದ 20 ವರ್ಷದೊಳಗಿನ ವಿಶ್ವ ಅಥ್ಲೇಟಿಕ್ ಜೂನಿಯರ್ಸ್ ಮಹಿಳಾ ವಿಭಾಗದ 400 ಮೀಟರ್ ಓಟದಲ್ಲಿ ಕೇವಲ 51.46 ಸೆಕೆಂಡುಗಳಲ್ಲಿ ಚಿನ್ನದ ಜಯ ಸಾಧಿಸಿ ದಾಖಲೆ ಬರೆದ ಭಾರತದ ಮೊದಲ ಅಥ್ಲೇಟ್.

16 ಜನರ ಅವಿಭಕ್ತ ಕುಟುಂಬದಲ್ಲಿ ಜೋನಿಲಾ ಮತ್ತು ರಂಜಿತ ದಾಸ್ ರೈತ ದಂಪತಿಗಳ ಕೂಸು ಹಿಮ. ಇಡೀ ಕುಟುಂಬ ಇರುವ ಭತ್ತದ ಗದ್ದೆಯಲ್ಲಿ ದುಡಿದರಷ್ಟೇ ಆದಾಯ. ಆದರೆ ಇದಾವುದು ಹಿಮಾ ಸಾಧನೆಗೆ ಅಡ್ಡಿಯಾಗಲೇ ಇಲ್ಲ. ಫುಟ್ಬಾಲ್ ಕನಸು ಕಂಡು, ವಾಸ್ತವದಲ್ಲಿ ಅಥ್ಳೇಟಿಕ್ಸ್‍ನಲ್ಲಿ ಹೆಜ್ಜೆಯಿರಿಸಿದ ಹಿಮಾಗೆ ಗುವಾಹಟಿಯ ಯುವಜನ ಕ್ರೀಡಾ ಇಲಾಖೆಯ ತರಬೇತುದಾರ ನಿಪೋ ದಾಸ್ ಬೆಂಬಲವಾಗಿ ನಿಂತರು. ರಾಷ್ಟ್ರೀಯ ತಂಡದ ಕೋಚ್ ಬಸಂತ ಸಿಂಗ್ ಹಿಮಾಳ ಹಾದಿಯನ್ನು ಮತ್ತಷ್ಟು ಸ್ಪಷ್ಟ ಮತ್ತು ನಿಚ್ಚಳವಾಗಿಸಿದರು. ಪಿ.ಟಿ.ಉಷಾ ಕೂಡ ಹಿಮಾಳ ಜೊತೆಯಲ್ಲೇ ಇದ್ದು ಆಕೆಯನ್ನು ಹುರಿದುಂಬಿಸಿದ್ದರು. ಈ ಎಲ್ಲರ ಶ್ರಮವನ್ನು ನಾವು ಗೌರವದಿಂದ ನೆನೆಯಬೇಕು.

ಕೊರೊನಾಕ್ಕೂ ಮೊದಲು ಯೂರೋಪ್ ನಲ್ಲಿ ಹಿಮಾ ದಾಸ್ ರವರ ಸಾಧನೆಯ ವಿವರ ಹೀಗಿದೆ.

ಜುಲೈ 02 ರಂದು ಪೋಲಾಂಡ್ ನಲ್ಲಿ ನಡೆದ ಪ್ರೊಜ್ನಾನ್ ಗ್ರ್ಯಾನ್ ಫ್ರಿ ರೇಸ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಗೆಲುವು

ಜುಲೈ 07 ರಂದು ಪೋಲಾಂಡ್ ನಲ್ಲಿ ನಡೆದ ಕುಂಟೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಸಾಧನೆ

ಜುಲೈ 13 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ಕ್ಲಾಡೋ ಅಥ್ಲೆಟಿಕ್ ಕ್ರೀಡಾಕೂಟದ 200 ಮೀಟರ್ ಓಟದಲ್ಲಿ ಚಿನ್ನದ ಪದಕ

ಜುಲೈ 17 ರಂದು ಜೆಕ್ ರಿಪಬ್ಲಿಕ್ ನಲ್ಲಿ ನಡೆದ ತಬೂರ್ ಅಥ್ಲೆಟಿಕ್ ಕೂಟದಲ್ಲಿ ಚಿನ್ನದ ಗೆಲುವು

ಜುಲೈ 20 ರಂದು ಪ್ರಾಗ್ ನಲ್ಲಿ ನಡೆದ ನೊವಾ ಮೆಸ್ಟೊ ಅಥ್ಲೆಟಿಕ್ ಕೂಟದಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದರು.

ಆಗಸ್ಟ್ 19 ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಅಥ್ಲೆಟಿಕ್ ಮಿಟಿಂಗ್ ರೇಟರ್ ಸ್ಪರ್ಧೆಯ 300 ಮೀಟರ್ ಓಟದ ವಿಭಾಗದಲ್ಲಿ ಅವರು ಚಿನ್ನ ಗೆದ್ದಿದ್ದಾರೆ.

Read Also: Fact Check: 2021 ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರಾ ಹಿಮಾ ದಾಸ್?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights