ಕನಕಪುರ ಏಸು ಪ್ರತಿಮೆ ವಿವಾದ: ನಿರ್ಮಾಣ ಕಾಮಗಾರಿಗೆ ಹೈಕೋರ್ಟ್‌ ತಡೆ!

ಕನಕಪುರದಲ್ಲಿ ವಿವಾದದ ಕೇಂದ್ರ ಬಿಂದುವಾಗಿರುವ ಕಪಾಲಬೆಟ್ಟದಲ್ಲಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕನಕಪುರದ ಕಪಾಲ ಬೆಟ್ಟದಲ್ಲಿ ಸುಮಾರು 80 ಅಡಿ ಎತ್ತರದ ಯೇಸು ಪ್ರತಿಮೆ ಮತ್ತು ಚರ್ಚ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅದಕ್ಕಾಗಿ ಕೆಲವು ವರ್ಷಗಳ ಹಿಂದೆ ಸರ್ಕಾರ ಹತ್ತು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿ, ಭೂ ಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳವನ್ನು ಮಂಜೂರು ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಮುಂದಾಳತ್ವ ವಹಿಸಿ ಜಮೀನು ಮಂಜೂರು ಮಾಡಿಸಿದ್ದಾರೆ. ಟ್ರಸ್ಟ್‌ನಿಂದ ಮನವಿ ಸಲ್ಲಿಕೆಯಾಗುವ ಮೊದಲೇ ಭೂಮಂಜೂರಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ಆರೋಪಿಸಿ ಹಾರೋಬೆಲೆ ಗ್ರಾಮದ ನಿವಾಸಿಗಳಾದ ಆಂಥೋಣಿ ಸ್ವಾಮಿ ಹಾಗೂ ಇತರೆ ಏಳು ಜನರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಭೂ ಮಂಜೂರಾತಿ ಸಂಬಂಧ 2017ರ ಫೆಬ್ರವರಿ 15ರಂದು ಡಿಕೆ ಶಿವಕುಮಾರ್ ಮತ್ತು ಅದೇ ತಿಂಗಳ 20ರಂದು ಡಿಕೆ ಸುರೇಶ್ ಅವರು ರಾಮನಗರ ಜಿಲ್ಲಾಧಿಕಾರಿಗೆ ಅಧಿಕೃತ ಟಿಪ್ಪಣಿ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಇದೆಲ್ಲ ಆದ ನಂತರ ಮಾರ್ಚ್ 18ರಂದು ಟ್ರಸ್ಟ್‌ನಿಂದ ಔಪಚಾರಿಕವಾಗಿ ಮನವಿ ಪತ್ರ ಪಡೆದಿದ್ದಾರೆ. 2018ರ ಫೆಬ್ರವರಿ 26ರಂದು ಭೂಮಿ ಮಂಜೂರು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್‌ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?

ಯಾವುದೇ ಕ್ರೈಸ್ತ ಧರ್ಮೀಯರು ಜಾಗ ಮಂಜೂರಿಗಾಗಿ ಮನವಿ ಮಾಡಿಲ್ಲ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ, ರಾಜಕೀಯ ಸ್ವಾರ್ಥಕ್ಕಾಗಿ ಜಮೀನು ಮಂಜೂರು ಮಾಡಿಸಿದ್ದಾರೆ. ಜಾತಿ, ಮತ ಮತ್ತು ಧರ್ಮದ ಆಧಾರದಲ್ಲಿ ಭೂಮಿ ಮಂಜೂರು ಮಾಡುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠ, ನ್ಯಾಯಾಲಯದ ಅನುಮತಿ ಇಲ್ಲದೆ ಈ ಜಾಗದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಸೂಚನೆ ನೀಡಿದೆ. ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.


ಇದನ್ನೂ ಓದಿ: ಬಿಹಾರ ಚುನಾವಣೆ: ಸಿಎಂ ಅಭ್ಯರ್ಥಿಗಳ ಮುಖಾಮುಖಿ ಚರ್ಚೆಗೆ ತೇಜಸ್ವಿ ಯಾದವ್‌ ಸವಾಲು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights