ವಾಟರ್ ಜೆಟ್‌ ನಿಲ್ಲಿಸಿದ ರೈತ ಪ್ರತಿಭಟನೆಯ ‘ಹೀರೋ’; ಯುವ ರೈತನ ಮೇಲೆ ಕೊಲೆಯತ್ನ ಕೇಸ್‌ ದಾಖಲು!

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ರೈತರು ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿಗೆ ರೈತರ ಪ್ರತಿಭಟನಾ ರ್ಯಾಲಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಜಾಥಾ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಆಶ್ರುವಾಯು ಮತ್ತು ನೀರಿನ ಪಿರಂಗಿಗಳನ್ನು ಬಳಸುತ್ತಿದ್ದಾರೆ. ನಿನ್ನೆ (ಶುಕ್ರವಾರ) ರೈತರ ಮೇಲೆ ಪೊಲೀಸರು ನೀರಿನ ದಾಳಿ ನಡೆಸಿದ ವಾಟರ್‌ ಜೆಟ್‌ ಅನ್ನು ಹರಿಯಾಣದ ಯುವ ರೈತ ಸಾಹಸೀಯವಾಗಿ ನಿಲ್ಲಿಸಿದ್ದು, ಆ ಕಾರಣಕ್ಕೆ ಆ ರೈತನ ಮೇಲೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

ಘಟನೆಯ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, 26 ವರ್ಷದ ನವದೀಪ್ ಸಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ’ಹೀರೋ’ ಆಗಿ ಮಿಂಚಿದರು. ಉತ್ತರ ಭಾರತದ ಕಠಿಣ ಚಳಿಯನ್ನು ಲೆಕ್ಕಿಸದೆ ದೆಹಲಿ ಚಲೋಗೆ ಹೊರಟಿದ್ದ ರೈತರ ಜಾಥಾದ ಮೇಲೆ ಪೊಲೀಸರು ವಾಟರ್‌ ಜೆಟ್‌‌ ದಾಳಿ ಮಾಡಿದ್ದರು. ಇದನ್ನು ನಿಲ್ಲಿಸಲು ವಾಟರ್‌ ಜೆಟ್ ವಾಹನವನ್ನು ಹತ್ತಿದೆ ಯುವ ರೈತ ಅದನ್ನು ನಿಲ್ಲಿಸಿ ವಾಪಾಸು ತಮ್ಮ ವಾಹನಕ್ಕೆ ಹಾರಿ ಜಾಥಾವನ್ನು ಸೇರಿಕೊಂಡಿದ್ದರು.

ರೈತ ಸಂಘದ ಮುಖಂಡ ಜೈ ಸಿಂಗ್ ಅವರ ಪುತ್ರನಾಗಿರುವ ನವದೀಪ್ ವಿರುದ್ಧ ಜೀವಾವಧಿವರೆಗೆ ಶಿಕ್ಷೆ ನೀಡಬಹುದಾದ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಅಲ್ಲದೆ ಗಲಭೆ ಮತ್ತು ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಕೇಸುಗಳನ್ನು ಕೂಡಾ ದಾಖಲಿಸಲಾಗಿದೆ.

ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿದ ಸರ್ಕಾರ; ದೆಹಲಿ ಚಲೋದ 10 ಮುಖ್ಯಾಂಶಗಳು!

“ನನ್ನ ಓದಿನ ನಂತರ ನನ್ನ ತಂದೆಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದೆ. ನಾನು ಯಾವತ್ತೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಪ್ರತಿಭಟನಾ ನಿರತ ರೈತರಿಗೆ ವಾಹನ ಹತ್ತಲು ಮತ್ತು ಅವರ ವಿರುದ್ದ ದಾಳಿ ಮಾಡುತ್ತಿದ್ದ ಪಿರಂಗಿಯ ಟ್ಯಾಪ್ ಆಫ್ ಮಾಡಿದ್ದೇನೆ” ಎಂದು ನವದೀಪ್ ಸಿಂಗ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ.

“ಶಾಂತಿಯುತವಾಗಿ ಪ್ರತಿಭಟಿಸಲು ನಾವು ದೆಹಲಿಗೆ ಹೋಗಬೇಕೆಂದು ಹೊರಟಿದ್ದೆವು ಆದರೆ ಪೊಲೀಸರು ನಮ್ಮನ್ನು ನಿರ್ಬಂಧಿಸಿದರು. ಸರ್ಕಾರವನ್ನು ಪ್ರಶ್ನಿಸಲು ಮತ್ತು ಯಾವುದೇ ಜನ ವಿರೋಧಿ ಕಾನೂನುಗಳು ಜಾರಿಗೆ ಬಂದರೆ ಪ್ರತಿಭಟಿಸಲು ನಮಗೆ ಹಕ್ಕಿದೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಆಳ್ವಿಕೆಯ ಹರಿಯಾಣದ ಮತ್ತು ದೆಹಲಿಯ ಪೊಲೀಸರು ಕೃಷಿ ನೀತಿಗಳ ವಿರುದ್ದ ಜಾಥಾ ಹೊರಟಿದ್ದ ರೈತರ ಮೇಲೆ ಭಾರೀ ಪ್ರಮಾಣದ ದಬ್ಬಾಳಿಕೆ ನಡೆಸಿದ್ದಾರೆ ಎಂದು ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಕಾನೂನುಗಳನ್ನು ವಿರೋಧಿಸಿ ಅಂತಿಮವಾಗಿ ದೆಹಲಿ ತಲುಪಲು ಯಶಸ್ವಿಯಾದ ರೈತರ ಮೇಲೆ ಮೂರನೇ ದಿನವು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಯನ್ನು ಹಾರಿಸಿದರು.

ಅಷ್ಟೇ ಅಲ್ಲದೆ ಪೊಲೀಸರು ದೆಹಲಿಗೆ ಪ್ರವೇಶಿಸುವ ವಿವಿಧ ಕೇಂದ್ರಗಳಲ್ಲಿ ಮರಳು ತುಂಬಿದ ಲಾರಿ, ಮುಳ್ಳುತಂತಿ ಮತ್ತು ಕಾಂಕ್ರೀಟ್ ಬ್ಲಾಕ್ಗಳು ಸೇರಿದಂತೆ ಕೆಲವೆಡೆ ರಸ್ತೆಯನ್ನೇ ಅಗೆದು ಹಾಕಿದ್ದರು.


ಇದನ್ನೂ ಓದಿ: ಅಧಿಕಾರಕ್ಕೆ ಬಂದ ತಕ್ಷಣ ರೈತ ವಿರೋಧಿ ಕಾನೂನುಗಳು ರದ್ದು: ಕಾಂಗ್ರೆಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights