Health : ಹೆಲ್ತ್ ರಿಜಿಸ್ಟರ್‌ಗೆ ಮುನ್ನುಡಿ ಬರೆದ ರಾಜ್ಯ ಸರ್ಕಾರ, ಇದು ದೇಶದಲ್ಲಿ ಮೊದಲ ಪ್ರಯತ್ನ..

ದೇಶಕ್ಕೇ ಮೊದಲು ಮತ್ತು ಮಾದರಿಯಾಗಬಲ್ಲ ಹೆಲ್ತ್ ರಿಜಿಸ್ಟರ್ (ಆರೋಗ್ಯ ಮಾಹಿತಿ) ಯೋಜನೆ ಅನುಷ್ಠಾನಕ್ಕೆ ಕರ್ನಾಟಕ ಸರಕಾರ ಮುನ್ನಡಿ ಬರೆಯಿತು.. ರಾಜ್ಯ ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹೆಲ್ತ್ ರಿಜಿಸ್ಟರ್ ಯೋಜನೆ ಸಂಬಂಧ ಆರೋಗ್ಯ ವಲಯದ ತಜ್ಞರ ಜತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮೊದಲ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡರು.

ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಹದಿನೆಂಟು ಮಂದಿ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಯೋಜನೆ ಜಾರಿಗೆ ರಾಜ್ಯದಲ್ಲಿ ಎದುರಾಗುವ ಸವಾಲು, ಅಡ್ಡಿ- ಆತಂಕಗಳು, ಯೋಜನೆಯ ಸ್ವರೂಪ, ಮನೆ ಮನೆ ಸಮೀಕ್ಷೆಗೆ ಅಳವಡಿಸಿಕೊಳ್ಳಬೇಕಿರುವ ಅಂಶಗಳು ಚರ್ಚಿತಗೊಂಡವು.
ಯೋಜನೆಗೆ ಅಗತ್ಯ ಮಾನವ ಸಂಪನ್ಮೂಲ, ಆರೋಗ್ಯ ಇಲಾಖೆಯ ಮಾಹಿತಿ, ಖಾಸಗಿ ವಲಯದ ನೆರವು ಪಡೆಯುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಜ್ಞರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ದೇಶದಲ್ಲೇ ಮೊದಲ ಸಲ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದೇವೆ. ನಮಗೆ ಇದೊಂದು ದೊಡ್ಡ ಸವಾಲು, ಅಸಾಧಾರಣ ಪ್ರಯತ್ನ ಎಂಬ ಅಂಶವೂ ಗಮನದಲ್ಲಿದೆ.

ಇದು ಗಣತಿ ಮಾದರಿಯ ಮನೆ ಮನೆಗೂ ತೆರಳಿ ಮಾಹಿತಿ ಪಡೆಯಬೇಕಿರುವ ಕಾರ್ಯಕ್ರಮ. ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

ಹೆಲ್ತ್ ರಿಜಿಸ್ಟರ್ ನನ್ನ ಕನಸಿನ ಕೂಸು. ಆರೂವರೆ ಕೋಟಿ ಕನ್ನಡಿಗರಿಗೂ ಆರೋಗ್ಯ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ಜನರು ಮುಕ್ತವಾಗಿ ಮಾಹಿತಿ ಹಂಚಿಕೊಳ್ಳುವ ಮೂಲಕ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಭಾಗಿಗಳಾಗಬೇಕು

– ಡಾ. ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ.

ಹೆಲ್ತ್ ರಿಜಿಸ್ಟರ್ ಯೋಜನೆಗೆ ಮೊದಲ ಹಂತದಲ್ಲಿ ಸಾರ್ವಜನಿಕ ಮಾಹಿತಿ ಪಡೆಯುವುದು ದೊಡ್ಡ ಸವಾಲು. ಇದನ್ನು ನಿಭಾಯಿಸಲು ಖಾಸಗಿ ರಂಗದ ತಜ್ಞರು ಜತೆಗೆ ತಾಂತ್ರಿಕತೆಯ ನೆರವು ಅಗತ್ಯ. ಇವತ್ತಿನ ಸಂದರ್ಭದಲ್ಲಿ ಅನುದಾನ ಒದಗಿಸುವುದು ಕೂಡ ತ್ರಾಸದಾಯಕ ಸಂಗತಿ. ಅದಕ್ಕಾಗಿ ಕೈಗಾರಿಕೆಗಳವರ ನೆರವು ಪಡೆಯಬೇಕಾಗುತ್ತದೆ ಎಂದು ಸುಧಾಕರ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights