ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು; ಛತ್ತೀಸ್‌ಘಡ ಮುಖ್ಯಮಂತ್ರಿ ಬದಲಾವಣೆಗೆ ಒತ್ತಡ!

ಕಾಂಗ್ರೆಸ್‌ ಪಕ್ಷವು ದೇಶದ ನಾನಾ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ. ಪಕ್ಷವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಂತರಿಕ ಬಂಡಾಯ ಶುರುವಾಗಿದೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಬಂಡಾಯದ ಬಿಕ್ಕಟ್ಟನ್ನು ಬಗೆಹರಿಸಿದ್ದ ಕಾಂಗ್ರೆಸ್‌ ಹೈಕಮಾಂಡ್‌ಗೆ ಇದೀಗ ಛತ್ತೀಸ್‌ಘಡ ಹೊಸ ತಲೆನೋವಾಗಿ ಎದುರಾಗಿದೆ.

ಛತ್ತೀಸ್‌ಗಡದ ಮುಖ್ಯಮಂತ್ರಿ ಬದಲಾವಣೆಗೆ ಅಲ್ಲಿನ ಆರೋಗ್ಯ ಸಚಿವ ಟಿಎಸ್‌‌ ಸಿಂಗ್ ದಿಯೋ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದೆ ಇದ್ದರೆ ಅವರು ಸರ್ಕಾರದಿಂದ ಮಾತ್ರವಲ್ಲ, ಪಕ್ಷವನ್ನೂ ತೊರೆಯಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಛತ್ತೀಸ್‌ಗಡದಲ್ಲಿ ಭೂಪೇಶ್‌ ಬಘೇಲ್‌ ನೇತೃತ್ವದ ಕಾಂಗ್ರೆಸ್‌‌‌ ಸರ್ಕಾರ ರಚನೆಯಾಗಿ ಜೂನ್‌ ತಿಂಗಳಿಗೆ ಎರಡು ವರ್ಷಗಳು ತುಂಬಿದೆ. “ಸರ್ಕಾರ ರಚೆನೆಯಾಗುವ ವೇಳೆಗೆ ಎರಡುವರೆ ವರ್ಷಗಳ ನಂತರ ಅಧಿಕಾರವನ್ನು ಹಸ್ತಾಂತರ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಮುಖ್ಯಮಂತ್ರಿ ಭೂಪೇಶ್‌ ಅವರೇ ಅದಕ್ಕೆ ಒಪ್ಪಿಕೊಂಡಿದ್ದರು” ಎಂದು ಬಂಡಾಯವೆದ್ದಿರುವ ಕಾಂಗ್ರೆಸ್ ನಾಯಕ ಟಿಎಸ್‌‌ ಸಿಂಗ್ ದಿಯೋ ಪ್ರತಿಪಾದಿಸುತ್ತಿದ್ದಾರೆ.

ಒಂದು ವೇಳೆ ಟಿಎಸ್‌‌ ಸಿಂಗ್ ದಿಯೋ ಅವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ಅವರು ಸರ್ಕಾರವನ್ನು ಮಾತ್ರವಲ್ಲ, ಕಾಂಗ್ರೆಸ್ ಪಕ್ಷವನ್ನೇ ತೊರೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಹಿನ್ನಡೆಯಲ್ಲಿ ಕಾಂಗ್ರೆಸ್‌; ಮತ್ತೆ ಅಹಿಂದ ಪುನರುಜ್ಜೀವನಕ್ಕೆ ಮುಂದಾದ ಸಿದ್ದರಾಮಯ್ಯ!

ಆದರೆ ಅವರು ಬಿಜೆಪಿ ಸೇರುವುದಿಲ್ಲವಾದರೂ, ಭೂಪೇಶ್ ಅವರ ಅಡಿಯಲ್ಲಿ ಮಾತ್ರ ಕೆಲಸ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ. ಆದರೆ ಇಬ್ಬರು ನಾಯಕರು ಕೂಡಾ ತಮ್ಮ ಮುಂದಿನ ಯೋಜನೆ ಏನು ಎಂದು ಇದುವರೆಗೂ ಯಾವುದೆ ಮಾಹಿತಿಯನ್ನು ಅಧೀಕೃತವಾಗಿ ಬಿಟ್ಟುಕೊಟ್ಟಿಲ್ಲ.

ಅದಾ‌ಗ್ಯೂ ಇಬ್ಬರೂ ನಾಯಕರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಭೂಪೇಶ್‌ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗುವ ಸಮಯದಲ್ಲಿ ದಿಯೋ ಅವರು ಕೂಡಾ ಇರಲಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ರಾಹುಲ್ ಗಾಂಧಿ ಜೊತೆಗೆ ಮಾತ್ರ ನಮ್ಮ ಸಭೆ ನಡೆಯಲಿದೆ ಎಂದು ನನಗೆ ಸಿಕ್ಕ ಮಾಹಿತಿ” ಎಂದು ಹೇಳಿದ್ದಾರೆ.

2018 ರಲ್ಲಿ ಛತ್ತೀಸ್‌ಗಡ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಮುಖ್ಯಮಂತ್ರಿ ರೇಸ್‌ನಲ್ಲಿ ಟಿಎಸ್‌‌ ಸಿಂಗ್ ದಿಯೋ ದೇವ ಮತ್ತು ತಾಮ್ರಧ್ವಾಜ್ ಸಾಹು ಮತ್ತು ಭೂಪೇಶ್‌ ಬಘೇಲ್‌ ಇದ್ದರು. ಅಂತಿಮವಾಗಿ ಭೂಪೇಶ್‌ ಮುಖ್ಯಮಂತ್ರಿಯಾಗಿ, ಉಳಿದ ಇಬ್ಬರಿಗೆ ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು.

ಆದಾಗ್ಯೂ ಪಕ್ಷದ ನಾಯಕತ್ವವು ಕೇಳಿದರೆ ತನ್ನ ಸ್ಥಾನದಿಂದ ತಕ್ಷಣವೇ ಕೆಳಗಿಳಿಯುವುದಾಗಿ ಮುಖ್ಯಮಂತ್ರಿ ಭೂಪೇಶ್‌ ಹೇಳುತ್ತಲೆ ಬಂದಿದ್ದಾರೆ.

ಇದನ್ನೂ ಓದಿ:ಕುಸಿಯುತ್ತಿರುವ ಕಾಂಗ್ರೆಸ್‌; ಅದರ ನೆಲೆಗಳನ್ನು ವಶಪಡಿಸಿಕೊಳ್ಳಲು ಟಿಎಂಸಿ, ಎನ್‌ಸಿಪಿ ಇತರ ವಿರೋಧ ಪಕ್ಷಗಳು ಯತ್ನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights