ನೈಸ್‌ ವಿರುದ್ಧ ಆರೋಪಿಸಿದ್ದಕ್ಕೆ ದೇವೇಗೌಡರಿಗೆ 2 ಕೋಟಿ ದಂಡ!; ಮತ್ತೆ ಆರೋಪ ಮಾಡದಂತೆ ಎಚ್ಚರಿಕೆ!

ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ ಪ್ರೈಸಸ್‌ (ನೈಸ್‌) ವಿರುದ್ಧ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ದೇವೇಗೌಡರು ತಾವು ಮಾಡಿದ್ದ ಆರೋಪವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಅವರಿಗೆ ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯವು 2 ಕೋಟಿ ದಂಡ ವಿಧಿಸಿದೆ.

ದೇವೇಗೌಡರು 2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ನೈಸ್‌ ಸಂಸ್ಥೆಯ ವಿರುದ್ದ ಆರೋಪ ಮಾಡಿದ್ದರು. ನೈಸ್‌ ಸಂಸ್ಥೆಯು ನೈಸ್‌ ಕಾರಿಡಾರ್ ಯೋಜನೆಯ ಲೋಪಗಳನ್ನು ಬಳಸಿಕೊಂಡು ಅಗತ್ಯಕ್ಕಿಂತ ಹೆಚ್ಚು ಭೂಮಿ ವಶಪಡಿಸಿಕೊಂಡಿದ್ದು ರೈತರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು.

ಅವರ ಈ ಹೇಳಿಕೆಯನ್ನು ಆಧರಿಸಿ ದೇವೇಗೌಡರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದ ನೈಸ್‌ ಸಂಸ್ಥೆ, ”ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯುಂಟಾಗಿದೆ, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು” ಎಂದು ಕೇಳಿತ್ತು.

ಮೊಕದ್ದಮೆಯ ವಿಚಾರಣೆ ನಡೆಸಿರುವ ನ್ಯಾಯಾಲಯವು, “ದೇವೇಗೌಡರು ತಾವು ಮಾಡಿದ್ದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಅಗತ್ಯವಾದ ಯಾವುದೇ ರೀತಿಯ ದಾಖಲೆಗಳನ್ನು ನೀಡಿಲ್ಲ” ಎಂದು ಹೇಳಿದ್ದು, 2 ಕೋಟಿ ರೂ ದಂಡ ವಿಧಿಸಿದೆ. ಅಲ್ಲದೆ, ಇನ್ನು ಮುಂದೆ ನೈಸ್‌ ಸಂಸ್ಥೆಯ ವಿರುದ್ದ ಆರೋಪ ಮಾಡದಂತೆ ಎಚ್ಚರಿಕೆ ನೀಡಿದೆ.

ದೇವೇಗೌಡ ಅವರು ನೈಸ್ ಕಾರಿಡಾರ್ ಪ್ರಾರಂಭವಾದಾಗಿನಿಂದಲೂ ಅದರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ನೈಸ್ ಸಂಸ್ಥೆ ಮುನ್ನೆಡೆಸುತ್ತಿರುವ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೇಗೌಡ ಪತ್ರ ಬರೆದಿದ್ದರು.

ಇದನ್ನೂ ಓದಿ: ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸಂತ್ರಸ್ತ ಯುವತಿ ಪರವಾಗಿ ಪದ್ಮಶ್ರೀ ಪರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ವಕಾಲತ್ತು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights