ತನ್ನ ಕಾನೂನು ಬಾಹಿರ ತಪ್ಪನ್ನು ಒಪ್ಪಿಕೊಂಡ ಕುಮಾರಸ್ವಾಮಿ: ದೂರು ದಾಖಲಿಸಲು ಸಾ.ಜಾಲತಾಣದಲ್ಲಿ ಒತ್ತಾಯ!

ವಿಧಾನ ಪರಿಷತ್‌ಗೆ ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣಾ ಸಭೆಯಲ್ಲಿ “ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ 10-12 ಜನಕ್ಕೆ ಕ್ಲಾಸ್ ಒನ್‌ ಉದ್ಯೋಗ ಕೊಡಿಸಿದ್ದೆ, ನೂರಾರು ಮಂದಿಗೆ ಕೆಪಿಎಸ್‌ಸಿ ಉದ್ಯೋಗ ಕೊಡಿಸಿದ್ದೆ, ಪುಟ್ಟಣ್ಣನಿಗೆ ಬಿಡಿಎ ಸೈಟ್ ಕೊಡಿಸಿದ್ದೆ” ಎಂದು ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಅವರ ಈ ಹೇಳಿಕೆಗೆ ‘ತಮ್ಮ ಕಾನೂನುಬಾಹಿರ ಅಪರಾಧಿ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡ ಕುಮಾರಸ್ವಾಮಿ!’, ‘ಅಂದರೆ ನೀವು ಎಷ್ಟು ಅರ್ಹರಿಗೆ ಅನ್ಯಾಯ ಮಾಡಿದೀರ? ಈಗ ನಿಮಗೆ ಮೋಸವಾದಾಗ ಎಚ್ಚರಗೊಂಡಿರುವಿರಿ..’, ‘ಜಾತಿ‌ ಮತ್ತು ಹಣದ ಬೆಂಬಲವಿಲ್ಲದ ಅರ್ಹ ಅಭ್ಯರ್ಥಿಗಳ ಬಾಳಿಗೆ ಬೆಂಕಿ ಇಕ್ಕಿದಂತೆ ಅಲ್ಲವೆ? ಮತ್ತು ಇದನ್ನು ಸಾರ್ವಜನಿಕವಾಗಿ ನಿರ್ಭಯದಿಂದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ಫ್ಯೂಡಲ್‌ಗಿರಿ ದಾರ್ಷ್ಟ್ಯವಲ್ಲವ ಇದು? ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕುಮಾರಸ್ವಾಮಿ ಹೇಳಿದ್ದೇನು?

ರಾಮನಗರದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಡೆದ ಶಿಕ್ಷಕರ ಪ್ರಚಾರ ಸಭೆಯಲ್ಲಿ “ಈಗ ನನ್ನ ವಿರುದ್ಧ ತುಚ್ಛವಾಗಿ ಮಾತನಾಡುತ್ತಿರುವ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಕುಟುಂಬದ 10-12 ಜನಕ್ಕೆ ಕ್ಲಾಸ್ ವನ್ ಕೆಲಸ ಕೊಡಿಸಿದ್ದೆ. 1999-2000 ರಲ್ಲಿ ನನ್ನ ಅಧಿಕಾರಾವಧಿಯಲ್ಲಿ ಕೃಷ್ಣರವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದಾಗ ಪುಟ್ಟಣ ನನ್ನಿಂದ ನೂರಾರು ಮಂದಿಗೆ ಉದ್ಯೋಗ ಕೊಡಿಸಿಕೊಂಡಿದ್ದಾರೆ. ಅಲ್ಲದೇ ನಾನು ಕೊಡಿಸಿದ್ದ ಬಿಡಿಎ ಸೈಟಿನಲ್ಲಿ 70-80 ಕೋಟಿ ಮೌಲ್ಯದ ಶಿಕ್ಷಣ ಸಂಸ್ಥೆ ಕಟ್ಟಿಕೊಂಡಿದ್ದಾನೆ ಎಂದು ಬಲ್ಲವರು ಹೇಳುತ್ತಾರೆ” ಎಂದು ಕುಮಾರಸ್ವಾಮಿ ಮಾತನಾಡಿದ್ದನ್ನು ಪ್ರಜಾವಾಣಿ ವರದಿ ಮಾಡಿತ್ತು.

ಕೆಪಿಎಸ್‌ಸಿಯಲ್ಲಿ ಅಕ್ರಮಗಳು ನಡೆದಿವೆ, ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ, ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ನುರಾರು ಆರೋಪಗಳು, ಹಗರಣಗಳು, ತನಿಖೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿಯವರ ಈ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ತಾವು ಮಾಡಿದ ಅಧಿಕಾರ ದುರುಪಯೋಗದ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ಹಲವರು ದೂರಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪುತ್ರನ ಸ್ನೇಹಿತ ಬಿಜೆಪಿ ಅಭ್ಯರ್ಥಿ: ಕಾಂಗ್ರೆಸ್‌ ಪ್ರಚಾರದಲ್ಲಿ ಯತೀಂದ್ರ ಹೇಳಿದ್ದೇನು?

“ತಾವು ಅಧಿಕಾರದಲ್ಲಿದ್ದಾಗ ಅದನ್ನು ಎಷ್ಟೇ ದುರುಪಯೋಗ ಮಾಡಿಕೊಂಡಿದ್ದರೂ, ಅಕ್ರಮಗಳನ್ನು ಮಾಡಿದ್ದರೂ, ಸಾರ್ವಜನಿಕವಾಗಿ ಮಾತನಾಡುವಾಗ ಏನನ್ನು ಹೇಳಬಹುದು ಎನ್ನುವ ಯಾವುದೇ ಪರಿಜ್ಞಾನ ಇಲ್ಲದ ಮತ್ತು ತಮ್ಮ ಕುಕೃತ್ಯಗಳನ್ನು ನಾಚಿಕೆ ಇಲ್ಲದೆ ಘಂಟಾಘೋಷವಾಗಿ ಸಾರುವ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ಇವರು ಸ್ವತಃ ಹೇಳಿಕೊಂಡಂತಹ ಘನಕಾರ್ಯದಿಂದಾಗಿ ತಮಗೆ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಸರ್ಕಾರಿ ನೌಕರಿಯನ್ನು ಕಳೆದುಕೊಂಡು ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳು ನಮ್ಮ ರಾಜ್ಯದಲ್ಲಿ ಸಾವಿರಾರು ಜನ ಇದ್ದಾರೆ” ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ’ಯ ಅತಿ ಭ್ರಷ್ಟ ಅಧ್ಯಕ್ಷ ಹೆಚ್.ಎನ್. ಕೃಷ್ಣ ಜೈಲಿನಿಂದ ಬಿಡುಗಡೆಯಾಗುವಾಗ ಅವರನ್ನು ಅಲ್ಲಿಂದ ಕಾರಿನಲ್ಲಿ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡು ಕರೆತಂದವರು ಕುಮಾರಸ್ವಾಮಿಯವರು. ಮೋಸಕ್ಕೊಳಗಾದ ಬಡವ ಮತ್ತು ದುರ್ಬಲರ ಶಾಪ ಕಠೋರವಾಗಿರುತ್ತದೆ. ನಮ್ಮ ನ್ಯಾಯಾಂಗಕ್ಕೆ ಮತ್ತು ಸರ್ಕಾರಕ್ಕೆ ಕನಿಷ್ಠ ಮಟ್ಟದ ಜವಾಬ್ದಾರಿ ಇದ್ದರೆ ತಮ್ಮ ಕಾನೂನುಬಾಹಿರ ಅಪರಾಧಿ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಕುಮಾರಸ್ವಾಮಿಯವರ ಮೇಲೆ ಈ ಕೂಡಲೇ ಸ್ವಯಂಪ್ರೇರಿತ ಮೊಕದ್ದಮೆಗಳು ದಾಖಲಾಗಬೇಕು. ತನಿಖೆಯಾಗಬೇಕು. ವಿಚಾರಣೆಯಾಗಬೇಕು. ಶಿಕ್ಷೆಯಾಗಬೇಕು. ಆದರೆ ಎಅಃ ಪಕ್ಷಗಳ ನೀಚ ಮತ್ತು ಸಮಯಸಾಧಕ ಹೊಂದಾಣಿಕೆ ರಾಜಕಾರಣದಿಂದಾಗಿ ಮತ್ತು ಅವುಗಳನ್ನು ಬೆಂಬಲಿಸುವ ಜನರಿಂದಾಗಿ ಇದು ಸದ್ಯದಲ್ಲಿ ಸಾಧ್ಯವಿಲ್ಲ ಎಂದು ರವಿಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಕಾನೂನುಬಾಹಿರ ಅಪರಾಧಿ ಕೃತ್ಯಗಳನ್ನು ಸ್ವತಃ ಸಾರ್ವಜನಿಕವಾಗಿ ಒಪ್ಪಿಕೊಂಡಿರುವ ಕುಮಾರಸ್ವಾಮಿಯವರ ಮೇಲೆ ಈ ಕೂಡಲೇ ಸ್ವಯಂಪ್ರೇರಿತ ಮೊಕದ್ದಮೆಗಳು ದಾಖಲಾಗಬೇಕು. ತನಿಖೆಯಾಗಬೇಕು. ವಿಚಾರಣೆಯಾಗಬೇಕು. ಶಿಕ್ಷೆಯಾಗಬೇಕು. – ರವಿಕೃಷ್ಣಾರೆಡ್ಡಿ

ಉಪನ್ಯಾಸಕರು ಮತ್ತು ಚಿಂತಕರಾದ ನಟರಾಜ್ ಕಲ್ಕೆರೆಯವರು “ಅಲ್ರೀ ಕುಮಾರಸ್ವಾಮಿಯವರೆ, ಅವರು ಕೇಳಿಕೊಂಡುಬಂದರು , ನಾನು ಕೊಡಿಸಿದೆ ಅಂತ ನಿರ್ಭಯವಾಗಿ ಮಾತಾಡ್ತೀರಲ್ಲ, ಸರ್ಕಾರಿ ಹುದ್ದೆಗಳು ನಿಮ್ಮ ಸ್ವಯಾರ್ಜಿತ, ಇಲ್ಲ ಪಿತ್ರಾರ್ಜಿತ ಆಸ್ತಿಅಂತ ತಿಳಿದಿದ್ದೀರ? ಎಂದು ಪ್ರಶ್ನಿಸಿದ್ದಾರೆ.

ಇದು ಕೆಪಿಎಸ್ಸಿಯಂತಹ ಸಾಂವಿಧಾನಿಕ ಸಂಸ್ಥೆಗಳ ಆಯ್ಕೆಯ ಅಧಿಕಾರದ ಮೇಲೆ ನೀವು ಮಾಡಿದ ಅಕ್ಷಮ್ಯ ಸವಾರಿಯಲ್ಲವೆ? ಜಾತಿ‌ ಮತ್ತು ಹಣದ ಬೆಂಬಲವಿಲ್ಲದ ಅರ್ಹ ಅಭ್ಯರ್ಥಿಗಳ ಬಾಳಿಗೆ ಬೆಂಕಿ ಇಕ್ಕಿದಂತೆ ಅಲ್ಲವೆ?
ಮತ್ತು ಇದನ್ನು ಸಾರ್ವಜನಿಕವಾಗಿ ನಿರ್ಭಯದಿಂದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ ಫ್ಯೂಡಲ್‌ಗಿರಿ ದಾರ್ಷ್ಟ್ಯವಲ್ಲವ ಇದು? ಕೆಪಿಎಸ್ಸಿಯನ್ನು ಅಪವಿತ್ರಗೊಳಿಸಿದ್ದ ಕಾರಣ ನಿಮ್ಮ ಈ ಕೃತ್ಯ ಶಿಕ್ಷಾರ್ಹ ಅಪರಾಧ ಅಲ್ಲವೆ ಎಂಬ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವ ಇದನ್ನು ಫ್ಯೂಡಲ್‌ಗಿರಿಯ ಮದ ಎನ್ನಬೇಕೋ, ಇಲ್ಲ ಶೂದ್ರ ದಡ್ಡತನ ಅನ್ನಬೇಕೋ. ನಿಮ್ಮಂತಹ ಜಾತಿ -ಮದಾಂಧ ಶೂದ್ರರಿಂದಾಗಿಯೇ ಬಿಜೆಪಿ ಎಂಬ ಎಲ್ಲವನ್ನೂ ಮೀರಿದ ಕೇಡು ಬಂದು ನಮ್ಮ ದೇಶದ ತಲೆಹಿಡಿಯಿತು ಕಣ್ರಿ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಗಂಟೆಗೊಂದು ಬಟ್ಟೆ ಹಾಕಿ ಫೋಸು ಕೊಡುವುದೇ ಮೋದಿ ಸಾಧನೆ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights